ADVERTISEMENT

ಚುರುಮುರಿ: ಒಂದು ಸಿಂಹದ ಕತೆ

ಬಿ.ಎನ್.ಮಲ್ಲೇಶ್
Published 6 ಜೂನ್ 2024, 23:49 IST
Last Updated 6 ಜೂನ್ 2024, 23:49 IST
   

ಹತ್ತು ವರ್ಷ ಭರ್ಜರಿ ಬೇಟೆಯಾಡಿದ ಕಾಡಿನ ರಾಜ ಸಿಂಹ ಯಾಕೋ ಮೆತ್ತಗಾದಂತಿತ್ತು. ಅದರ ರತ್ನಖಚಿತ ಚಿನ್ನದ ಸಿಂಹಾಸನದ ಮೇಲೆ ಇತರ ಪ್ರಾಣಿಗಳಿಗೆ ಕಣ್ಣು. ಒಂದು ದಿನ ಎಲ್ಲ ಪ್ರಾಣಿಗಳ ಸಭೆ ಕರೆದ ಸಿಂಹರಾಜ ‘ನಾನಿನ್ನು ಬೇಟೆಯಾಡಲು ಹೋಗುವುದಿಲ್ಲ. ನೀವೇ ನನಗೆ ಆಹಾರ ತಂದುಕೊಡಬೇಕು’ ಎಂದು ಆದೇಶಿಸಿತು.

ಸಿಂಹ ಮೆತ್ತಗಾಗಿರುವುದನ್ನು ಅರಿತ ಹುಲಿ ‘ಆಯಿತು, ಆದರೆ ನಿನ್ನ ಸಿಂಹಾಸನದ ಒಂದು ಕಾಲು ನನ್ನದು’ ಎಂದಿತು. ಚಿರತೆ ಏನು ಕಮ್ಮಿ? ‘ನನಗೂ ನಿನ್ನ ಸಿಂಹಾಸನದ ಒಂದು ಕಾಲು ಬೇಕು’ ಎಂದಿತು.

ಇದೇ ಒಳ್ಳೆ ಸಮಯ ಎಂದುಕೊಂಡ ಬೆಕ್ಕು ‘ನಾನೂ ಹುಲಿ ಜಾತಿಯವನೇ, ನನಗೂ ಒಂದು ಕಾಲು ಬೇಕು’ ಎಂದು ಬೇಡಿಕೆ ಇಟ್ಟಿತು. ‘ಅಲ್ಲಯ್ಯಾ, ಎಲ್ಲರೂ ಒಂದೊಂದು ಕಾಲು ಕೇಳಿದರೆ ಹೇಗೆ? ನಾನು ಒಂಟಿ ಕಾಲಲ್ಲಿ ಕೂರಲು ಸಾಧ್ಯವೆ?’ ಸಿಂಹ ಗರಂ ಆಯಿತು.

ADVERTISEMENT

‘ಬೇಡ ಬಿಡಿ, ನಾನು ಪಕ್ಕದ ಕಾಡಿಗೆ ಹೋಗಿ ಅಲ್ಲಿಯ ಸಿಂಹದ ಜೊತೆ ಸೇರಿಕೊಳ್ಳುತ್ತೇನೆ’ ಬೆಕ್ಕು ರೋಫ್ ಹಾಕಿತು.

ಎಂಥ ಕಾಲ ಬಂತಲ್ಲ ಎಂದು ಸಿಂಹ ಒಳಗೇ ಕೊರಗಿತು.

ಅಷ್ಟರಲ್ಲಿ ಅಲ್ಲಿಗೆ ಹಾರಿ ಬಂದ ಹದ್ದು ‘ನನಗೇನೂ ಬೇಡ, ನಿನ್ನ ಜೊತೆ ಸಿಂಹಾಸನದ ಮೇಲೆ ಕೂರುತ್ತೇನೆ, ಸ್ವಲ್ಪವೇ ಜಾಗ ಕೊಡು ಸಾಕು’ ಎಂದಿತು.

ಹದ್ದಿನ ಮಾತು ಕೇಳಿ, ಊರಿನಿಂದ ತಪ್ಪಿಸಿಕೊಂಡು ಬಂದಿದ್ದ ಎಮ್ಮೆಯೊಂದು ಗಹಗಹಿಸಿ ನಕ್ಕಿತು.

ಸಿಂಹಕ್ಕೆ ಸಿಟ್ಟು ಬಂತು ‘ಏಕೆ ನಗುತ್ತಿದ್ದೀ? ಅದೇನು ನಿನ್ನ ಮೂಗಲ್ಲಿ ದಾರ?’

‘ಇದು ಮೂಗುದಾರ, ನನ್ನ ಯಜಮಾನ ಕಟ್ಟಿರೋದು. ನನಗೆ ಒಂದೇ ಮೂಗುದಾರ, ರಾಜನಾದ ನಿನಗೆ ಇಷ್ಟೊಂದು ಮೂಗುದಾರವೆ? ಒಂಟಿ ಕಾಲಲ್ಲಿ ನೀನು ಕೂರಲು ಸಾಧ್ಯವೆ, ಮಲಗಲು ಸಾಧ್ಯವೆ? ಅದಕ್ಕೇ ನಗು ಬಂತು’ ಎಂದಿತು ಎಮ್ಮೆ. ಸಿಂಹ ಪಿಟಿಕ್ಕನ್ನಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.