ADVERTISEMENT

ಚುರುಮುರಿ: ಮಾಮಾಕಾರ!

ಲಿಂಗರಾಜು ಡಿ.ಎಸ್
Published 2 ಏಪ್ರಿಲ್ 2024, 0:11 IST
Last Updated 2 ಏಪ್ರಿಲ್ 2024, 0:11 IST
   

‘ಸಾ, ಈಗ ರಾಜಕೀಯದೇಲಿ ಅಳಿಯಂದ್ರುದೇ ಹವಾ. ಮಾವಂದ್ರೆಲ್ಲಾ ಅವರವರ ಪಕ್ಷದಿಂದ ಅಳೀಮಯ್ಯನಿಗೆ ಟಿಕೇಟಿಗೋಸ್ಕರ ಮಾಮಾಚಾರ ಮಾಡಕ್ಕೆ ನಿಂತವ್ರೆ’ ರಾಜಕೀಯದ ಸುದ್ದಿ ಹೇಳಿದೆ.

‘ಒಬ್ಬ ಮಾವ ಅವರ ಅಳಿಯನಿಗೆ ಬ್ಯಾರೆ ಪಕ್ಸದ ಟಿಕೆಟ್ ಕೊಡ್ಸಿ ಕ್ಷೇತ್ರನೂ ದಾನ ಮಾಡ್ಯವುರೆ. ಇನ್ನೊಬ್ಬ ಮಾವ ‘ನನ್ನ ಅಳಿಯನಿಗೆ ಟಿಕೆಟ್ ಕೊಟ್ಟಿಲ್ಲ, ಬ್ಯಾರೆ ಮಾತೇ ಇಲ್ಲ’ ಅಂತ ಹುಡ್ರಿಕೆ ಹಾಕ್ತಾ ನಿಂತವ್ರೆ’ ಅಂದ ಚಂದ್ರು.

‘ಹೂ ಕಯ್ಯಾ ಈಗ ಮಾವಂದ್ರಿಗೇ ‘ಹೂಂ ಅಂತೀಯಾ ಮಾವ, ಉಹುಂ ಅಂತೀಯಾ’ ಅಂತ ಪುಂಗಿ ಊದೋ ಮಾವಾಡಿಗ ಅಳಿಯಂದ್ರು, ಸೊಸೆದೀರು ಮುನ್ನೆಲೆಗೆ ಬಂದವ್ರೆ. ಇದಕ್ಕೆ ಅಂತ್ಲೇ ಮಾವನ ರಾಜಕೀಯ ಕ್ಯಾಕರಣ ಹುಟ್ಟಿಕ್ಯಂಡದೆ’ ಅಂದುದ್ಕೆ ಎಲ್ಲರೂ ಗಾಬರಿಯಾದರು.

ADVERTISEMENT

‘ಅದ್ಯಾವುದ್ಲಾ ಮಾವನ ರಾಜಕೀಯ ಕ್ಯಾಕರಣ?’ ಯಂಟಪ್ಪಣ್ಣ ಕೇಳಿತು.

‘ಮಾವನಿಗೆ ಗೌರವ ತೋರಿಸಕ್ಕೆ ಮಾವನ ಮನೆ, ಮಾವನ ಮನೆಯನ್ನು, ಮಾವನ ಮನೆಯಿಂದ, ಮಾವನ ಮನೆಗೆ, ಮಾವನ ಮನೆಯ ದೆಸೆಯಿಂದ, ಮಾವನ ಮನೆಯ, ಮಾವನ ಮನೆಯಲ್ಲಿ ಅಂತ ಸಪ್ತಮಾವಭಕ್ತಿ ಪ್ರತ್ಯಯಗಳವೆ’ ವಿವರಿಸಿದೆ.

‘ಮಾವನವು ಸಕಲೆಂಟು ಸ್ವರಗಳು, ಕ್ರಿಯಾಪದ, ನಾಮಪದ, ಸಂಧಿಕಾರ್ಯಗಳು ಸೇರಿ ಸೊಸೆಯ, ಅಳಿಯನ ರಾಜಕೀಯ ಛಂದಸ್ಸು ರಚನೆಯಾಗಬಕು’ ತುರೇಮಣೆ ಸೇರಿಸಿದರು.

‘ಮಾವಂದೇ ಹೇಳ್ತೀರಲ್ಲ, ಅಪ್ಪಂದ್ರು ಏನೂ ಮಾಡೇ ಇಲ್ವಾ? ಅವರೇನು ತೌಡು ಕುಟ್ಟುತರ’ ಯಂಟಪ್ಪಣ್ಣ ಕಿಚಾಯಿಸಿತು.

‘ಯಾಕಿಲ್ಲ ಯಂಟಪ್ಪಣ್ಣ, ಅಪ್ಪಂದ್ರು ಕ್ಯಾಕರಣದಲ್ಲಿ ತಮ್ಮ ಸ್ವಯಂಕೃತಾಪರಾಧವಾದ ಮಕ್ಕಳಿಗೆ ಹಗ್ಗ-ಮೂಗುದಾರ ತೊಡಿಸಿ, ಲಾಳ ಕಟ್ಟಿಸಿ ರಾಜಕೀಯಕ್ಕೆ ರೆಡಿ ಮಾಡಿರತರೆ. ಹೈಕಮಾಂಡಿಂದ ಟಿಕೇಟು ಸಿಕ್ಕದಿದ್ರೆ ಮಕ್ಕಳ ಪರವಾಗಿ ತಾವೇ ಬಂಡಾಯದ ಜಲ್ಲಿಕಟ್ಟು ಮಾಡಕ್ಕೂ ತಯಾರಾಗಿರ್ತರೆ!’ ಅಂತಂದೆ.

‘ಸಾತಿವ್ರತ್ಯಕ್ಕೆ ಕಟ್ಟುಬಿದ್ದು ಹೆಂಡರನ್ನ ಚುನಾವಣೆಗೆ ಇಳಿಸಿರೋ ಗಂಡಯ್ಯದಿರದ್ದೂ ಇದೇ ಥರದ ಪತಿಷ್ಠೆ ಇರತದೆ ಕಪ್ಪ!’ ಅಂದು ಯಂಟಪ್ಪಣ್ಣ ಪಟಾಕಿ ಹಾರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.