ADVERTISEMENT

ಚುರುಮುರಿ: ಮೈತ್ರಿಗೆ ಮೂಲ

ಸುಮಂಗಲಾ
Published 23 ಜೂನ್ 2024, 19:09 IST
Last Updated 23 ಜೂನ್ 2024, 19:09 IST
<div class="paragraphs"><p>ಚುರುಮುರಿ: ಮೈತ್ರಿಗೆ ಮೂಲ</p></div>

ಚುರುಮುರಿ: ಮೈತ್ರಿಗೆ ಮೂಲ

   

ಪೇಪರು ಹಿಡಿದಿದ್ದ ಬೆಕ್ಕಣ್ಣ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಜೋರಾಗಿ ಓದಿತು.

‘ಗುಡ್‌ಬಾಯ್…‌ ಬೆಳ್‌ಬೆಳಗ್ಗೆ ಹಿಂಗೆ ಬುದ್ಧನ ಸುಭಾಷಿತ ನೆನಪಿಸಿಕೋಬೇಕು’ ಎಂದೆ.

ADVERTISEMENT

‘ಪೂರಾ ಕೇಳು, ಆಸೆಯೇ ದುಃಖಕ್ಕೆ ಮೂಲ, ಗ್ಯಾರಂಟಿಯೇ ಬೆಲೆಯೇರಿಕೆಗೆ ಮೂಲ ಅಂತ ನಮ್‌ ಕುಮಾರಣ್ಣ ಹೇಳ್ಯಾನೆ. ಸಿದ್ದು ಅಂಕಲ್ಲು ಪೆಟ್ರೋಲು, ಡೀಸೆಲ್ ಬೆಲೆ ಕಂಡ್ರಾಪಟ್ಟಿ ಏರಿಸಿದ್ದು ಅದಕ್ಕೇ’ ಎಂದಿತು.

‘ನಿಮ್‌ ಮೋದಿಮಾಮನೂ ಚುನಾವಣೆ ಪ್ರಣಾಳಿಕೆವಳಗೆ ಮೋದಿ ಕೀ ಗ್ಯಾರಂಟಿ ಅಂತ ವಾಗ್ದಾನ ಮಾಡಿದ್ದರಲ್ಲ… ಮತ್ತೆ ಮೋದಿ
ಮಾಮನ ಗ್ಯಾರಂಟೀನೂ ಜಾರಿಯಾದರೆ ಬೆಲೆಯೇರಿಕೆ ಇನ್ನಾ ನಾಕು ಪಟ್ಟು ಆಗಬೌದು’ ಎಂದೆ.

‘ಮೋದಿಮಾಮನ ಗ್ಯಾರಂಟಿ ಕೇಂದ್ರದ್ದು, ಅದ್ರಿಂದ ಬೆಲೆಯೇರಿಕೆ ಆಗಂಗಿಲ್ಲೇಳು. ಈ ಕಾಂಗಿಗಳು ಸುಮ್‌ ಸುಮ್ಮನೆ ಕಂಡೋರಿಗೆಲ್ಲ ಕೈಯೆತ್ತಿ ಗ್ಯಾರಂಟಿ ಕೊಡಬಾರದು. ಹಿಂದುಮುಂದಿಲ್ಲದೇ ಗ್ಯಾರಂಟಿ ಕೊಟ್ಟು, ಇಡೀ ರಾಜ್ಯನೇ ಹಾಳು ಮಾಡ್ಯಾರೆ’ ಎಂದು ವಟಗುಟ್ಟಿತು.

‘ಗ್ಯಾರಂಟಿಗಳಿಗೆ ರೊಕ್ಕ ಹೊಂದಿಸಾದು ಹೆಂಗ ಅಂತ ಸಲಹೆ ಕೊಡಕ್ಕೆ ಸರ್ಕಾರದವ್ರು ಬೋಸ್ಟನ್‌ ಕನ್ಸಲ್ಟನ್ಸಿ ನೇಮಕ ಮಾಡಿಕೊಂಡಾರಂತೆ, ಚಿಂತಿ ಮಾಡಬ್ಯಾಡ’ ಎಂದು ಸಮಾಧಾನಿಸಿದೆ.

‘ನಮ್ಮ ರಾಜ್ಯದಾಗೆ ಆರ್ಥಿಕ ಸಲಹೆ ಕೊಡೋರೇನು ಕಡಿಮಿ ಬಿದ್ದಾರೇನು’ ಎಂದ ಬೆಕ್ಕಣ್ಣ, ‘ಹೋಗ್ಲಿಬಿಡು, ನೋಡಿಲ್ಲಿ, ಯೆಡ್ಯೂರಜ್ಜಾರ ಜೋಡಿ ನಮ್‌ ಕುಮಾರಣ್ಣ ಎಷ್ಟ್‌ ಚಂದ ಕುಂತಾನೆ’ ಎಂದು ನೂತನ ಸಂಸದರ ಸನ್ಮಾನ ಸಮಾರಂಭದ ಫೋಟೊ ತೋರಿಸಿತು.

‘ಕುಮಾರಣ್ಣ ಹೆಗಲ ಮ್ಯಾಲೆ ತೆನೆಚಿತ್ರದ ಟವೆಲ್‌ ಬದಲು ಕಮಲದ ಹೂವಿನ ಶಾಲು ಹಾಕ್ಕೊಂಡಾನಲ್ಲ’ ಎಂದೆ. ‘ಬದಲಾವಣೆಯೇ ಜಗದ ನಿಯಮ!’ ಎಂದು ಉದ್ಗರಿಸಿತು ಬೆಕ್ಕಣ್ಣ.

‘ರಾಗಿತೆನೆ-ಕಮಲದಳದ ಸಖ್ಯ ಈಥರಾ
ಫೆವಿಕಾಲಿನ್ಹಂಗಿದ್ದರೆ, ಸರ್ಕಾರ ರಚಿಸಬೌದು ಅಂದಾನೆ ನಿಮ್ಮ ಕುಮಾರಣ್ಣ. ಎಷ್ಟು ಲಗೂನೆ ಹಿಂದಿನ ಜಗಳ, ದ್ವೇಷ ಎಲ್ಲಾ ಮರೆತುಬಿಟ್ಟಾರೆ!’

‘ಹೌದು ಮತ್ತೆ… ಕುರ್ಚಿಯಾಸೆಯೇ ಮೈತ್ರಿಗೆ ಮೂಲ’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.