ತಿಮ್ಮನಹಳ್ಳಿ ಬಸ್ ಸಿಂಗಾರಗೊಂಡು ಬೀಗುತ್ತಿತ್ತು. ‘ಇಷ್ಟೊಂದು ಮಿಂಚುತ್ತಿದ್ದೀಯ, ಇವತ್ತು ನಿನ್ನ ಬರ್ತ್‍ಡೇನಾ?’ ಎಂದು ಬಸ್‍ಸ್ಟ್ಯಾಂಡಿನಲ್ಲಿದ್ದ ಇತರ ಬಸ್‍ಗಳು ಕೇಳಿದವು.
‘ಶಕ್ತಿ ಯೋಜನೆಗೆ ವರ್ಷ ತುಂಬಿತು ಅಂತ ಮಹಿಳಾ ಪ್ರಯಾಣಿಕರು ನನಗೆ ಅಲಂಕಾರ ಮಾಡಿ, ಪೂಜೆ ಮಾಡಿದರು’.
‘ಅಲ್ನೋಡ್ರೀ... ಹೊಸ ಬಸ್ ಬಂದಿದೆ! ಪರಿಚಯ ಮಾಡಿಕೊಳ್ಳೋಣ ಬನ್ನಿ...’ ಎಂದು ಬಂದ ಬಸ್‍ಗಳು, ‘ನೀನು ತುಂಬಾ ಸುಂದರವಾಗಿ ದ್ದೀಯ’ ಎಂದು ಹೊಸ ಬಸ್ಸನ್ನು ಹೊಗಳಿದವು.
‘ಪ್ರಾಯದಲ್ಲಿ ನಾನೂ ನಿನ್ನಷ್ಟೇ ಸುಂದರವಾಗಿದ್ದೆ. ಲೈಫ್ ಜರ್ನಿಯಲ್ಲಿ ಸೊರಗಿ ಹೀಗಾಗಿದ್ದೇನೆ... ನಿನ್ನದು ಯಾವ ರೂಟು?’ ಕೆಂಪನಹಳ್ಳಿ ಬಸ್ ಕೇಳಿತು.
‘ರಾಜಧಾನಿ ರೂಟು. ರೋಡ್ ಚೆನ್ನಾಗಿದೆ, ಕುಡಿದ ಡೀಸೆಲ್ ಅಲ್ಲಾಡದಂತೆ ಹೋಗಿಬರ್ತೀನಿ’.
‘ಆರಂಭದಲ್ಲಿ ನಾನೂ ರಾಜಧಾನಿ ರೂಟ್‍ನಲ್ಲಿ ಓಡಾಡ್ತಿದ್ದೆ, ವಯಸ್ಸಾಯ್ತು ಅಂತ ಈಗ ಹಳ್ಳಿ ರೂಟ್‍ಗೆ ಹಾಕಿದ್ದಾರೆ. ನಾನು ರಾಜಧಾನಿಗೆ ಹೋಗಿ ಬಹಳ ವರ್ಷ ಆಯ್ತು’.
‘ರಾಜಕೀಯ ಸಮಾವೇಶ, ಮದುವೆ ಟ್ರಿಪ್ ಇದ್ದಾಗ ನಾವೂ ರಾಜಧಾನಿಗೆ ಹೋಗ್ತೀವಿ’.
‘ಛೀ! ಇಷ್ಟೊಂದು ಗಲೀಜಾಗಿದ್ದೀಯ, ಡೈಲಿ ಸ್ನಾನ ಮಾಡಲ್ವಾ ನೀನು?’ ಬೊಮ್ಮನಹಳ್ಳಿ ಬಸ್ ಸ್ಥಿತಿ ಕಂಡು ಹೊಸ ಬಸ್ ಅಸಹ್ಯಪಟ್ಟುಕೊಂಡಿತು.
‘ಇದರ ರೂಟು ಚೆನ್ನಾಗಿಲ್ಲ. ಕೆಸರು ರಸ್ತೆಯಲ್ಲಿ ಓಡಾಡಿ ಹೀಗಾಗಿದೆ. ನಾವು ಸ್ನಾನ ಮಾಡಬೇಕೆಂದರೆ ಆಯುಧ ಪೂಜೆ ಬರಬೇಕು, ಇಲ್ಲವೆ ಮಳೆ ಬರಬೇಕು’.
‘ಇದ್ಯಾವುದು ಅಜ್ಜಿ ಬಸ್?! ಬಾಡಿಯ ಬಣ್ಣ ಬಿಳಿಚಿಕೊಂಡಿದೆ, ಹರಕಲು ಸೀಟು, ಮುರುಕಲು ಡೋರು...’ ಹೊಸ ಬಸ್ ಆಡಿಕೊಂಡು ನಕ್ಕಿತು.
‘ಡ್ಯಾಷ್ ಹೊಡೆದು ಹೊಸ ಬಸ್‍ನ ಮುಖಮೂತಿ ಜಜ್ಜಿಬಿಡಬೇಕು ಎನ್ನುವಷ್ಟು ಸಿಟ್ಟುಬಂತು ಕೆಂಪನಹಳ್ಳಿ ಬಸ್‍ಗೆ. ಇತರ ಬಸ್‍ಗಳು ತಡೆದವು. ‘ಪ್ರಾಯದಲ್ಲಿ ಎಲ್ಲಾ ಬಸ್‍ಗಳೂ ಹೀಗೇ ಆಡುತ್ತವೆ. ವರ್ಷಗಳು ಕಳೆದಮೇಲೆ ಇದೂ ಹಳ್ಳಿ ರೂಟಿಗೆ ಬರ್ತದೆ ಸುಮ್ನಿರು...’ ಎಂದು ಸಮಾಧಾನ ಹೇಳಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.