ADVERTISEMENT

ಚುರುಮುರಿ | ಶುಭ ಮುನ್ನುಡಿ

ಕೆ.ವಿ.ರಾಜಲಕ್ಷ್ಮಿ
Published 17 ಮಾರ್ಚ್ 2023, 20:50 IST
Last Updated 17 ಮಾರ್ಚ್ 2023, 20:50 IST
   

‘ಹೆಣ್ಮಕ್ಳು ಸ್ಟ್ರಾಂಗ್ ಅಂತ ಜ್ಞಾಪಿಸ್ತಾನೆ ಇರ್ಬೇಕು. ದಿ ಎಲಿಫೆಂಟ್ ವಿಸ್ಪರರ್ಸ್ ಕೊನೆಗೂ ಆಸ್ಕರ್ ಪ್ರಶಸ್ತಿ ಗಿಟ್ಟಿಸಿತು’ ನನ್ನವಳು ಕಣ್ಣರಳಿಸಿದಳು.

‘ಮತ್ತೆ ನಮ್ಮ ದೀಪಿಕಾ, ಎಷ್ಟು ಸ್ಮಾರ್ಟ್ ಆಗಿದ್ರು, ಡು ಯು ನೋ ನಾಟು? ಬಿಕಾಸ್, ಇಫ್ ಯು ಡೋಂಟ್, ಯು ಆರ್ ಅಬೌಟ್ ಟು’ ಅಂತ ಇಂಡಿಯನ್ ಆ್ಯಕ್ಸೆಂಟ್‌ನಲ್ಲೇ ನಾಟು ನಾಟು ಪರಿಚಯಿಸಿದ್ದು ಮೆಚ್ಕೊಬೇಕಲ್ವೇನಪ್ಪಾ?’ ಎಂದು ಪುಟ್ಟಿ ಕೇಳಿದಳು.

‘ಹ್ಞೂಂ, ಆ ಇಂಗ್ಲಿಷ್ ನಮಗೆ ಸುಲಭವಾಗಿ ಅರ್ಥವಾಗುತ್ತೆ’ ಎನ್ನುತ್ತಾ ತಲೆಯಾಡಿಸಿದೆ.

ADVERTISEMENT

‘ಎವ್ರಿತಿಂಗ್‌ ಎವ್ರಿವೇರ್ ಆಲ್ ಅಟ್ ಒನ್ಸ್’ ಗೊಣಗುತ್ತಾ ಕೊಠಡಿ ಓರಣಕ್ಕೆ ತೊಡಗಿದಳು ನನ್ನವಳು.

‘ಆ ಚಿತ್ರಕ್ಕೆ ಏಳು ಪ್ರಶಸ್ತಿ ಬಂದಿದೆ’ ನಾನು ಗಟ್ಟಿಯಾಗಿ ಹೇಳಿದೆ, ಅವಳ ಸಿಡುಕಿಗೆ ಕಾರಣ ತಿಳಿಯದೆ.

‘ನಾನು ಹೇಳಿದ್ದು ಕೆಲಸದ ನಿಂಗಿ ಇನ್ನೂ ಎರಡು ದಿನ ಬರೋಲ್ಲ, ಮುಸುರೆ ಪಾತ್ರೆ, ಬಟ್ಟೆ, ಕಸ... ಎಲ್ಲವೂ ಎಲ್ಲೆಲ್ಲೂ ಓಡಾಡ್ತಿವೆ ಒಂದೇ ಸಮಯಕ್ಕೆ, ನಾನೊಬ್ಬಳೇ ಮಾಡೋಕ್ಕಾಗೊಲ್ಲ, ಯಾರಾದ್ರೂ ಕೈ ಹಾಕ್ಬಾರ್ದಾ?’

‘ಯಾರಾದ್ರೂ’ ಅನ್ನೋ ಪದ ಸೂಚ್ಯವಾಗಿ ನನ್ನತ್ತಲೇ ಬೊಟ್ಟು ಮಾಡಿದ್ದನ್ನು ಗ್ರಹಿಸಿದೆ.

‘ನಿಂಗಿ ಇತ್ತೀಚೆಗೆ ತಪ್ಪಿಸಿಕೊಳ್ತಿದ್ದಾಳೆ’ ಸ್ವಲ್ಪ ಖಾರ ಉಗುಳಿದೆ.

‘ಚುನಾವಣೆ ಸಮಯ, ಒಂದಷ್ಟು ಉಡುಗೊರೆಗಳು ಸಿಗುತ್ವೆ, ಈಗಾಗಲೇ ಸೀರೆ, ಬೆಡ್‌ಶೀಟು, ಕುಕ್ಕರ್, ಡಿನ್ನರ್‌ಸೆಟ್ ಕಲೆಕ್ಟ್ ಆಗಿವೆಯಂತೆ. ಗಾಳಿ ಬಂದಾಗ ತೂರಿಕೋ ಅನ್ನೋ ಹಾಗೆ, ಬಗಲಿಗೆ ಬಂದಾಗ ಬಾಚ್ಕೊಬೇಕು, ಬೇರೆ ಏನೂ ನಿರೀಕ್ಷೆ ಮಾಡೋಕ್ಕಾಗೊಲ್ವಲ್ಲ? ಈ ಸಲ ಯುಗಾದಿ ಹಬ್ಬದ ಸಮೀಪಕ್ಕೆ ಸಿಕ್ಕಿರುವುದು ಇನ್ನೂ ವಿಶೇಷ’ ಅತ್ತೆಯ ಅನುಭವದ ಮಾತು.

‘ಇದರಿಂದ ನಮಗೂ ಉಳಿತಾಯ, ಹಬ್ಬಕ್ಕೆ ನಾವು ಹೊಸ ಸೀರೆ ಕೊಡ್ಬೇಕಿಲ್ಲ, ಆ ಬಾಬ್ತು ಸೇರಿ ಒಂದು ಸೀರೆ ಎಕ್ಸ್‌ಟ್ರಾ ನಮಗೇ ಸಿಗುತ್ತೆ, ಏನಂತೀರಿ?’

‘ಶುಭಕೃತ್ ಸಂವತ್ಸರ, ಶುಭ ಮುನ್ನುಡಿ, ವರ್ಷವಿಡೀ ಚೆನ್ನಾಗಿರುತ್ತೆ ಬಿಡು’ ಅತ್ತೆ ಹಸಿರು ನಿಶಾನೆ ತೋರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.