ADVERTISEMENT

ಚುರುಮುರಿ | ಹರಾಜು ಶುರು!

ಗುರು ಪಿ.ಎಸ್‌
Published 29 ನವೆಂಬರ್ 2023, 22:52 IST
Last Updated 29 ನವೆಂಬರ್ 2023, 22:52 IST
.
.   

‘ಇದೇನ್ರೀ, ಮನುಷ್ಯರನ್ನೇ ಹರಾಜು ಹಾಕ್ತಾರಲ್ರೀ...’ ಮತ್ತೆ ಶುರುವಾಗ್ತಿರೋ ಐಪಿಎಲ್‌ಗೆ ಕ್ರಿಕೆಟ್ ಆಟಗಾರರ ಹರಾಜು ಸುದ್ದಿ ಓದುತ್ತಾ ಹೇಳಿದಳು ಹೆಂಡತಿ.

‘ಅದನ್ನ ಹರಾಜು ಅನ್ನೋದಕ್ಕಿಂತ ಇಂಗ್ಲಿಷ್‌ನಲ್ಲಿ ಆಕ್ಷನ್ ಅನ್ನು, ಹಿತವಾಗಿ ಕೇಳುತ್ತೆ’ ಸಲಹೆ ನೀಡಿದೆ.

‘ಆಕ್ಷನ್ನೋ ಹರಾಜೋ, ಒಟ್ಟಾರೆ ದುಡ್ಡಿಗೆ ಮಾರಾಟ ಆಗ್ತಿರೋದಂತೂ ನಿಜ ಅಲ್ವಾ?’

ADVERTISEMENT

‘ಟ್ಯಾಲೆಂಟ್ ಇದ್ದವರನ್ನ ಮಾತ್ರ ಹರಾಜಾಕೋದು ಕಣೆ, ಈಗ ನನ್ನನ್ನ, ನಿನ್ನನ್ನ ಹರಾಜು ಹಾಕಿದ್ರೆ ಯಾರಾದರೂ ತಗೊಳ್ತಾರ?’

ಯಾವುದೇ ಪ್ರತಿಕ್ರಿಯೆ ಕೊಡದೆ, ಏನೋ ಯೋಚಿಸತೊಡಗಿದಳು ಮಡದಿ.

‘ಯಾಕ್ ಮೇಡಂ, ಮೌನಕ್ಕೆ ಶರಣಾದ್ರಿ?’

‘ಏನಿಲ್ಲ ರೀ, ನನಗೊಂದು ಐಡಿಯಾ ಬಂತು. ಕ್ರಿಕೆಟ್ ಆಟಗಾರರನ್ನ ಹರಾಜು ಹಾಕಿದಂಗೆ ರಾಜಕಾರಣಿಗಳನ್ನೂ ಹರಾಜು ಹಾಕಿ, ನಮ್ ನಮಗೆ ಬೇಕಾದ ಪಿಎಂ, ಸಿಎಂ, ಮಿನಿಸ್ಟರ್, ಎಮ್ಮೆಲ್ಲೆನ ಕೊಂಡುಕೊಂಡರೆ ಹೇಗಿರುತ್ತೆ?’

‘ಅಷ್ಟೊಂದು ದುಡ್ಡು ಎಲ್ಲಿಂದ ತರ್ತೀಯ?’

‘ನಮ್ ನಮ್ ರಾಜ್ಯದ ತೆರಿಗೆ ಹಣ ಕೊಟ್ಟು ಪರ್ಚೇಸ್ ಮಾಡೋಣ’.

‘ಇನ್‌ಡೈರೆಕ್ಟ್ ಆಗಿ ಈಗ ಅದನ್ನೇ ಮಾಡ್ತಿಲ್ವ?’ ನಾನು ನಕ್ಕೆ.

‘ಲೀಡರ್ಸ್ ಆಯ್ತು, ಈ ಆಫೀಸರ್ಸ್‌ನ ಹೇಗೆ ಸೆಲೆಕ್ಟ್ ಮಾಡಿಕೊಳ್ಳೋದು ಗೊತ್ತಾಗ್ತಿಲ್ಲ. ಇದಕ್ಕೆ ನೀವು ಐಡಿಯಾ ಕೊಡಿ’.

‘ಅವರನ್ನೂ ಹರಾಜಿನಲ್ಲೇ. ಆದರೆ, ಇದು ಉಲ್ಟಾ ಪ್ರಕ್ರಿಯೆ’.

‘ಅಂದ್ರೆ?’

‘ಅಂದ್ರೆ, ಐಪಿಎಲ್‌ನಲ್ಲಿ ಬೇಕಾದ ಪ್ಲೇಯರನ್ನು ಆ ಫ್ರ್ಯಾಂಚೈಸಿ ಮಾಲೀಕರೇ ದುಡ್ಡು ಕೊಟ್ಟು ಖರೀದಿಸ್ತಾರಲ್ವ. ಆದರೆ, ಇಲ್ಲಿ ತನಗೆ ಬೇಕಾದ ಪ್ಲೇಸ್‌ಗೆ ಹೋಗಬೇಕೆಂದರೆ ಆ ಆಟಗಾರನೇ ‘ಓನರ್’ಗೆ ದುಡ್ಡು ಕೊಡಬೇಕಾಗುತ್ತೆ, ಅಷ್ಟೇ’.

‘ಹೌದಾ! ಚೆನ್ನಾಗಿದೆಯಲ್ರೀ, ಏನ್ರೀ ಈ ಆಟದ ಹೆಸರು?’

‘ವರ್ಗಾವಣೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.