‘ಪ್ರಜೆಗಳ ಪಾಲನೆಗಿಂತ ಮಂತ್ರಿಗಳ ಲಾಲನೆಯೇ ಸಿಎಂಗೆ ಕಷ್ಟ ಆಗಿಬಿಟ್ಟಿದೇರೀ, ಪಾಪ...’ ನ್ಯೂಸ್ ಪೇಪರ್ ಓದಿ ನಿಟ್ಟುಸಿರುಬಿಟ್ಟು ಹೇಳಿದಳು ಸುಮಿ.
‘ಆಟ ಆಡಿಕೊಂಡಿದ್ದ ಮಗು ಕೈಯಲ್ಲಿದ್ದ ಗೊಂಬೆ ಕಿತ್ತುಕೊಂಡ್ರೆ ಆ ಮಗು ಏನು ಮಾಡುತ್ತೆ ಹೇಳು?’ ಕೇಳಿದ ಶಂಕ್ರಿ.
‘ಅದೇ ಗೊಂಬೆ ಬೇಕು ಅಂತ ಮಗು ರಚ್ಚೆ ಹಿಡಿಯುತ್ತೇರೀ...’
‘ಹಾಗಾಗಿದೆ ಸಚಿವರ ಸ್ಥಿತಿ. ಆಹಾರ ಕಿತ್ತುಕೊಂಡು ಅಬಕಾರಿ ಗಂಟು ಹಾಕಿದ್ರೆ, ಕಾನೂನು ಕಿತ್ತುಕೊಂಡು ಹೋಮ್‌ಗೆ ಅಂಟು ಹಾಕಿದರೆ ಮಂತ್ರಿಗಳು ಸುಮ್ಮನಿರ್ತಾರಾ?’
‘ಖಾತೆ ಕಲ್ಚರ್ ಇಲ್ಲದವರಿಗೆ ಖಾತೆ ಕೊಡಕ್ಕಾಗುತ್ತಾ? ವಹಿಸಿಕೊಳ್ಳುವ ಖಾತೆ ಬಗ್ಗೆ ಖಾತೆದಾರರಿಗೆ ಕನಿಷ್ಠವಾದರೂ ನಾಲೆಡ್ಜ್ ಇರಬೇಕು ಅಂತ ಸಿಎಂ ಖಾತಾ ಆಂದೋಲನಾ ಮಾಡಿ ಖಾತೆ ವಿಲೇವಾರಿ ಮಾಡುತ್ತಿದ್ದಾರೆ’ ಅಂದ ಶಂಕ್ರಿ.
‘ಅದರ ಜೊತೆಗೆ, ಖಾತಾ ಅಧ್ಯಯನ ಮಾಡಿಕೊಂಡು ಜ್ಞಾನವಂತರಾಗಲು ಸಚಿವರಿಗೆ ಖಾತೆ ಅಧ್ಯಯನ ಶಿಬಿರ ಮಾಡಿ ತರಬೇತಿ ನೀಡಬೇಕಲ್ವಾ?’
‘ತರಬೇತಿ ಕಾಲ ಮುಗಿದು, ಸರ್ಕಾರ ಈಗ ಮಿಡ್ ಟರ್ಮ್ ಅವಧಿಯಲ್ಲಿದೆ. ಉಳಿದಿರುವ ಕಾಲದಲ್ಲಿ ಡೀಪ್ ಸ್ಟಡಿ ಮಾಡಿ, ಹಾರ್ಡ್ ವರ್ಕ್ ಮಾಡಿದರೆ 2023ರ ಪರೀಕ್ಷೆಯಲ್ಲಿ 150ಕ್ಕೂ ಹೆಚ್ಚು ಅಂಕ, ಅಂಕಿ ಪಡೆಯಬಹುದು. ಅದುಬಿಟ್ಟು ಖಾತೆದಾರರು ಹೀಗೇ ಕ್ಯಾತೆ ಮಾಡಿಕೊಂಡು ಕಾಲಹರಣ ಮಾಡಿದರೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಬದಲು ಮುಳುಗಡೆಯಾಗುವ ಭೀತಿ ಇದೆಯಂತೆ’.
‘ಈ ಗೊಂದಲ ನಿವಾರಣೆಗೆ ಸಿಎಂ ನಿರ್ದಾಕ್ಷಿಣ್ಯ ನಿರ್ಧಾರ ತೆಗೆದುಕೊಳ್ಳಬೇಕೂರೀ’.
‘ಯಾವ ನಿರ್ಧಾರ?’ ಶಂಕ್ರಿ ಕೇಳಿದ.
‘ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಸಚಿವರಿಗೂ ಸ್ಟಡಿ ಹಾಲಿಡೇ ನೀಡಿ, ಅವರ ಖಾತೆಗಳನ್ನು ಸಿಎಂ ವಹಿಸಿಕೊಂಡು, ಏಕಸಚಿವ ಸಂಪುಟ ರಚನೆ ಮಾಡಿಕೊಂಡು, ನಿರಾತಂಕವಾಗಿ ಆಡಳಿತ ಮಾಡುವುದು ಉತ್ತಮ...’ ಎಂದಳು ಸುಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.