ADVERTISEMENT

ಚುರುಮುರಿ | ಎಲ್ಲಿ ಹೋದವು ಹುಲಿಗಳು?

ಆನಂದ ಉಳಯ
Published 12 ಏಪ್ರಿಲ್ 2023, 0:30 IST
Last Updated 12 ಏಪ್ರಿಲ್ 2023, 0:30 IST
.
.   

‘ಅದೇನು ಧೈರ್ಯ ಈ ಹುಲಿಗಳಿಗೆ?’ ಎಂದಳು ಮಡದಿ. ನನಗೆ ಆಶ್ಚರ್ಯವಾಯಿತು. ‘ಹುಲಿಗಳಿಗೆ ಧೈರ್ಯ ಎಂದರೆ ಏನು? ಮೀನಿಗೆ ಒದ್ದೆ ಎಂದಂತಾಗಲಿಲ್ಲವೇ?’

‘ಅಯ್ಯೋ ಹಾಗಲ್ಲಾರೀ, ಮೊನ್ನೆ ಮೋದೀಜಿ ಬಂಡೀಪುರದಲ್ಲಿ ಹುಲಿ ಸಫಾರಿ ಮಾಡಿದ
ರಲ್ಲಾ... 22 ಕಿ.ಮೀ. ಕಾಡಿನಲ್ಲಿ ಸುತ್ತಿದರೂ ಒಂದೂ ಹುಲಿ ಕಣ್ಣಿಗೆ ಬೀಳಲಿಲ್ಲ ಎಂದರೆ ಹೇಗೆ?’

‘ಹುಲಿಗಳಿಗೇನು ಗೊತ್ತಿತ್ತೇ ಪ್ರಧಾನಿ ಬರ್ತಿದಾರೆ ಅಂತ. ಗೊತ್ತಿದ್ದರೆ ಅವೂ ಬರ್ತಿದ್ದವೇನೋ ಹೊರಕ್ಕೆ ಅವರನ್ನು ನೋಡೋದಿಕ್ಕೆ ಹಾರಗಳ ಸಮೇತ’.

ADVERTISEMENT

‘ಹಿಂದಿನ ಕಾಲದ ರಾಜರು ಶಿಕಾರಿಗೆ ಹೊರಟಂತಿತ್ತು ಮೋದೀಜಿ ಟೈಗರ್ ಸಫಾರಿ. ಆದರೆ ಯಾವ ಹುಲಿನೂ ಕ್ಯಾರೆ ಅನ್ನಲಿಲ್ಲ ನೋಡಿ. ಸೊ ಸ್ಯಾಡ್’ ಎಂದು ಲೊಚಗುಟ್ಟಿದಳು.

ಇದರಲ್ಲೇನಾದರೂ ಷಡ್ಯಂತ್ರ ಇರಬಹುದೇ ಎಂದು ಅನುಮಾನಿಸಿದೆ. ರಾಜಕಾರಣಿಗಳ ಪ್ಲ್ಯಾನ್ ಉಲ್ಟಾ ಆದರೆ ಅದರ ಹಿಂದೆ ಷಡ್ಯಂತ್ರ ಇದ್ದೇ ಇರುತ್ತದೆ ಎಂದು ನಮಗೆ ಚೆನ್ನಾಗಿ ಗೊತ್ತು. ಮಾಡಾಳ್ ವಿರೂಪಾಕ್ಷಪ್ಪನವರ ಬೆಡ್‍ರೂಂನಲ್ಲಿ ಕೋಟಿ ಕೋಟಿ ನಗದು ಸಿಕ್ಕಿದ್ದರ ಹಿಂದೆಯೂ ಷಡ್ಯಂತ್ರ ಇದೆ ಎಂದು ಅವರೇ ಹೇಳಿಲ್ಲವೆ?

‘ಹುಲಿ ಕಾಣಿಸದೇ ಇರುವುದರ ಹಿಂದೆ ಷಡ್ಯಂತ್ರ ಸಾಧ್ಯವೇನ್ರೀ?’

‘ವೈ ನಾಟ್? ಮೋದೀಜಿ ಬರ್ತಾರೆ ಅಂತ ಅವೆಲ್ಲ ಪಕ್ಕದ ತಮಿಳುನಾಡಿಗೆ ವಲಸೆ ಹೋಗಿರಲಿಕ್ಕೆ ಸಾಕು’ ಎಂದೆ.

‘ಸ್ಟಾಲಿನ್ ಅವರ ಷಡ್ಯಂತ್ರವೇ? ನೊ ವೇ..’

‘ಹೇಗೆ ಹೇಳ್ತೀಯಾ?’

‘ಮೊನ್ನೆ ಅವರಿಬ್ಬರೂ ಕೈಕೈ ಹಿಡಿದು ನಗ್ತಾ ನಗ್ತಾ ಊರು ಸುತ್ತಿದರಂತೆ. ಹಾಗಿರುವಾಗ ಹುಲಿಗಳನ್ನೆಲ್ಲಾ ಅವರು ತಮ್ಮ ಏರಿಯಾಕ್ಕೆ ಕರೆಸಿಕೊಂಡಿರಲಿಕ್ಕೆ ಸಾಧ್ಯವಿಲ್ಲ’.

‘ಮತ್ತೆ ಕೆಸಿಆರ್ ಮಾಡಿರಲು ಸಾಧ್ಯವೆ? ಮೋದೀಜೀನ ಕಂಡರೆ ಅವರಿಗಾಗದು...’

‘ಅಯ್ಯೋ! ನೀವೋ ನಿಮ್ಮ ಭೂಗೋಳವೋ, ತೆಲಂಗಾಣ ಬಾರ್ಡರ್‌ನಲ್ಲಿ ಬಂಡೀಪುರ ಬರೋಲ್ಲರೀ’.

‘ಕರೆಕ್ಟ್. ಕೇರಳ ಸಹ ಔಟ್ ಆಫ್ ಕ್ವೆಶ್ಚನ್.
ಮತ್ತೆ ಈ ಹುಲಿಗಳನ್ನು ಯಾರು ಎತ್ತಿ ಕಟ್ಟಿರ
ಬಹುದು? ಜೆಪಿಸಿ ತನಿಖೆ ಮಾಡಿಸಿದರೆ ಹೇಗೆ?’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.