ADVERTISEMENT

ಚುರುಮುರಿ: ಪ್ರಶಸ್ತಿ ಭಾಗ್ಯ!

ಬಿ.ಎನ್.ಮಲ್ಲೇಶ್
Published 18 ಅಕ್ಟೋಬರ್ 2024, 0:43 IST
Last Updated 18 ಅಕ್ಟೋಬರ್ 2024, 0:43 IST
   

‘ತೇಲಿಸೋ ಇಲ್ಲ ಮುಳುಗಿಸೋ...’ ಎಂದು ಹಾಡುತ್ತ ಹರಟೆಕಟ್ಟೆಗೆ ಬಂದ ದುಬ್ಬೀರ, ‘ಏನ್ ಮಳೀಲೆ ಇದೂ... ಹಿಂಗೆ ಜಡೀತಾ ಕುಂತತಿ? ರಸ್ತೆ ಎಲ್ಲ ಹೊಳಿಯಾದ್ವಪ’ ಎಂದ.

‘ಮತ್ತೆ? ನಮ್ ಸರ್ಕಾರ ಬಂದ್ರೆ ಬರ ಅಂತಿದ್ರಿ? ಈಗೇನೇಳ್ತೀರಿ?’ ಗುಡ್ಡೆ ಕೆಣಕಿದ.

‘ಏನ್ ಹೇಳೋದು? ರಸ್ತೆ ನೀರಿಗೇ ಬಾಗಿನ ಅರ್ಪಿಸೋದು ಅಷ್ಟೆ’ ತೆಪರೇಸಿ ನಕ್ಕ.

ADVERTISEMENT

‘ನಿಮ್ ಸರ್ಕಾರದೋರಿಗೆ ಹೇಳಿ ಎಲ್ರಿಗೂ ‘ಬೋಟ್ ಭಾಗ್ಯ’ ಕೊಡ್ಸೋ ಗುಡ್ಡೆ, ಮಾರ್ಕೆಟ್‌ಗೋಗಿ ತರಕಾರಿ ತರೋಕೆ ಅನುಕೂಲ ಆಗ್ತತಿ’ ಎಂದಳು ಮಂಜಮ್ಮ.

‘ಅದ್ಯಾಕೆ ಹೆಲಿಕಾಪ್ಟರ್ ಭಾಗ್ಯನೇ ಕೊಡ್ಸಾಣ ಬಿಡು, ನಮ್ ಪಾರ್ಟಿಗೆ ವೋಟ್ ಹಾಕು’ ಎಂದ ಗುಡ್ಡೆ.

‘ಅಲ್ಲ, ತೇಲಿಸೋ ಮುಳುಗಿಸೋ ಅಂದ್ರಲ್ಲ, ಬೈ ಎಲೆಕ್ಷನ್‌ನಾಗೆ ಯಾರು ತೇಲಬೋದು, ಯಾರು ಮುಳುಗಬೋದು?’ ಕೊಟ್ರೇಶಿ ಕೇಳಿದ.

‘ಮೂರೂ ಕ್ಷೇತ್ರದಾಗೆ ಕಾಂಗ್ರೆಸ್ ಗೆದ್ರೆ ಬಂಡೆ ತೇಲಬೋದು’ ಗುಡ್ಡೆ ನಕ್ಕ.

‘ಮೊನ್ನೆ ಬಂಡೆ ಸಾಹೇಬ್ರು ಯಾವುದೋ ಪೂಜೆ ಸಮಾರಂಭದಲ್ಲಿ ಹಾಕಿದ ಈಡುಗಾಯಿ ಮೂರನೇ ಸಲಕ್ಕೆ ಒಡೀತಂತಪ, ಏನದರ ಅರ್ಥ?’

‘ಬಂಡೆ ತೇಲೋದು ಸ್ವಲ್ಪ ತಡ ಆಗ್ತತಿ ಅಂತ ಅರ್ಥ. ಅದಿರ್‍ಲಿ, ರಾಜ್ಯೋತ್ಸವ ಬಂತಲ್ಲ, ಈ ಸಲನೂ ಪ್ರಶಸ್ತಿಗೆ ಅರ್ಜಿ ಹಾಕಿದೀಯೇನೋ ತೆಪರಾ?’ ದುಬ್ಬೀರ ಕೇಳಿದ.

‘ಹಾಕಿದೀನಿ, ಅರ್ಜೀನ ಡೈರೆಕ್ಟ್ ಸಿ.ಎಂ ಕಡಿಗೇ ಕೊಟ್ಟು ಬಂದಿದೀನಿ. ಈ ಸಲ ನಂಗೆ ಪ್ರಶಸ್ತಿ ಗ್ಯಾರಂಟಿ’ ಎಂದ ತೆಪರೇಸಿ.

‘ಅದೆಂಗೆ ಗ್ಯಾರಂಟಿ ಅಂತೀಯ?’

‘ಸೀಕ್ರೆಟ್, ಯಾರಿಗೂ ಹೇಳಲ್ಲ ಅಂದ್ರೆ ಹೇಳ್ತೀನಿ’.

‘ಇಲ್ಲ, ನಾವ್ಯಾರೂ ಹೇಳಲ್ಲ, ಹೇಳು’.

‘ಅರ್ಜಿ ಜತಿಗೆ ನಾನು ಗೌರ್ನರ್ ಜೊತೆ ತೆಗಿಸ್ಕಂಡಿರೋ ಫೋಟೊ ಅಂಟಿಸಿದೀನಿ!’

‘ಎಲಾ ಪಾಕಡಾ...’ ಎಂದಳು ಮಂಜಮ್ಮ. ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.