ADVERTISEMENT

ದುಗುಡದ ಕಾರಣ!

ಎಸ್.ಬಿ.ರಂಗನಾಥ್
Published 15 ಫೆಬ್ರುವರಿ 2023, 20:00 IST
Last Updated 15 ಫೆಬ್ರುವರಿ 2023, 20:00 IST
   

ಶಾಸಕರು ಚಿಂತಾಕ್ರಾಂತರಾಗಿದ್ದರು. ಅವರ ತೊಡೆಯ ಮೇಲಿದ್ದ ದಿನಪತ್ರಿಕೆಯನ್ನು ತೆಗೆದಿಡುತ್ತಾ ಮೇಡಂ ಕೇಳಿದರು, ‘ಏಳ್ರೀ, ಸ್ನಾನ, ತಿಂಡಿ ಮುಗಿಸಿ. ಜನ ಬರೋದ್ರೊಳಗೆ ನೀವು ರೆಡಿ ಆಗ್ಬೇಕಲ್ಲ. ಪಾರ್ಟಿಯ ಪಾದಯಾತ್ರೆಗೆ ಹೋಗೋಲ್ವೇ?’

‘ಹೋಗ್ಬೇಕು, ಹೋಗ್ಬೇಕು’ ಎಂದ ಯಜಮಾನರು ಪುನಃ ಅನ್ಯಮನಸ್ಕರಾದರು.

‘ಯಾಕ್ರೀ, ಏನು ಯೋಚಿಸ್ತಿದೀರಿ? ಚುನಾವಣೆ ಬಾಗಿಲಿಗೆ ಬಂದಿದೆ ಸಮರೋಪಾದಿಯಲ್ಲಿ ತಯಾರಾಗ್ಬೇಕು ಅಂತಿದ್ದೋರು ಈಗ್ಯಾಕೆ ಹೀಗೆ?’

ADVERTISEMENT

‘ನಾನು ಕ್ಯಾಂಡಿಡೇಟ್ ಅಂತ‌ ಅನೌನ್ಸ್ ಆಗ್ಲಿ, ತಾಳಿಕೋ’.

‘ನೀವು ಪಾರ್ಟಿ ಕೆಲ್ಸದಲ್ಲಿ ಆ್ಯಕ್ಟಿವ್ ಆಗಿದೀರೀಂತ ನಿಮ್ಮ ನಾಯಕರಿಗೆ ಮನವರಿಕೆ ಮಾಡಿಕೊಡದೆ ಹೇಗೆ ಅಭ್ಯರ್ಥಿಯಾಗ್ತೀರಿ? ಮನೆ ಬಾಗಿಲಿಗೆ ಟಿಕೆಟ್ ಬರುತ್ತೆ ಅಂದ್ಕೊಂಡಿದೀರಾ?’

‘ಇಲ್ಲ, ಹಾಗಲ್ಲ’.

‘ಮತ್ತೆ, ಟಿಕೆಟ್ ಸಿಗೋ ಬಗ್ಗೆ ಅನುಮಾನನಾ?’

ನಾಯಕರು ಮೌನ ಮುರಿಯಲಿಲ್ಲ.

‘ನಿಮ್ಗೆ ಟಿಕೆಟ್ ಸಿಗದಿರೋದಕ್ಕೆ ಕಾರಣಾನೇ ಇಲ್ಲ. ಹೈಕಮಾಂಡ್ ನಾಯಕರನ್ನು ಕಾಲಕಾಲಕ್ಕೆ ಭೇಟಿಯಾಗ್ತಾ ಅವರು ಸದಾ ಸಂತೋಷವಾಗಿರೋ ಹಾಗೆ‌ ನೋಡಿಕೊಳ್ತಿದೀರಿ. ಪಕ್ಷ ವಿರೋಧಿ ಚಟುವಟಿಕೆ ಆರೋಪಗಳಿಲ್ಲ. ವಯೋಮಿತಿಯೂ ಮೀರಿಲ್ಲ. ನಮ್ಮ ರಕ್ತಸಂಬಂಧಿಕರಾರೂ ರಾಜಕೀಯದಲ್ಲಿಲ್ಲ. ಚುನಾವಣೆಗೆ ಸಂಪನ್ಮೂಲದ ಕೊರತೆಯಿಲ್ಲ. ಮತ್ತ್ಯಾಕೆ ಚಿಂತೆ?’

‘ಅದಲ್ಲ ಚಿಂತೆ’.

‘ಮತ್ತೆ? ಯುದ್ಧ ಕಾಲದಲ್ಲಿ ಈ ಅರ್ಜುನ ವಿಷಾದವೇಕೆ? ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನಾ ಎಂದು ಶ್ರೀ ಕೃಷ್ಣ ಗೀತೋಪದೇಶ ಆಗಬೇಕೇನು?’

ಶಾಸಕರು ಮಾತಾಡದೆ, ಪಕ್ಕದಲ್ಲಿದ್ದ ದಿನಪತ್ರಿಕೆಯ ಮುಖಪುಟವನ್ನು ಮಡದಿಗೆ ತೋರಿಸಿದರು. ಭ್ರಷ್ಟಾಚಾರ, ಸ್ವಜನಪಕ್ಷಪಾತಗಳಿಗಾಗಿ ಆಡಳಿತ ಪಕ್ಷದ ಇಬ್ಬರು ಶಾಸಕರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದ ಸುದ್ದಿ ಇತ್ತು.

‘ಎಲೆಕ್ಷನ್ ಟೈಮಲ್ಲಿ ಇಂಥದ್ದೆಲ್ಲ ಮಾಮೂಲು... ಬಿಬಿಸಿ ಕಚೇರಿ ಮೇಲೆ ಐಟಿಯವರು ದಾಳಿ‌‌ ಮಾಡಿಲ್ವೇ?! ನೀವು ಯಾವ ಅಕ್ರಮಗಳಲ್ಲೂ ಸಿಕ್ಕಿಹಾಕಿಕೊಂಡಿಲ್ವಲ್ವ, ಯಾಕೆ ಚಿಂತೆ?’

‘ಹಾಗಿದ್ದಿದ್ರೆ ಚಿಂತಿಸ್ತಿರಲಿಲ್ಲ. ಆದ್ರೆ... ನಮ್ಮ ವಕೀಲರಿಗೆ ಫೋನ್ ಮಾಡ್ಬೇಕು...’ ದುಗುಡದಿಂದಲೇ ಶಾಸಕರು ಮೇಲೆದ್ದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.