ಬೆಕ್ಕಣ್ಣ ಪೇಪರಿನಲ್ಲಿ ಸುದ್ದಿಯೊಂದನ್ನು ಓದಿ, ಫೋಟೊಗೆ ನಮಸ್ಕಾರ ಮಾಡಿತು. ‘ಯಾರಿಗೆ ನಮಸ್ಕಾರ?’ ಅಚ್ಚರಿಯಿಂದ ಕೇಳಿದೆ. ‘ಕಾರಿಗೆ ನಮಸ್ಕಾರ. ಭಾವಪೂರ್ಣ ವಿದಾಯ’ ಎಂದು ಹನಿಗಣ್ಣಾಗಿ ಹೇಳಿತು.
‘ಗುಜರಾತಿನ ಬಿಲ್ಡರ್ ಒಬ್ಬನಿಗೆ ಕಾರಿನಿಂದಲೇ ಅದೃಷ್ಟ ಖುಲಾಯಿಸಿ, ಬಹಳ ಆಸ್ತಿ ಮಾಡಿದನಂತೆ. ಹದಿನೆಂಟು ವರ್ಷದಿಂದ ಜೊತೆಗಿದ್ದ ಅದೃಷ್ಟದ ಕಾರನ್ನು ಸಾವಿರಾರು ಮಂದಿ ಎದುರು ಸಮಾಧಿ ಮಾಡಿ, ಗೌರವಪೂರ್ಣ ವಿದಾಯ ಹೇಳಿದನಂತೆ’ ಎನ್ನುತ್ತ ಹದಿನೈದು ಅಡಿ ಆಳದ ಗುಂಡಿಯಲ್ಲಿ ಹೂಹಾರಗಳೊಡನೆ ಸಮಾಧಿಯಾಗುತ್ತಿದ್ದ ಕಾರಿನ ಫೋಟೊ ತೋರಿಸಿತು.
‘ಈ ವಿಚಿತ್ರ ವಿದಾಯ ಹೇಳೋ ವಿಧಾನದಿಂದ ಬೇರೆಯವರು ಸ್ಫೂರ್ತಿ ಹೊಂದಿದರೆ ಕಷ್ಟ. ಕುರ್ಚಿಯಿಂದಲೇ ಅದೃಷ್ಟ ಖುಲಾಯಿಸಿ, ಮಸ್ತ್ ಆಸ್ತಿ ಮಾಡಿದೆವು ಅಂತ ಸರ್ಕಾರಿ ಅಧಿಕಾರಿಗಳು ನಿವೃತ್ತಿಯಾಗುವಾಗ ತಮ್ಮ ಕುರ್ಚಿಯನ್ನೇ ಸಮಾಧಿ ಮಾಡಿದರೆ?’ ಬೆಕ್ಕಣ್ಣ ಚಿಂತೆಯಿಂದ ಹೇಳಿತು.
‘ಹತ್ತು ಹದಿನೈದು ವರ್ಷ ಮಂತ್ರಿಯಾಗಿ ಇದೇ ಕುರ್ಚಿಯ ಮೇಲೆ ಕುಳಿತಿದ್ದೆ. ಇದರಿಂದಲೇ ನನ್ನ ಭಾಗ್ಯದ ಬಾಗಿಲು ತೆರೆಯಿತು. ಲಕ್ಷಾಧಿಪತಿಯಿಂದ ಕೋಟ್ಯಧಿಪತಿಯಾದೆ ಅಂತ ರಾಜಕಾರಣಿಗಳು ತಮ್ಮ ಕುರ್ಚಿಯನ್ನೇ ಸಮಾಧಿ ಮಾಡಿದರೆ?’
ಪಟ್ಟಿ ಮುಂದುವರಿಸಿದ ಬೆಕ್ಕಣ್ಣ, ‘ಕ್ರಿಕೆಟ್ ಆಟಗಾರರು ನಿವೃತ್ತಿ ಹೇಳುವಾಗ ತಮ್ಮ ಬ್ಯಾಟನ್ನೇ ಸಮಾಧಿ ಮಾಡಿದರೆ? ವೈದ್ಯರು ತಮ್ಮ ಆಪರೇಷನ್ ಉಪಕರಣಗಳನ್ನೇ ಸಮಾಧಿ ಮಾಡಿದರೆ? ಅಂವಾ ಒಂದು ಕಾರು ಸಮಾಧಿ ಮಾಡಿದ, ನಾ ಹತ್ತು ಕಾರಿಗೆ ಸಮಾಧಿ ಮಾಡತೀನಿ ಅನ್ನೋರಿಗೇನೂ ಕಡಿಮೆಯಿಲ್ಲ’ ಎಂದಿತು.
‘ಆದ್ರೂ ಎಂಥಾ ಹುಚ್ಚು ಅಂತೀನಿ! ಮನ್ಯಾಗೆ ಮ್ಯೂಸಿಯಂ ಮಾಡಿ, ಗಾಜಿನ ಪೆಟ್ಟಿಗೆಯೊಳಗೆ ಆ ಹಳೆಯ ಕಾರನ್ನು ಇಟ್ಟಿದ್ದರೆ ಮುಂದೆ ಮೊಮ್ಮಕ್ಕಳು, ಮರಿಮೊಮ್ಮಕ್ಕಳೂ ನೋಡಬಹುದಿತ್ತು. ಇನ್ನೊಂದೈವತ್ತು ವರ್ಷವಾದ ಮ್ಯಾಗೆ ಆ್ಯಂಟಿಕ್ ಕಾರು ಪ್ರದರ್ಶನ ಮಾಡಬೌದಿತ್ತು’ ಎಂದೆ.
‘ಕಾರುಗೀರು ಸಮಾಧಿ ಮಾಡಕ್ಕಿಂತ ಮೊದಲು ನಿಮ್ಮೊಳಗಿನ ದುರಾಸೆ, ಜಾತೀಯತೆ, ಭ್ರಷ್ಟಾಚಾರದಂತಹ ದುರ್ಗುಣಗಳನ್ನು ಸಮಾಧಿ ಮಾಡಿ, ಮನುಷ್ಯರಾಗಿ’ ಎಂದು ಬೆಕ್ಕಣ್ಣ ಕಿಸಕ್ಕನೆ ನಕ್ಕಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.