‘ಹ್ಯಾಪಿ ಅನ್‌ಎಂಪ್ಲಾಯ್‌ಮೆಂಟ್ ಡೇ’ ಖುಷಿಯಿಂದ ಸ್ನೇಹಿತ ಮುದ್ದಣ್ಣನಿಗೆ ವಿಶ್ ಮಾಡಿದ ವಿಜಿ. ‘ಮೊನ್ನೆ ಇದ್ದ ನಮ್ ಬಾಸ್ ಬರ್ತ್‌ಡೇಯನ್ನ ಹೀಗೆ ಅಣಕಿಸಿ ಆಚರಿಸ್ತೀರಿ ಅಂತ ಗೊತ್ತು. ಎಲ್ಲದರಲ್ಲೂ ರಾಜಕೀಯ ಮಾಡ್ತೀರಲ್ಲ’ ಅಂದ ಮುದ್ದಣ್ಣ.
‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು, ಎಲ್ಲಿ ಮಾಡಿದ್ರು ಹೇಳಪ್ಪ’.
‘140 ಕೋಟಿ ಜನರಲ್ಲಿ ಎರಡೇ ಕೋಟಿ ಜನರಿಗೆ ಉದ್ಯೋಗ ಕೊಡಬೇಕು ಅಂದ್ರೆ ಕಷ್ಟ ಆಗುತ್ತೆ. ಅಭ್ಯರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆ ಪಾಸ್ ಮಾಡಬೇಕಪ್ಪ’.
‘ರಿಕ್ರೂಟ್‌ಮೆಂಟ್ ಎಕ್ಸಾಮ್ ಒಂದಾದರೂ ಸುಸೂತ್ರವಾಗಿ ನಡೆಸ್ತಿದಾರಾ? ಎಲ್ಲದರಲ್ಲೂ ಅಕ್ರಮ, ಭ್ರಷ್ಟಾಚಾರ’.
‘ಸ್ವಯಂ ಉದ್ಯೋಗ ಮಾಡ್ರಿ, ಬೇಡ ಅಂದವರಾರು?’
‘ಬಂಡವಾಳ ಬೇಕಲ್ರೀ? ಒಂದು ವೇಳೆ ಹಣ ಜೋಡಿಸಿಕೊಂಡು ಪಕೋಡ ಬಿಸಿನೆಸ್ ಮಾಡಿ ಸಕ್ಸಸ್ ಆದರೂ, ಬರೋ ಪ್ರಾಫಿಟ್‌ನಲ್ಲಿ ಅರ್ಧಕ್ಕರ್ಧ ಟ್ಯಾಕ್ಸ್ ಕಟ್ಟಿಯೇ ಸುಸ್ತಾಗಬೇಕು’ ಒಂದೇ ಉಸಿರಿನಲ್ಲಿ ಹೇಳಿದ ವಿಜಿ.
‘ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಮ್ ಗುರುಗಳು ಹೊಸ ಐಡಿಯಾ ಮಾಡಿದಾರೆ’.
‘ಏನದು?’
‘ಸ್ಪೇಸ್ ಟೆಕ್ನಾಲಜಿ. ಈ ತಂತ್ರಜ್ಞಾನ ಬಳಸಿ, ಎಲ್ಲೆಲ್ಲಿ ಉದ್ಯೋಗ ಖಾಲಿ ಇದೆ, ಯಾರ್‍ಯಾರಿಗೆ ಅವಕಾಶ ಕೊಡಬೇಕು ಅಂತ ಮೇಲಿನಿಂದಲೇ ನೋಡಿ ಡಿಸೈಡ್ ಮಾಡ್ತಾರೆ ನಮ್ ಬಾಸು’.
‘ಗೊತ್ತು ಬಿಡು. ‘ಮನಿ’ ಮೇಲೆ ಆಸೆ ಇರುವ ಪೊಲಿಟಿಷಿಯನ್ ‘ರತ್ನ’ಗಳು ಮಾತ್ರ ಈ
ಟೆಕ್ನಾಲಜಿಯನ್ನು ತುಂಬಾ ಚೆನ್ನಾಗಿ ಬಳಸಿಕೊಳ್ತಿವೆ’.
‘ಹೆಂಗೆ?’
‘ಹೇಗಂದ್ರೆ, ಯಾವ ಗುತ್ತಿಗೆದಾರನ ಬಳಿ ಎಷ್ಟು ದುಡ್ಡಿದೆ, ಯಾವ ಕಾಮಗಾರಿಯಲ್ಲಿ ಹೆಚ್ಚು ಕಮಿಷನ್ ಬರುತ್ತೆ, ಯಾವ ನಿಗಮದ ಖಾತೆಯಲ್ಲಿ ಜಾಸ್ತಿ ದುಡ್ಡಿದೆ, ನೋಟಿಫೈ ಅಥವಾ ಡಿನೋಟಿಫೈ ಮಾಡೋ ಜಾಗ ಎಲ್ಲೆಲ್ಲಿದೆ ಅಂತ ಈ ಸ್ಪೇಸ್ ಟೆಕ್ನಾಲಜಿ ಮೂಲಕ ತಿಳ್ಕೊಂಡು ಅವರವರ ‘ಕೆಲಸ’ ಮಾಡ್ಕೊಳ್ತಿದಾರೆ!’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.