ADVERTISEMENT

ಚುರುಮುರಿ: ಸಾಹಿತಿ ಸಂಕಟ!

ಬಿ.ಎನ್.ಮಲ್ಲೇಶ್
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
   

‘ಹಲೋ... ಎಮ್ಮೆಲ್ಲೆ ಸಾಹೇಬ್ರೆ, ನಾನು ಸಾಹಿತಿ ತೆಪರೇಸಿ ಮಾತಾಡ್ತಿರೋದು...’

‘ಓ... ಏನಯ್ಯ, ಬಾಳ ದಿನ ಆತು, ಸಿಗ್ಲೇ ಇಲ್ಲ?’

‘ಬಿಡಿ ಸಾ... ನನ್ನ ನೀವು ಯಾವ ನಿಗಮ ಮಂಡಳಿಗೂ ಹಾಕಿಸ್ಲಿಲ್ಲ, ಬೋರ್ಡು ಬಳಪ ಕೊಡಿಸ್ಲಿಲ್ಲ, ಅಕಾಡೆಮಿಗಾದ್ರೂ ಹಾಕಿಸ್ಬೋದಿತ್ತು...’

ADVERTISEMENT

‘ಲೇಯ್, ನಿಗಮ-ಮಂಡಳಿ ಇರೋದು ರಾಜಕಾರಣಿಗಳಿಗೆ, ಸಾಹಿತಿಗಳಿಗಲ್ಲ’.

‘ನೀವೊಳ್ಳೆ, ಸಾಹಿತಿಗಳೂ ರಾಜಕಾರಣಿಗಳೇ ಅಂತ ನಿಮ್ ಪಕ್ಷದ ಅಧ್ಯಕ್ಷರು ಹೇಳಿಲ್ವಾ?’

‘ಅಲ್ಲ, ಅವರು ಹೇಳಿದ ಮೇಲೆ ಮುಗೀತು ಬಿಡು, ಕೆಲವು ಸಾಹಿತಿಗಳು ಒಳಗೊಳಗೇ ರಾಜಕಾರಣಿನೂ ಆಗಿರ್ತಾರಂತೆ, ನೀನೆಂಗೆ?’

‘ನಾನೂ ಹಂಗೇ ಸಾ... ನಾನು ಬರೆದ ‘ಕೈಯಿಂದಲೇ... ಕೈಯಿಂದಲೇ... ಕನಸೊಂದು ನನಸಾಗಿದೆ’ ಹಾಡು ಸಕತ್ ವೈರಲ್ ಆಗಿತ್ತು ಸಾ’.

‘ಅಲೆ ಇವ್ನ, ಚೆನ್ನಾಗೇ ಬರ್ದಿದೀಯಲ್ಲೋ. ನಮ್ ಸಾಹೇಬ್ರಿಗೆ ಗೊತ್ತಾಗಿದ್ರೆ ನಿನ್ನ ಅಕಾಡೆಮಿ ಅಧ್ಯಕ್ಷರನ್ನೇ ಮಾಡಿರೋರು’.

‘ನಾನು ಗ್ಯಾರಂಟಿ ಮೇಲೂ ಒಂದು ಕವನ ಬರೆದಿದೀನಿ ಸಾ... ಹೇಳ್ಲಾ?’

‘ಬ್ಯಾಡ, ನೀನು ಬರೀ ಕವನ ಬರಿಯೋದಲ್ಲ, ರಾಜಕಾರಣನೂ ಮಾಡ್ಬೇಕು, ವೋಟ್ ಹಾಕಿಸ್ಬೇಕು‌‌’.

‘ಅಲ್ಲ ಸಾ, ಆ ಗುಡ್ಡೆ ಏನೂ ಬರೆದಿಲ್ಲ, ಅವನನ್ನ ಅಕಾಡೆಮಿಗೆ ಹಾಕಿದೀರಲ್ಲ, ನ್ಯಾಯನಾ?’

‘ಅವ್ನು ನಮ್ ಪಾರ್ಟಿಗೆ ಬಾಳ ದುಡಿದಿದಾನೆ ಕಣಯ್ಯ, ಅವನಿಗೆ ಎಲ್ಲಾದ್ರೂ ಅಕಾಮಡೇಟ್ ಮಾಡ್ಬೇಕಿತ್ತು, ಅಕಾಡೆಮೀಲಿ ಮಾಡಿದೀವಿ’.

‘ಅಲ್ಲ ಸಾ, ಅವ್ನು ಸಾಹಿತಿ ಅಲ್ಲ, ರಾಜಕಾರಣಿ’.

‘ಆಗ್ಲಿ ಏನೀಗ? ಸಾಹಿತಿಯು ರಾಜಕಾರಣಿ ಆಗಬೋದಾದ್ರೆ, ರಾಜಕಾರಣಿಯು ಸಾಹಿತಿ ಯಾಕಾಗಬಾರ್ದು?’

‘ಅಲ್ಲ ಸಾ, ಸಾಹಿತಿ ಬೇಕಾದ್ರೆ ರಾಜಕಾರಣಿ ಆಗಬೋದು, ರಾಜಕಾರಣಿ ಹೆಂಗೆ ಸಾಹಿತಿ ಆಗ್ತಾರೆ? ಅವರಿಗೆ ಕತೆ, ಕವನ, ಪುಸ್ತಕ ಬರಿಯೋಕೆ ಬರ್ಬೇಕಲ್ಲ?’

‘ಬರದಿದ್ರೆ ಬ್ಯಾಡ, ಅವರ ಹೆಸರಲ್ಲಿ ಬೇರೆಯವರು ಕತೆ, ಕವನ, ಪುಸ್ತಕ ಬರೆದುಕೊಡ್ತಾರೆ, ಆಗೇನ್ಮಾಡ್ತೀಯ?’

‘ತಪ್ಪಾತು ಸಾ... ಮುಂದೆ ಮಾತಾಡಲ್ಲ...’ ಫೋನಿಟ್ಟ ತೆಪರೇಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.