ADVERTISEMENT

ಜೋಡೆತ್ತಿನ ಉಳುಮೆ

ಡಾ.ಬಿ.ಎಲ್.ವೇಣು
Published 27 ಮಾರ್ಚ್ 2019, 19:32 IST
Last Updated 27 ಮಾರ್ಚ್ 2019, 19:32 IST
   

ಹನುಮಂತಿ ಆಳೆತ್ತರದ ಎರಡು ಭಾರಿ ಎತ್ತುಗಳನ್ನು ನಾಯಕನಹಟ್ಟಿ ಜಾತ್ರೆಯಲ್ಲಿ ಕೊಂಡು ತಂದು ಮನೆ ಮುಂದೆ ನಿಲ್ಲಿಸಿದಾಗ ಸುತ್ತಮುತ್ತಲಿನ ಜನ ಮುತ್ತಿಕೊಂಡರು. ಜೋಡೆತ್ತುಗಳ ಮಾರಾಟ ಮಾಡಿದವನು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ, ಕೊಡಣಸು ಹಾಕಿ, ಕಾಲುಗಳಿಗೆ ಬಣ್ಣದ ಗೆಜ್ಜೆ ಕಟ್ಟಿ, ಶಾಲು ಹೊದ್ದಿಸಿ ಭರ್ಜರಿ ಅಲಂಕಾರ ಮಾಡಿದ್ದ. ಅದನ್ನು ನೋಡಿದವರು ಕೊಂಡಾಡಿದರೆ, ರಾಮಜ್ಜ ಕೊಕ್ಕನೆ ನಕ್ಕು ‘ಇವೇನ್ಲಾ! ಕೋಲೆಬಸವ ಇದ್ದಂಗವೆ? ಇವೇನ್ ಉಳುಮೆ ಮಾಡ್ಯಾವ್ಲಾ?’ ಅಂದ.

‘ಇವು ಅಂಥಿಂಥ ಎತ್ತುಗಳಲ್ರಪಾ, ನಾ ಹೇಳ್ದಂಗೆ ಕೇಳ್ತವೆ... ಗೊತ್ತಾ’ ಅಂದವನೆ, ಎದುರ್ನಾಗೆ ನಿಂತ್ಕಂಡು ‘ಬೈಠ್ ಬೈಠ್’ ಎಂದು
ಅರಚಿದ ಹನುಮಂತಿ. ಆರಾಮಾಗಿ ಕುತ್ಕಂಡ್ವು. ‘ಉಠೋ ಉಠೋ’ ಅನ್ನುತ್ಲೆ ಮೇಲೆದ್ದವು. ‘ಇವನ್ನೇನು ಜುಜುಬಿ ಅನ್ಕಂಡ್ರಾ? ಹಿಂದಿ ಪಿಕ್ಚರ್ನಾಗೆಲ್ಲಾ ಪಾಲ್ಟು ಮಾಡ್ಸವ್ರಲಾ’ ಎಂದು ಹನುಮಂತಿ ತಾರೀಫ್ ಮಾಡಿದ. ಎದುರ್ನಾಗಿರೋ ಗುಡಿ ತೋರ‍್ಸಿ, ‘ಟೆಂಪಲ್ ರನ್’ ಅಂದ. ಗುಡಿ ಸುತ್ತಿದವು. ‘ಸಿನಿಮಾದ್ಯಾಗೆ ಪಾಲ್ಟು ಮಾಡೋವೆಲ್ಲಾ ಹೊಲ ಉತ್ತಾವಾ?’ ಜನ ಆಡಿಕೊಂಡರು. ಹನುಮಂತಿ ಹೆಂಡ್ರು ಮೊರದ ತುಂಬಾ ಅಕ್ಕಿ, ಅಚ್ಚುಬೆಲ್ಲ ತಂದು ಮಡಗುತ್ಲು ಸೊರಬರ ಅಂತ ಖಾಲಿ ಮಾಡಿ, ಎರಡು ಬಕೀಟು ನೀರು ಹೀರಿದವು. ಜನ ಒಬ್ಬರ ಮಾರಿ ಒಬ್ಬರು ನೋಡಿಕೊಂಡ್ರು.

ಮರುದಿನ ಹನುಮಂತಿ ಹೊಲಕ್ಕೆ ಹೊಡ್ಕೊಂಡು ಹೋಗಿ ನೊಗ ಹೆಗಲಿಗೇರಿಸಿ ಕುಂಟೆ ಹೊಡೆವ ಸರ್ಕಸ್ ಮಾಡಿದ. ಅವೆಲ್ಲೋ ಅವನೆಲ್ಲೋ! ಎಳೆದಾಡಿ ಕುಸ್ತಿಗೆ ಬಿದ್ದ. ಬಿಸಿಲೇರಿತು. ಮುದ್ದು ಮಾಡಿದ. ಬಾರ್‍ಕೋಲಿನಿಂದ ಬಾರಿಸಿ ಸುಸ್ತಾಗಿ ಎತ್ತುಗಳನ್ನು ಮರದ ನೆರಳಿಗೆ ಕಟ್ಟಿ, ನಿದ್ದೆಗೆ ಜಾರಿದ. ಯಾರೋ ಲಬಲಬನೆ ಮಾಡಿದ ಗದ್ದಲಕ್ಕೆ ಧಿಗ್ಗನೆದ್ದ. ‘ಅಲೆ ಭಾಡ್ಕಾವ್, ನಮ್ಮ ಹೊಲದಾಗೆ ನುಗ್ಗಿ ತೊಗರಿ ಗಿಡನೆಲ್ಲಾ ಜಾಮ್ ತೆಗಿತಿದಾವಲ್ಲಲೆ, ಎಳ್ಕೊಂಡು ಹೋಗ್ ಬಾರಾ’ ಅಂತ ಗದ್ದಲ ಮಾಡಿದರು. ಕಣ್ಣುಜ್ಜುತ್ತಾ ಎದ್ದು, ಅವನ್ನು ಹಿಡಿದು ತರುವುದರೊಳಗೆ ಹನುಮಂತಿ ಹೆಣ ಬಿದ್ದಂಗಾತು!

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.