ADVERTISEMENT

ಚುರುಮುರಿ: ಪೆ ಪೇ ಚರ್ಚಾ!

ಬಿ.ಎನ್.ಮಲ್ಲೇಶ್
Published 10 ಅಕ್ಟೋಬರ್ 2024, 23:30 IST
Last Updated 10 ಅಕ್ಟೋಬರ್ 2024, 23:30 IST
   

‘ಗುರೂ, ಈ ‘ಚಾಯ್ ಪೇ ಚರ್ಚಾ’ ಅಂತಾರಲ್ಲ, ಹಂಗಂದ್ರೆ ಏನು?’ ಹರಟೆಕಟ್ಟೆಯಲ್ಲಿ ದುಬ್ಬೀರ ತೆಪರೇಸಿಯನ್ನ ಕೇಳಿದ.

‘ಅದಾ... ಬಿಜೆಪಿಯೋರು ಚಾ ಕುಡ್ಕಂತ ಏನೆನೆರೆ ಚರ್ಚೆ ಮಾಡ್ತಿರ್ತಾರಲ್ಲ, ಅದು’.

‘ಮತ್ತೆ ಕಾಂಗ್ರೆಸ್‌ನೋರ್ದು?’

ADVERTISEMENT

‘ಅವರದು ‘ಕಾಫಿ ಪೇ ಚರ್ಚಾ...’ ಕಾಂಗ್ರೆಸ್‌ನೋರಿಗೆ ಚಾ ಆಗಿಬರಲ್ಲ’.

‘ಅದೇ ಅನ್ಕಂಡೆ, ಈ ಮಂಜಮ್ಮ ಬರೀ ಚಾ ಯಾಕೆ ಮಾಡ್ತಾಳೆ ಅಂತ’ ಗುಡ್ಡೆ ಕಿಸಕ್ಕೆಂದ.

‘ಹೌದು ಕಣೋ, ನಮ್ದು ಚಾ ಮಾರೋರ ಪಕ್ಷ, ನಿಮ್ದೇನು?’ ಮಂಜಮ್ಮ ಗರಂ ಆದಳು.

‘ಇರು ಮಂಜಮ್ಮ, ಅಲ್ಲೋ ತೆಪರ, ಈ ‘ಚಹಾ ಕಪ್ಪಲ್ಲಿ ಬಿರುಗಾಳಿ’ ಅಂತಿರ್ತಾರಲ್ಲ, ಅದೇನು?’ ದುಬ್ಬೀರ ಕೇಳಿದ.

‘ಅದಾ, ಚಹಾ ಕಪ್ಪಲ್ಲಿ ಬಿರುಗಾಳಿ ಏಳಲ್ಲ, ಎದ್ರೂ ಏನೂ ಆಗಲ್ಲ ಅಂತ’.

‘ಓ... ಅದ್ಕೇ ಈ ಕಾಂಗ್ರೆಸ್‌ನೋರು ಕಾಫಿ ಕಪ್ಪಲ್ಲಿ ಬಿರುಗಾಳಿ ಎಬ್ಬುಸ್ತದಾರೆ ಅನ್ನು. ಕಾಫಿ ಕುಡಿಯೋ ನೆಪದಲ್ಲಿ ಮನೆ ಮನೆ ಭೇಟಿ, ಡಿನ್ನರ್ ಪಾರ್ಟಿ ಎಲ್ಲ ನಡುಸ್ತದಾರೆ’.

‘ಕಾಫಿ ಕಪ್ಪಲ್ಲೂ ಬಿರುಗಾಳಿ ಏಳಲ್ಲ ಬಿಡಲೆ’ ತೆಪರೇಸಿ ಭರವಸೆ ನೀಡಿದ.

‘ಅಲ್ಲ ಪ್ರಾಸಕ್ಕೆ ಅಂತ ಹೇಳ್ತೀನಿ. ಚಹಾ ಕಪ್ಪಲ್ಲಿ ಬಿರುಗಾಳಿ, ಕಾಂಗ್ರೆಸ್ ಕಾಫಿ ಕಪ್ಪಲ್ಲಿ ಜಾರಕಿಹೊಳಿ ಅನ್ನಬೋದಾ?’ ಗುಡ್ಡೆ ಕೇಳಿದ.

‘ಅನ್ನಬೋದು... ಪ್ರಾಸ ಅವರಿಗೆ, ತ್ರಾಸ ಸಿಎಂ, ಡಿಸಿಎಂಗೆ!’ ಮಂಜಮ್ಮಗೂ ನಗು.

‘ಬಾಳ ಜನ ಮಂತ್ರಿಗಳು ಸಿಎಂ ಕುರ್ಚಿ ಖಾಲಿ ಇಲ್ಲ ಅಂತಿರ್ತಾರಲ್ಲ ಯಾಕೆ?’ ಕೊಟ್ರೇಶಿ ಕೊಕ್ಕೆ.

‘ಹಂಗಂದ್ರೆ ಕುರ್ಚಿ ಇನ್ನೂ ಖಾಲಿ ಆಗಿಲ್ವಲ್ಲ ಅಂತ ಸಂಕಟ’ ತೆಪರೇಸಿ ನಕ್ಕ.

‘ಹೋಗ್ಲಿ ಬಿಡ್ರಪ್ಪ, ಈ ಚಾಯ್ ಪೆ ಚರ್ಚಾ, ಕಾಫಿ ಪೆ ಚರ್ಚಾ ಎಲ್ಲ ಸಾಕು, ನಮ್ದು ‘ಪೆ ಪೇ ಚರ್ಚಾ’ ಶುರು ಹಚ್ಕಳಾಣ, ನಡೀರಿ ಲೇಟಾತು’ ಎಂದ ಗುಡ್ಡೆ.

‘ಏನೋ ಹಂಗಂದ್ರೆ?’ ಮಂಜಮ್ಮ ಕೇಳಿದಳು.

‘ಗೊತ್ತಿಲ್ವಾ? ಪೆಗ್ ಪೇ ಚರ್ಚಾ ಮಂಜಮ್ಮ’.

‘ಥೂ ಮನೆಹಾಳ’ ಎಂದಳು ಮಂಜಮ್ಮ. ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.