‘ಅದೇನು ಮಳೆ ಉತ್ತರದಲ್ಲಿ? ಮನೆಮಾಳಿಗೆಯೆಲ್ಲ ನೋಡನೋಡ್ತಿರೋ ಹಾಗೆ ಕುಸೀತಿದೆ, ಗುಡ್ಡಗಳು ಕರಗಿಬೀಳ್ತಿವೆ, ರಸ್ತೆಯಲ್ಲಿ ಅಡಿಗಟ್ಟಲೆ ನೀರು, ಅದೇ ಇನ್ನೊಂದು ಕಡೆ ಮಳೆರಾಯನ ಕೃಪೆಗಾಗಿ ಪೂಜೆ-ಪುನಸ್ಕಾರ’ ಅತ್ತೆಯ ಧ್ವನಿಯಲ್ಲಿ ವಿಷಾದವಿತ್ತು. ‘ಪ್ರವಾಸಕ್ಕೆ ಹೋದೋವ್ರು ಪ್ರಯಾಸ ಪಡೋ ಹಾಗಾಯ್ತು’ ನೆಲ ಒರೆಸುತ್ತಾ ನಿಂಗಿಯ ಮಾತು.
ನಮ್ಮ ಚರ್ಚೆಯಲ್ಲಿ ಅವಳೂ ಭಾಗವಹಿಸುವ ಮಟ್ಟಕ್ಕೆ ವಿಷಯ ತಿಳಿದುಕೊಂಡಿದ್ದಾಳೆ. ‘ಸರಿಯಾಗಿ ಹೇಳಿದೆ ನಿಂಗಿ, ಭೇಷ್’ ನನ್ನವಳ ಮೆಚ್ಚುಗೆ.
ದಿಢೀರನೆ ಏನೋ ನೆನಪಾದಂತಾಗಿ, ‘ನಿಮ್ಮ ಮನೇಲಿ ‘ಭಾಗ್ಯಲಕ್ಷ್ಮಿ’ ಯಾರು? ನಿಮ್ಮತ್ತೆ ಅಲ್ವ?’ ಕೆಣಕಿದೆ.
‘ನಮ್ಮನೆಗೆ ನಾನೇ ಯಜಮಾನಿ. ಸಂಸಾರದ ಜವಾಬ್ದಾರಿ ನಮಗೂ ಗೊತ್ತಾಗ್ಬೇಕೂಂತ ನಮ್ಮ ಅತ್ತೆ ಬೇರೆ ಇಟ್ಟಿದ್ದಾರೆ. ಈಗ ಕೊಡ್ತಿರೋ ಹೆಚ್ಚುವರಿ ಅಕ್ಕಿ ದುಡ್ಡಿನಿಂದ ಎಷ್ಟೋ ಉಪಕಾರವಾಯ್ತು’. ನಾನು ತೆಪ್ಪಗಾದೆ.
‘ಕಾಲೇಜಿಗೆ ಡಬ್ಬ ಬೇಡ, ಮಧ್ಯಾಹ್ನಕ್ಕೆ ನಮಗೆಲ್ಲ ಟೊಮೆಟೊ ಬಾತ್ ಟ್ರೀಟ್ ಇದೆ’ ಪುಟ್ಟಿ ರೆಡಿಯಾಗತೊಡಗಿದಳು.
‘ಟೊಮೆಟೊ ಬೆಲೆ ಸೆಂಚುರಿ ದಾಟಿ ನೂರೈವತ್ತಕ್ಕೆ ದಾಪುಗಾಲು ಹಾಕ್ತಿದೆ! ಸದ್ಯಕ್ಕೆ ಬಳಸೋದು ದೂರದ ಮಾತು’ ನನ್ನವಳ ಖಡಕ್ ಮಾತಿಗೆ ಕೊಂಚ ಕಳವಳಗೊಂಡೆ. ಆದರೆ ಅದೇ ವಾಸ್ತವ. ಅದರ ಜಾಗಕ್ಕೆ ಹುಣಿಸೇಹಣ್ಣು ಬಂದಾಗಿದೆ. ಆದರೂ ಟೊಮೆಟೊಗೆ ಸಾಟಿಯೇ?’
‘ಸರಿಯಾದ ಬೆಲೆ ಸಿಗದೆ ರಸ್ತೇಲಿ ಚೆಲ್ಲಿದ್ದೂ ಇದೇ ಕಣ್ಣಲ್ಲಿ ನೋಡಿದ್ದೀವಿ, ಈಗ ನೋಡಿದ್ರೆ ಈ ಪರಿ. ಅತಿವೃಷ್ಟಿ, ಅನಾವೃಷ್ಟಿ ಎರಡೂ ಬಾಧೆಯೇ’ ಅತ್ತೆಯ ವಿಶ್ಲೇಷಣೆ.
ಅಷ್ಟರಲ್ಲೇ ಕಂಠಿ ಬಂದ, ಕೈಯಲ್ಲಿ ಹಣ್ಣಿನ ತುಂಡುಗಳಿದ್ದ ಕವರ್!
‘ರಸ್ತೆ ಬದಿ, ಟೊಮೆಟೊನ ಕುಯ್ದು ಪೀಸ್ ಲೆಕ್ಕದಲ್ಲಿ ಮಾರ್ತಿದ್ರು, ಹತ್ತು ಪೀಸ್ ತೊಗೊಂಡು, ಮೇಲೆ ಕೊಸರು ಅಂತ ಎರಡು ವಸೂಲಿ ಮಾಡಿದೆ’ ನಕ್ಕ.
‘ನಮ್ಮ ಕಾಲದಲ್ಲಿ ತೆಂಗಿನ ಹೋಳುಗಳನ್ನು ಹೀಗೇ ಮಾರುತ್ತಿದ್ದರು’ ಅತ್ತೆ ನೆನಪಿಸಿಕೊಂಡರು.
‘ಇದರಲ್ಲೇ ನಿಮಗೂ’ ಎಂದು ನಾಲ್ಕು ಹೋಳು ತೆಗೆದ.
‘ಟೊಮೆಟೊ ಭಾಗ್ಯ’ ನಾನೆಂದೆ. ನನ್ನವಳ ಮುಖ ಅರಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.