ADVERTISEMENT

ಚುರುಮುರಿ: ಹಗಲುಗನಸು

ಸುಮಂಗಲಾ
Published 15 ಸೆಪ್ಟೆಂಬರ್ 2024, 22:31 IST
Last Updated 15 ಸೆಪ್ಟೆಂಬರ್ 2024, 22:31 IST
<div class="paragraphs"><p>ಚುರುಮುರಿ: ಹಗಲುಗನಸು</p></div>

ಚುರುಮುರಿ: ಹಗಲುಗನಸು

   

ಬೆಕ್ಕಣ್ಣ ಒಂದು ಕೈಯಲ್ಲಿ ಪರದೆ ರಾಡ್‌ ಹಿಡಿದು ಇಡೀ ದೇಹವನ್ನು ಗಾಳಿಯಲ್ಲಿ ತೇಲಾಡಿಸುವುದು, ಕಿಟಕಿಯ ಕಂಬಿ ಹಿಡಿದು ತೂಗಾಡುವುದು ಮಾಡುತ್ತಿತ್ತು.

‘ಇದೇನ್‌ ಸರ್ಕಸ್‌ ನಡಿಸೀಯಲೇ’ ಎಂದೆ ಅಚ್ಚರಿಯಿಂದ.

ADVERTISEMENT

‘ಮೊನ್ನೆ ಸ್ಪೇಸ್‌ಎಕ್ಸಿನವರು ನಾಕು ಮಂದಿನ್ನ ಕೂರಿಸಿ ಪೊಲಾರಿಸ್ ಗಗನನೌಕೆ ಹಾರಿಸಿದ್ರು. ನೌಕೆಯಿಂದ ಇಬ್ಬರು ಹೊರಗೆ ಬಂದು ಸ್ಪೇಸ್‌ ವಾಕ್‌ ಮಾಡಿದ ಸುದ್ದಿ ಓದಿದಿ ತಾನೆ… ವಿಮಾನ ಹಾರಿಸಿದಂಗೆ ಪ್ರೈವೇಟ್‌ ಸ್ಪೇಸ್‌ಶಿಪ್ಪುಗಳು ದಿನಾ ಬಾಹ್ಯಾಕಾಶಕ್ಕೆ ಹಾರೋ ದಿನ ದೂರ ಏನಿಲ್ಲ. ಮುಂದೊಂದು ದಿನ ನಾನೂ ಹಂಗೆ ಸ್ಪೇಸಿಗೆ ಹೋಗತೀನಿ. ಅದಕ್ಕೇ ಈಗಲೇ ಭೂಮಿಮ್ಯಾಗೆ ಸ್ಪೇಸ್‌ ವಾಕ್‌ ರೂಢಿ ಮಾಡಿಕೊಳ್ಳಾಕೆ ಹತ್ತೀನಿ’ ಎಂದು ಕನಸುಗಣ್ಣು ಮಾಡಿ ಹೇಳಿತು.

‘ಮಂಗ್ಯಾನಂಥವ್ನೆ… ಅದೆಲ್ಲ ಬಿಲಿಯನ್‌ ಡಾಲರ್‌ ರೊಕ್ಕ ಇದ್ದವರು ಮಾಡತಾರೆ. ಮೊದ್ಲು ಅಷ್ಟು ದುಡಿ ನೀನು’ ಎಂದು ಬೈದೆ.

‘ನಿಮ್ಮಂಥ ಶ್ರೀಸಾಮಾನ್ಯರು ಸ್ಪೇಸ್‌ವಾಕ್‌ ಹಗಲುಗನಸು ಕಾಣಕ್ಕೂ ಲಾಯಕ್ಕಿಲ್ಲ, ಇಲ್ಲಿಯ ಹೊಂಡಾಗುಂಡಿ ರಸ್ತೆವಳಗೆ ನಡೆಯಕ್ಕಷ್ಟೆ ಲಾಯಕ್ಕು’ ಎಂದು ನನ್ನ ಮೂತಿಗೆ ತಿವಿದ ಬೆಕ್ಕಣ್ಣ ಮತ್ತೇನೋ ವಿಡಿಯೊ ಸುದ್ದಿ ನೋಡತೊಡಗಿತು.

ತುಸು ಹೊತ್ತು ಬಿಟ್ಟು, ‘ನನಗೀಗ ದೆಹಲಿ ವಿಮಾನದ ಟಿಕೆಟ್‌ ತೆಗೆಸು, ನಾ ಮೋದಿಮಾಮನ ಮನಿಗೆ ಹೋಗತೀನಿ’ ಎಂದು ವರಾತ ಶುರು ಮಾಡಿತು. 

‘ಎದಕ್ಕಲೇ… ನಿನಗೇನ್‌ ದಗದ ಐತಿ ಅಲ್ಲಿ?’

‘ನೋಡಿಲ್ಲಿ’ ಎನ್ನುತ್ತ ಪ್ರಧಾನಿಯವರು ಕರುವೊಂದನ್ನು ಮನೆಯೊಳಗೆ ಬರಮಾಡಿಕೊಂಡು, ಅದಕ್ಕೆ ಹಾರ ಹಾಕಿ, ದೇವರ ಮನೆಯಲ್ಲಿ ಕೂರಿಸಿ, ಶಾಲು ಹೊದೆಸಿ, ಆಮೇಲೆ ಮುದ್ದು ಮಾಡಿದ್ದನ್ನು ತೋರಿಸಿತು.

‘ಅದು ಆಕಳ ಕರು ಕಣಲೇ. ನೀ ಹೋಗಿ ಅಲ್ಲಿ ಏನು ಮಾಡಾಂವ?’‌‌

‘ನಾನು ಪ್ರಧಾನಿ ನಿವಾಸದ ಹಿತ್ತಲಿನಲ್ಲಿ ದೊಡ್ಡದೊಡ್ಡ ಹೆಗ್ಗಣ ಹಿಡಿತೀನಿ… ಆವಾಗ ಮೋದಿಮಾಮ ನನಗೂ ಹಾರ ಹಾಕಿ, ಶಾಲು ಹೊದೆಸಿ, ಎತ್ತಿಕೊಂಡು ಮುದ್ದು ಮಾಡತಾರೆ’ ಎಂದು ಮತ್ತೊಂದು ಹಗಲುಗನಸಿಗೆ ಜಾರಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.