‘ಲೇಯ್, ಮತ್ತೆ ಕೊರೊನಾ ಭೂತ ಹೆಗಲೇರ್ಕಂಡಿದೆ ಕಣ್ರಲಾ?’ ಎಂದ ಗುದ್ಲಿಂಗ ಹರಟೆಕಟ್ಟೇಲಿ!
‘ಅಯ್ಯೋ ಹೌದಾ? ಇದ್ಯಾವ ತಳೀನ್ಲಾ? ಆಲ್ಫಾ, ಬೀಟಾ, ಡೆಲ್ಟಾ, ಒಮಿಕ್ರಾನ್ ಎಲ್ಲಾ ಬಂದು ಪ್ರಾಣ ಹಿಂಡಿ ಹೋದ್ವಲ್ಲೋ’ ಕೇಳಿದ ಮಾಲಿಂಗ.
‘ಇದು ಅಮಿಕ್ರಾನ್ ಅಂತ. ಪ್ಯೂರ್ ದೇಶೀ ತಳಿ, ಅದೂ ನಮ್ದೇ ಕರುನಾಡ ಕೂಸು ಕಣ್ಲಾ’.
‘ಅಮಿಕ್ರಾನ್ ಅಂತನಾ? ಎಲ್ಲೂ ಕೇಳ್ದಂಗಾಗ್ಲಿಲ್ವಲ್ಲ. ಯಾಕೋ ಹೆದ್ರಿಕೆ ಆಗ್ತಿದೆ. ಏನು ಇದ್ರ ಲಕ್ಷಣಗಳು?’ ಕೇಳಿದ ಕಲ್ಲೇಶಿ.
‘ಇದು ಕರಪ್ಟಿವ್ ಕಮಿಷನ್ ವೈರಸ್ ಅಂತ. ಏಕಾಏಕಿ ಅಮರ್ಕಳೋದ್ರಿಂದ ಅಮಿಕ್ರಾನ್ ಅಂತಾರೆ. ಇದು ಬರುತ್ತೆ ಅಂತ ಗೊತ್ತಾದ ತಕ್ಷಣ ಎದೆ ಢವಢವ ಹೊಡ್ಕಳೋಕೆ ಶುರುವಾಗೋದು, ಕೈ ಕಾಲು ನಡುಗೋದು, ಬೆವರೋದು, ಕೋವಿಡ್‍ನಲ್ಲಿ ಸತ್ತೋರು ಕಣ್ಮುಂದೆ ಬಂದಂಗಾಗಿ, ಅವರ ಶಾಪ ಬಿಡ್ತಿಲ್ಲ ಅಂತ ಬಡಬಡಿಸೋದು ಎಲ್ಲಾ ಇರುತ್ತಂತೆ’.
‘ಸರ್ಕಾರ ಏನೂ ಕ್ರಮ ತಕಂಡಿಲ್ವಾ?’
‘ಸರ್ಕಾರ ಕ್ರಮ ತಕತೀವಿ ಅಂತ ಬಾಂಬ್ ಹಾಕಿರೋದಕ್ಕೇ ಈ ಅಮಿಕ್ರಾನ್ ಈಚೆ ಬಂದು ಕಮಲದೋರನ್ನ ಅಮರ್ಕಂಡಿರೋದು’.
‘ನೀನು ಏನು ಯೋಳ್ತಿದೀಯ ಅಂತ ಅರ್ಥ ಆಗ್ತಿಲ್ಲ’ ಕಣ್ ಕಣ್ ಬಿಟ್ಟ ಭದ್ರ.
‘ಅದೇ ಕಣ್ಲಾ, ಕಮಲದೋರು ಕೈ ಮೇಲೆ ಮುಡಾ ಹಗರಣ ಮಡಿಕ್ಕಂಡು ಮುಗಿಬಿದ್ದವ್ರೆ. ಕೈನೋರು ಸಮಾಧಿ ಮಾಡಿದ್ದ ಕೊರೊನಾ ವೈರಸ್‍ನ ಬುಸ್ ಅಂತ ಈಚೆ ಬಿಟ್ಟವ್ರೆ’.
‘ಓಹೋ ನೀನು ಮೈಕಲ್ ಕುನ್ಹಾ ಸಾಹೇಬ್ರ ವರದಿ ಬಗ್ಗೆನಾ ಯೋಳ್ತಿರೋದು?’
‘ಹೂ ಮತ್ತೆ, ಅದನ್ನ ಕೇಳೇ ಕಮಲದ ಕೆಲ ನಾಯಕರು ಮೈ ಕೈ ಎಲ್ಲಾ ಗುನ್ನ ಆಕ್ದಂಗೆ ಮುಲುಕಾಡ್ತಾವ್ರಂತೆ’.
‘ಇದಕ್ಕೆ ಏನೂ ಸ್ಯಾನಿಟೈಸರ್, ಔಷ್ಧಿ ಇಲ್ವಾ?’
‘ಭ್ರಷ್ಟಾಚಾರದ ವೈರಸ್ ಯಾವ ಸ್ಯಾನಿಟೈಸರ್ ಹಾಕಿ ತೊಳುದ್ರೂ ಹೋಗಲ್ಲ. ಕಮಲ್ದೋರು ಕೈ ಹಗರಣಗಳ ಟೀಸರ್ ಬಿಡೋದು ಬಿಟ್ಟು ‘ಥಾವರೆ ಚಂದ’ ಅಂತ ರಾಜಭವನದಲ್ಲಿ ಕ್ವಾರಂಟೈನ್ ಆಗೋದಷ್ಟೇ ಬಾಕಿ’ ಎಂದ ಪರ್ಮೇಶಿ. ಎಲ್ಲಾ ಗೊಳ್ಳೆಂದು ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.