ADVERTISEMENT

ಚುರುಮುರಿ | ಎಲ್ಲಿದೆ ಶಕುನದ ಹಕ್ಕಿ?

ಸುಮಂಗಲಾ
Published 26 ನವೆಂಬರ್ 2023, 18:45 IST
Last Updated 26 ನವೆಂಬರ್ 2023, 18:45 IST
–
   

ಬೆಳಿಗ್ಗೆ ಬೇಂದ್ರೆಯವರ ‘ಶುಭ ನುಡಿಯೇ ಶಕುನದ ಹಕ್ಕಿ’ ಹಾಡನ್ನು ಗುನುಗುನಿಸುತ್ತಿದ್ದೆ. ಬೆಕ್ಕಣ್ಣ ತಾನೂ ಈ ಹಾಡು ಗುನುಗುತ್ತ ಏನೋ ಕೆಲಸವಿದೆಯೆಂದು ಹೊರಗೆ ಹೋಯಿತು. ಒಂದೇ ನಿಮಿಷದಲ್ಲಿ ಧುಮುಧುಮು
ಗುಡುತ್ತ ಓಡಿಬಂದಿತು. ‘ಇಷ್ಟ್‌ ಬೇಗ ನಿನ್‌ ಕೆಲಸ ಮುಗಿತೇನಲೇ?’ ಎಂದೆ ಅಚ್ಚರಿಯಿಂದ.

‘ನಾ ಹಿಂಗೆ ರಸ್ತೇಲಿ ಹೊಂಟಿದ್ನಾ, ಆ ಮೂಲಿಮನಿ ಅಂಕಲ್ಲು, ಆಂಟಿ ಎದುರಿಗೆ ಬಂದ್ರು. ನನ್‌ ನೋಡಿದವರೇ, ಅಯ್ಯೋ, ಈ ಮನೆಹಾಳು ಬೆಕ್ಕು ಈಗಲೇ ಬರಬೇಕಾ, ಅಪಶಕುನ ಅಂತ ಸಿಟ್ಟಾಗಿ ವದರಿಕೋತ ತಮ್‌ ಮನಿವಳಗೆ ವಾಪಸು ಹೋದ್ರು’ ಎಂದು ಧುಮುಗುಡುತ್ತಲೇ ಹೇಳಿತು.

‘ಅವ್ರು ವಾಪಸು ಹೋದ್ರೆ ಹೋಗಲಿ, ನೀ ನಿನ್‌ ಕೆಲಸಕ್ಕೆ ಹೋಗಬೇಕಿಲ್ಲೋ?’ ಎಂದೆ.

ADVERTISEMENT

‘ನನ್‌ ಮುಖ ನೋಡಿದ್ರೆ ಅವ್ರಿಗೆ ಹೆಂಗೆ ಅಪಶಕುನವೋ ಹಂಗೇ ನಂಗೂ ಅವ್ರ ಮುಖ ನೋಡಿ ಅಪಶಕುನ’ ಎಂದು ಗುರುಗುಟ್ಟಿತು.

‘ಜರಾ ವೈಜ್ಞಾನಿಕ ಚಿಂತನೆ ಬೆಳೆಸ್ಕೊಳಲೇ. ಮುಖ ನೋಡಿದ್ರೆ ಅಪಶಕುನ ಅನ್ನೂದೆಲ್ಲ ಬಿಡು’.

‘ನನಗೇನು ಹೇಳ್ತೀ… ಮದ್ಲು ಆ ಮೂಲಿಮನಿಯವ್ರಿಗೆ ಹೇಳು. ಮೋದಿಮಾಮ ಅಪಶಕುನ ಅಂದನಲ್ಲ ಆ ರಾಹುಲಂಕಲ್‌, ಅಂವಂಗೂ ಹೇಳು’ ಬೆಕ್ಕಣ್ಣ ಗುರ‍್ರೆಂದಿತು.

‘ಭಾರತ್‌ ಜೋಡೊ ಮಾಡಿ, ಜರಾ ಒಳ್ಳೆಬುದ್ಧಿ ಬಂದೈತಿ ಅಂದ್ಕೊಳದ್ರಗೆ ಹಿಂಗೆ ಏನಾದ್ರೂ ಬಾಯಿ ತುರಿಕೆ ಮಾತು ಹೇಳತಾನ ಅಂವಾ. ಎಂದೂ ಸುಧಾರಿಸಂಗಿಲ್ಲೇಳು’ ಎಂದೆ.

‘ಹಂಗೆ ನೋಡಿದರ ಎಲ್ಲಾ ರಾಜಕಾರಣಿಗಳು ಅಪಶಕುನವೇ. ನೀವು ಬಡಪಾಯಿ ಮತದಾರರು ಬ್ಯಾರೆ ದಾರಿಯಿಲ್ಲದೇ ಅವ್ರಿನ್ನ ಆರಿಸಿ ಕಳಿಸತೀರಿ’ ಎಂದು ಲೊಚಗುಟ್ಟಿತು.

‘ಅಭಿವೃದ್ಧಿ ಕುರಿತು ಚರ್ಚೆ, ವಿಶ್ಲೇಷಣೆ ಇಂತಾ ಪದಗಳೇ ಗೊತ್ತಿಲ್ಲದ ರಾಜಕಾರಣಿಗಳ ನಾಲಿಗೆಗೆ ಲಗಾಮು ಹಾಕೂದು ಹೆಂಗೆ?’

‘ಮೊದಲು ಮತದಾರರು ನಿಮ್ಮ ಶಕುನದ ಹಕ್ಕಿಗಳನ್ನು ನೀವೇ ಹುಡುಕಿಕೊಳ್ಳಿ. ಇನ್‌ ಮ್ಯಾಲಾದ್ರೂ ಶಾಣೇರಾಗ್ರಿ!’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.