ADVERTISEMENT

ಪ್ರಜಾವಾಣಿ ಚರ್ಚೆ | ಜನರ ಬಾಳಿಗೆ ಗೋಳಾದ ಗೋಹತ್ಯೆ ನಿಷೇಧ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು (ಗೋಹತ್ಯೆ ನಿಷೇಧ ಕಾಯ್ದೆ) ರದ್ದುಪಡಿಸಬೇಕೇ?

ಪ್ರಜಾವಾಣಿ ವಿಶೇಷ
Published 10 ಜೂನ್ 2023, 1:30 IST
Last Updated 10 ಜೂನ್ 2023, 1:30 IST
   

– ಉಮಾಶಂಕರ ಎಚ್.ಡಿ.

ಯಾವುದೇ ಒಂದು ಕಾಯ್ದೆ ಅನುಷ್ಠಾನಕ್ಕೆ ಬರುವ ಮೊದಲು ಅದರ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳನ್ನು ಅವಲೋಕಿಸಬೇಕು. ಜನಪರವಾದ ಕಾಯ್ದೆಗಳ ಅನುಷ್ಠಾನದ ಮೂಲನೆಲೆಯಿದು. ಈಗ ಸದ್ಯಕ್ಕೆ ಮತ್ತೆ ಗೋ ಹತ್ಯೆ ನಿಷೇಧ ಕಾಯ್ದೆ ಕುರಿತಾದ ಚರ್ಚೆ ಮುನ್ನೆಲೆಗೆ ಬಂದಿದೆ. ಗೋವನ್ನು ಸಾಕುವುದು, ಅದರಿಂದ ಸಿಗುವ ಎಲ್ಲ ಅನುಕೂಲಗಳನ್ನು ಪಡೆದುಕೊಳ್ಳುವುದು, ನಂತರ ಮಾರುವುದು, ಮತ್ತೆ ಬೇರೆಯದನ್ನು ಕೊಂಡುಕೊಳ್ಳುವುದು, ಸಾಕುವುದು, ಮತ್ತೆ ಮಾರುವುದು ಇದು ರೈತ ಬದುಕಿನ ನಿತ್ಯ ಸುರುಳಿ ಚಕ್ರ. ಕಾಲಾನುಕಾಲದಿಂದ ಈ ಕ್ರಮ ನಿರಂತರವಾಗಿ ನಡೆದುಕೊಂಡು ಬಂದಿದೆ. ಇಲ್ಲಿ ರೈತರು ಗೋವಿನೊಂದಿಗೆ ಏಕಕಾಲದಲ್ಲಿ ಭಾವನಾತ್ಮಕಕತೆಯನ್ನೂ, ವ್ಯವಹಾರತನವನ್ನೂ ಜೊತೆಜೊತೆಯಾಗಿ ಸಾಗಿಸಿಕೊಂಡು ಬಂದಿದ್ದಾರೆ.

ಇದರೊಂದಿಗೆ ಗೋವಿನೊಂದಿಗೆ ಸುದೀರ್ಘ ಬದುಕು ಕಟ್ಟಿಕೊಂಡು ಬಂದವರು ದಲಿತರು. ಕೃಷಿ ವಲಯದಲ್ಲಿ ನಿಜವಾದ ಶ್ರಮಿಕರು ಮತ್ತು ಕೂಲಿಯಾಳುಗಳು ಅಂದರೆ ದಲಿತರು. ಇದನ್ನು ಸಾಕುವವರು, ಅದರ ಆರೋಗ್ಯವನ್ನು ನೋಡಿಕೊಳ್ಳುವವರು ಬಹುತೇಕ ದಲಿತರೇ ಆಗಿದ್ದಾರೆ. ಅದು ಸತ್ತಾಗ ಅದನ್ನು ವಿಲೇವಾರಿ ಮಾಡುವವರು ಇವರೇ. ಇಂದಿಗೂ ಇದು ಬದಲಾಗಿಲ್ಲ. ಹಾಗಾಗಿ ಗೋವಿನೊಂದಿಗಿನ ಹೆಚ್ಚಿನ ಒಡನಾಟ ಇದ್ದಿದ್ದೇ ಈ ದಲಿತರಿಗೆ. ಇದಿಷ್ಟೇ ಆಗಿದ್ದರೆ ಸುಮ್ಮನಾಗಬಹುದಿತ್ತು. ಇದಕ್ಕಿಂತಲೂ ಹೆಚ್ಚಾಗಿ ಕಾಲನುಕಾಲದಿಂದ ಈ ದಲಿತ ಜಗತ್ತನ್ನು ಈ ಗೋವಿನ ಜಗತ್ತು ಕಾಪಾಡಿಕೊಂಡು ಬಂದಿದೆ. ಹಸಿವೆಂದು ಕೈನೀಡಿದರೆ ಒಂದು ಹಿಡಿ ಭತ್ತವನ್ನೋ, ಅಕ್ಕಿಯನ್ನೋ, ಅಸಿಟನ್ನೂ ಪಡೆಯುತ್ತಿದ್ದ ದಲಿತರಿಗೆ ಪೌಷ್ಟಿಕ ಆಹಾರ ಸಿಗುತ್ತಿದ್ದುದಾದರೂ ಎಲ್ಲಿ? ಅದಕ್ಕೆ ಅವರು ಹೆಚ್ಚು ಅವಲಂಬಿಸಿದ್ದು ಈ ಗೋ ಮಾಂಸವನ್ನೇ. ಅತ್ಯಂತ ಪೌಷ್ಟಿಕ ಆಹಾರ ಅವರಿಗೆ ಸುಲಭವಾಗಿ ಸಿಗುತ್ತಿದ್ದುದು ಇದೇ. ಸಗಣಿಯಲ್ಲಿರುವ ಉರುಳಿಕಾಳನ್ನೋ, ಜೋಳವನ್ನೋ ತಿಂದು ಬದುಕಿ ಎಂದು ಹೇಳುತ್ತಿದ್ದ ಸಮಾಜದಲ್ಲಿ ಸಹಜವಾಗೇ ಅವರು ಇತ್ತ ಕಡೆ ವಾಲಲೇಬೇಕಿರುತ್ತದೆ. ಈ ವಾಲಿದ ಪರಿಣಾಮ ಗೋಮಾಂಸ ಅವರಿಗೆ ಆಹಾರದ ಹಕ್ಕಿನ ಪ್ರಶ್ನೆಯಾಯಿತು. ಸಂಸ್ಕೃತಿಯ ರೂಪದಲ್ಲಿ ಅಣುರೇಣು ತೃಣಕಾಷ್ಠದಲ್ಲಿ ನಿಂತು ಒಂದಾಯಿತು. ಅಂಬೇಡ್ಕರ್ ಅವರು ಕೂಡ ‘ಅಸ್ಪೃಶ್ಯತೆಯ ಉಗಮಕ್ಕೆ ಈ ಗೋಮಾಂಸ ಭಕ್ಷಣೆಯೂ ಒಂದು ಕಾರಣ’ ಎಂದು ಹೇಳಿದ್ದಾರೆ. ಇಂತಹ ಪರಂಪರೆಯ ನಂಟು ಗೋವಿನೊಂದಿಗೆ ದಲಿತರಿಗಿದೆ. ದಲಿತರು ‘ಇದು ನಮ್ಮ ಪಾರಂಪರಿಕ ಆಹಾರ, ಇದರ ಮೇಲೆ ನಮಗೆ ಹಕ್ಕಿದೆ. ಈ ಹಕ್ಕನ್ನು ಕಿತ್ತುಕೊಳ್ಳಲು ನಿಮಗೆ ಯಾವ ತರದ ಪ್ರಾಮಾಣಿಕತೆ ಇದೆ’ ಎನ್ನುವುದನ್ನು ಮುಂಚೂಣಿಯಲ್ಲಿ ನಿಂತು ಕೇಳಿರುತ್ತಿರುವುದು ಈ ಕಾರಣದಿಂದಲೇ.

ADVERTISEMENT

ಇದು ದಲಿತರ, ರೈತರ ಮತ್ತು ಆದಿವಾಸಗಳ ಬದುಕಷ್ಟೇ ಅಲ್ಲ. ಇಡೀ ದೇಶವೇ ಒಂದಲ್ಲಾ ಒಂದು ರೀತಿಯಲ್ಲಿ ಗೋವಿನ ಮೇಲೆ ನಿಂತಿದೆ. ಗೋವಿನ ವಿವಿಧ ಭಾಗಗಳಿಂದ ಔಷಧ ಲೋಕಕ್ಕೆ ಲಾಭವಿದೆ. ಚರ್ಮೋದ್ಯಮಕ್ಕಂತೂ ಗೋವಿನ ಚರ್ಮಗಳು ಬೇಕೇ ಬೇಕು. ಅನೇಕ ರಾಸಾಯನಿಕಗಳ ತಯಾರಿಕೆಗೆ ಗೋವಿನ ಉತ್ಪನ್ನಗಳು ಬೇಕು. ಕೈಗಾರಿಕಾ ರಂಗಕ್ಕೆ ಈ ಉತ್ಪನ್ನಗಳಿಂದ ತುಂಬಾ ಲಾಭವಿದೆ. ಆದರೆ ಇಂದು ಗೋಹತ್ಯೆ ನಿಷೇಧ ಕಾನೂನು ಸಾರಾಸಗಟಾಗಿ ಜಾರಿಗೊಳಿಸಿದ್ದರಿಂದ ದೇಶದಲ್ಲಿ ವರ್ಷಕ್ಕೆ ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ನಷ್ಟವಾಗಬಹುದು. ಇನ್ನೂ ಮುಂದುವರಿದು ಹೇಳುವುದಾದರೆ, ದೇಶದ ಬೆನ್ನೆಲುಬು ರೈತ ಎಂದು ಹೇಳುವ ಈ ದೇಶದಲ್ಲಿ ರೈತನ ಬೆನ್ನನ್ನೇ ಮುರಿಯುವುದಕ್ಕಾಗಿ ಈ ಕಾಯ್ದೆ ಅನುಷ್ಠಾನಕ್ಕೆ ಬಂದಿತು. ಅನುತ್ಪಾದಕ ಹಸುವನ್ನು ಮಾರಾಟ ಮಾಡದಿದ್ದರೆ ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಇವುಗಳನ್ನು ಸಾಕುವ ಹೆಚ್ಚುವರಿ ಹೊಣೆಗಾರಿಕೆ ರೈತರ ಮೇಲೆ ಬೀಳುತ್ತದೆ.  ವೆಚ್ಚವು ಅಧಿಕಗೊಳ್ಳುತ್ತದೆ. ಮೊದಲೇ ‘ವ್ಯವಸಾಯ ಮನೆಮಂದಿಯೆಲ್ಲಾ ಸಾಯ’ ಎನ್ನುವಂತೆ ಬದುಕುವವರು ಅವರು. ಈ ಕಾಯ್ದೆಯ ಮೂಲಕ ಅವರ ಮೇಲೆ ಮತ್ತಷ್ಟು ಬರೆ ಎಳೆಯಲಾಯಿತು.

ಈ ಮಗ್ಗಲುಗಳನ್ನು ಮುಖ್ಯವಾಗಿ ಪರಿಗಣಿಸದೆ ‘ಗೋಹತ್ಯೆ ನಿಷೇಧ’ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದರ ಹಿಂದೆ ಭಾವನಾತ್ಮಕತೆಯನ್ನು ಪರಿಗಣಿಸಲಾಯಿತೇ ಹೊರತು ಇದಕ್ಕಿರುವ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಪರಿಗಣಿಸಿದ್ದೇವೆ ಎನ್ನುವುದನ್ನು ಸೂಚಿಸಿದರೂ ಅದನ್ನು ಪೂರ್ಣವಾಗಿ ಕಡೆಗಣಿಸಲಾಯಿತು. ಇದು ಜೀವನ ಕ್ರಮದ ಮೇಲೆ, ಅದರಲ್ಲೂ ಅವಲಂಬಿತ ಆಹಾರ ಚಕ್ರದ ಮೇಲೆ ಏಕಾಏಕಿ ದಾಳಿ ಮಾಡಿತು. ಆಹಾರ ಸರಪಳಿ ತುಂಡಾದರೆ ಅದರ ನೇರ ಮತ್ತು ಮೊದಲ ಹೊಡೆತ ತಿನ್ನುವುದು ಇಲ್ಲಿನ ಬಡವರು, ನಿರ್ಗತಿಕರು, ಅಸಹಾಯಕರು ಮತ್ತು ದಲಿತರು. ಇದು ಈಗ ನಡೆಯುತ್ತಿದೆ.

ಇಂತಹ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳದೆಯೇ ಕಾಯ್ದೆ ಜಾರಿ ಮಾಡಲಾಯಿತು. ಎದುರಾಗಬಹುದಾದ ಸಮಸ್ಯೆಗಳಿಗೆ ಕೆಲವು ಸರಳ ಸೂತ್ರಗಳನ್ನು ಮುಂದಿಡಲಾಯಿತು. ಇದರಲ್ಲಿ ಬಹಳ ಮುಖ್ಯ ಪರಿಹಾರವಾಗಿ ಗೋಶಾಲೆಗಳು ಅಸ್ತಿತ್ವಕ್ಕೆ ಬಂದವು. ಆದರೆ ದೇಶದ ನಾನಾ ಹೈಕೋರ್ಟ್‍ಗಳು ಆ ಗೋಶಾಲೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಕಂಡುಕೊಂಡು,  ಖಂಡಿಸಿದವು. ಕರ್ನಾಟಕದ ಹೈಕೋರ್ಟ್ ಕೂಡ ಖಂಡಿಸಿದೆ. ಇವುಗಳಿಗೆ ಬೇಕಾದಂತಹ ಹಣಕಾಸನ್ನು ಕೊಟ್ಟಿಲ್ಲ. ಗೋವುಗಳನ್ನು ನಿಜವಾಗಿಯೂ ಉಳಿಸುವಂತಹ ಕೆಲಸವನ್ನು ಇಲ್ಲಿ ಮಾಡಿಲ್ಲ. ಆದ್ದರಿಂದಲೇ ದನಗಳು ಬೀಡಾಡಿ ದನಗಳಾಗಿ ಮಾರ್ಪಟ್ಟವು. ಎಲ್ಲೆಂದರಲ್ಲಿ ನುಗ್ಗಲು, ತಂಗಲು, ಮೇಯಲು ಪ್ರಾರಂಭಿಸಿದವು. ಉತ್ತರ ಪ್ರದೇಶದಲ್ಲಿ ಇವುಗಳದ್ದೇ ಒಂದು ದೊಡ್ಡ ಸಮಸ್ಯೆಯಾಗಿ ನಿಂತದ್ದನ್ನು ನಾವು ಮರೆಯುವಂತಿಲ್ಲ. ಇವೆಲ್ಲವೂ ಗೋರಕ್ಷಣಾ ಕಾಯ್ದೆಯನ್ನು ಗಟ್ಟಿಯಾಗಿ ನೆಲೆಯೂರಿಸಿದ್ದರ ಪರಿಣಾಮ.

ಇನ್ನೊಂದು ವಿಪರ್ಯಾಸ ಎಂದರೆ, ಯಾವ ದೇಶದಲ್ಲಿ ಗೋರಕ್ಷಣೆಯ ಬಗ್ಗೆ ಮಾತು ಕೇಳಿ ಬರುತ್ತಿದೆಯೋ, ಅದಕ್ಕಾಗಿ ಒಂದು ಕಾಯ್ದೆಯನ್ನೇ ರೂಪಿಸಲಾಗಿದೆಯೋ ಅಂತಹ ದೇಶದಲ್ಲೇ ಗೋಮಾಂಸ ರಫ್ತಿನ ವಹಿವಾಟು ಜಾಗತಿಕವಾಗಿ ಅಗ್ರ ಕ್ರಮಾಂಕದ 5ರ ಆಸುಪಾಸಿನಲ್ಲೇ ಸುತ್ತುತ್ತಿದೆ. ಯಾವ ಸರ್ಕಾರ ಕಾನೂನನ್ನು ತಂದಿತೋ ಅದರ ಅವಧಿಯಲ್ಲೇ ಅಗ್ರಕ್ರಮಾಂಕದ ಕಡೆಗೆ ರಫ್ತು ವಹಿವಾಟು ಮುಖಮಾಡಿತು. ಈ ಗೋವಿನ ಹೆಸರಿನಲ್ಲಿ ಮುಸ್ಲಿಮರನ್ನು, ದಲಿತರನ್ನು ಗುರಿ ಮಾಡಿ ಕೊಲೆ ಮತ್ತು ಗುಂಪು ಹಲ್ಲೆಗಳನ್ನು ನಡೆಸಲಾಗಿದೆ. ದುರಂತವೆಂದರೆ ಗೋಮಾಂಸ ರಫ್ತಿನಲ್ಲಿ ಹಿಂದೂ ಪ್ರಬಲ ಜಾತಿಗಳ ಜನರೇ ಮುಂಚೂಣಿಯಲ್ಲಿದ್ದಾರೆ. ಹಾಕಿಕೊಳ್ಳುವ ಶೂ, ಚಪ್ಪಲಿ, ತೊಡುವ ಬೆಲ್ಟ್, ಹಿಡಿವ ವ್ಯಾನಿಟಿ ಬ್ಯಾಗ್‍ಗಳು, ಜೇಬಿನಲ್ಲಿನ ಪರ್ಸ್, ವಾಚಿನ ಬೆಲ್ಟ್ ಎಲ್ಲ ಎಲ್ಲವೂ ಚರ್ಮದ್ದೇ ಆಗಿರಬೇಕು. ಆದರೆ ಚರ್ಮೋದ್ಯಮವನ್ನು ಗೋವಿನ ಹೆಸರಿನಲ್ಲಿ ಕಡಿತಗೊಳಿಸುತ್ತಿರುವುದರ ಬಗ್ಗೆ ನಮಗ್ಯಾರಿಗೂ ತಕರಾರಿಲ್ಲ. ಅದರಲ್ಲೂ ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಾದ ಕೇರಳ ಮತ್ತು ಗೋವಾದಲ್ಲಿ ಅತಿ ಹೆಚ್ಚು ಗೋವಿನ ಮಾಂಸ ತಿನ್ನುವವರು ಇರುವ ಕಾರಣ ಅಲ್ಲಿ ನಿಷೇಧ ಅನ್ನುವ ಪದವನ್ನು ಬಲಪಂಥೀಯರೇ ಬಳಸುವುದಿಲ್ಲ.

ಇಷ್ಟೆಲ್ಲವನ್ನೂ ಯೋಚಿಸಿದಾಗ ಅಂತಿಮವಾಗಿ ತಲೆಯಲ್ಲಿ ಉಳಿಯುವುದು ಒಂದೇ ಆಲೋಚನೆ. ಇಲ್ಲಿ ಗೋವಿನ ಹೆಸರಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಅದರಲ್ಲೂ ಮತಬ್ಯಾಂಕಿನ ಜಾಡು ಹಿಡಿದು ಇದನ್ನು ಅನುಷ್ಠಾನಕ್ಕೆ ತರಲಾಗಿದೆ. ಗೋವಿನ ಮೇಲಿನ ಪ್ರೀತಿಗಿಂತ ಜನಾಂಗ ಮತ್ತು ಸಮುದಾಯಗಳನ್ನು ಈ ಮೂಲಕ ಬಗ್ಗು ಬಡಿಯುವ ಕುತಂತ್ರವೇ ಇಲ್ಲಿ ಹೆಚ್ಚಾಗಿ ಕೆಲಸ ಮಾಡಿದೆ ಎನಿಸುತ್ತಿದೆ. ಮುಸ್ಲಿಮರು, ದಲಿತರನ್ನು ಹಳಿಯುವ ಈ ರಾಜಕಾರಣ ಈಗಾಗಲೇ ಇನ್ನಿತರ ಶೂದ್ರ ಸಮುದಾಯಗಳನ್ನೂ ಹತ್ತಿಕ್ಕುತ್ತಿದೆ. ಏಕೆಂದರೆ ಈ ರಾಜಕಾರಣವು ನಮಗೆ ಮನುಷ್ಯರಿಗಿಂತ ಗೋವೇ ಮುಖ್ಯ ಎಂಬುದನ್ನು  ಈಗಾಗಲೇ ಸಾಬೀತುಮಾಡಿದೆ. ಭಾರತದ ಬಹುತ್ವದ ನೆಲೆಗಳಿಗೆ ಕೊಡಲಿ ಪೆಟ್ಟಾಗುವ ಮೊದಲು ಇಂತಹ ಕಾಯ್ದೆಗಳ ಹಿಂದಿರುವ ತಂತ್ರಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಭಾರತಕ್ಕೆ ಗೋವುಗಳು ಬೇಕು. ಗೋವುಗಳೊಂದಿಗೆ ನಿರಂತರವಾಗಿ ಬದುಕುವ ರೈತರೂ, ದಲಿತರೂ ಇನ್ನಿತರ ಸಮುದಾಯಗಳೂ ಇದೇ ಭಾರತದಲ್ಲಿ ಗೋಳಿಲ್ಲದೆ ಬದುಕಬೇಕು. ಗೋವು ಮತ್ತಿತರ ಜಾನುವಾರಗಳನ್ನು ನಂಬಿ ಉಸಿರಾಡುತ್ತಿರುವ ಎಲ್ಲ ಉದ್ಯಮಗಳೂ ಜನಸಮೂಹಕ್ಕೆ ಇನ್ನೂ ಹೆಚ್ಚಿನ ಆಸರೆಯಾಗಬೇಕು. ಇದಾಗಬೇಕೆಂದರೆ ಈ ಗೋ ಹತ್ಯಾ ನಿಷೇಧ ಕಾಯ್ದೆಯು ಭಾರತಕ್ಕೆ ತಕ್ಕದಾದುದಲ್ಲ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.

ಲೇಖಕ: ಅಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.