ವಿದೇಶದಿಂದ ದಂಡೆತ್ತಿ ಬಂದಿರುವ ಕೋವಿಡ್, ಪ್ರಾಂತೀಯ ಕಾಯಿಲೆಗಳನ್ನು ಸದೆಬಡಿದು ಸಾಮಂತರನ್ನಾಗಿ ಮಾಡಿಕೊಂಡು ಸಾರ್ವಭೌಮನಾಗಿ ಮೆರೆಯುತ್ತಿದೆ. ಕೋವಿಡ್ ಅಬ್ಬರದಲ್ಲಿ ಲೋಕಲ್ ಕಾಯಿಲೆಗಳು ಮಾನ್ಯತೆ ಕಳೆದುಕೊಂಡು ಮಂಕಾಗಿವೆ. ಅಸ್ತಿತ್ವ ಕಳೆದುಕೊಳ್ಳುತ್ತಿರುವ ಆತಂಕದಲ್ಲಿ ಲೋಕಲ್ ಕಾಯಿಲೆಗಳು ಸಭೆ ಸೇರಿ ಸಂಕಟ ತೋಡಿಕೊಂಡವು.
‘ಕೋವಿಡ್ ಸರ್ವಾಧಿಕಾರಿ, ಕ್ರೂರಿ. ಸಂಚಾರ, ವ್ಯವಹಾರಗಳನ್ನು ಅಸ್ತವ್ಯಸ್ತ ಮಾಡಿದೆ. ಸರ್ಕಾರ, ಸಂಸಾರಗಳನ್ನು ತಲ್ಲಣಗೊಳಿಸಿದೆ. ನಮಗೆ ಹೆದರುತ್ತಿದ್ದ ಜನ ನಮ್ಮನ್ನು ಕಡೆಗಣಿಸಿ ಕೋವಿಡ್‌ಗೆ ಅಡಿಯಾಳಾಗುತ್ತಿದ್ದಾರೆ’ ಲೋಕಲ್ ಕಾಯಿಲೆಯೊಂದು ನೋವು ಹೇಳಿಕೊಂಡಿತು.
‘ಕಾಯಿಲೆಗಳಿಗೆ ಕೇರ್ ಮಾಡದ ಡಾಕ್ಟರ್‌ಗಳೂ ಕೋವಿಡ್‌ಗೆ ಹೆದರಿ ಮಾಸ್ಕ್, ಪಿಪಿಇ ಕಿಟ್ ಧರಿಸುವಂತಾಗಿದೆ. ಕೋವಿಡ್ ನಮ್ಮ ಆಸ್ಪತ್ರೆಗಳನ್ನು ಆಕ್ರಮಿಸಿ ತನ್ನ ಆಸ್ಪತ್ರೆಗಳನ್ನಾಗಿ ಮಾಡಿಕೊಂಡಿದೆ. ಅಲೆಅಲೆಯಾಗಿ ಅಪ್ಪಳಿಸುತ್ತಾ ನಮ್ಮ ನೆಲೆ ಕಳೆಯುತ್ತಿದೆ...’ ಇನ್ನೊಂದು ಕಾಯಿಲೆ ಕಣ್ಣೀರು ಹಾಕಿತು.
‘ಕೋವಿಡ್ ಅನ್ನು ಭಾರತದಿಂದ ತೊಲಗಿಸ ಬೇಕು, ಅದರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ಮಾಡಬೇಕು. ಶಾಂತಿ ಸತ್ಯಾಗ್ರಹ ಮಾಡಿದರೆ ಕೋವಿಡ್ ಕೇರ್ ಮಾಡುವುದಿಲ್ಲ, ಕ್ರಾಂತಿಕಾರಿ ಚಳವಳಿ ಆಗಬೇಕು’ ಎಂದಿತು ಇನ್ನೊಂದು.
‘ಹೌದು, ಇಂಜೆಕ್ಷನ್, ಮಾತ್ರೆಗೆ ಗುಣವಾಗುವಷ್ಟು ಶಕ್ತಿಹೀನರು ನಾವು. ಇನ್ನುಮೇಲೆ ಪ್ರಾಬಲ್ಯ ಬೆಳೆಸಿಕೊಂಡು ಸಂಘಟಿತರಾಗಿ ಕೋವಿಡ್ ಅನ್ನು ದೇಶದಿಂದ ಒದ್ದೋಡಿಸಬೇಕು’.
‘ಇಷ್ಟು ವರ್ಷ ನಮ್ಮಿಂದ ನರಳಿದ ಮನುಷ್ಯ ರನ್ನು ನಾವು ಕೋವಿಡ್‌ನಿಂದ ಕಾಪಾಡಬೇಕು’ ಹಿರಿಯ ಕಾಯಿಲೆ ಸಲಹೆ ಮಾಡಿತು.
‘ಹೌದು, ನಮ್ಮ ಬಲಶಾಲಿ ವೈರಸ್‍ಗಳು ಒಟ್ಟಾಗಿ ಕೊರೊನಾ ವೈರಸ್ ಮೇಲೆ ದಾಳಿ ಮಾಡಿ ನಿರ್ನಾಮ ಮಾಡಿ ಮನುಷ್ಯರನ್ನು ಉಳಿಸಬೇಕು. ಅವರು ಉಳಿದರಷ್ಟೇ ನಾವೂ ಉಳಿಯಲು ಸಾಧ್ಯ...’ ಎಂದು ಯುವ ಕಾಯಿಲೆ ತೊಡೆ ತಟ್ಟಿತು. ಉಳಿದ ಕಾಯಿಲೆಗಳು ಚಪ್ಪಾಳೆ ತಟ್ಟಿ ಬೆಂಬಲಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.