‘ದೆಹಲೀಗೆ ವಿಮಾನದಲ್ಲೇ ಹೋಗಬೇಕಾ? ರೈಲಿನಲ್ಲಿ ಹೋಗಿ, ಸೇಫಾಗಿರುತ್ತೆ’.
‘ರೈಲು? ಮೈ ಗಾಡ್! 36 ಗಂಟೆ ಪ್ರಯಾಣ. ಕೊಟ್ಟಿದ್ದು ತಿನ್ನಬೇಕು. ಪ್ಲೇನ್ ಹಿಡಿದರೆ ಜುಂ ಅಂತ ಮೂರು ತಾಸು ಸಾಕು’.
‘ಆದರೆ ಇತ್ತೀಚೆಗೆ ಪ್ಲೇನ್ ಪ್ರಯಾಣ ರಿಸ್ಕಿ’.
‘ನನಗೂ ಗೊತ್ತು. ಆದರೆ ಇಂಪಾರ್ಟೆಂಟ್ ಮೀಟಿಂಗ್ ಅಂದ ಮೇಲೆ ಹೋಗಲೇಬೇಕಲ್ಲವೆ? ರೈಲಿನಲ್ಲಿ ಯಾಕೆ ಬಂದೆ ಅಂತ ಕೇಳ್ತಾರೆ’.
‘ಅದ್ಸರಿ. ಈ ಸಲ ನಾನು ಹೇಳಿದ ಹಾಗೆ ನಡಕೊಳ್ಳಿ’.
‘ಸರಿ ಹೇಳು...’
‘ಏರ್‌ಪೋರ್ಟಿಗೆ ಎಂಟರ್ ಆಗುವಾಗ ಸೆಕ್ಯುರಿಟಿ ಜತೆ ಹಿಂದೀಲೇ ಮಾತನಾಡಿ. ಇಲ್ಲದಿದ್ದರೆ ಅವರು ‘ನೀನು ಇಂಡಿಯನ್ನಾ?’ ಅಂತ ಕೇಳ್ತಾರೆ. ಹಾಗೇ ಸೆಕ್ಯುರಿಟಿ ಚೆಕ್ ಸಮಯದಲ್ಲಿ ಅಂಗಿ, ಸಾಕ್ಸು ಬಿಚ್ಚು ಅಂದರೆ ಬಿಚ್ಚಿ. ವಾದ ಮಾಡೋದಿಕ್ಕೆ ಹೋಗಬೇಡಿ’.
‘ಆಗಲಿ’.
‘ಆಮೇಲೆ ಫ್ಲೈಟ್ ಹತ್ತಿರ ಹೋಗುವಾಗ ಸರಿಯಾದ ಶಟಲ್ ಹತ್ತಿ. ಮೊನ್ನೆ ನೋಡಿ, ವ್ಯಾನ್‍ನಲ್ಲಿದ್ದರೂ ವಿಮಾನ ಹತ್ತೋದಿಕ್ಕೆ ಆಗಲೇ ಇಲ್ಲ. ಫ್ಲೈಟಿನಲ್ಲಿ ರೈನ್ ಕೋಟ್ ಹಾಕಿಕೊಂಡೇ ಇರಿ. ಹೇಳೋದಿಕ್ಕೆ ಆಗದು, ಯಾರಾದರೂ ಕೊ-ಪ್ಯಾಸೆಂಜರ್ ಟೈಟಾಗಿದ್ದು ಟಾಯ್ಲೆಟ್‍ಗೆ ಹೋಗೋ ಬದಲು ನಿಮ್ಮ ಕಡೆ ಬಂದರೆ?’.
‘ನಿಜ ನಿಜ...’
‘ಇತ್ತೀಚೆಗೆ ಪ್ಲೇನಿನೊಳಗೆ ಹೊಡೆದಾಟ ಬೇರೆ ಆಗ್ತಿದೆ. ಮೊನ್ನೆ ವಾಟ್ಸ್‌ಆ್ಯಪ್‍ನಲ್ಲಿ ನೋಡಿದ್ರಲ್ಲಾ ಹೇಗೆ ಹೊಡೀತಾ ಇದ್ದರು. ಪೊಲೀಸಿನವರು ಬಾಯಿ ಬಿಡಿಸೋದಿಕ್ಕೆ ಸ್ಟೇಶನ್ನಿನಲ್ಲಿ ಹೊಡೀತಾರಲ್ಲ ಹಾಗೇ ಇತ್ತು, ಅಲ್ವೆ? ಮತ್ತೆ ನೀವು ಅಂತಹ ಜಗಳ ತಂದೊಕೋಬೇಡಿ’.
‘ಇಲ್ಲ ಖಂಡಿತ ಇಲ್ಲ’.
‘ಅಂತಹ ಮಾರಾಮಾರಿ ಆಗ್ತಾ ಇದ್ದರೆ ನೀವು ಬಿಡಿಸೋದಿಕ್ಕೂ ಹೋಗ್ಬೇಡಿ’.
‘ನನಗ್ಯಾಕೆ ಅದರ ಉಸಾಬರಿ ಅಂತ ಇದ್ದುಬಿಡ್ತೇನೆ’.
‘ದೂರದಲ್ಲಿದ್ದರೆ ಮೊಬೈಲಿನಲ್ಲಿ ಅದನ್ನು ಸೆರೆಹಿಡೀರಿ. ಆಮೇಲೆ ನಾವು ವಾಟ್ಸ್‌ಆ್ಯಪ್‌ನಲ್ಲಿ ಶೇರ್ ಮಾಡಬಹುದು’.
‘ಓಕೆ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.