ADVERTISEMENT

ಚುರುಮುರಿ: ಸ್ಕೋರ್ ವಾರ್

ಮಣ್ಣೆ ರಾಜು
Published 11 ಜೂನ್ 2024, 23:56 IST
Last Updated 11 ಜೂನ್ 2024, 23:56 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ಪಿಯು ಪರೀಕ್ಷೆಯಲ್ಲಿ ಎಷ್ಟೇ ಸ್ಕೋರ್ ಮಾಡಿದ್ರೂ ಮೆಡಿಕಲ್ ಸೀಟ್ ಪಡೆಯಲು ನೀಟ್ ಸ್ಕೋರ್ ಮುಖ್ಯ. ಮಕ್ಕಳನ್ನು ಡಾಕ್ಟರ್ ಮಾಡಬೇಕು ಎನ್ನುವವರ ಮನೆಗಳಲ್ಲಿ ಸ್ಕೋರ್ ವಾರ್ ಶುರುವಾಗಿಬಿಡುತ್ತದೆ’ ಎಂದಳು ಸುಮಿ.

‘ಕಮ್ಮಿ ಸ್ಕೋರ್‌ನವರೂ ಯಶಸ್ವಿಯಾಗಲು ಅವಕಾಶವಿದೆ. ಮೊನ್ನೆ ಕ್ರಿಕೆಟ್ ಮ್ಯಾಚ್‍ನಲ್ಲಿ ಭಾರತ ತಂಡದವರು ಕಮ್ಮಿ ಸ್ಕೋರ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಗೆದ್ದರು’ ಅಂದ ಶಂಕ್ರಿ.

ADVERTISEMENT

‘ಪಾರ್ಲಿಮೆಂಟ್ ಎಲೆಕ್ಷನ್‍ನಲ್ಲಿ ಎನ್‍ಡಿಎ ತಂಡ, ‘ಇಂಡಿಯಾ’ ತಂಡದ ನಡುವೆ ಸ್ಕೋರ್ ವಾರ್‌ನಲ್ಲಿ ಕಡಿಮೆ ಸ್ಕೋರ್ ಮಾಡಿದವರಿಗಿಂತ ಜಾಸ್ತಿ ಸ್ಕೋರ್ ಮಾಡಿದವರೇ ಜಾಸ್ತಿ ಸಂಕಟಪಟ್ಟರಂತೆ ಕಣ್ರೀ!’

‘ಇರಬಹುದು, ರಾಹುಲ್ ಗಾಂಧಿ ಎರಡು ಕಡೆ ದಾಖಲೆ ಸ್ಕೋರ್ ಮಾಡಿ ವಿರೋಧಿ ಸಾಲಿನಲ್ಲೇ ಕುಳಿತರು. ಇವರಿಗಿಂತ ಕಡಿಮೆ ಸ್ಕೋರ್ ಮಾಡಿದ ಮೋದಿ ಪ್ರಧಾನಿಯಾದರು. ಸ್ಕೋರ್ ಎಂಬುದು ಬರೀ ನಂಬರ್, ಕೆಲವು ಸಾರಿ ಲೆಕ್ಕಕ್ಕುಂಟು ಆಟಕ್ಕಿರಲ್ಲ’.

‘ಮಂಡ್ಯದ ಟಾಪ್ ಸ್ಕೋರರ್ ಕುಮಾರಣ್ಣ ಮೋದಿ ನೇತೃತ್ವದ ಸರ್ಕಾರದ ಫ್ರಂಟ್ ಬೆಂಚ್ ಮಂತ್ರಿಯಾದರು. ರೈತಮಗನಂತೆ ಪಂಚೆಯುಟ್ಟು ಪ್ರಮಾಣವಚನ ಸ್ವೀಕರಿಸಿದರೂ ಕೃಷಿ ಖಾತೆ ಕೈತಪ್ಪಿ ಉಕ್ಕು, ಕೈಗಾರಿಕೆಯ ಲಕ್ಕು ದಕ್ಕಿತು’.

‘ಪಂಚೆ, ಟವೆಲ್‍ನ ಕೃಷಿ ಕಲ್ಚರ್ ಕುಮಾರಣ್ಣನಿಗೆ ಸೂಟು-ಬೂಟಿನ ಕೈಗಾರಿಕೆ ಮ್ಯಾಚ್ ಆಗುತ್ತೇನ್ರೀ?’

‘ಆಗುತ್ತೆ, ತೆನೆ ಹೊತ್ತ ಮಹಿಳೆ ಕಬ್ಬಿಣ ಹೊರಲಾರಳೇ? ಕೈಗಾರಿಕೆಯಲ್ಲೇ ಕೃಷಿ ಮಾಡಿ ಉತ್ತಮ ಫಸಲು ತೆಗೆದು ಒಳ್ಳೆಯ ಇಳುವರಿ ಕೊಡ್ತಾರೆ ಬಿಡ್ರೀ’.

‘ವಸತಿ ಭಾಗ್ಯ ನಿರೀಕ್ಷಿಸಿದ್ದ ತುಮಕೂರು ಟಾಪ್ ಸ್ಕೋರರ್ ಸೋಮಣ್ಣನವರಿಗೆ ಜಲಭಾಗ್ಯ ಸಿಕ್ಕಿದ್ದಕ್ಕೆ ಬೇಸರವಿಲ್ಲವಂತೆ. ಪಾಲಿಗೆ ಬಂದದ್ದು ಪಂಚಾಮೃತ. ರಾಮನ ಪಾತ್ರಕ್ಕೂ ಸೈ, ಭೀಮನ ಪಾತ್ರಕ್ಕೂ ಜೈ ಎಂದಿದ್ದಾರೆ’.

‘ಹೌದು, ಹೊಲ ಉಳುವವನಿಗೆ ಕರಿ ಎತ್ತುಗಳಾದರೇನು, ಬಿಳಿ ಎತ್ತುಗಳಾದರೇನು ಅಲ್ವಾ?’ ಅಂದಳು ಸುಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.