ADVERTISEMENT

ಚುರುಮುರಿ | ಎಡವಟ್ಟಿನ ಕಲೆ

ಲಿಂಗರಾಜು ಡಿ.ಎಸ್
Published 22 ಏಪ್ರಿಲ್ 2024, 19:10 IST
Last Updated 22 ಏಪ್ರಿಲ್ 2024, 19:10 IST
...
...   

ನಮ್ಮೂರಲ್ಲಿ ಕಾಂಗಕ್ಕ, ತೆನೆಯಪ್ಪರ ಮನೆ ಜಗಳ ದಿನಪರ್ತಿ ನಡೀತಿತ್ತು. ಒಬ್ಬರು ಏನನ್ನ ಮಾತಾಡಿದ್ರೆ ಅದಕ್ಕೆ ಇನ್ನೊಬ್ಬರು ನಾಕು ಸೇರಿಸಿ ಬೈಯ್ಯತಿದ್ದರು. ದಿನಾ ಒಬ್ಬರನ್ನ ಒಬ್ಬರು ಬೈಯ್ಯದಿದ್ದರೆ ಇಬ್ಬರಿಗೂ ಉಂಡನ್ನ ಅರಗುತ್ತಿರಲಿಲ್ಲ. ಇವರಿಬ್ಬರ ಜಗಳದಲ್ಲಿ ಜನ ನಿಸೂರಾಗಿ ಬದುಕಾಟ ಮಾಡಂಗೇ ಇರಲಿಲ್ಲ. ಈ ಜಗಳಕ್ಕೆ ಕಮಲಕ್ಕನ ಮನೇರು ತೆನೆಯಪ್ಪನ ಪರವಾಗಿ ದಿನಾ ಪುಳ್ಳೆ ಹಾಕಿ ಬೆಂಕಿಯಲ್ಲಿ ನಚ್ಚಗಾಯ್ತಿದ್ರು.

‘ಹೆಣ್ಣುಮಕ್ಕಳಿಗೆ ಗೌರವ ಕೊಡದು ಕಲೀಬೇಕು ಕಪ್ಪ? ಕಡದು-ಬಳದು ಮಾತಾಡದು ಬುಡ್ರಿ’ ಕಾಂಗಕ್ಕನ ತಮ್ಮ ಚೊಂಬು ಹಿಡಕಂದು ಬೆಳಬೆಳಿಗ್ಗೇಲೆ ರೇಗತಿದ್ದ.

‘ನಾವೇನು ಕಂಡೋರ ಆಸ್ತಿ ಹೊಡಕಂದು ದೊಡ್ಡೋರಾಗಿಲ್ಲ ಬ್ರದರ್. ಅದೇಟು ಜನಕೆ ನೀವು ನಾಮ ತೇದಿದ್ದೀರಿ ಅಂತ ಗೊತ್ತದೆ’ ಅಂತ ತೆನೆಯಪ್ಪ ಬೋದು ಕೆಡಗತಿದ್ದ.

ADVERTISEMENT

‘ಅಯ್ಯೋ ಬುಡಣ್ಣ, ಕಾಂಗಕ್ಕನ ಮನೆ ಜನಕ್ಕೆ ಉಣ್ಣಕ್ಕಿಕ್ಕಕ್ಕೆ ಅಕ್ಕಿ ಇಲ್ಲ ಅಂತ ಕಾಸು ಕೊಡ್ತಾವ್ರೆ. ಮಾತು ಮಾತಿಗೂ ಕ್ಯಾತೆ ತೆಗದು ಗಾಳಿಗರಾವು ಹಿಡಿದೋರಂಗಾಡ್ತರೆ’ ಕಮಲಕ್ಕನ ತಮ್ಮ ಚಿಪ್ಪು ಎಸೆದ.

‘ಅಲ್ಲ ಕನ್ರಯ್ಯಾ, ನೀವುನೀವೆ ಸನ್ನಿ ಹಿಡಿದೋರ ಥರ ಹೊಡೆದಾಡತಿದ್ರೆ ಸರೀಕರು ಏನಂದುಕ್ಯಂಬಲ್ಲ. ನಿಮ್ಮ ದಾರಿಗೆ ನೀವೇ ಮುಳ್ಳು ಮುರುಕತಿದ್ದೀರಿ. ರಾಜಕೀಯದ ಕಾರುಬಾರು ಅಂದ್ರೆ ಹಿಂಗೇನಾ? ಎಲೆಕ್ಷನ್ ಮುಗಿದ್ರೆ ಸಾಕಾಗ್ಯದೆ’ ಯಂಟಪ್ಪಣ್ಣ ಬೆರಗಾಯ್ತು.

‘ಹ್ಞೂಂಕನಣೈ, ಇನ್ನೇನು ಕ್ಯಾಮೆ ಇದ್ದದು ರಾಜಕೀಯದೋರಿಗೆ. ಬಾಯಿಚಪಲದ ಜಗಳಕ್ಕೆ ಕಾರಣವೇ ಬೇಕಾಗಿಲ್ಲ. ಬಾಯಿ ತೆಗುದ್ರೆ ಚಂಬಿಂಗ್ ಚಿಪ್ಪಿಂಗ್ ಶುರು ಮಾಡ್ತರೆ. ಜನಕ್ಕೆ ಇದೇ ಇವರ ಕೊಡುಗೆ’ ಅಂತಂದ ಚಂದ್ರು.

‘ನೋಡಿರ್‍ಲಾ, ರಾಜಕೀಯದಲ್ಲಿ ಎದುರಾಗೋ ಚಂಬು-ಚಿಪ್ಪಿನ ಒಳೇಟುಗಳನ್ನು ತಿಳಿದುಕೊಂಡು ಅವನ್ನು ತಪ್ಪಾಗಿ ಅರ್ಥೈಸಿ ತಪ್ಪು ಪರಿಹಾರಗಳನ್ನು ಕೊಡುವ ಎಡವಟ್ಟಿನ ಕಲೆಯೇ ರಾಜಕೀಯ. ಅದುನ್ನೇ ಈಗ ರಾಜಕಾರಣಿಗಳು ಮಾಡ್ತಿರದು’– ರಾಜಕೀಯಕ್ಕೆ ತುರೇಮಣೆ ಹೊಸ ವಿಶ್ಲೇಷಣೆ ಕೊಟ್ಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.