ADVERTISEMENT

ಚುರುಮುರಿ: ಬಂಡೆವೀರರು!

ಸುಮಂಗಲಾ
Published 30 ಜೂನ್ 2024, 22:29 IST
Last Updated 30 ಜೂನ್ 2024, 22:29 IST
   

‘ಒಂದ್‌ ಮಳೆ ಬಂದಿದ್ದೇ ಬೆಂಗಳೂರು– ಮಂಗಳೂರು ಚತುಷ್ಪಥ ರಸ್ತೆ ಕುಸದೈತಂತೆ… ಯಾವ ಸರ್ಕಾರ ಬಂದ್ರು ರಸ್ತೆಗಳ ಹಣೇಬರಹ ಇಷ್ಟೇ’ ಬೆಕ್ಕಣ್ಣ ಹಣೆ ಚಚ್ಚಿಕೊಂಡಿತು.

‘ಅಯೋಧ್ಯೆವಳಗೆ ಹೊಸದಾಗಿ ಮಾಡಿದ ರಾಮಪಥನೇ ಕುಸಿದೈತಂತೆ… ಇನ್ನು ಇದೇನ್‌ ಮಹಾ ಬಿಡು’ ಎಂದೆ.

‘ನೋಡು… ನೀ ಏನರೆ ಮಾತಾಡು, ಏನರೆ ಬರಿ… ಆದರೆ, ರಾಮಪಥದ ಬಗ್ಗೆ ಚಕಾರ ಎತ್ತಬ್ಯಾಡ. ಅದನ್ನೆಲ್ಲ ನೋಡಿಕೊಳ್ಳಾಕೆ ಯೋಗಿಮಾಮಾ ಅದಾನೆ’ ಎಂದು ಬೆಕ್ಕಣ್ಣ ಗುರ‍್ರೆಂದಿತು.

ADVERTISEMENT

‘ಹಂಗಲ್ಲ… ಅಂಥಾ ಪ್ರತಿಷ್ಠಿತ ರಸ್ತೆ ನಿರ್ಮಾಣದಲ್ಲಿಯೇ ಏನೋ ಕಮಿಷನ್‌ ಕಳ್ಳಾಟ ಮಾಡಿ, ರಸ್ತೆಗೆ ಸರಿಯಾಗಿ ಜಲ್ಲಿ, ಟಾರು ಹಾಕಂಗಿಲ್ಲ. ಇನ್ನು ಈ ಪಾಮರರ ರಸ್ತೆಗಳ ಪಾಡು ಕೇಳೂದೇ ಬ್ಯಾಡ ಅಂತ ನಾ ಹೇಳಿದ್ದು’ ಸಮಾಧಾನಿಸಿದೆ.

‘ಯೋಗಿಮಾಮಾನ ರಾಜ್ಯದ ಸುದ್ದಿ ನಿಂಗ್ಯಾಕೆ? ಇಲ್ಲಿ ಸಿಎಂ ಯಾರು ಆಗಬಕು, ಡಿಸಿಎಂ ಎಷ್ಟು ಜನ ಆಗಬಕು ಅಂತ ಗುದ್ದಾಟ ನಡದೈತಲ್ಲ ಅದ್ರ ಬಗ್ಗೆ ಮಾತಾಡಿ ಬಾಯಿ ನೋಯಿಸಿಕೋ’.

‘ಹೋಗ್ಲಿಬಿಡು. ನೋಡಿಲ್ಲಿ… ಚೀನಾದವ್ರು ಚಂದ್ರನ ಮ್ಯಾಗಿಂದ ಎರಡು ಕೆ.ಜಿ. ಮಣ್ಣು ತಂದಾರಂತೆ’, ನಾನು ಮಾತು ಬದಲಿಸಿದೆ.

‘ಅದೇನ್‌ ಮಹಾ… ನಮ್ ಇಸ್ರೊದವ್ರು ಇದೇ ವರ್ಷ ಚಂದ್ರಯಾತ್ರೆ– 4 ಮಾಡ್ತಾರಂತೆ. ಮಣ್ಣಲ್ಲ, ಅಲ್ಲಿಂದ ದೊಡ್ಡ ಬಂಡೇನೆ ತರತಾರೆ’ ಬೆಕ್ಕಣ್ಣ ಬಲು ಅಭಿಮಾನದಿಂದ ರಾಕ್‌ ಸ್ಯಾಂಪಲ್‌ ತರುವುದಾಗಿ ಇಸ್ರೊ ಅಧ್ಯಕ್ಷರು ಹೇಳಿದ್ದ ಹಳೆಯ ಸುದ್ದಿಯನ್ನು ತೋರಿಸಿತು.

‘ಮಂಗ್ಯಾನಂಥವ್ನೇ… ಹಂಗೆಲ್ಲ ಅಲ್ಲಿಂದ ದೊಡ್ಡ ಬಂಡೇನೇ ಎತ್ತಿಕೊಂಡು ಬರಾಕೆ ಅಲ್ಲಿಗೆ ಕ್ರೇನ್‌ ಕಳಿಸಾಕೆ ಹತ್ತಿಲ್ಲ, ಸಣ್ಣ ಬಾಹ್ಯಾಕಾಶ ನೌಕೆ ಕಳಿಸತೀವಿ’.

‘ಈಗ ನಮ್‌ ಟೀಂ ಇಂಡಿಯಾದವ್ರು ಟಿ-20 ವಿಶ್ವಕಪ್‌ ಎತ್ತಾಕಿಕೊಂಡು ಬಂದಿಲ್ವಾ… ಹಂಗೆ ಎತ್ತಾಕಿಕೊಂಡು ಬರದು! ಆಗಲಿಲ್ಲ ಅಂದ್ರೆ ಇಲ್ಲಿಂದ ಕಳಿಸಿರೋ ರೋವರ್‌ ಚಂದ್ರದಲ್ಲಿರೋ ಬಂಡೆಯನ್ನ ಸರಿಯಾಗಿ ಭೂಮಿ ಮ್ಯಾಗೆ ಬೀಳೂ ಹಂಗೆ ಜೋರಾಗಿ ಈಥರಾ ನೂಕತೈತಿ…’ ಬೆಕ್ಕಣ್ಣ ಹಾವಭಾವದೊಡನೆ ತೋರಿಸಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.