ಹರಟೆಕಟ್ಟೆಯಲ್ಲಿ ಗುಡ್ಡೆ ರೂಪಾಯಿ ನೋಟು ಗುಪ್ಪೆ ಹಾಕ್ಕಂಡು ಎಣಿಸ್ತಾ ಕುಂತಿದ್ದ. ‘ಏನೋ ಗುಡ್ಡೆ, ಇಟಾಕಂದು ರೊಕ್ಕ? ಎಲ್ಲಾತು ಕಮಾಯಿ?’ ತೆಪರೇಸಿ ಕೇಳಿದ.
‘ಇದು ಚನ್ನಪಟ್ಣ ಮಹಿಮೆ ಕಣ್ರಲೆ, ವೋಟಿಗೆ ಐದು ಸಾವಿರ... ಒಳ್ಳೆ ಕಮಾಯಿ ಆತು’ ಎಂದ ಗುಡ್ಡೆ.
‘ಹೌದಾ? ಪ್ರಾಕ್ಸಿ ಹಾಕಿದ್ಯಾ?’
‘ನಿನ್ತೆಲಿ, ಪ್ರಾಕ್ಸಿ ಅಲ್ಲ, ಬೆಳಿಗ್ಗಿ ಒಂದು ಪಾರ್ಟಿ, ರಾತ್ರಿಗೆ ಒಂದು ಪಾರ್ಟಿ. ಪ್ರಚಾರಕ್ಕೆ ಅಂತ ಜನರನ್ನ ಕರ್ಕೊಂಡು ಹೋಗೋ ಕಾಂಟ್ರಾಕ್ಟ್ ತಗಂಡಿದ್ದೆ. ಎರಡೂ ಕಡಿ ಕೈ ತುಂಬಾ ರೊಕ್ಕ, ಹೊಟ್ಟೆ ತುಂಬಾ ಎಣ್ಣೆ...’ ಗುಡ್ಡೆ ನಕ್ಕ.
‘ಒಳ್ಳೆ ಪಾಕಡ ನೀನು, ಅದಿರ್ಲಿ ಯಾರು ಗೆಲ್ಲಬೋದು?’ ದುಬ್ಬೀರ ಕೇಳಿದ.
‘ಗೊತ್ತಿಲ್ಲ, ಬೊಂಬೆ ಆಡ್ಸೋನು... ಮ್ಯಾಲೆ ಕುಂತಾನೆ...’ ಗುಡ್ಡೆ ಆಕಾಶ ತೋರಿಸಿದ. ಎಲ್ಲರೂ ಗೊಳ್ಳಂತ ನಕ್ಕರು.
‘ಅಲ್ಲೋ ಗುಡ್ಡೆ, ಬರೀ ರೊಕ್ಕ ಎಣಿಸ್ಕಂಡ್ ಬಂದಿದೀಯಲ್ಲ, ಚನ್ನಪಟ್ಣದ ಬೀದಿ ಬೀದೀಲಿ ರಾಜಕಾರಣಿಗಳ ಕಣ್ಣೀರು, ಕೆಟ್ಟಾ ಕೊಳಕ ಮಾತು ಬೇಕಾದಷ್ಟು ಬಿದ್ದಿದ್ವಲ್ಲ, ಅವನ್ನೆಲ್ಲ ಆರಿಸ್ಕಂಡು ಬರೋದಲ್ವಾ?’ ಮಂಜಮ್ಮ ಕೇಳಿದಳು.
‘ಯಾಕೆ, ನಂಗೇನ್ ತೆಲಿ ಕೆಟ್ಟೇತಾ?’ ಗುಡ್ಡೆ ತಲೆ ಒಗೆದ.
‘ಅಲ್ಲ ಈ ರಾಜಕಾರಣಿಗಳು ತಮಗೆ ಆಗದೋರಿಗೆ ಅಡ್ಡ ಹೆಸರು ಇಟ್ಟು ಕರಿಯೋದು ಜಾಸ್ತಿ ಆಗೇತಪ, ನಮ್ ಜಮೀರ್ ಅಹ್ಮದ್ ಸಾಹೇಬ್ರು ಮೊನ್ನಿ ಕುಮಾರಣ್ಣಂಗೆ ಅದೇನೋ ಅಂದದ್ದು ದೊಡ್ಡ ಸುದ್ದೀನೇ ಆಗೋತು’ ತೆಪರೇಸಿ ಆಕ್ಷೇಪಿಸಿದ.
‘ಜಮೀರ್ ಸಾಹೇಬ್ರು ಈಗ ಯಾರಿಗೆ ಏನರೆ ಹೆಸರಿಟ್ಟು ಕರೀಲಿ, ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ್ಲೇ ನಾನು ಅವರಿಗೊಂದು ಹೆಸರಿಟ್ಟಿದ್ದೆ’ ಎಂದ ಗುಡ್ಡೆ.
‘ಹೌದಾ, ಏನದು ಹೆಸರು?’
‘ಜಮೀರ್ ಅಹ್ಮದ್ ಸಿದ್ದುಕಿ... ಅಂತ.’
‘ಮೊದಲೇನಿತ್ತು?’
‘ಜಮೀರ್ ಅಹ್ಮದ್ ಕುಮಾರಣ್ಣಂದುಕಿ... ಅಂತ ಇತ್ತು...’
ಗುಡ್ಡೆ ಕೀಟಲೆಗೆ ಎಲ್ಲರೂ ಮತ್ತೊಮ್ಮೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.