ADVERTISEMENT

ಚುರುಮುರಿ: ಎಕ್ಸ್ ವೈ ಝಡ್!

ಚಂದ್ರಕಾಂತ ವಡ್ಡು
Published 19 ಜುಲೈ 2024, 20:56 IST
Last Updated 19 ಜುಲೈ 2024, 20:56 IST
   

‘ವಾಟ್ಸ್‌ಆ್ಯಪ್‌ನಲ್ಲಿ ನೀನು ಕಳಿಸಿದ್ದ ಕಿರಾಣಿ ಸಾಮಾನು ಪಟ್ಟಿ ಕಾಣಿಸ್ತಿಲ್ಲ…’ ಅಂಗಡಿ ಮುಂದೆ ನಿಂತಿದ್ದ ತಿಂಗಳೇಶ ಮಡದಿಗೆ ಕರೆ ಮಾಡಿದ.

‘ತಲೆ ಕೆಡಿಸಿಕೊಳ್ಳಬೇಡಿ, ಅತ್ತೆ ಆ ಪಟ್ಟಿ ಸರಿಯಿಲ್ಲ ಅಂತಾರೆ. ಅದಕ್ಕೆ ನಾನೇ ಅಳಿಸಿದೆ. ಮನೆಯಲ್ಲಿ ಎಲ್ಲರ ಜೊತೆ ಚರ್ಚೆ ಮಾಡಿ ಬೇರೆ ಪಟ್ಟಿ ಕಳಿಸ್ತೀನಿ. ಅಲ್ಲೇ ಕಾಯ್ತಿರಿ’.

‘ನಿನ್ನ ತವರುಮನೆ ಮೈಸೂರು ಆಗಿರಬೌದು. ಹಾಗಂತ ಸಿದ್ದರಾಮಯ್ಯ ಅವರನ್ನೇ ಅನುಕರಿಸಬೇಕಿಲ್ಲ’.

ADVERTISEMENT

‘ಅದೇನ್ರೀ… ನಾನೇನು ‘ಮುಡಾ’ದಿಂದ ಸೈಟು ಪಡೆದಿದ್ದೇನೆ ಅನ್ನೋಹಾಗೆ ಮಾತಾಡ್ತೀರಿ’.

‘ಮೈಸೂರಿನವರಿಗೆ ಸದಾ ಸೈಟುಗಳದೇ ಧ್ಯಾನ! ನಾನು ಹೇಳಿದ್ದು ಸಿದ್ದರಾಮಯ್ಯನವರು ಎಕ್ಸ್ ಕನ್ನಡಿಯಲ್ಲಿ ಕನ್ನಡಿಗರಿಗೆ ಉದ್ಯೋಗ ತೋರಿಸಿ ಕ್ಷಣಾರ್ಧದಲ್ಲಿ ಮಾಯ ಮಾಡಿದ್ದು’.

‘ಹೌದುರೀ… ಎಕ್ಸ್‌ನಲ್ಲಿ ಪ್ರತ್ಯಕ್ಷ ಕಂಡರೂ ‘ವೈ?’ ಅಂತ ಪ್ರಶ್ನೆ ಹಾಕಿ ಪ್ರಮಾಣಿಸಿ ನೋಡೋ ಕಾಲವಿದು. ಮುಖ್ಯಮಂತ್ರಿಗಳು ಸಚಿವ ಸಂಪುಟದ ನಿರ್ಧಾರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದೇ ತಡ, ಶಾ, ಮಿಶ್ರಾ, ಪೈಗಳು ‘ವೈ?’ ‘ವೈ?’ ‘ವೈ?’ ಎಂದು ಮುಗಿಬಿದ್ದರು ನೋಡಿ. ಎಲ್ಲರ ಕರ್ನಾಟಕ ಎಂದು ಹೊರಟ ಸಿದ್ರಾಮಣ್ಣ ಕೆಲವರ ಕರ್ನಾಟಕದ ಮಾತು ಕೇಳುವಂತಾಯಿತು. ಕೊನೆಗೆ ಎಕ್ಸ್‌ನಲ್ಲಿ ಏನೇನೋ ಮಿಕ್ಸ್ ಮಾಡಿಟ್ಟರು’.

‘ಕನ್ನಡಿಗರಿಗೆ ಮೀಸಲಾತಿ ನೀಡೋದನ್ನ ಉದ್ಯಮಿಗಳು ವಿರೋಧಿಸುವುದಿಲ್ಲ. ಆದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿಭಾವಂತರ ಅಗತ್ಯವಿದೆಯಂತೆ. ಹಾಗಾಗಿ ಕನ್ನಡಿಗರ ಮೀಸಲಾತಿ ಪ್ರಮಾಣವನ್ನು ಶೇ 25ಕ್ಕೆ ಇಳಿಸಬೇಕು ಎಂಬುದು ಅವರ ವಾದ’.

‘ಅಂದ್ರೆ ಅವರ ಉದ್ಯಮಗಳಲ್ಲಿ ಕಾಲುಭಾಗ ಪ್ರತಿಭಾಹೀನರಿಗೆ ಅವಕಾಶ ಕಲ್ಪಿಸುವ ಉದಾರ ಮನೋಭಾವ ತೋರಿಸಿದ್ದಾರೆ ಅನ್ನಿ’ ಅಮ್ಮನ ವ್ಯಂಗ್ಯ ತುಂಡರಿಸಿದ ಮಗ, ಇ.ಡಿ. ಶೈಲಿಯಲ್ಲಿ ಎಂಟ್ರಿ ಕೊಟ್ಟು, ‘ಇನ್ನು ಮೇಲೆ ಸಚಿವ ಸಂಪುಟದ ಸಭೆಗೆ ಉದ್ಯಮಿ ಪ್ರತಿನಿಧಿ ಕರೆಯುವುದೇ ವಾಸಿ’ ಎಂದು ಎಕ್ಸ್ ವೈಗೆ ಝಡ್ ಸೇರಿಸಿದ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.