‘ಶಾಲಾಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಕಡ್ಡಾಯ ಆಗಬೇಕು. ನಮ್ಮ ಮಕ್ಕಳು ನೀತಿವಂತ ಪ್ರಜೆಗಳಾಗಬೇಕು...’ ಸುಮಿ ಆಸೆಪಟ್ಟಳು.
‘ಹೌದು, ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ದೈಹಿಕ ಶಿಕ್ಷಣ ಟೀಚರ್‌ಗಳಂತೆ ನೈತಿಕತೆ ಸಬ್ಜೆಕ್ಟ್ ಟೀಚರ್‌ಗಳನ್ನೂ ಸರ್ಕಾರ ನೇಮಿಸ
ಬೇಕಾಗುತ್ತದೆ’ ಅಂದ ಶಂಕ್ರಿ.
‘ನೈತಿಕ ಶಿಕ್ಷಣದ ಸಿಲೆಬಸ್ ಸಿದ್ಧಪಡಿಸಲು ನೈತಿಕತೆ ಪರಿಣತರ ಸಮಿತಿ ರಚಿಸಬೇಕು. ಸಮಿತಿ ಸದಸ್ಯರ ನೈತಿಕತೆಯ ಮಟ್ಟ ಅಳೆದು ಆಯ್ಕೆ ಮಾಡುವ ನೈತಿಕ ತಜ್ಞರನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸ ಅಲ್ವೇನ್ರೀ?’
‘ಬಲಪಂಥದ ನೈತಿಕ ಶಿಕ್ಷಣ ಬೇಕೋ ಎಡಪಂಥದ ನೈತಿಕ ಶಿಕ್ಷಣ ಬೇಕೋ ಎಂದು ನಿರ್ಧಾರ ಮಾಡುವುದು ಅದಕ್ಕಿಂತ ದೊಡ್ಡ ಸವಾಲಾಗಬಹುದು!’
‘ವಿರುದ್ಧ ದಿಕ್ಕಿಗೆ ಎಳೆದಾಡುವ ಎರಡೂ ಪಂಥಗಳ ಆಶಯಗಳ ಸರಾಸರಿ ಸಾರಾಂಶವನ್ನು ಮಕ್ಕಳಿಗೆ ಪಾಠವಾಗಿ ಬೋಧಿಸುವ ಸಮರ್ಥ ನೈತಿಕತೆಯ ಶಿಕ್ಷಕರು ಬೇಕಾಗುತ್ತದೆ. ನೈತಿಕತೆಯಲ್ಲಿ ಪದವಿ ಪಡೆದ ಪರಿಣತ, ಪ್ರಜ್ಞಾವಂತ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಬೇಕಾಗುತ್ತದೆ’.
‘ಅಂಥಾ ನೈತಿಕ ಪದವಿ ನೀಡುವಂತಹ ನೈತಿಕ ಯೂನಿವರ್ಸಿಟಿ ನಮ್ಮಲ್ಲಿ ಯಾವುದೂ ಇದ್ದಂತಿಲ್ಲ ಕಣ್ರೀ... ಸರ್ಕಾರ ಪ್ರತ್ಯೇಕ ನೈತಿಕ ಯೂನಿವರ್ಸಿಟಿ ಸ್ಥಾಪಿಸಿ, ನೈತಿಕ ಪದವಿ ಪಡೆಯಲು ಅವಕಾಶ ಕಲ್ಪಿಸಬೇಕು’.
‘ನೈತಿಕ ಯೂನಿವರ್ಸಿಟಿ ಸ್ಥಾಪನೆ ಮಾಡಲು ಸರ್ಕಾರಕ್ಕೆ ನೈತಿಕ ಕಾಳಜಿ ಇರಬೇಕು. ಆಡಳಿತ ನಡೆಸಲು ನೈತಿಕ ಪ್ರಜ್ಞೆಯ ಪ್ರಜಾನಾಯಕರನ್ನು ಮತದಾರರು ಚುನಾಯಿಸಬೇಕಾಗುತ್ತದೆ. ಇಲ್ಲವೆ, ಆಯ್ಕೆಯಾದ ಮೇಲಾದರೂ ನಾಯಕರಿಗೆ ನೈತಿಕತೆಯ ಪಾಠ ಕಲಿಸಬೇಕಾಗುತ್ತದೆ. ಸದ್ಯಕ್ಕೆ ಇದು ಬೆಕ್ಕಿಗೆ ಗಂಟೆ ಕಟ್ಟುವ ಇಲಿಗಳ ಕಥೆಯಾಗಿದೆ’.
‘ಪ್ರಜಾನಾಯಕರ ಭ್ರಷ್ಟಾಚಾರ, ದುಷ್ಟಾಚಾರ, ಬಾಯಿತುರಿಕೆ ಬೈಗುಳದ ನಡವಳಿಕೆ ಹೀಗೇ ಮುಂದುವರಿದರೆ ವ್ಯವಸ್ಥೆಯು ಯಥಾ ರಾಜಾ ತಥಾ ಪ್ರಜಾ ಎಂಬಂತೆ ಆಗುತ್ತದೆ...’ ಅಂದ ಶಂಕ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.