ADVERTISEMENT

ಚುರುಮುರಿ: ಜಾತಕಾ- ಕವಿತಾ!

ಚಂದ್ರಕಾಂತ ವಡ್ಡು
Published 18 ಅಕ್ಟೋಬರ್ 2024, 23:49 IST
Last Updated 18 ಅಕ್ಟೋಬರ್ 2024, 23:49 IST
   

‘ನಮ್ಮ ನಾಗಣ್ಣ ಮಗಳ ಜಾತಕ ಬರೆಸಲು ಪರದಾಡ್ತಿದ್ದಾನೆ. ಯಾರಾದ್ರೂ ಒಳ್ಳೇ ಜ್ಯೋತಿಷಿ ಗೊತ್ತಿದ್ರೆ ಹೇಳ್ತೀರಾ...’ ಬೈಟು ಕಾಫಿ ಬಳಗದಲ್ಲಿ ಪ್ರಸ್ತಾಪಿಸಿದ ಬದ್ರಿ.

‘ಅಯ್ಯೋ... ಜ್ಯೋತಿಷಿಗಳಿಗೇನು ಕೊರತೆ, ಊರುತುಂಬಾ ಬೋರ್ಡ್ ಹಾಕ್ಕೊಂಡು ಕೂತಿರ್ತಾರೆ’.

‘ಪರಿಸ್ಥಿತಿ ಹಾಗಿಲ್ಲಪ್ಪಾ... ಜಾತಕಾ ಬರೆಯೋರೆಂದರೆ ಕವಿತಾ ಬರೆಯೋರ ಥರಾ ಅಂದ್ಕೋಬೇಡ. ಜ್ಯೋತಿಷಿಗಳು ಕೆಲವು ಕವಿಗಳಂತೆ ದಸರಾ ದೂಸರಾ ಅಂತ ಕಿವಿಗಳನ್ನು ಹುಡುಕಿಕೊಂಡು ತಿರುಗೋದಿಲ್ಲ’.

ADVERTISEMENT

‘ಕವಿಗಳನ್ನೇನು ಅಷ್ಟೊಂದು ಅಗ್ಗ ಅಂತ ಭಾವಿಸಬೇಡ. ಸಿಟ್ಟು ಬಂದರೆ ಕೊಟ್ಟ ಪ್ರಶಸ್ತಿ
ಯನ್ನು ಕೊಟ್ಟವರಿಗೇ ಹಿಂದಿರುಗಿಸಿದ ಉದಾಹರಣೆಗಳು ಇವೆ. ಅಪಸ್ವರ ಹೊರಟರೆ ಕವಿಗೋಷ್ಠಿಯನ್ನೇ ತ್ಯಜಿಸುವಷ್ಟು ಸ್ವಾಭಿಮಾನಿಗಳು ಅವರು’.

‘ಮುಡಾ ಸೈಟು, ಮುಡಾ ಅಧ್ಯಕ್ಷತೆಯನ್ನೇ ತ್ಯಜಿಸುವ ನೈತಿಕತೆ ಕಾಲದಲ್ಲಿ ಪ್ರಶಸ್ತಿ ವಾಪಸಾತಿ ಏನು ಮಹಾತ್ಯಾಗ ಬಿಡು’.

‘ಕೊಟ್ಟ ಸೈಟಿನಲ್ಲಿ ಮನೆ ಕಟ್ಟದವನು, ಕರೆದ ಗೋಷ್ಠಿಯಲ್ಲಿ ಕವಿತೆ ಓದದವನು ಕೊಟ್ಟ ಕುದುರೆ ಏರದವನಂತೆಯೇ...’ ಹೊಸದೊಂದು ವಚನ ಹೊಸೆದ ರುದ್ರಿ.

‘ವಿಷಯಾಂತರ ಬೇಡ. ನಾಗಣ್ಣನಿಗೆ ಜಾತಕ ಬರೆಯೋರು ಯಾಕೆ ಸಿಗ್ತಿಲ್ಲ ಹೇಳಿ’.

‘ನಾಗಣ್ಣನ ಚನ್ನಪಟ್ಟಣ ಅಷ್ಟೇ ಅಲ್ಲ... ಸಂಡೂರು ಮತ್ತು ಶಿಗ್ಗಾವಿಯಲ್ಲೂ ಇನ್ನೊಂದು ವಾರ ಜಾತಕ ಬರೆಯೋರು ಸಿಗೋದಿಲ್ಲ. ಅವರೆಲ್ಲಾ ವಿಪರೀತ ಬಿಜಿ’ ಕೊಟ್ರಿ ಡಿಕ್ಲೇರ್ ಮಾಡಿಬಿಟ್ಟ.

‘ಅದೇನಪ್ಪಾ ಅಂಥಾದ್ದು ಈ ಊರುಗಳಲ್ಲಿ?’

‘ನೀವಿನ್ನೂ ವಾಲ್ಮೀಕಿ ನಿಗಮದ ಹಗರಣದಲ್ಲೇ ಇದ್ದೀರಿ… ಈಗಾಗ್ಲೇ ಕೋವಿಡ್ ಸಾಮಗ್ರಿ ಖರೀದಿ ಪ್ರಕರಣ ಓಡುತ್ತಿದೆ’ ಕೊಟ್ರಿ ತಿವಿದ. ಕೊನೆಗೆ ತಿಂಗಳೇಶನೇ ವಿವರಿಸಿದ:

‘ಕೈ ಪಕ್ಷದ ಬಂಡೆಯಣ್ಣ ಕಾಲ್‌ಫಾರ್ ಮಾಡಿದ್ದಾರೆ: ಖಾಲಿ ಇರುವ ಮೂರು ಶಾಸಕ ಸ್ಥಾನಗಳನ್ನು ಭರ್ತಿ ಮಾಡಲು ಗೆಲ್ಲುವ ಅಭ್ಯರ್ಥಿ ಗಳಿಂದ ಜಾತಕಗಳನ್ನು ಆಹ್ವಾನಿಸಲಾಗಿದೆ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.