ADVERTISEMENT

ಚುರುಮುರಿ | ಲಗ್ನ ಸಂಹಿತೆ!

ತುರುವೇಕೆರೆ ಪ್ರಸಾದ್
Published 22 ಮಾರ್ಚ್ 2024, 23:08 IST
Last Updated 22 ಮಾರ್ಚ್ 2024, 23:08 IST
   

‘ನನ್ ಮಗಳಿಗೆ ಲಗ್ನ ಮಾಡ್ಬೇಕು? ಚುನಾವಣೆ ಐತಲ್ಲ, ಅದ್ಕೆ ಪತ್ರಿಕೆ ತೋರ್ಸಿ ಪರ್ಮಿಸನ್ ತಗಬೇಕಲ್ವಾ?’ ಹರಟೆಕಟ್ಟೇಲಿ ಕೇಳಿದ ಗುದ್ಲಿಂಗ.

‘ಹ್ಞೂಂ ಮತ್ತೆ! ಜನ ಸೇರ್ಸಕ್ಕೆ ಯಾಕೆ ಸುಳ್ಳು ಪತ್ರಿಕೆ ಹೊಡ್ಸಿರಬಾರದು? ಮದ್ವೆ ರಿಜಿಸ್ಟ್ರು ಮಾಡಿಸ್ಕಂಡು ಬರ್ಬೇಕು ಅಂತ ಕಾನೂನು ಮಾಡ್ಬೋದು’ ಎಂದು ತಿದಿ ಒತ್ತಿದ ಮಾಲಿಂಗ.

‘ಅಷ್ಟೇ ಅಲ್ಲ, ಇನ್ನೂ ಶಾನೆ ಶಾನೆ ಷರತ್ತು ಹಾಕ್ಬಹುದು. ಉದಾಹರಣೆಗೆ, ಮದ್ವೇಲಿ ವಾಲಗ ಊದುಸ್ಬಾರ್ದು ಅಂತ ಹೇಳ್ಬೋದು. ವಾಲಗದ ಸದ್ದಲ್ಲಿ ಯಾರಾದ್ರೂ ರಾಜಕೀಯ ಮಾತಾಡುದ್ರೆ ಗೊತ್ತಾಗಲ್ವಲ್ಲ, ಅದಕ್ಕೇ!’

ADVERTISEMENT

‘ಆಮೇಲೆ ನೀನು ಕಳಸದ ಮೇಲೆ ತೆನೆ, ಗಿನೆ ಮಡಗೋ ಅಂಗಿಲ್ಲ’.

‘ಇನ್ನೇನ್ ಪಾರ್ಥೇನಿಯಂ ಇಡಕ್ಕಾಗುತ್ತೇನ್ಲಾ?’

‘ಕಳ್ಳಿ ಗಿಡ ಬೇಕಾರೂ ಮಡಕ್ಕೋ, ಅದು ನಿನ್ ಹಣೆಬರಹ. ಅಂಗೇ ಪಾಣಿಗ್ರಹಣ ಅಂತ ಮಂತ್ರ ಯೋಳಂಗಿಲ್ಲ, ಯಾಕಂದ್ರೆ ಅಂಗಂದ್ರೆ ಕೈ ಇಡಿಯೋದು ಅಂತ ಆಯ್ತದೆ’.

‘ಹೌದೌದು, ಆಮೇಲೆ ಬಾಗ್ಲಲ್ಲಿ ಸೆಂಟು ಹೊಡೆದು ತಾವರೆ ಹೂ ಕೈಗೆ ಕೊಡಂಗಿಲ್ಲ, ಜ್ಯೂಸು ಕೊಡಂಗಿಲ್ಲ, ಅಂಗಂತ ಎಣ್ಣೆ ಕೊಟ್‍ಬುಟ್ರೆ? ಆಮ್ಯಾಕೆ ತುಂಡು, ಗುಂಡು ಇಲ್ಲ ಅಂತ ವಿಡಿಯೊ ಮಾಡ್ಸಿ ತೋರುಸ್ಬೇಕು’.

‘ಕೊನೆಗೆ ಉಂಡ್ ಓಗೋರ ಕೈಗೆ ತಾಂಬೂಲನೂ ಕೊಡೋ ಅಂಗಿಲ್ಲ ಅನ್ಸುತ್ತೆ. ಚೀಲ್ದೊಳಗೆ ಏನಾರಾ ಕಾಲ್ಚೈನು, ಮೂಗ್ಬಟ್ಟು, ರವಿಕೆ ಪೀಸು ಹಾಕ್ ಕೊಟ್ರೆ ಅಂತ ಅನುಮಾನ ಬರಕಿಲ್ವಾ?’

‘ಓಗ್ಲಿ ಬಿಡ್ಲಾ, ಖರ್ಚೇ ಉಳ್ಕಂತು’ ಹಿಗ್ಗಿದ ಗುದ್ಲಿಂಗ!

‘ಥೂ! ಅದ್ರಲ್ಲೂ ಉಳ್ಸಕ್ಕೆ ನೋಡ್ತೀಯಾ? ಅಲ್ಲಲೇ, ಇಷ್ಟೆಲ್ಲಾ ಆದ್ಮೇಲೆ ನಿನ್ ಮಗಳು, ಅಳಿಯಂಗೆ ಕವರ‍್ರಲ್ಲಿ ಮುಯ್ಯಿ ಕೊಡಕ್ಕೆ ಬಿಟ್ಟುಬಿಡ್ತಾರಾ? ಅದೂ ಬಂದ್, ಎಂಟಾಣೆ ಹುಟ್ಟಲ್ಲ’ ಎಂದ ಪರ್ಮೇಶಿ.

‘ಅಯ್ಯೋ, ಯಾರ್‍ಯಾರ್ದೋ ಮದ್ವೆಗೆಲ್ಲಾ ಓಗಿ ಮುಯ್ಯಿ ಮಾಡಿ ಬಂದಿವ್ನಿ. ಇದು ಶಾನೆ ಅನ್ಯಾಯ’ ಎಂದು ಬೊಮ್ಮಡಿ ಹೊಡೆದ ಗುದ್ಲಿಂಗ. ಎಲ್ಲಾ ಗೊಳ್ ಎಂದು ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.