‘ಅಂತೂ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಬಂದುವಪ, ಕನ್ನಡಕ್ಕೂ ಒಂದು ಬಂದಿದ್ರೆ ಬಾಳ ಖುಷಿ ಆಗ್ತಿತ್ತು’ ಎಂದ ದುಬ್ಬೀರ.
‘ಇವತ್ತಿಲ್ಲ ನಾಳೆ ಬರ್ತತಿ ಬಿಡಲೆ’ ಎಂದ ಗುಡ್ಡೆ, ‘ಅಲ್ಲ, ಪ್ರಶಸ್ತಿ ತಗಂಡ ಸಿನಿಮಾಗಳು ಥೇಟರ್‌ಗೇ ಬರಲ್ಲಪ, ಟೀವ್ಯಾಗೆ ಯಾವಾಗ್ಲೋ ಒಂದ್ಸಲ ಹಾಕ್ತಾರೆ, ಅರ್ಥನೇ ಆಗಲ್ಲ’ ಎಂದ.
‘ಪ್ರಶಸ್ತಿ ಅಂದ್ರೆ ಅದೇ ಕಣಲೆ, ಅರ್ಥ ಆಗದಿರೋವಕ್ಕೇ ಕೊಡೋದು’ ಕೊಟ್ರೇಶಿ ನಕ್ಕ.
‘ಏಯ್, ಆಸ್ಕರ್ ಅಂದ್ರೆ ಏನಂತ ತಿಳಿದಿದಿ? ಅಲ್ಲಿ ಪ್ರಶಸ್ತಿ ತಗಳ್ಳಾದು ಹುಡುಗಾಟಿಕಿ ಅಲ್ಲ’ ದುಬ್ಬೀರನಿಗೆ ಸಿಟ್ಟು ಬಂತು.
‘ಆತಪ, ಆಸ್ಕರ್ ಅಂತ ಯಾಕಂತಾರೆ? ಏನರ್ಥ ಹೇಳು ನೋಡಾಣ’ ಗುಡ್ಡೆ ಸವಾಲು ಹಾಕಿದ.
‘ಅದೂ... ಗೊತ್ತಿಲ್ಲ’ ದುಬ್ಬೀರ ತಡವರಿಸಿದ.
‘ನಿಮಿಗ್ಯಾರಿಗಾದ್ರು ಗೊತ್ತೇನ್ರಲೆ’ ಗುಡ್ಡೆ ಎಲ್ಲರನ್ನೂ ಕೇಳಿದ. ಯಾರೂ ಪಿಟಿಕ್ಕನ್ನಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ತೆಪರೇಸಿ ‘ಇಂಗ್ಲೀಷಲ್ಲಿ ಆಸ್ಕ್ ಅಂದ್ರೆ ಕೇಳು ಅಂತ. ಆಸ್ಕರ್ ಅಂದ್ರೆ ಕೇಳೋರು ಅಂತ ಆಗುತ್ತೆ... ಸರೀನಾ?’ ಎಂದ.
‘ಓ... ಅಂದ್ರೇ ಇದು ಕೇಳೋರಿಗೆ ಕೊಡೋ ಪ್ರಶಸ್ತಿ ಅಂತಾನಾ? ಹಂಗಾದ್ರೆ ಈ ಪ್ರಶಸ್ತೀನ ತೆಪರೇಸಿ ಹೆಂಡ್ತಿಗೇ ಕೊಡಬೇಕು’ ಎಂದ ಕೊಟ್ರೇಶಿ ನಗುತ್ತ.
‘ಯಾಕೆ?’
‘ಯಾಕೇಂದ್ರೆ ಪ್ರಶ್ನೆ ಜಾಸ್ತಿ ಕೇಳ್ತಾಳಲ್ಲ... ಎಲ್ಲಿದೀರಿ, ಏನ್ ಮಾಡ್ತಿದೀರಿ, ಯಾಕ್ ಲೇಟು, ಜತಿಗೆ ಯಾರದಾರೆ, ಫೋನ್ ಯಾಕೆ ಬ್ಯುಸಿ ಬರ್ತಿತ್ತು... ಬರೀ ಕೇಳೋದೇ...’
‘ಲೇ ಕೊಟ್ರ, ಎಲ್ಲ ಹೆಂಡ್ತೀರೂ ಗಂಡಂದಿರನ್ನ ಹಂಗೇ ಕೇಳೋದು. ಅದ್ಕೆ ಆಸ್ಕರ್ ಪ್ರಶಸ್ತಿ ಕೊಡೋಕಾಗುತ್ತಾ?’
‘ಕೊಟ್ರಾತು, ಹೆಂಡ್ತಿಯರಿಗೆ ಆಸ್ಕರ್ ಪ್ರಶಸ್ತಿ, ಗಂಡಂದಿರಿಗೆ ಟೆಲ್ಲರ್ ಪ್ರಶಸ್ತಿ...!’
‘ಟೆಲ್ಲರ್ ಪ್ರಶಸ್ತಿನಾ? ಅಂದ್ರೆ?’
‘ಹೆಂಡ್ತೀರು ಕೇಳಿದ್ದಕ್ಕೆಲ್ಲ ಗಂಡಂದಿರು ಉತ್ತರ ಹೇಳ್ಬೇಕಲ್ಲ, ಅದ್ಕೆ ಅವರಿಗೆ ಟೆಲ್ಲರ್ ಪ್ರಶಸ್ತಿ!’
ಕೊಟ್ರೇಶಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.