ಗಂಡನ ಜೊತೆ ಜಗಳವಾಡಿ ಅನು ಮುನಿಸಿ ಕೊಂಡು ಮಲಗಿದ್ದಳು. ‘ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ, ದಯವಿಟ್ಟು ಉಂಡು ಮಲಗು...’ ಎಂದು ಗಿರಿ ಹೋಟೆಲ್ ಊಟ ತಂದು ಉಣ್ಣಲು ಕೊಟ್ಟ.
ಮಗಳನ್ನು ಸೇರಿಸುವ ಸ್ಕೂಲಿನ ಆಯ್ಕೆ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳವಾಗಿತ್ತು.
‘ಮಕ್ಕಳಿಗೆ ಮಾರ್ಕ್ಸ್ ಕೊಡೋದ್ರಲ್ಲಿ ಆ ಸ್ಕೂಲಿನವರು ಕಂಜೂಸು. ಈ ಸ್ಕೂಲಿನವರು ಧಾರಾಳವಾಗಿ ಮಾರ್ಕ್ಸ್ ಕೊಡ್ತಾರೆ, ಈ ಸ್ಕೂಲಿಗೇ ಸೇರಿಸೋಣ’ ಅನ್ನೋದು ಅನು ವಾದ.
‘ಹೆಚ್ಚು ಮಾರ್ಕ್ಸ್ ಕೊಡುವ ಸ್ಕೂಲಿನ ರಿಮಾರ್ಕ್ಸ್ ಬಗ್ಗೆನೂ ಯೋಚನೆ ಮಾಡು. ಮಾರ್ಕ್ಸ್ ಮೋಹ ಅಪಾಯಕಾರಿ, ಮಾರ್ಕ್ಸ್ ವ್ಯಾಧಿಗೆ ಮದ್ದಿಲ್ಲ’ ಎಂದ ಗಿರಿ.
‘ವಂತಿಗೆ ಜಾಸ್ತಿ ಕೊಡಬೇಕಾಗುತ್ತದೆ ಅಂತ ಹೆಚ್ಚು ಮಾರ್ಕ್ಸ್ ಕೊಡುವ ಸ್ಕೂಲ್ ಬೇಡ ಅಂತಿದ್ದೀರಿ’ ಆಕ್ಷೇಪ ಮಾಡಿದಳು.
‘ಶಾಲೆಯ ವಂತಿಗೆ ಮಕ್ಕಳ ಬುದ್ಧಿವಂತಿಕೆಗೆ ಮಾನದಂಡ ಅಲ್ಲ...’
‘ಈಗ ಎಲ್ಲದಕ್ಕೂ ಮಾರ್ಕ್ಸೇ ಮಾನದಂಡ ಅಲ್ಲವೇನ್ರೀ, ಮಕ್ಕಳನ್ನು ಪ್ರೋತ್ಸಾಹಿಸಲು ಆ ಸ್ಕೂಲಿನವರು ಹೆಚ್ಚು ಮಾರ್ಕ್ಸ್ ಕೊಡ್ತಾರಂತೆ. ಎಸ್ಸೆಸ್ಸೆಲ್ಸಿ ಮಕ್ಕಳು ಪಾಸಾಗಲೆಂದು ಶಿಕ್ಷಣ ಇಲಾಖೆ ಹತ್ತು ಪರ್ಸೆಂಟ್ ಕೃಪಾಂಕ ಕೊಡೋದಿಲ್ಲವೆ ಹಾಗೇ’.
‘ಮಕ್ಕಳ ಜೊತೆಗೆ ಶಿಕ್ಷಣ ಇಲಾಖೆನೂ ಪಾಸಾಗಬೇಕಲ್ಲ, ಅದಕ್ಕೋಸ್ಕರ ಕೃಪಾಂಕ ನೀಡಬಹುದು’.
‘ಶಿಕ್ಷಣ ಇಲಾಖೆಯೇ ಕೃಪಾಂಕದ ಕೃಪೆ ಮಾಡಿರುವುದು ಶಿಕ್ಷಣ ಸಂಸ್ಥೆಗಳು ಧರ್ಮಾಂಕ ನೀಡಿ ಮಾನ್ಯತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹ ಕೊಟ್ಟಂತೆ ಆಗಿದೆ ಕಣ್ರೀ...’
‘ಹಾಗೇ ಆಗಿದೆ. ಶಿಕ್ಷಣ ಇಲಾಖೆಯೇ ಮಾರ್ಕ್ಸ್ ವ್ಯಾಧಿಗೆ ಬಲಿಯಾದರೆ ಶಿಕ್ಷಣ ಸಂಸ್ಥೆ ಗಳು ಸುಮ್ಮನಿರುತ್ತವಾ? ಬಟ್ಟೆ ಅಂಗಡಿಗಳಲ್ಲಿ 30- 40 ಪರ್ಸೆಂಟ್ ಡಿಸ್ಕೌಂಟ್ ಸೇಲ್ ಪ್ರಕಟಿಸಿ ದಂತೆ ಶಾಲೆಗಳೂ ಹೆಚ್ಚಿನ ಧರ್ಮಾಂಕದ ಆಫರ್ ಅನೌನ್ಸ್ ಮಾಡಿ ಪೋಷಕರನ್ನು ಆಕರ್ಷಿಸುವ ಪರಿಸ್ಥಿತಿ ಬರಬಹುದು...’ ಎಂದು ಗಿರಿ ಕಳವಳಗೊಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.