ADVERTISEMENT

ಚುರುಮುರಿ: ನಾ ಅಲ್ಲಿರಬೇಕಿತ್ತು!

ಗುರು ಪಿ.ಎಸ್‌
Published 5 ಜುಲೈ 2024, 21:17 IST
Last Updated 5 ಜುಲೈ 2024, 21:17 IST
   

‘ನಾ ಬಿಹಾರದಲ್ಲಿ ಕೆಲಸ ಮಾಡ್ತಿರಬೇಕಿತ್ತು’ ಕೈ ಹಿಸುಕಿಕೊಂಡ ಸಿವಿಲ್ ಎಂಜಿನಿಯರ್ ಮುದ್ದಣ್ಣ.

‘ಹೌದು, ಇಷ್ಟೊತ್ತಿಗೆ ಕೋಟ್ಯಧಿಪತಿಗಳಾಗಿ ಬಿಡ್ತಿದ್ವಿ’ ದನಿಗೂಡಿಸಿದ ಮತ್ತೊಬ್ಬ ಸಿವಿಲ್ ಎಂಜಿನಿಯರ್ ವಿಜಿ.

‘15 ದಿನಗಳಲ್ಲಿ 10 ಸೇತುವೆಗಳು ಬಿದ್ದಿವೆಯಂತೆ‌. ಈ ಸಂದರ್ಭದಲ್ಲಿ ನಾವು ಬಿಹಾರದಲ್ಲಿ ಇದ್ದಿದ್ದರೆ ಕೈ ತುಂಬಾ ಕೆಲಸ ಸಿಕ್ಕಿರೋದು’ ಮುದ್ದಣ್ಣ ಪುನರುಚ್ಚರಿಸಿದ.

ADVERTISEMENT

‘ನಾನೂ ಅಲ್ಲೇ ಇರಬೇಕಿತ್ತು’ ಎನ್ನುತ್ತಾ ಬಂದ ನಗರಾಭಿವೃದ್ಧಿ ಪ್ರಾಧಿಕಾರವೊಂದರ ಅಧಿಕಾರಿ.

‘ನಿಮಗೇನ್ ಕಡಿಮೆ ಆಗಿದೆ ಸರ್, ಡಿನೋಟಿಫೈ ಆಗಿದ್ದ ಜಮೀನಿನಲ್ಲೇ ಮತ್ತೆ ಲೇಔಟ್ ಮಾಡಿ ಹಣ ಮಾಡ್ಕೋಬಹುದು, ಸೈಟ್ ಅಲಾಟ್ ಮಾಡೋವಾಗಲೂ ಸೈಡ್ ಇನ್‌ಕಂ ತಗೋಬಹುದು’ ಕಾಲೆಳೆದ ವಿಜಿ.

‘ಆದರೂ ಒಮ್ಮೆ ಒಂದು ಲೇಔಟ್ ಮಾಡಿದರೆ ಕೆಲಸ ಮುಗಿದಂಗೆ ನಮ್ಮದು. ಆದರೆ, ಈ ರೀತಿ ಸೇತುವೆಗಳನ್ನ ಬೀಳಿಸ್ತಾ, ಮತ್ತೆ ಮತ್ತೆ ಅವೇ ಸೇತುವೆ ನಿರ್ಮಿಸ್ತಾ ದುಡ್ ಮೇಲೆ ದುಡ್ ಮಾಡಬಹುದಲ್ಲ’ ಎಂದು ದೊಡ್ಡ ಅವಕಾಶ ತಪ್ಪಿ ಹೋಯಿತೇನೋ ಎಂಬಂಥ ದುಃಖದಲ್ಲಿ ಹೇಳಿದ ಅಧಿಕಾರಿ.

‘ಅಷ್ಟ್ ಬೇಗ ಪ್ರಾಜೆಕ್ಟ್ ಸ್ಯಾಂಕ್ಷನ್ ಆಗೋದು ಕಷ್ಟ ಬಿಡಿ ಸರ್’ ಎಂದ ಮುದ್ದಣ್ಣ.

‘ಏನ್ರೀ, ಹಾಗಂತೀರ, ಆ ರಾಜ್ಯದ ಸಿಎಂ ಈಗ ಸೆಂಟ್ರಲ್‌ನಲ್ಲಿ ಪವರ್‌ಫುಲ್. ಬ್ರಿಡ್ಜ್ ಕುಸೀತಾ ಇದ್ದಂಗೆ ಸಾವಿರಾರು ಕೋಟಿ ರೂಪಾಯಿ ಫಂಡ್ ರಿಲೀಸ್ ಆಗಿಬಿಡುತ್ತೆ’ ನಗುತ್ತಾ ಭವಿಷ್ಯ ನುಡಿದ ಅಧಿಕಾರಿ.

‘ಆದರೂ ನನಗಿನ್ನೂ ಅರ್ಥ ಆಗದಿರೋದು ಏನಂದರೆ, ಹೀಗೆ ದುಬುದುಬು ಅಂತ ಸೇತುವೆ ಬೀಳ್ತಿದ್ರೂ ಈ ಪಾರ್ಟಿಯವರಾಗಲಿ, ಆ ಪಾರ್ಟಿಯವರಾಗಲಿ ಯಾರೂ ಜೋರಾಗಿ ಖಂಡಿಸ್ತಿಲ್ವಲ್ಲ ಯಾಕೆ ಅಂತ’ ಎಂದ ಮುದ್ದಣ್ಣ.

‘ಆ ಸಿಎಂ ಯಾವ ಟೈಮ್‌ನಲ್ಲಿ ಯಾವ ಅಲಯನ್ಸ್‌ನಲ್ಲಿ ಇರ್ತಾರೋ ಗೊತ್ತಿಲ್ಲ‌. ಸುಮ್ನೆ ಯಾಕ್ ರಿಸ್ಕ್ ತಗೊಳೋಣ ಅಂತ ಸರ್ವಪಕ್ಷದವರೂ ಸೈಲೆಂಟ್ ಆಗಿದ್ದಾರೆ’ ಎಂದು ನಕ್ಕ ವಿಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.