ADVERTISEMENT

ಚರ್ಚೆ | ಮೋದಿ ಸರ್ಕಾರ ಇಲ್ಲದಿದ್ದರೆ ಸಿನಿಮಾ ಬಿಡುಗಡೆಯೇ ಆಗುತ್ತಿರಲಿಲ್ಲ

‘ದಿ ಕಾಶ್ಮೀರ್‌ ಫೈಲ್ಸ್‌’ ಸಿನಿಮಾಕ್ಕೆ ಸರ್ಕಾರ ಉತ್ತೇಜನ, ಪ್ರೋತ್ಸಾಹ ನೀಡುವುದು ಸರಿಯೇ?

ಪ್ರಕಾಶ್‌ ಬೆಳವಾಡಿ
Published 18 ಮಾರ್ಚ್ 2022, 19:32 IST
Last Updated 18 ಮಾರ್ಚ್ 2022, 19:32 IST
ಒಳಚಿತ್ರದಲ್ಲಿ ಪ್ರಕಾಶ್‌ ಬೆಳವಾಡಿ
ಒಳಚಿತ್ರದಲ್ಲಿ ಪ್ರಕಾಶ್‌ ಬೆಳವಾಡಿ   

ಚಿತ್ರಕಥೆಯಲ್ಲಿ ನಿರ್ದೇಶಕರು ಹೇಗೆ ಕಟ್ಟಿದ್ದಾರೆ, ಏನು ಬಿಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಅವರೇ ಕೊಟ್ಟರೆ ಸರಿ. ಆದರೆ, ನಾನು ಒಂದು ಸಂವಾದದಲ್ಲಿ ಸಿನಿಮಾ ನೋಡಿ ಬಂದ ಕೆಲವು ಪ್ರೇಕ್ಷಕರ ಮುಂದೆ ನನ್ನದೊಂದು ಪ್ರಶ್ನೆಯಿಟ್ಟೆ: ‘ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಇಲ್ಲದಿದ್ದರೆ, ಈ ಚಲನಚಿತ್ರ ಬಿಡುಗಡೆ ಕಾಣುವ ಸಾಧ್ಯತೆ ಇತ್ತೆ’ ಎಂದೆ. ಅಲ್ಲಿ ಸೇರಿದ್ದ ಸುಮಾರು 100-150 ಮಂದಿ ‘ಸಾಧ್ಯವೇ ಇಲ್ಲ!’ ಎಂದು ಕೂಗಿದರು. ನನ್ನನ್ನು ‘ಮೋದಿ ಚಮಚ’ ಎಂದರೂ ಸರಿ, ನನ್ನ ಅಭಿಪ್ರಾಯವೂ ಅದೇ ಆಗಿದೆ.

***

1990ರಜನವರಿಯಲ್ಲಿ ‘ಸಂಡೇ’ ವಾರಪತ್ರಿಕೆಗೆ ಬೆಂಗಳೂರು ಕರೆಸ್ಪಾಂಡೆಂಟ್ ಆಗಿದ್ದ ನಾನು ಆಗಷ್ಟೆ ರಾಜೀನಾಮೆ ಕೊಟ್ಟು ಹೊರಗೆ ಬರುವ ನಿರ್ಧಾರ ಮಾಡಿದ್ದೆ. ಆ ಚಳಿಗಾಲದ ತಿಂಗಳಲ್ಲಾಗಲಿ ಅಥವಾ ಮುಂದೆ ನಾನು ಬೆಂಗಳೂರು ಮತ್ತು ದೆಹಲಿಯಲ್ಲಿ ಕೆಲಸ ಮಾಡಿದ ಏಷಿಯನ್ ಏಜ್ ಪತ್ರಿಕೆಯ ದಿನಗಳಲ್ಲಾಗಲಿ, ಬರೆದ ಅಂಕಣಗಳಲ್ಲಿ, ಪತ್ರಕರ್ತ ಬಂಧುಗಳ ಜೊತೆ ಮಾತು ಹರಟೆಯಲ್ಲಿ ಎಂದೂ ಕಾಶ್ಮೀರದ ಬಗ್ಗೆ ಪ್ರಸ್ತಾಪ ಮಾಡಿದ್ದು ನನಗೆ ನೆನಪಿಲ್ಲ. ಅವರು ಯಾರೂ ವಿಷಯದತ್ತ ಗಮನ ಹರಿಸಿದ್ದೂ ನೆನಪಿಲ್ಲ.

ADVERTISEMENT

ಈಗ ವಿವೇಕ್ ಅಗ್ನಿಹೋತ್ರಿಯವರ ‘ದ ಕಾಶ್ಮೀರ್ ಫೈಲ್ಸ್’ ಚಿತ್ರ ಬಿಡುಗಡೆ ಕಂಡ ಒಂದು ವಾರದಲ್ಲಿ ಅದರ ಬಗ್ಗೆ ಬಿಡುವಿಲ್ಲದ ಚರ್ಚೆಯಾಗಿದೆ. ಚಿತ್ರದಲ್ಲಿ ನಾನು ಒಂದು ಪಾತ್ರದಲ್ಲಿ ಅಭಿನಯಿಸಿರುವ ಕಾರಣ ಹಲವು ಚರ್ಚೆಗಳಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆಗೆ ಒಳಗಾಗಿದ್ದೇನೆ. ಜನಪ್ರಿಯವಾಗಿಯೂ ಹಲವು ವಿವಾದಗಳಿಗೆ ಪ್ರಶ್ನೆಗಳಿಗೆ ಕಾರಣವಾಗಿರುವ ಈ ಚಿತ್ರ ನಮ್ಮನ್ನು ಸ್ವಲ್ಪ ದಿನಗಳ ಮಟ್ಟಿಗಾದರೂ ಕಾಡುವುದಂತೂ ಖಂಡಿತ ಎನಿಸುತ್ತದೆ.

ನಮ್ಮ ಮುಂದೆ ಇರುವ ಪ್ರಶ್ನೆಗಳು ಒಟ್ಟು ಹೇಳಬಹುದಾದರೆ ಈ ರೀತಿಯವು: 1) ಇದು ಮುಚ್ಚಿಟ್ಟ ಸತ್ಯವೆ, ಅಥವ ಸುಳ್ಳೆ? 2) ಮುಚ್ಚಿಟ್ಟವರು ಯಾರು? 3) ತಪ್ಪಿತಸ್ಥರು ಯಾರುಯಾರು? 4) ಅಗ್ನಿಹೋತ್ರಿಯವರು ಸತ್ಯ ಸಂಗತಿಗಳನ್ನು ತಮ್ಮ ಸಿನಿಮಾ ಕಥೆಯನ್ನು ಕಟ್ಟುವುದಕ್ಕಾಗಿ ಕೆಲವನ್ನು ಇಟ್ಟುಕೊಂಡು, ಕೆಲವು ತಿರುಚಿ, ಕೆಲುವನ್ನು ಬಿಟ್ಟು ಮಾಡಿದ್ದಾರೆಯೆ? 5) ಕೋಮುಗಳ ಮಧ್ಯೆ ಇರುವ ಒಡಕುಗಳನ್ನು ಹೆಚ್ಚಿಸುತ್ತಿರುವ ಈ ಚಿತ್ರವನ್ನು ತಯಾರಿಸುವ ಅಗತ್ಯವಿತ್ತೆ? 6) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾರ್ವಜನಿಕವಾಗಿ ಈ ಚಿತ್ರವನ್ನು ಮೆಚ್ಚುವುದು, ಬೆಂಬಲಿಸುವುದು ಮತ್ತು ರಾಜ್ಯ ಸರ್ಕಾರಗಳು ಅದಕ್ಕೆ ತೆರಿಗೆ ವಿನಾಯತಿಯನ್ನು ಘೋಷಿಸುವುದು ಪಕ್ಷಪಾತ ಮಾಡಿದಂತೆ ಅಲ್ಲವೆ?

ಮೊದಲಿಗೆ, 1985ರ ನಂತರ ಕಾಶ್ಮೀರದಿಂದ ಭಯೋತ್ಪಾದನೆ ಮತ್ತು ಹಿಂಸೆಗೆ ಹೆದರಿ ಕಾಶ್ಮೀರದ ಪಂಡಿತರು ಹೆಚ್ಚಾಗಿ, ಜೊತೆಗೆ ಇತರ ಹಲವು ಜನಾಂಗದವರೂ ಕೂಡಿ ಗುಳೆ ಹೊರಟದ್ದು ನಿಜ. ಇಲ್ಲ ಎಂದು ಯಾರೂ ಹೇಳುತ್ತಿಲ್ಲ. ತಮ್ಮ ರಾಷ್ಟ್ರದಲ್ಲೇ ನಿರಾಶ್ರಿತರಾದ ಇವರಿಗೆ ಜಮ್ಮು ಮತ್ತು ದೆಹಲಿಯಲ್ಲಿಯ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಒದಗಿಸಿರುವುದೂ ನಿಜ.

ಎಷ್ಟು ಜನ ಹಿಂಸೆಗೆ ಬಲಿಯಾದರೊ, ಗುಳೆ ಹೊರಟರೊ, ಈ ಕೊಳಕು ಶಿಬಿರಗಳಲ್ಲಿ ತಡೆಯಲಾಗದ ಬಿಸಿಲಿಗೆ, ಕಾಯಿಲೆಗಳಿಗೆ ಬಲಿಯಾದರೊ ಸ್ಪಷ್ಟವಾಗಿ ಗೊತ್ತಿಲ್ಲ. ದಾಖಲೆಗಳ ಕೊರತೆ ಏನೇ ಇರಲಿ, ಕಾಶ್ಮೀರದಲ್ಲಿ ಈಗ ಉಳಿದಿರುವ ಕಾಶ್ಮೀರಿ ಪಂಡಿತರ ಸಂಖ್ಯೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಕಾಲದಲ್ಲಿ ಇದ್ದವರ ಸಂಖ್ಯೆಗೆ ಹೋಲಿಸಿದರೆ, ಲಕ್ಷಾಂತರ ಜನ ಪಂಡಿತರು ಮತ್ತು ಸಣ್ಣ ಸಣ್ಣ ಪ್ರಮಾಣದಲ್ಲಿ ಬೇರೆ ಜನಾಂಗಗಳ ನಿರಾಶ್ರಿತರು ಅಲ್ಲಿಂದ ಓಡಿಹೋಗಿದ್ದನ್ನು ಒಪ್ಪಲೇಬೇಕು.

ಚಿತ್ರಕಥೆಯಲ್ಲಿ ನಿರ್ದೇಶಕರು ಹೇಗೆ ಕಟ್ಟಿದ್ದಾರೆ, ಏನು ಬಿಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಅವರೇ ಕೊಟ್ಟರೆ ಸರಿ. ಆದರೆ, ನಾನು ಒಂದು ಸಂವಾದದಲ್ಲಿ ಸಿನಿಮಾ ನೋಡಿ ಬಂದ ಕೆಲವು ಪ್ರೇಕ್ಷಕರ ಮುಂದೆ ನನ್ನದೊಂದು ಪ್ರಶ್ನೆಯಿಟ್ಟೆ: ‘ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಇಲ್ಲದಿದ್ದರೆ, ಈ ಚಲನಚಿತ್ರ ಬಿಡುಗಡೆ ಕಾಣುವ ಸಾಧ್ಯತೆ ಇತ್ತೆ’ ಎಂದೆ. ಅಲ್ಲಿ ಸೇರಿದ್ದ 100-150 ಮಂದಿ ‘ಸಾಧ್ಯವೇ ಇಲ್ಲ!’ ಎಂದರು. ನನ್ನನ್ನು ‘ಮೋದಿ ಚಮಚ’ ಎಂದರೂ ಸರಿ, ನನ್ನ ಅಭಿಪ್ರಾಯವೂ ಅದೇ ಆಗಿದೆ.

ಈ ಚಲನಚಿತ್ರವನ್ನು ‘ಪ್ರೊಪಗಾಂಡ’ ಅನ್ನುವವರಿಗೆ ಇನ್ನೊಂದು ಪ್ರಶ್ನೆ ಕೇಳುತ್ತೇನೆ. ಹಿಂದೆ ಐವತ್ತು ಅರವತ್ತು ವರ್ಷಗಳಿಗೂ ಹೆಚ್ಚು ಆಡಳಿತದಲ್ಲಿದ್ದ ಪಕ್ಷಗಳ ರಾಜಕೀಯ ಮತ್ತು ಸಾಮಾಜಿಕ ಕಲ್ಪನೆಗಳಿಗೆ ಒಪ್ಪುವ ಚಲನಚಿತ್ರಗಳನ್ನು ನಿರ್ದೇಶಕರು ತಯಾರಿಸಿದಾಗ, ಜನ ಅವನ್ನು ನೋಡಲಿ ಬಿಡಲಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರಗಳು ಸೋವಿಯತ್ ಶೈಲಿಯ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಚಿಸಿ ಅವರಿಂದ ಇಂಥ ನಿರ್ದೇಶಕರಿಗೆ ಪ್ರಶಸ್ತಿ ಕೊಡಿಸಿಲ್ಲವೆ? ತಮ್ಮ ಏಕಸ್ವಾಮ್ಯ ಮತ್ತು ನಿಯಂತ್ರಣದಲ್ಲಿದ್ದ ದೂರದರ್ಶನದಲ್ಲಿ ಈ ಚಿತ್ರಗಳಿಗೆ ಪ್ರದರ್ಶನ ಕಾಣುವ ಅವಕಾಶ ಮಾಡಿಕೊಟ್ಟದ್ದೂ ನಿಜ. ಇದು ಸರಿಯೊ ತಪ್ಪೋ ಬಿಡಿ, ಆದರೆ ಇದು ‘ಪ್ರೊಪಗಾಂಡ’ ಎಂಬ ಪದಕ್ಕೆ ಸರಿಯಾಗಿ ಒದಗುವ ಕೆಲಸ. ಆಸಕ್ತ ವೀಕ್ಷಕರಿಂದ ದುಡ್ಡು ಪಡೆದು ಹೌಸ್‌ಫುಲ್ ಆಗುತ್ತಿರುವ ಚಿತ್ರಕ್ಕೆ ಇದು ಅನ್ವಯಿಸುವುದಿಲ್ಲ. ಅಲ್ಲದೆ ಹಿಂದಿನ ಸರ್ಕಾರಗಳು ಈ ಚಿತ್ರ ಬಿಡುಗಡೆ ಕಾಣಲು ಸುಲಭವಾಗಿ ಅವಕಾಶ ಮಾಡಿಕೊತ್ತಿರಲಿಲ್ಲ ಎನ್ನುವುದಾದರೆ, ಎಲ್ಲರಿಗೂ ಒದಗಬೇಕಾದ ಜವಾಬ್ದಾರಿ ಇರಬೇಕಾದ ಸರ್ಕಾರಗಳಲ್ಲಿಯೇ ಇಲ್ಲದ ಉದಾರ ಮಾನವತವಾದ, ವಿಷಯನಿಷ್ಠವಾದ ಪರಿಕಲ್ಪನೆಯುಳ್ಳ ಒಂದು ಚಲನಚಿತ್ರದಲ್ಲಿ ಸಿಗಬೇಕು ಎನ್ನುವುದು ಸೋಗಲಾಡಿತನವಷ್ಟೆ.

ಕಡೆಯದಾಗಿ, ಇದನ್ನು ಹೀಗೆ ರಾಜಾರೋಷವಾಗಿ ಮೋದಿಯವರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸರ್ಕಾರಗಳು ಬೆಂಬಲಿಸುವುದು ಸರಿಯೆ? ಇದು ನನ್ನನ್ನು ಮುಜುಗರಕ್ಕೆ ಒಡ್ಡುವ ಸವಾಲು. ಕೋಮು ವಿವಾದಗಳಿಗೆ ನೆಲೆಯೊದಗಿಸುವ ಅಪಾಯ ಎದುರಾದಾಗ, ಆಡಳಿತದಲ್ಲಿದ್ದವರು ಈ ಚಲನಚಿತ್ರದಿಂದ ದೂರ ಉಳಿಯುವುದು ಸರಿ. ಬೇರೆ ಪಕ್ಷಗಳು ಏನೇ ಹೇಳಿದರೂ, ತಲೆಕೆಟ್ಟ ಟ್ವೀಟ್ ಮಾಡಿದರೂ ‘ಸಬ್ಕಾ ವಿಶ್ವಾಸ್’ ಪರಿಕಲ್ಪನೆಗೆ ಬದ್ಧವಾಗಿ ಇರುವುದು ಸರಿ. ಒಲಿದವರು, ಜೊತೆಗೆ ಒಲಿಯದವರಿಗೂ ಅವರೇ ಪ್ರಧಾನಿ. ಜೊತೆಗೆ ಅವರ ಮುಂದೆ ಇನ್ನೊಂದು ಸವಾಲಿದೆ. ಇದು ಗತಿಸಿಹೋದ ಇತಿಹಾಸವಲ್ಲ.‌ ನಾವು ನೋಡಲು ನಿರಾಕರಿಸಿದ್ದರೂ ನಿರಾಶ್ರಿತರು ಇನ್ನೂ ನಮ್ಮ ಕಣ್ಣ ಮುಂದೆ ಇದ್ದಾರೆ. ಅವರಿಗೆ ತಕ್ಕ ಪರಿಹಾರವನ್ನು ನೀಡಬೇಕಾದ್ದ ಹೊಣೆಗಾರಿಕೆಯನ್ನು ಇಂದಿನ ಕೇಂದ್ರ ಸರ್ಕಾರ ಹೊರಬೇಕಾಗಿದೆ.

ಈ ಸಿನಿಮಾ ‘ಬೇಕಿತ್ತೆ’ ಎನ್ನುವವರಿಗೆ ಇದೇ ಉತ್ತರ. ಅನ್ಯಾಯಕ್ಕೆ ಒಳಗಾಗಿರುವ ಜನ ಎಲ್ಲಿಯವರೆಗೂ ನೋವಿನ ಅನುಭವಕ್ಕೆ ಒಳಗಾಗಿರುವರೊ, ಅಲ್ಲಿಯವರೆಗೂ ಅವರಿಗೆ ಸ್ಪಂದಿಸುವುದು ಪ್ರಸ್ತುತ. ಪರಸ್ಪರ ಸಂಶಯಗಳು, ಸಿಟ್ಟು ಅಸಮಾಧಾನಗಳು ಕೋಮುಗಳ ನಡುವೆ ಇದ್ದರೆ, ಎಲ್ಲರಿಗೂ ಸತ್ಯಾಸತ್ಯೆಗಳ ಬಗ್ಗೆ ಮನದಟ್ಟಾಗುವಂತೆ ಈ ಇತಿಹಾಸದಲ್ಲಿ ತಮ್ಮ ತಮ್ಮ ಪಾಲನ್ನು ಒಪ್ಪಿಕೊಂಡು ಎಲ್ಲಾ ಪಕ್ಷಗಳೂ ಕೂಡಿ ವಿಚಾರಣೆ ನಡೆಸಲಿ, ತಪ್ಪು ಮಾಡಿದವರು ಯಾರುಯಾರು ಎಂದು ತೀರ್ಮಾನಿಸಲಿ, ನೊಂದವರಿಗೆ ಪರಿಹಾರವನ್ನು ರೂಪಿಸಲಿ.

ಲೇಖಕ: ಸಿನಿಮಾ ನಿರ್ದೇಶಕ, ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.