ಬೆಕ್ಕಣ್ಣ ಭಾನುವಾರವೂ ಬೆಳಗಿನ ಜಾವವೇ ಎದ್ದು ರೆಡಿಯಾಗುತ್ತಿತ್ತು.
‘ನೀನೂ ಎದ್ದು ಲಗೂ ರೆಡಿಯಾಗು. ನನಗೂ ಹಂಗೆ ಬುತ್ತಿ ಮಾಡಿಕೊಡು’ ಎಂದು ಗಡಬಡಿಸಿತು.
‘ಇವತ್ ಭಾನುವಾರ, ರಜಾ…
ಮಲಕ್ಕೊಳಲೇ ಸಾಕು, ಎಲ್ಲಿಗೆ ಹೊಂಟೀ’ ಎಂದು ಬೈದರೆ ಹಿಂದಿನ ದಿನದ ಪೇಪರು ಮುಖಕ್ಕೆ ಹಿಡಿಯಿತು.
‘ನೋಡಿಲ್ಲಿ… ಇನ್ಫೀ ಮೂರ್ತಿ ಅಜ್ಜಾರು ಹೇಳ್ಯಾರೆ… ವಾರಕ್ಕೆ ಎಪ್ಪತ್ತು ಗಂಟೆ ದುಡೀಬಕು, ಆವಾಗ ನಮ್ಮ ದೇಶ ಭಾರತ ಮುಂದೆ ಬರತೈತೆ ಅಂತ. ಅಂದರೆ ದಿನಕ್ಕೆ ಹತ್ತು ತಾಸಿನಂತೆ ವಾರದ ಎಲ್ಲಾ ದಿನನೂ ದುಡಿಬಕು ಅಥವಾ ಹನ್ನೆರಡು ತಾಸಿನಿಂತೆ ವಾರದ ಆರು ದಿನ ದುಡೀಬಕು’ ಎಂದು ಭಾಷಣ ಕಂಠಪಾಠ ಮಾಡಿದವರಂತೆ ಒದರಿತು.
‘ಮಂಗ್ಯಾನಂಥವ್ನೆ… ಅದು ಐಟಿವಳಗ ಕೆಲಸ ಮಾಡೂ ಯುವಜನರಿಗೆ ಹೇಳ್ಯಾರೆ. ನಾನೂ, ನೀನೂ ಐಟಿವಳಗ ಕೆಲಸ ಮಾಡಂಗಿಲ್ಲ, ಹಿಂಗಾಗಿ ನಮಗೆ ಅನ್ವಯ ಆಗಂಗಿಲ್ಲ’ ಎಂದೆ.
‘ಮೂರ್ತಿ ಅಜ್ಜಾರು ಐಟಿ ಮಂದಿ ಅಂದಿದ್ರೂ, ಅದು ಎಲ್ಲಾರಿಗೂ ಅನ್ವಯ ಆಗತೈತಿ. ಎಲ್ಲರೂ ಹಂಗ ದುಡಿದ್ರೇನೆ ನಮ್ಮ ದೇಶ ಮುಂದೆ ಬರತೈತಿ’.
‘ಮೊದಲೇ ಐಟಿವಳಗ ದುಡಿಯೋ ಹೆಣ್ಮಕ್ಕಳ ಸಂಖ್ಯೆ ಕಡಿಮೆ ಐತಿ, ಇನ್ ವಾರಕ್ಕೆ ಎಪ್ಪತ್ತು ತಾಸು ದುಡೀರಿ ಅಂದ್ರ ಹೆಣ್ಮಕ್ಕಳು ಐಟಿ ಕೆಲಸ ಬಿಟ್ಟು ಮನಿವಳಗ ಕುಂದ್ರೂ ಪರಿಸ್ಥಿತಿ ಬರತೈತಿ. ಹಂಗ ನೋಡಿದರೆ ನಮ್ಮ ರೈತರು ಎಪ್ಪತ್ತು ತಾಸಿಗಿಂತ ಹೆಚ್ಚೇ ದುಡಿತಾರ. ಮತ್ತ ಎದಕ್ಕ ಅವರೂ ಮುಂದೆ ಬರಂಗಿಲ್ಲ, ದೇಶನೂ ಮುಂದೆ ಬರಂಗಿಲ್ಲ?’
‘ಹೆಣ್ಣು ಮಕ್ಕಳು ಮನಿವಳಗೆ, ಮನಿ ಹೊರಗೆ ದುಡಿಯದು, ರೈತರು ಹೊಲದೊಳಗೆ ದುಡಿಯದು, ಅದೆಲ್ಲ ಬ್ಯಾರೆ ವಿಷಯ. ನೀ ಇದ್ರ ಜೊತಿಗಿ ಅವನ್ನ ಸೇರಿಸಬ್ಯಾಡ. ಯುವಜನರು ವಾರಕ್ಕ ಎಪ್ಪತ್ತು ತಾಸು ದುಡಿದರೆ ದೇಶ ಉದ್ಧಾರ ಆಗತೈತೆ ಅಂತಷ್ಟೇ ಹೇಳ್ಯಾರವರು’ ಎನ್ನುತ್ತ ಬೆಕ್ಕಣ್ಣ ಮೂರ್ತಿ ಅಜ್ಜಾರ ಪರವಾಗಿ ವಾದ ಮಂಡಿಸಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.