‘ಯಾಕೋ ಕಮಲ ಅನ್ನೋ ಹೆಸರಿಗೆ ಈ ವರ್ಷ ಏಳ್ಗೆ ಇಲ್ಲ ಕಣ್ರಲೆ’ ಎಂದ ಗುಡ್ಡೆ.
‘ಅದೆಂಗೆ ಹೇಳ್ತೀಯ?’ ಕೊಟ್ರೇಶಿ ಕೊಕ್ಕೆ.
‘ಮ್ಯಾಲೇ ಗೊತ್ತಾಗಲ್ವಾ? ಭಾರತದಲ್ಲಿ ಕಮಲ ಪಕ್ಷಕ್ಕೆ ಬಹುಮತ ಬರ್ಲಿಲ್ಲ, ಅಮೆರಿಕದಲ್ಲಿ ಕಮಲಾ ಹ್ಯಾರಿಸ್‌ಗೆ ಗೆಲುವು ಸಿಗ್ಲಿಲ್ಲ...’
‘ಹೋಗ್ಲಿ ಬಿಡು, ಟ್ರಂಪು ನಮ್ ಕಮಲಕ್ಕನ್ನ ಸೋಲಿಸಿದ್ರೂ ಭಾರತದ ಪರ ಅದಾನಂತೆ’ ತೆಪರೇಸಿ ಸಮಾಧಾನಿಸಿದ.
‘ಅಲ್ಲ, ನಮ್ ಕಮಲಕ್ಕನ ಪರ ಒಬಾಮ, ಬೈಡನ್ನು ಎಲ್ಲ ಇದ್ರೂ ರಿಸಲ್ಟ್ ಉಲ್ಟಾ ಆಗೋತಲ್ಲ’ ದುಬ್ಬೀರನಿಗೆ ಆಶ್ಚರ್ಯ.
‘ಅದಕ್ಕೆ ‘ಗುಂಡು’ ಕಾರಣ’.
‘ಗುಂಡಾ?’ ಗುಡ್ಡೆ ದೊಡ್ಡದಾಗಿ ಬಾಯಿ ಬಿಟ್ಟ.
‘ಬಾಯಿ ಮುಚ್ಕಾ, ಗುಂಡು ಅಂದ್ರೆ ನೀನು ಏರಿಸೋ ಗುಂಡಲ್ಲ, ಟ್ರಂಪ್ ಮೇಲೆ ಹಾರಿಸಿದ ಗುಂಡು’.
‘ಓ... ಅದಾ, ಅದ್ಕೇ ಜನರಿಗೆ ಸಿಂಪಥಿ ಬಂದಿರಬೇಕು. ವಿಚಿತ್ರ ನೋಡು, ಅಲ್ಲಿ ಗುಂಡು ಹೊಡೆಸ್ಕಂಡು ಗೆಲ್ತಾರೆ, ನಮ್ಮಲ್ಲಿ ಜನರಿಗೆ ಗುಂಡು ಹಾಕಿಸಿ ಗೆಲ್ತಾರೆ. ಎಲ್ಲಾ ಉಲ್ಟಾ ಪಲ್ಟಾ’ ತೆಪರೇಸಿ ನಕ್ಕ.
‘ಲೇ ಗುಡ್ಡೆ, ನಮ್ ಅಬ್ಕಾರಿ ಮಂದಿ ತಿನ್ನೋದು ಜಾಸ್ತಿ ಆಗೇತಂತೆ. ಅದ್ಕೆ ಬಾರ್ ಬಂದ್ ಮಾಡ್ತಾರಂತೆ, ಗುಂಡು ಸ್ಟಾಕ್ ಮಾಡ್ಕಾ’ ಎಂದ ಕೊಟ್ರೇಶಿ.
‘ಅಲ್ಲ, ಅಬ್ಕಾರಿ ಅಂದ್ರೆ ಕುಡಿಯೋದು, ಈಗ ತಿನ್ನೋಕೆ ಶುರು ಮಾಡಿದಾರಾ? ಉಲ್ಟಾ ಪಲ್ಟಾ!’
‘ಎಲ್ರೂ ಸೋತ ಮೇಲೆ ಕಣ್ಣೀರು ಹಾಕ್ತಾರೆ. ನಮ್ ಚನ್ನಪಟ್ಟಣದಲ್ಲಿ ಸೋಲಬಾರದು ಅಂತ ಮೊದ್ಲೇ ಕಣ್ಣೀರಾಕ್ತದಾರಂತೆ, ಎಲ್ಲಾ ಉಲ್ಟಾ ಪಲ್ಟಾ!’ ದುಬ್ಬೀರ ತಾನೂ ಒಂದು ಸೇರಿಸಿದ.
‘ಅಲ್ಲ, ವಿಚಾರಣೆ ಅಂದ್ರೆ ಎಲ್ರೂ ಹೆದರ್ತಾರೆ. ಆದ್ರೆ ಮೊನ್ನಿ ನಮ್ ಸಿಎಂ ಸಾಹೇಬ್ರು ಲೋಕಾಯುಕ್ತ ವಿಚಾರಣೆಗೆ ಹೋದ್ರಲ್ಲ, ಅಧಿಕಾರಿಗಳಿಗೆ ‘ನಾನು ಸಿಎಂ ಅಂತ ಹೆದರ್ಕಾಬೇಡಿ, ಧೈರ್ಯವಾಗಿ ಪ್ರಶ್ನೆ ಕೇಳಿ’ ಅಂದ್ರಂತೆ, ಇದೆಂಗೆ?’
‘ಇದೂ ಉಲ್ಟಾ ಪಲ್ಟಾ!’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.