ಮಧ್ಯರಾತ್ರಿ ಮಂತ್ರಿಗಳ ಮನೆ ಹತ್ತಿರ ಕುಡಿದು ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ತೆಪರೇಸಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರು.
ಇನ್‌ಸ್ಪೆಕ್ಟರು ಸಿನಿಮಾ ಸ್ಟೈಲಲ್ಲಿ ಲಾಠಿ ತಿರುಗಿಸುತ್ತ ಕೇಳಿದರು ‘ಏನಯ್ಯಾ ನಿನ್ ಹೆಸರು? ಇಷ್ಟೊತ್ತಲ್ಲಿ ಮಿನಿಸ್ಟರ್ ಮನೆ ಹತ್ರ ಯಾಕೋಗಿದ್ದೆ?’
‘ನಾನು ತೆಪರೇಸಿ ಅಂತ. ಮಿನಿಸ್ಟರ್ ಮನೆಗೆ ಹೋಗಿದ್ನಾ? ಗೊತ್ತಿಲ್ಲ ಸಾ, ಎಲ್ಲ ದೇವರ ಆಟ’.
‘ಏನು? ದೇವರ ಆಟನಾ? ತಗುದು ಬುಟ್ಟಾ ಅಂದ್ರೆ ತೋಪ್ ನಿಕಾಲ್ ಆಗ್ಬಿಡಬೇಕು. ಸರಿಯಾಗಿ ಮಾತಾಡು’.
‘ಗೊತ್ತಿಲ್ಲ ಸಾ... ನೆನಪಿಲ್ಲ, ದೇವರೇ ಆ ದಾರಿ ತೋರಿಸಿರ್ಬೇಕು’.
‘ಈ ನಾಟಕ ಎಲ್ಲ ಬ್ಯಾಡ, ಸರಿಯಾಗಿ ಮಾತಾಡು. ಇಲ್ಲಾಂದ್ರೆ ಏರೋಪ್ಲೇನ್ ಹತ್ತಿಸ್ತೀನಿ ಅಷ್ಟೆ’.
‘ಆಟೊ ಹತ್ತಿದ್ದಕ್ಕೇ ಪೊಲೀಸ್ ಸ್ಟೇಷನ್‌ಗೆ ಬಂದಿದೀನಿ, ಏರೋಪ್ಲೇನ್ ಹತ್ತಿದ್ರೆ ಇನ್ನೆಲ್ಲಿಗೆ ಹೋಗ್ತೀನೋ. ಇನ್ನೇನ್ಮಾಡೋದು, ದೇವರು ಎಲ್ಲಿಗೆ ಕಳಿಸ್ತಾನೆ ಅಲ್ಲಿಗೆ ಹೋಗೋದು’.
‘ಏಯ್, ಎಲ್ಲದ್ಕೂ ದೇವರು ದೇವರು ಅಂತೀಯ? ಒದ್ದು ಒಳಗಾಕ್ತೀನಿ ನೋಡೀಗ’.
‘ಹಾಕಿ ಸಾ... ದೇವರಿಚ್ಛೆ ಇದ್ರೆ ಅದೂ ಆಗ್ಲಿ. ಅಲ್ಲ ಸಾ, ದೊಡ್ ದೊಡ್ಡೋರು ‘ದೇವರೇ ನನ್ನ ಇಲ್ಲಿಗೆ ಕಳಿಸಿದಾನೆ’ ಅಂದ್ರೆ ನಂಬ್ತೀರಿ, ಜುಜುಬಿ ನಮ್ಮಂತೋರು ಹೇಳಿದ್ರೆ ಯಾಕ್ಸಾ ನಂಬಲ್ಲ?’
ಇನ್‌ಸ್ಪೆಕ್ಟರಿಗೆ ತಲೆ ಕೆಟ್ಟುಹೋಯಿತು ‘ಪುಣ್ಯಾತ್ಮ, ನೀನು ಎಲ್ಲಿಗೆ ಹೋಗಬೇಕಾಗಿತ್ತು ಅದ್ನಾದ್ರೂ ಹೇಳು’.
‘ಮಾವನ ಮನೆಗೆ... ಆಟೋದವನಿಗೆ ಹೇಳಿದ್ದೆ, ಅವ್ನು ಮಿನಿಸ್ಟರ್ ಮನಿ ಹತ್ರ ಬಿಟ್ಟು ಹೋದ್ರೆ ನಾನೇನ್ ಮಾಡ್ಲಿ?’
‘ನಿಂಗೆ ಮಾವನ ಮನೆ ಅಡ್ರೆಸ್ ಗೊತ್ತಿರಲಿಲ್ವಾ?’
‘ಗೊತ್ತಿತ್ತು, ಫುಲ್ ಟೈಟಾಗಿದ್ನಲ್ಲ, ಗೂಗಲ್ ಮ್ಯಾಪ್ ಹಾಕಿಕೊಟ್ಟಿದ್ದೆ. ಮಂತ್ರಿ ಮಾಲ್ ಕ್ರಾಸ್ ಹತ್ರ ಮಾವನ ಮನೆ ಅಂತಾನೂ ಹೇಳಿದ್ದೆ. ಗೂಗಲ್ಲು ಮಂತ್ರಿ ಮಾಲ್ ತೋರ್ಸೋ ಬದ್ಲು ಮಂತ್ರಿ ಮನೆ ತೋರ್ಸಿದ್ರೆ ನಾನೇನ್ ಮಾಡ್ಲಿ? ಎಲ್ಲ ದೇವರಿಚ್ಛೆ...’ ತೆಪರೇಸಿ ತೊದಲಿದ. ಇನ್‌ಸ್ಪೆಕ್ಟರು ಲಾಠಿ ಬಿಸಾಕಿ ಎದ್ದು ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.