– ಆಶ್ವಿನಿ ಶಂಕರ್ ಎನ್.ಎಸ್.
ಕರ್ನಾಟಕ ರಾಜ್ಯದಲ್ಲಿ ಪ್ರಬಲ ಗೋಹತ್ಯಾ ನಿಷೇಧ ಕಾಯ್ದೆಯ ಅವಶ್ಯಕತೆ ಇದೆ. ರಾಜ್ಯದಲ್ಲಿ ಪ್ರಾಚೀನ ಕಾಲದಿಂದ ಇವತ್ತಿನವರೆಗೆ ಯಾವತ್ತೂ ಗೋ ವಧೆಗೆ ಅವಕಾಶವಿರಲಿಲ್ಲ. ಯಾರೆಲ್ಲಾ ಇದುವರೆಗೆ ಗೋ ವಧೆ ಮಾಡಿದ್ದಾರೋ ಅದನ್ನೆಲ್ಲಾ ಕಾನೂನುಬಾಹಿರವಾಗಿಯೇ ಮಾಡಿರುತ್ತಾರೆ. ರಾಜರ ಕಾಲದಲ್ಲಿ ಗೋವಧೆಗೆ ಅವಕಾಶವಿರಲಿಲ್ಲ. 1948ರಲ್ಲಿ ಹಾಗೂ 1964ರಲ್ಲಿ ಇದ್ದ ಕಾಂಗ್ರೆಸ್ ಸರ್ಕಾರವೇ ಗೋವಧೆ ನಿಷೇಧಿಸಿತ್ತು. ಇದರಲ್ಲಿ ಮುದಿ ದನಗಳ ವಧೆಯನ್ನೂ ನಿಷೇಧಿಸಿತ್ತು. ಆದರೆ ಶಿಕ್ಷೆ ಮಾತ್ರ ₹1,000 ದಂಡ ಹಾಗೂ ಆರು ತಿಂಗಳ ಜೈಲು ಇತ್ತು.
ಈ ಕಾಯ್ದೆ ದುರ್ಬಲವಾದ್ದರಿಂದ ಸಮರ್ಪಕವಾಗಿ ಅನುಷ್ಠಾನವಾಗದೆ ದಿನಂಪ್ರತಿ ಅಕ್ರಮ ಗೋವಧೆ ಆಗುತ್ತಿತ್ತು. ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗುತ್ತಿರಲಿಲ್ಲ. ಅಕ್ರಮ ಗೋಸಾಗಟ ಅತ್ಯಂತ ಹಿಂಸಾತ್ಮಕವಾಗಿತ್ತು. ಮುಚ್ಚಿದ ಕಂಟೇನರ್‌ಗಳಲ್ಲಿ ಯಾವುದೇ ಗಾಳಿ ಬೆಳಕಿಲ್ಲದೆ, 70–80 ಗೋವುಗಳನ್ನು ಕೈಕಾಲು ಕಟ್ಟಿ, ಒಂದರ ಮೇಲೊಂದು ಮೂಟೆಯಂತೆ ರಾಶಿ ಹಾಕಿ, ಹತ್ತಾರು ಕರುಗಳನ್ನು ಲಕ್ಷುರಿ ಕಾರುಗಳ ಡಿಕ್ಕಿಯಲ್ಲಿ ತುಂಬಿ ಕೊಂಡೊಯ್ಯುತ್ತಿದ್ದರು. ಹಲವಾರು ಸಂದರ್ಭಗಳಲ್ಲಿ ಅವುಗಳ ಕಣ್ಣಿಗೆ ಮೆಣಸಿನ ಪುಡಿ ಹಾಕಲಾಗುತ್ತಿತ್ತು, ಕಾಲಿನ ಹಿಂದೆ ಗಾಯ ಮಾಡಿ ಮೆಣಸಿನ ಪುಡಿ ಹಾಕಲಾಗುತ್ತಿತ್ತು. ಯಾರಾದರೂ ಅದನ್ನು ತಡೆಯಲು ಹೋದರೆ ಕೈಕಾಲು ಕಟ್ಟಿದ ಗೋವುಗಳನ್ನು ಓಡುತ್ತಿರುವ ವಾಹನದಿಂದ, ಹಿಂದೆ ತಡೆಯಲು ಬರುತ್ತಿದ್ದವರ ಮೇಲೆ ಒಂದೊಂದಾಗಿ ರಸ್ತೆಗೆ ಬಿಸಾಕುತ್ತಿದ್ದರು.
ಹೀಗೆ ಹಲವಾರು ರೀತಿಯಲ್ಲಿ ಅತ್ಯಂತ ಅಮಾನುಷ ರೀತಿಯಲ್ಲಿ ಸಾಗಾಟವಾಗುತ್ತಿದ್ದ ಈ ವಾಹನಗಳನ್ನು ತಡೆದು ಪರಿಶೀಲಿಸಿದಾಗ, ಅದಾಗಲೇ ಹಲವು ಗೋವುಗಳು ಉಸಿರುಗಟ್ಟಿ ಅಥವಾ ಒಂದರ ಕೊಂಬು ಇನ್ನೊಂದಕ್ಕೆ ತಾಗಿ ಆದ ನೋವಿನಿಂದ ಸತ್ತಿರುತ್ತಿದ್ದವು. ಬದುಕಿರುವ ಗೋವುಗಳು ಆಂತರಿಕವಾಗಿ ಪೆಟ್ಟಾಗಿ ದೇಹದೊಳಗೆ ಕೀವು ತುಂಬಿ ಕೆಲವು ದಿನಗಳಲ್ಲಿ ಸತ್ತು ಹೋಗುತ್ತಿದ್ದವು.
ಇಂತಹ ಘೋರ, ಅಮಾನುಷ ಸಾಗಾಟ ನಿಲ್ಲಬೇಕಾದರೆ, ಗೋಹತ್ಯೆ ನಿಲ್ಲಬೇಕಾದರೆ ಬಲಿಷ್ಠವಾದ ಕಾನೂನೊಂದರ ಅವಶ್ಯಕತೆ ಇತ್ತು. ಪ್ರಜಾಪ್ರಭುತ್ವ ಅಂದರೆ, ಬಹುಸಂಖ್ಯಾತ ಜನರ ಆಶಯವನ್ನು ಸರ್ಕಾರ ಈಡೇರಿಸುವುದಾಗಿದೆ. ರಾಜ್ಯದಲ್ಲಿ ಬಹುಸಂಖ್ಯಾತರು ಗೋವನ್ನು ಪೂಜಿಸುತ್ತಾರೆ. ಅದರಲ್ಲಿ ದೇವಶಕ್ತಿ ಇದೆ ಎಂದು ನಂಬಿದ್ದಾರೆ. ಅದನ್ನು ಪೂಜಿಸುವುದರಿಂದ ತಮಗೂ, ದೇಶಕ್ಕೂ ಒಳ್ಳೆಯದಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ. ಒಂದು ಸಣ್ಣ ಮಗು ಸಹ ಒಂದು ಗೋವು ಎದುರಲ್ಲಿ ಕಂಡರೆ ಸಂತೋಷದಿಂದ ಹೋಗಿ ಮುಟ್ಟಿ ನಮಸ್ಕಾರ ಮಾಡುತ್ತದೆ ಅಂದರೆ, ರಾಜ್ಯದ ಜನರ ರಕ್ತದಲ್ಲಿ ಗೋವು ಪೂಜನೀಯ ಎಂಬ ಭಾವನೆ ಇದೆ.
ಅದೇ ರೀತಿ ಗೋ ಹತ್ಯೆಯಿಂದ ಉಂಟಾಗುವ ಋಣಾತ್ಮಕ ಶಕ್ತಿಗಳು ರಾಜ್ಯದಲ್ಲಿ ದುರಾಚಾರಗಳಿಗೆ ಕಾರಣವಾಗುತ್ತಿದೆ. ಇದರಿಂದ ದುಷ್ಟ ಜನರ ಸಂಖ್ಯೆ ಕ್ರಮೇಣ ಹೆಚ್ಚುತ್ತಾ, ರಾಜ್ಯದ ಜನರ ಜನಜೀವನದ ಮೇಲೆ ದುಷ್ಪರಿಣಾಮ ಬಿದ್ದು ಸುಖ, ಶಾಂತಿ, ನೆಮ್ಮದಿ ಕುಂಠಿತವಾಗುತ್ತಾ ಹೋಗುತ್ತದೆ.
ಈ ಎಲ್ಲಾ ಕಾರಣದಿಂದ ರಾಜ್ಯದಲ್ಲಿ ಪ್ರಬಲವಾದ ಗೋ ಹತ್ಯೆ ನಿಷೇಧ ಕಾಯ್ದೆಯ ಅವಶ್ಯಕತೆ ಇತ್ತು. ಇದನ್ನು ಮನಗಂಡ ಈ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣೆ ಕಾಯ್ದೆ–2020 ಹಾಗೂ ಅದರನ್ವಯ ಗೋಸಾಗಾಟ ನಿಯಮಾವಳಿ 2021ನ್ನು ಜಾರಿಗೆ ತಂದದ್ದು ಅಭಿನಂದನೀಯ. ಈ ಕಾಯ್ದೆಯಲ್ಲಿ ಎಲ್ಲಾ ವಯಸ್ಸಿನ ದನ, ಹೋರಿ, ಕರುಗಳನ್ನು ಹಾಗೂ 13 ವರ್ಷದೊಳಗಿನ ಎಮ್ಮೆ, ಕೋಣಗಳ ವಧೆಯನ್ನು ನಿಷೇಧಿಸಲಾಗಿದೆ. ವಧಿಸಿದವರಿಗೆ ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗಿದೆ. ₹5 ಲಕ್ಷದವರೆಗೆ ದಂಡ ವಿಧಿಸಲಾಗಿದೆ.
ಜಾನುವಾರು ಸಂರಕ್ಷಣೆಗಾಗಿ ಈ ಕಾಯ್ದೆ:
ಈ ಕಾಯ್ದೆಯಲ್ಲಿ ಜಾನುವಾರು ಹತ್ಯೆಯನ್ನು ಪ್ರತಿಬಂಧಿಸಿದ್ದು ಮಾತ್ರವಲ್ಲ. ಅವುಗಳ ಸಂರಕ್ಷಣೆಗೂ ಒತ್ತು ಕೊಡಲಾಗಿದೆ. ಮುಖ್ಯವಾಗಿ ರೈತರ ಹಿತದೃಷ್ಟಿಯಿಂದ ಹಾಗೂ ಗೋವುಗಳ ಆರೋಗ್ಯದ ದೃಷ್ಟಿಯಿಂದ ಪ್ರಬಲವಾದ ಗೋಸಾಗಾಟ ನಿಯಮಾವಳಿ ತಂದಿರುತ್ತಾರೆ. ರೈತರು ಅವರ ಜಾನುವಾರುಗಳನ್ನು ಅವರ ತೋಟಕ್ಕೇ ಸಾಗಿಸುವುದಕ್ಕೆ ಸಹ ಇದು ಅನ್ವಯಿಸುತ್ತದೆ. ಜಾನುವಾರುಗಳನ್ನು ಹೈನುಗಾರಿಕೆಗೆ ಕೊಂಡು ಹೋಗುವಾಗಲೂ ವಾಹನದಲ್ಲಿ ಜಾಗರೂಕತೆಯಿಂದ ಕೊಂಡೊಯ್ಯದೆ ಇದ್ದಲ್ಲಿ, ಗೋವುಗಳಿಗೆ ಪೆಟ್ಟಾಗಿ ನರಳುತ್ತವೆ. ರೈತರಿಗೂ ಇದರಿಂದ ಔಷಧೋಪಚಾರಕ್ಕೆ ಖರ್ಚಾಗುತ್ತದೆ. ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಒಂದು ವೇಳೆ ಗೋವು ನರಳಾಟದಿಂದ ಸತ್ತರೆ, ರೈತನಿಗೆ ಆರ್ಥಿಕ ನಷ್ಟ ಹಾಗೂ ಭಾವನಾತ್ಮಕವಾಗಿ ದುಃಖವಾಗುತ್ತದೆ. ಮನುಷ್ಯರು ತಮ್ಮದೇ ವಾಹನದಲ್ಲಿ ಪ್ರಯಾಣಿಸುವಾಗ ಹೆಲ್ಮೆಟ್ ಹಾಕುವಂತೆ, ಸೀಟ್‌ಬೆಲ್ಟ್ ಹಾಕುವಂತೆ ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸದಂತೆ ಜನರ ಹಿತದೃಷ್ಟಿಯಿಂದ ಕಾನೂನು ತಂದು, ಕಾನೂನು ಉಲ್ಲಂಘನೆಗೆ ಶಿಕ್ಷೆಯನ್ನು ಕೊಡಲಾಗುತ್ತದೆ.
ಮನುಷ್ಯರಿಗಾದರೂ ತಾವೇ ಪ್ರಯಾಣ ಮಾಡುವಾಗ ಜಾಗರೂಕತೆಯಿಂದ ಪ್ರಯಾಣಿಸಲು ಸಾಧ್ಯವಿದೆ. ಆದರೆ ಜಾನುವಾರುಗಳಿಗೆ ತಮಗೆ ದೇಹದೊಳಗೆ ಆಗುವ ನೋವು ಹೇಳಲು ಬಾರದು. ಆದ್ದರಿಂದ ಸರ್ಕಾರವೇ ಇದರ ರಕ್ಷಣೆಯ ಜವಾಬ್ದಾರಿ ತೆಗೆದುಕೊಂಡಿದೆ. ಅದಕ್ಕೆ ಪ್ರಬಲ ಶಿಕ್ಷೆಗೆ ಕಾನೂನಿನಲ್ಲಿ ಅವಕಾಶ ಕೊಟ್ಟಿದ್ದೂ ಸಮರ್ಥನೀಯವಾಗಿದೆ.
ಸಂವಿಧಾನಬದ್ಧವಾಗಿದೆ:
ಗುಜರಾತ್ ಸರ್ಕಾರ ಗೋವುಗಳ ಹಿತದೃಷ್ಟಿಯಿಂದ, ರೈತರ ಹಿತದೃಷ್ಟಿಯಿಂದ ಗುಜರಾತ್ ಗೋಹತ್ಯಾ ನಿಷೇಧ ಕಾಯ್ದೆಗೆ 1994ರಲ್ಲಿ ತಿದ್ದುಪಡಿ ಕಾಯ್ದೆಯನ್ನು ತಂದಿತು. ಇದನ್ನು ಗುಜರಾತ್ ಹೈಕೋರ್ಟ್, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಪ್ರಶ್ನಿಸಲಾಗಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠವು, ಗುಜರಾತ್ ಸರ್ಕಾರ ಮತ್ತು ಮಿರ್ಜಾಪುರ್ ಕಸಬ್ ಕುರೇಶಿ ಪ್ರಕರಣದಲ್ಲಿ 2005ರಲ್ಲಿ ನೀಡಿರುವ ಐತಿಹಾಸಿಕ ತೀರ್ಪಿನಲ್ಲಿ ಗುಜರಾತ್ ಸರಕಾರವು ದನ, ಎತ್ತು, ಹೋರಿ ಅಂದರೆ ಗೋ ಹತ್ಯೆಗೆ ನಿಷೇಧ ಹೇರಿದ್ದನ್ನು ಸಂವಿಧಾನ ಬದ್ಧ ಎಂದು ಹೇಳಿತ್ತು ಮತ್ತು ಹಾಗೆ ನಿಷೇಧ ಮಾಡಿದ್ದರಿಂದ ಸಂವಿಧಾನದ 19ನೇ ವಿಧಿಯ ಉಲ್ಲಂಘನೆ ಆಗುವುದಿಲ್ಲ. ಕಟುಕರ ಉದ್ಯೋಗದ ಹಕ್ಕು ಉಲ್ಲಂಘನೆ ಆಗುವುದಿಲ್ಲ. ಹಾಗೇ ಗೋವು ದೇಶದ ಆರ್ಥಿಕತೆಗೆ ತೀರಾ ಅಗತ್ಯ ಮುಂತಾದ ವಿಚಾರಗಳನ್ನು ಕೂಲಂಕುಷ ವಿಚಾರ ಮಾಡಿ ಗುಜರಾತ್ ಸರಕಾರ ಸಂಪೂರ್ಣ ಗೋ ಹತ್ಯೆ ನಿಷೇಧ ಹೇರಿದ್ದು ಸಂವಿಧಾನದನ್ವಯ ಸಮರ್ಥನೀಯ ಎಂದು ಹೇಳಿದೆ.
ಈ ತೀರ್ಪನ್ನು ಅನುಸರಿಸಿ, ಗೋವಂಶ ಹತ್ಯೆ ನಿಷೇಧಿಸಿ ಹಲವು ರಾಜ್ಯಗಳಲ್ಲಿ ಕಾಯಿದೆ ಬಂದಿದೆ. ಹಾಗೇ ಜಾರ್ಖಂಡ್ ರಾಜ್ಯದಲ್ಲಿ ಕಾಯಿದೆ ತಂದಾಗ 2005ರ ತೀರ್ಪು ಕೇವಲ ಗುಜರಾತಿಗೆ ಸೀಮಿತ ಅದು ಇತರ ರಾಜ್ಯಗಳಿಗೆ ಅನ್ವಯವಾಗುವುದಿಲ್ಲ ಎಂದು ಮತ್ತೆ ಸರ್ವೋಚ್ಛ ನ್ಯಾಯಾಲಯವು ಸ್ಪಷ್ಟವಾಗಿ ಈ ತೀರ್ಪು ದೇಶದ ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ. ದೇಶದ ಯಾವುದೇ ರಾಜ್ಯವು ಗೋವಂಶ ಹತ್ಯೆ ನಿಷೇಧ ಮಾಡಿದರೆ ಅದು ಸಂವಿಧಾನ ಬದ್ಧ ಎಂದು ಸಂವಿಧನದ 141ನೇ ವಿಧಿಯನ್ನು ಉಲ್ಲೇಖಿಸಿ ಕೇಳಿರುತ್ತದೆ. ಅದರಂತೆ ಕರ್ನಾಟಕ ಸರಕಾರವು ತಂದಿರುವ ಗೋವಂಶ ಹತ್ಯೆ ನಿಷೇಧವು ಸಂವಿಧಾನ ಬದ್ಧವಾಗಿರುತ್ತದೆ.
ಗೋ ಹತ್ಯೆ ನಿಷೇಧದಿಂದ ಯಾರ ಆಹಾರದ ಹಕ್ಕೂ ಉಲ್ಲಂಘನೆಯಾಗುವುದಿಲ್ಲ: ಈಗಲೂ ರಾಜ್ಯದಲ್ಲಿ ಗೋಮಾಂಸ ತಮ್ಮ ಆಹಾರದ ಹಕ್ಕು ಎಂದು ಹಾಸ್ಯಾಸ್ಪದವಾಗಿ ಕೆಲವರು ಪ್ರತಿಪಾದನೆ ಮಾಡುತ್ತಾರೆ. ಎಲ್ಲರಿಗೂ ಆಹಾರ ಸಿಗಬೇಕು ಎಂಬುದು ನಿಜ. ಆದರೆ ಇಂಥದ್ದೇ ಆಹಾರದಿಂದ ಹೊಟ್ಟೆ ತುಂಬಬೇಕಾದ ಯಾವ ಅವಶ್ಯಕತೆಯೂ ಇರುವುದಿಲ್ಲ. ರಾಜ್ಯದಲ್ಲಿ ಯಾವತ್ತೂ ದನಗಳ ಹತ್ಯೆಗೆ ಅವಕಾಶ ಇಲ್ಲದಾಗ ಅವರು ರಾಜ್ಯದಲ್ಲಿ ಹತ್ಯೆ ಮಾಡಿದ ದನದ ಮಾಂಸವನ್ನು ತಿಂದಿದ್ದರೆ ಅದು ಕಾನೂನುಬಾಹಿರ, ಶಿಕ್ಷಾರ್ಹ. ಈ ವಿಚಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಈಗಾಗಲೇ ಚರ್ಚೆ ಆಗಿರುವುದರಿಂದ ಆಹಾರದ ಹಕ್ಕಿನ ಬಗ್ಗೆ ಮತ್ತೆ ಹೆಚ್ಚು ಚರ್ಚೆಗೆ ಅರ್ಥವಿಲ್ಲ.
ಜನರ ಆರೋಗ್ಯದ ಹಿತದೃಷ್ಟಿಯಿಂದ ಜಾನುವಾರುಗಳ ಸಂಖ್ಯೆ ರಾಜ್ಯದಲ್ಲಿ ನಾಲ್ಕಾರು ಪಟ್ಟು ಹೆಚ್ಚಾಗಬೇಕಿದೆ. ಯಾವುದೇ ಪದಾರ್ಥ ಈ ಜಗತ್ತಿನಲ್ಲಿ ವ್ಯರ್ಥವೆಂದಿಲ್ಲ. ಮುದಿ ಗೋವಿನಲ್ಲಿ ದೈವಿಕ ಶಕ್ತಿಯೂ ಇದ್ದು, ಗೋಮಯ, ಗೋಮೂತ್ರಗಳಿಂದ ಮನುಷ್ಯನಿಗೆ ಪ್ರಯೋಜನವಾಗುವ ಗೋಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿದೆ. ಈಗಾಗಲೇ ಬಹಳಷ್ಟು ಜನರು ಅದನ್ನು ಮಾಡುತ್ತಲೇ ಇದ್ದಾರೆ. ಕೆಲವು ಆಲಸಿಗಳು ಮಾತ್ರ, ಸರಿಯಾದ ಮಾಹಿತಿಯೂ ಇಲ್ಲದೆ ಮುದಿ ಗೋವುಗಳನ್ನು ವ್ಯರ್ಥ ಎಂದು ತಿಳಿದಿದ್ದಾರೆ. ಎಮ್ಮೆ ಕಡಿಯಬಹುದಾದರೆ, ಮುದಿ ಗೋವುಗಳನ್ನು ವಧಿಸಿದರೆ ಏನು ಎಂಬ ಉಡಾಫೆಯ ಅಸಂಬದ್ಧ ಪ್ರಶ್ನೆ ಎತ್ತುತ್ತಿದ್ದಾರೆ. ಹೀಗೆ ಪ್ರಶ್ನೆ ಮಾಡಿದ್ದನ್ನು ಈಗಾಗಲೇ ಬಹಳಷ್ಟು ಜನರು ಸ್ವಾಮೀಜಿಗಳು ವಿರೋಧಿಸಿದ್ದಾರೆ. ಹಾಗೆ ಮುದಿ ಗೋವುಗಳನ್ನು ವಧಿಸಲು ಅವಕಾಶ ಕೊಟ್ಟರೆ, ಸರ್ಕಾರಕ್ಕೆ ಮಾತ್ರವಲ್ಲ ರಾಜ್ಯದ ಎಲ್ಲಾ ಜನರಿಗೆ ಗೋವಿನ ಶಾಪದಿಂದ ತೊಂದರೆಯಾಗುತ್ತದೆ.
ಗೋವಿನ ಸೆಗಣಿಯನ್ನು ಕಪ್ಪುವಜ್ರ ಎಂದು ಕರೆಯಲಾಗುತ್ತದೆ. ಇದರ ಹಲವು ರೀತಿಯ ಸಾಮರ್ಥ್ಯಗಳು ವೈಜ್ಞಾನಿಕವಾಗಿ ಸಾಬೀತಾಗಿದೆ. ಈಗ ಇರುವ ಜಾನುವಾರುಗಳ ಸೆಗಣಿಯಿಂದ ನಮ್ಮ ರಾಜ್ಯದಲ್ಲಿರುವ ಶೇ 25ರಷ್ಟು ಕೃಷಿಗೂ ಗೊಬ್ಬರ ಸಾಲದು. ಈಗ ರಾಸಾಯನಿಕ ಗೊಬ್ಬರದಿಂದ ಬೆಳೆಯುವ ಕೃಷಿ ಉತ್ಪನ್ನ ತಿಂದು ಜನರ ಆರೋಗ್ಯ ಹಾಳಾಗುತ್ತಿರುವುದು ಸರ್ವವಿಧಿತ. ನಮ್ಮ ರಾಜ್ಯದಲ್ಲಿ ಅಂದಾಜು ಆರು ಕೋಟಿ ಜನರಿದ್ದಾರೆ. ಆದರೆ ಒಂದು ಕೋಟಿ ಜಾನುವಾರುಗಳಿವೆ. ರಾಜ್ಯದ ಎಲ್ಲಾ ಬೆಳೆಗಳಿಗೆ ಗೋಮಯ ಆಧಾರಿತ ಗೊಬ್ಬರವನ್ನು ಬಳಸಿದರೆ, ಜನರ ಆರೋಗ್ಯಕ್ಕೆ ಸರ್ಕಾರ ಮಾಡುವ ಖರ್ಚು ಉಳಿದು ರಾಜ್ಯದ ಬೊಕ್ಕಸ ತುಂಬಲಿದೆ. ಸರ್ಕಾರಕ್ಕೂ ಜನರಿಗೂ ಅದರಿಂದ ಸಕಲ ಸುಖ, ಆರೋಗ್ಯ, ಸಂಪತ್ತು, ಅಭಿವೃದ್ಧಿ ಸಾಧ್ಯವಾಗುತ್ತದೆ.
ರಾಜ್ಯದ ಎಲ್ಲಾ ಬೆಳೆಗಳಿಗೆ ಗೋಮಯ ಆಧಾರಿತ ಗೊಬ್ಬರವನ್ನೇ ಬಳಸಬೇಕಾದರೆ, ರಾಜ್ಯದಲ್ಲಿ ಈಗ ಇರುವ ಜಾನುವಾರುಗಳ ಸಂಖ್ಯೆ ನಾಲ್ಕಾರು ಪಟ್ಟು ಹೆಚ್ಚಾಗಬೇಕಾಗಿದೆ. ಸರ್ಕಾರವು ಈ ಕಾಯ್ದೆಯನ್ನು ಪಕ್ಷ, ಧರ್ಮ ಎಂದು ನೋಡಿ ದ್ವೇಷರಾಜಕಾರಣ ಮಾಡದೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ–2020ನ್ನು ಉಳಿಸಬೇಕಾಗಿದೆ. ಇನ್ನಷ್ಟು ಪ್ರಬಲವಾಗಿ ಅನುಷ್ಠಾನಗೊಳಿಸಬೇಕಾಗಿದೆ.
ಲೇಖಕಿ: ಅಧ್ಯಾಪಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.