ADVERTISEMENT

ಚುರುಮುರಿ: ಸುಗಮ ಮಂಡಲಿ

ಸಿ.ಎನ್.ರಾಜು
Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
   

‘ನಿಗಮಕ್ಕೋ ಮಂಡಲಿಗೋ ಅಧ್ಯಕ್ಷನಾಗುವ ಸುಗಮ ಅವಕಾಶ ಕೂಡಿಬಂದಿದೆ ಸಾರ್...’ ಗುಡ್‍ನ್ಯೂಸ್ ತಂದ ಪುಟ್ಸಾಮಿ.

‘ನಿನಗೆ ಅಂಥಾ ಸ್ಥಾನ ಕೊಡಿಸುವಂಥಾ ಗಾಡ್‍ಫಾದರ್ ಯಾರಿದ್ದಾರೆ?’ ಕೇಳಿದೆ.

‘ಪಕ್ಷ ಕಟ್ಟಿ ಬೆಳೆಸಿದ ದುಡಿಮೆ ಇದೆ. ಚುನಾವಣೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಗೆಲ್ಲಿಸಿದ ನನ್ನ ಋಣ ಶಾಸಕರ ಮೇಲಿದೆ. ನನ್ನ ಸೇವೆ ಮೆಚ್ಚಿರುವ ಶಾಸಕರು ಸರ್ಕಾರಿ ಸ್ಥಾನಮಾನ ಕೊಡುಸ್ತೀನಿ ಅಂತ ಮಾತು ಕೊಟ್ಟಿದ್ದಾರೆ’.

ADVERTISEMENT

‘ನೀನು ಮಾಡಿದ ಸಮಾಜಸೇವೆಯ ಫಲಾನುಭವಿ ಜನರ ಆಶೀರ್ವಾದವೂ ನಿನ್ನ ಮೇಲಿದೆ’.

‘ಹೌದು ಸಾರ್, ಸ್ಕೂಲ್ ಮಕ್ಕಳಿಗೆ ನೋಟ್‌ಬುಕ್ಸ್ ಕೊಟ್ಟಿದ್ದೀನಿ, ಅನಾಥಾಶ್ರಮದಲ್ಲಿ ಊಟ, ಬಟ್ಟೆ ಹಂಚಿದ್ದೀನಿ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಮಾಡಿದ್ದೀನಿ. ನೀವು ನನ್ನ ಹೆಲ್ತ್ ಕ್ಯಾಂಪಿಗೆ ಅತಿಥಿಯಾಗಿ ಬಂದು ಬಿ.ಪಿ ಚೆಕ್ ಮಾಡಿಸಿಕೊಂಡಿದ್ದೀರಿ, ನಿಮ್ಮ ಆಶೀರ್ವಾದವೂ ನನ್ನ ಮೇಲಿದೆ...’

‘ಪಕ್ಷದ ವಲಯದಲ್ಲಿ ರಿಮಾರ್ಕ್, ಬ್ಲ್ಯಾಕ್‌ಮಾರ್ಕ್ ಇಲ್ಲದಂತೆ ಎಚ್ಚರವಹಿಸು’.

‘ಜೇನು ಕಿತ್ತಾಗ ಕೈ ನೆಕ್ಕಿ ಬ್ಲ್ಯಾಕ್‌ಮಾರ್ಕ್ ಮಾಡಿಕೊಂಡಿದ್ದೆ. ಈಗ ಎಲ್ಲವನ್ನೂ ತೊಳೆದುಕೊಂಡು ವೈಟ್ ಆ್ಯಂಡ್‌ ವೈಟ್ ಆಗಿದ್ದೀನಿ ಸಾರ್!’

‘ಮಂತ್ರಿ ಸ್ಥಾನ ಸಿಗದ ಶಾಸಕರು ನಿಗಮ, ಮಂಡಲಿಗಳಿಗೆ ಟವೆಲ್ ಹಾಕಿದ್ದಾರಂತೆ, ಶಾಸಕರಿಗೆ ಮಣೆ ಹಾಕಿಬಿಟ್ಟರೆ ಪಕ್ಷಕ್ಕೆ ಮಣ್ಣು ಹೊತ್ತ ನಿನ್ನಂಥಾ ನಿಷ್ಠರಿಗೆ ಅನ್ಯಾಯವಾಗುತ್ತದೆ. ನಿನ್ನ ರಾಜಕೀಯ ಸ್ಥಾನಕ್ಕೆ ನಿಮ್ಮ ಶಾಸಕರೇ ಅಡ್ಡಿಯಾಗಿದ್ದಾರಂತೆ ಹುಷಾರ್!’ ಎಚ್ಚರಿಸಿದೆ.

‘ನಾನು ಬೆಳೆದರೆ ಮುಂದಿನ ಚುನಾವಣೆಗೆ ಪ್ರತಿಸ್ಪರ್ಧಿ ಆಗ್ತೀನಿ ಅನ್ನೋ ಭಯ ನಮ್ಮ ಶಾಸಕರಿಗಿದೆ ಸಾರ್. ಆದರೂ ಅವರು ನನ್ನ ದಾರಿಗೆ ಅಡ್ಡ ಬರುವುದಿಲ್ಲ. ಅವರ ಚರಿತ್ರೆಯ ಪೆನ್‍ಡ್ರೈವ್ ನನ್ನಲ್ಲಿದೆ ಅನ್ನೋದು ಶಾಸಕರಿಗೆ ಗೊತ್ತಿದೆ!’ ಎಂದು ಕುಹಕ ನಗೆ ನಕ್ಕ ಪುಟ್ಸಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.