ADVERTISEMENT

ಚುರುಮುರಿ: ಕತ್ತೆಗೊಂದು ಕಾಲ!

ಬಿ.ಎನ್.ಮಲ್ಲೇಶ್
Published 19 ಸೆಪ್ಟೆಂಬರ್ 2024, 23:30 IST
Last Updated 19 ಸೆಪ್ಟೆಂಬರ್ 2024, 23:30 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ನಾನು ಈ ದರಿದ್ರ ರಾಜಕೀಯ ಬಿಟ್ಟು ನಾಲ್ಕು ಕತ್ತೆ ಸಾಕೋಣ ಅಂತಿದೀನಿ’ ಎಂದ ದುಬ್ಬೀರ.

‘ಕತ್ತೇನಾ? ಯಾಕೆ?’ ಗುಡ್ಡೆ ನಕ್ಕ.

ADVERTISEMENT

‘ಈಗ ಕತ್ತೆಗೂ ಒಂದು ಕಾಲ ಬಂದಿದೆ ಅದಕ್ಕೆ’.

‘ಕತ್ತೆಗೂ ಒಂದು ಕಾಲನಾ? ಹೆಂಗೆ?’

‘ಪೇಪರ್ ನೋಡಿಲ್ವಾ? ಹೊಸಪೇಟೇಲಿ ಸಾಫ್ಟ್‌ವೇರ್ ಕಂಪನಿ ತರ ಕತ್ತೆ ಹಾಲಿನ ಮಿಲ್ಕ್‌ವೇರ್ ಕಂಪನಿ ಶುರು ಮಾಡಿದಾರಂತೆ. ಕತ್ತೆ ಸಾಕಿ, ಹಾಲು ಮಾರಿ ಕೋಟಿಗಟ್ಲೆ ದುಡ್ಡು ಮಾಡ್ತದಾರಂತೆ’.

‘ಹೌದು, ಒಂದು ಲೀಟರ್ ಕತ್ತೆ ಹಾಲಿಗೆ ಎರಡು ಸಾವಿರ ರೂಪಾಯಂತೆ. ಅದ್ರಲ್ಲಿ ಭಾರೀ ಔಷಧ ಗುಣ ಅದಾವಂತೆ. ಕತ್ತೆ ಹಾಲು ಸೌಂದರ್ಯವರ್ಧಕ ಅಂತೆ’ ಮಂಜಮ್ಮ ವರದಿ ಒಪ್ಪಿಸಿದಳು.

‘ಹಂಗಾದ್ರೆ ಈ ಪೌಡ್ರು, ಕ್ರೀಮು, ಸೋಪ್ ಕಂಪನಿ ಎಲ್ಲ ಢಮಾರ್ ಅನ್ನು. ಮುಖಕ್ಕೆ ಕತ್ತೆ ಹಾಲು ಹಚ್ಕಂಡ್ರೆ ಮುಗೀತು’ ಗುಡ್ಡೆ ಮಂಜಮ್ಮನ್ನ ನೋಡಿ ನಕ್ಕ.

‘ಈಗ ದುಬ್ಬೀರ ಹೇಳಿದಂಗೆ ನಾವೂ ನಾಲ್ಕು ಕತ್ತೆ ಸಾಕಿ ಹಾಲು ಮಾರಿದ್ರೆ ಹೆಂಗೆ?’ ಕೊಟ್ರೇಶಿ ಕೇಳಿದ.

‘ಕರೆಕ್ಟ್, ಈ ದರಿದ್ರ ರಾಜಕೀಯಕ್ಕಿಂತ ಕತ್ತೆ ಸಾಕೋದು ವಾಸಿ. ಕತ್ತೆಗಳು ರಾಜಕಾರಣಿಗಳ ತರ ಕುರ್ಚಿ ಕೇಳಲ್ಲ, ಕೆಟ್ಟದಾಗಿ ಮಾತಾಡಲ್ಲ, ದುಡ್ಡು ತಿನ್ನಲ್ಲ, ಭಾರ ಹೊರ್ತಾವೆ, ಬೈದ್ರು ಬೈಸ್ಕಂತಾವೆ’.

‘ಅಷ್ಟೇ ಅಲ್ಲ, ಎಷ್ಟು ಹುಲ್ಲು ಹಾಕ್ತೀವೋ ಅಷ್ಟು ಹಾಲು ಕೊಡ್ತಾವೆ. ರಾಜಕಾರಣಿಗಳ ತರ ಆಶ್ವಾಸನೆ ಕೊಡಲ್ಲ’ ತೆಪರೇಸಿ ನಕ್ಕ.

‘ಇನ್ಮೇಲೆ ಯಾರನ್ನೂ ‘ಕತ್ತೆ’ ಅಂತ ಬೈಯಂಗಿಲ್ಲ, ‘ಕತ್ತೆ ಕಾಯಾಕೆ ಹೋಗು’ ಅನ್ನಂಗಿಲ್ಲ’.

‘ಅಲ್ಲ, ಎಲ್ಲ ಸರಿ, ನಂಗೊಂದು ಡೌಟು’ ಕೊಟ್ರೇಶಿ ಕೊಕ್ಕೆ.

‘ಏನು?’

‘ಕತ್ತೆ ಹಾಲು ಕುಡಿದೋರು ರಾಜಕಾರಣಿಗಳ ತರ ಜಾಡ್ಸಿ ಒದೆಯಲ್ಲ ತಾನೆ?’

ಕೊಟ್ರೇಶಿ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.