ADVERTISEMENT

ಚುರುಮುರಿ: ಎಲೆಕ್ಷನ್‌ ಹರಾಜು! 

ಗುರು ಪಿ.ಎಸ್‌
Published 14 ನವೆಂಬರ್ 2024, 0:11 IST
Last Updated 14 ನವೆಂಬರ್ 2024, 0:11 IST
   

‘ಕೆಲವೇ ದಿನಗಳಲ್ಲಿ ಹರಾಜು ಶುರುವಾಗುತ್ತೆ?’ ಮಾತು ಶುರುವಿಟ್ಟುಕೊಂಡ ಮುದ್ದಣ್ಣ. 

‘ಯಾವ ಹರಾಜು, ನಿನ್ನ ಹೊಲ–ಮನೆ–ಆಸ್ತಿ ಹರಾಜಾಗುತ್ತಾ’ ನಗುತ್ತಲೇ ಮುದ್ದಣ್ಣನ ಮಾನ ಹರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಜಿ. 

‘ನನ್ನದಲ್ಲಪ್ಪ, ಐಪಿಎಲ್‌ಗೆ ಕ್ರಿಕೆಟ್‌ ಆಟಗಾರರ ಹರಾಜು’ ಎಂದ. 

ADVERTISEMENT

‘ಛೇ, ಬೈ ಎಲೆಕ್ಷನ್‌ ಮುಗಿದೇ ಹೋಯ್ತಲ್ಲ’ ಕೈ ಕೈ ಹಿಸುಕಿಕೊಂಡ ವಿಜಿ. 

‘ಬೈ ಎಲೆಕ್ಷನ್‌ ಮುಗಿಯೋಕೂ, ಐಪಿಎಲ್‌ ಆಕ್ಷನ್‌ ಪ್ರಾರಂಭವಾಗೋಕೂ ಏನಣ್ಣ ಸಂಬಂಧ?’ ಗೊಂದಲದಲ್ಲಿ ಕೇಳಿದ ಮುದ್ದಣ್ಣ. 

‘ಐಪಿಎಲ್‌ ಫ್ರಾಂಚೈಸಿಯವರು ಏನ್‌ ಮಾಡ್ತಾರೆ ಹೇಳು?’ 

‘ತಮಗೆ ಯಾವ ಆಟಗಾರ ಬೇಕೋ ಅವನ ಹೆಸರನ್ನ ಕೂಗುತ್ತಿದ್ದಂತೆ ಹೆಚ್ಚು ದುಡ್ಡು ಕೊಟ್ಟು ತಮ್ಮ ಟೀಮ್‌ಗೆ ಅವನನ್ನ ಕರ್ಕೊತಾರೆ’.

‘ಅದಕ್ಕೆ?’

‘ಎಲೆಕ್ಷನ್‌ ಕೂಡ ಹಾಗೇ ನಡೆಸಬಹುದಿತ್ತು’.

‘ಅಂದ್ರೆ?’ 

‘ಬೈ ಎಲೆಕ್ಷನ್‌ ನಡೆದ ಮೂರೂ ಕ್ಷೇತ್ರಗಳಲ್ಲಿ ನನ್ ಫ್ರೆಂಡ್ಸ್‌ ಇದಾರೆ, ಹೇಗೆ ನಡೀತು ಚುನಾವಣೆ ಅಂತ ಕೇಳಿದೆ, ಯಾರು ಜಾಸ್ತಿ ದುಡ್ಡು ಹಂಚಿದ್ದಾರೋ ಅವರು ಗೆಲ್ಲಬಹುದು ಅಂದ್ರು’.

‘ಅದು ಬಹಿರಂಗ ಗುಟ್ಟು ಅಣ್ಣ, ಅದಕ್ಕೂ ಐಪಿಎಲ್‌ ಆಕ್ಷನ್‌ಗೂ ಏನು ಸಂಬಂಧ ಹೇಳು?’ 

‘ಸುಮ್ಮನೆ ಇಷ್ಟೆಲ್ಲ ದುಡ್ಡು ಖರ್ಚು ಮಾಡಿ ಎಲೆಕ್ಷನ್‌ ಮಾಡೋ ಬದಲು, ಆಯಾ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಹೆಚ್ಚು ದುಡ್ಡು ಕೊಡುತ್ತಾರೋ ಅವರನ್ನೇ ಎಮ್ಮೆಲ್ಲೆ ಅಂತ ಅನೌನ್ಸ್‌ ಮಾಡಿ, ಆ ದುಡ್ಡನ್ನು ಮತದಾರರಿಗೆ ಸಮಾನವಾಗಿ ಹಂಚಿಬಿಡಬಹುದಲ್ಲ’ ನಕ್ಕ ವಿಜಿ. 

‘ನನ್ನ ಹತ್ತಿರ ಮತ್ತೊಂದು ಐಡಿಯಾ ಇದೆ’. 

‘ಏನದು?’ 

‘ಎಲೆಕ್ಷನ್ನು, ದುಡ್ಡು ಅಂತೆಲ್ಲ ತಲೆಕೆಡಿಸಿಕೊಳ್ಳೋ ಬದಲು, ಈ ಕ್ಷೇತ್ರದ ಎಮ್ಮೆಲ್ಲೆ ಇಂಥವರು ಅಂತ ವಿಧಾನಸಭೆಯ ದಾಖಲೆಗಳಲ್ಲೇ ಶಾಶ್ವತವಾಗಿ ಹೆಸರು ಬರೆಸಿಬಿಡಬಹುದಲ್ಲ... ಇದಕ್ಕೆ ನೀನೇನಂತೀಯ?’ 

‘ಜೈ ಪ್ರಜಾಪ್ರಭುತ್ವ ಅಂತೀನಿ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.