ಶ್ರೀಮಂತರಲ್ಲಿರುವ ಹೆಚ್ಚುವರಿ ಸಂಪತ್ತನ್ನು ತೆಗೆದುಕೊಂಡು ಬಡವರಿಗೆ ಹಂಚುವುದು ಎಂದು ಸಮಾಜವಾದವನ್ನು ಅರ್ಥೈಸಬಹುದು. ಹೀಗೆ ಶ್ರೀಮಂತರ ಹೆಚ್ಚುವರಿ ಸಂಪತ್ತನ್ನು ಬಡವರಿಗೆ ಹಂಚು ವುದು, ಉದ್ಯಮಶೀಲ ವ್ಯಕ್ತಿಗಳನ್ನು ಶಿಕ್ಷಿಸುವ ಮೂಲಕ ಬಡತನವನ್ನು ಹಂಚುವುದೂ ಆಗಿದೆ. ಈ ಮೂಲಕ ಸಮಾನತೆಯನ್ನು ತರುತ್ತೇವೆ ಎನ್ನುವುದು ಭ್ರಮೆ.
ಮತ್ತೊಂದೆಡೆ ಸಮಾನತೆಯನ್ನು ಸಾಧಿಸುವುದಕ್ಕಾಗಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂಬ ತತ್ವವನ್ನು ಬಿಜೆಪಿ ನಂಬಿದೆ ಮತ್ತು ಅದಕ್ಕಾಗಿ ದುಡಿಯುತ್ತಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಸ್ವಾಭಾವಿಕವಾದ ಸಾಮರ್ಥ್ಯಗಳಿರುತ್ತವೆ. ಆದರೆ, ಆ ಸಾಮರ್ಥ್ಯವನ್ನು ಜಾಗೃತಗೊಳಿಸುವ ಕೆಲಸವಾಗಬೇಕು. ಜನರು ತಮ್ಮ ಗುರಿ ಸಾಧಿಸಲು ಅವರಲ್ಲಿರುವ ಈ ಸಾಮರ್ಥ್ಯಕ್ಕೆ ಅವಕಾಶ ನೀಡುವುದು ಇಂದಿನ ಅಗತ್ಯ. ಅಂದರೆ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡುವುದಕ್ಕಾಗಿ ಎಲ್ಲಾ ಸ್ವರೂಪದ ಪ್ರೋತ್ಸಾಹವನ್ನು ನೀಡಬೇಕು ಎಂದು ಬಿಜೆಪಿ ನಂಬಿದೆ.
ಉದಾಹರಣೆಗೆ ಒಬ್ಬ ಬಡ ಮನುಷ್ಯನಿಗೆ, ನಲ್ಲಿ ನೀರು, ವಿದ್ಯುತ್, ಬ್ಯಾಂಕ್ ಖಾತೆ, ಸಹಾಯಧನದ ಮೂಲಕ ಘನತೆಯಿಂದ ಬದುಕುವುದು, ಆರೋಗ್ಯ ವಿಮೆ, ಕನಿಷ್ಠ ವೈದ್ಯಕೀಯ ಸೇವೆಗಳ ಲಭ್ಯತೆ, ಶೌಚಾಲಯ, ಸೂರು, ಅಡುಗೆ ಅನಿಲ ಸಂಪರ್ಕ, ಕಡಿಮೆ ಬಡ್ಡಿದರದ ಸಾಲ, ಸುಲಭವಾಗಿ ಉದ್ಯಮ ನಡೆಸುವ ಅವಕಾಶಗಳಂತಹ ಸೌಕರ್ಯಗಳೂ ಲಭ್ಯವಿರುವುದಿಲ್ಲ. ಆತ ತನ್ನ ಸಾಮರ್ಥ್ಯದ ಬಹುಪಾಲನ್ನು, ಈ ಸೌಕರ್ಯಗಳಿಗಾಗಿ ವ್ಯಯಿಸುತ್ತಾನೆ. ಆದರೆ ಅದೇ ಸಂದರ್ಭದಲ್ಲಿ, ಉಳ್ಳವರು ಉತ್ತಮ ಜೀವನದತ್ತ ನಡೆದಿರುತ್ತಾರೆ.
ಉತ್ತಮ ಜೀವನದತ್ತ ಸಾಗಲು ಬಡವನಿಗೂ ಸಮಾನ ಅವಕಾಶವನ್ನು ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂಬುದು ಪ್ರಧಾನಿ ಮೋದಿ ಅವರ ಪ್ರತಿಪಾದನೆ. ನೇರ ನಗದು ವರ್ಗಾವಣೆ (ಡಿಬಿಟಿ) ಕಾರ್ಯಕ್ರಮವನ್ನು ಇದಕ್ಕೆ ಉದಾಹರಿಸಬಹುದು. ಒಬ್ಬ ಬಡ ವಿಧವೆಯು ಸರ್ಕಾರಿ ಕಚೇರಿಗೆ ಹತ್ತಾರು ಬಾರಿ ಅಲೆಯದೆ ಮತ್ತು ಲಂಚ ನೀಡದೆಯೇ ಒಂದು ಸಣ್ಣ ಮೊತ್ತ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಒಬ್ಬ ಬಡ ಮಹಿಳೆಗೆ ಅಡುಗೆ ಅನಿಲ ಸಂಪರ್ಕ ದೊರೆಯುವುದರಿಂದ, ಆಕೆ ಉರುವಲಿಗಾಗಿ ಪ್ರತಿದಿನ ಹಲವು ಗಂಟೆ ಅಲೆದಾಡುವುದು ತಪ್ಪುತ್ತದೆ ಮತ್ತು ಆಕೆಯ ಆರೋಗ್ಯವೂ ಸುಧಾರಿಸುತ್ತದೆ. ಮನೆಗೆ ನಲ್ಲಿ ನೀರಿನ ಸಂಪರ್ಕ ನೀಡುವುದರಿಂದ ಮಹಿಳೆಯರು ಪ್ರತಿದಿನ ನೀರಿಗಾಗಿಯೇ ಎರಡು ಗಂಟೆ ವ್ಯಯಿಸುವುದನ್ನು ತಪ್ಪಿಸಬಹುದು. ಈ ಎಲ್ಲಾ ಸೌಲಭ್ಯಗಳಿಂದ ಒಬ್ಬ ಬಡ ಮಹಿಳೆಗೆ ದಿನವೊಂದರಲ್ಲಿ ಐದರಿಂದ ಆರು ಗಂಟೆ ಬಿಡುವು ಸಿಗುತ್ತದೆ. ಅವರು ತಮ್ಮ ಮಕ್ಕಳ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬಹುದು, ಸಣ್ಣಪುಟ್ಟ ಕೆಲಸ ಮಾಡುವ ಮೂಲಕ ಆದಾಯ ಗಳಿಸಬಹುದು ಅಥವಾ ಮುದ್ರಾ, ಸ್ವನಿಧಿ, ಸ್ಟಾಂಡ್‌ಅಪ್ ಇಂಡಿಯಾದಂತಹ ಕಾರ್ಯಕ್ರಮದ ಮೂಲಕ ಸ್ವಉದ್ಯೋಗ ಆರಂಭಿಸಬಹುದು.
ಬಡ ರೈತನಿಗೆ ಪ್ರತಿವರ್ಷ ₹ 6,000 (ಮೂರು ಕಂತುಗಳಲ್ಲಿ) ನೀಡಲಾಗುತ್ತಿದೆ. ಬೇಸಾಯಕ್ಕೆ ಅಗತ್ಯವಾದ ಸಣ್ಣಪುಟ್ಟ ವೆಚ್ಚಗಳನ್ನು ನಿರ್ವಹಿಸಲು ಅದು ನೆರವಾಗುತ್ತದೆ. ಜತೆಗೆ ಆತ ಸಣ್ಣ–ಪುಟ್ಟ ಖರ್ಚುಗಳಿಗೂ ಸಾಲದ ಸುಳಿಗೆ ಸಿಲುಕುವುದನ್ನು ಈ ಕಾರ್ಯಕ್ರಮ ತಪ್ಪಿಸುತ್ತದೆ.
ಉಚಿತ ಕೊಡುಗೆಗಳು ಮತ್ತು ಸಬಲೀಕರಣಕ್ಕೆ ಬೆಂಬಲ ನೀಡುವುದರ ನಡುವಣ ವ್ಯತ್ಯಾಸವನ್ನು ಪರಿಶೀಲಿಸೋಣ. ಹಿಂದಿನ ಕಾಂಗ್ರೆಸ್ ಸರ್ಕಾರ ‘ಶಾದಿ ಭಾಗ್ಯ’ ಎಂಬ ಕಾರ್ಯಕ್ರಮದ ಮೂಲಕ ಜನರಿಗೆ ನೇರವಾಗಿ ನೀಡುತ್ತಿದ್ದ ಹಣವು ಒಂದು ದುಂದುವೆಚ್ಚವಾಗಿತ್ತು ಮತ್ತು ಸರ್ಕಾರಕ್ಕೂ ಹೊರೆಯಾಗಿತ್ತು. ಬದಲಿಗೆ ಮನೆಯೊಂದರಲ್ಲಿ ಶೌಚಾಲಯ ನಿರ್ಮಿಸಿಕೊಡುವುದರಿಂದ (ಫಲಾನುಭವಿಗಳ ಕೊಡುಗೆಯೂ ಸೇರಿ) ಒಂದು ಸ್ವತ್ತು ನಿರ್ಮಾಣವಾದಂತಾಗುತ್ತದೆ. ಮಹಿಳೆಯರ ಆರೋಗ್ಯ ಸುಧಾರಿಸುತ್ತದೆ ಮತ್ತು ಅವರ ಘನತೆ ಹೆಚ್ಚುತ್ತದೆ.
ಈ ಪರಿಕಲ್ಪನೆಯನ್ನು, ಜನರು ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳಲು ಮತ್ತು ಗುರಿಯನ್ನು ತಲುಪಲು ನಡೆಸುವ ಪೈಪೋಟಿ ಎಂದು ಅರ್ಥಮಾಡಿಕೊಳ್ಳಬೇಕು. ದೇಶ ಪ್ರಗತಿ ಸಾಧಿಸಲು ಇರುವುದು ಇದೊಂದೇ ಮಾರ್ಗ. ಆದರೆ, ಇದನ್ನು ಸಾಧಿಸಲು ಬಡವರ ಎದುರು ಹಲವು ತಡೆಗಳಿವೆ. ಈ ತಡೆಗಳನ್ನು ನಿವಾರಿಸಲು ಸರ್ಕಾರವು ಮುಂದಾಗಲೇಬೇಕು. ‘ಒಬ್ಬ ಮನುಷ್ಯನಿಗೆ ಮೀನು ನೀಡಿದರೆ, ಅದು ಆ ದಿನಕ್ಕಷ್ಟೇ ಆಗುತ್ತದೆ. ಆದರೆ ಮೀನು ಹಿಡಿಯುವುದು ಹೇಗೆ ಎಂಬುದನ್ನು ಆತನಿಗೆ ಕಲಿಸಿದರೆ, ಅದರಿಂದ ಜೀವನಪೂರ್ತಿ ಹಸಿವು ನೀಗಿಸಲು ಸಾಧ್ಯವಾಗುತ್ತದೆ’ ಎಂಬ ಮಾತಿನಂತೆ ಇದನ್ನು ಅರ್ಥೈಸಬಹುದು.
ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ತಲಾ ₹1,000 ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದಿಟ್ಟುಕೊಳ್ಳೋಣ. ಆ ಹಣದಿಂದ ಯಾವುದೇ ರೀತಿಯ ಸ್ವತ್ತು ನಿರ್ಮಾಣ ಸಾಧ್ಯವಿಲ್ಲ ಅಥವಾ ಅವರ ಭವಿಷ್ಯ ರೂಪುಗೊಳ್ಳುವುದಿಲ್ಲ ಅಥವಾ ಅದು ಅವರ ಆದಾಯದ ಮೂಲವನ್ನೂ ರೂಪಿಸುವುದಿಲ್ಲ. ಇಂತಹ ಉಚಿತ ಕೊಡುಗೆಗಳು ಮತಗಳ ಖರೀದಿಯಷ್ಟೆ.
ಇತ್ತೀಚಿನ ಸಾಂಕ್ರಾಮಿಕವನ್ನೇ ಗಮನಿಸೋಣ. ಅದು ಎಲ್ಲರಿಗೂ ಕಷ್ಟಕರವಾಗಿದ್ದರೂ ತೀರಾ ಸಂಕಷ್ಟ ಎದುರಿಸಿದ್ದು, ದಿನದ ಊಟವನ್ನು ಸಂಪಾದಿಸಿಕೊಳ್ಳಲೂ ಸಾಧ್ಯವಾಗದಿದ್ದ ಕಡುಬಡವರು. ಅಂತಹ 80 ಕೋಟಿ ಜನರಿಗೆ 25 ತಿಂಗಳವರೆಗೆ, ಉಚಿತವಾಗಿ ದವಸಧಾನ್ಯವನ್ನು ಪ್ರಧಾನಿ ಮೋದಿ ಅವರು ನೀಡಿದರು. ಬಡವರೂ ಈ ಸಾಂಕ್ರಾಮಿಕದಲ್ಲಿ ಬದುಕಲಿ ಎಂದು ದವಸ ಧಾನ್ಯಗಳನ್ನು ಉಚಿತವಾಗಿ ನೀಡಲಾಯಿತು. ಆದರೆ, ಶ್ರೀಮಂತರಿಗೂ ಉಚಿತವಾಗಿ ಪಡಿತರ ನೀಡಿದ್ದರೆ ಹೇಗಿರುತ್ತಿತ್ತು? ಬಡವರು ತಮ್ಮ ಊಟವನ್ನು ತಾವೇ ಸಂಪಾದಿಸಿಕೊಳ್ಳುವ ಉತ್ತಮ ಅವಕಾಶವನ್ನು ಸರ್ಕಾರ ಮಾಡಿಕೊಡಬೇಕು.
‘ಉಚಿತ ಕೊಡುಗೆಯಿಲ್ಲ, ಬದಲಿಗೆ ಸಂಪೂರ್ಣ ಬೆಂಬಲ’ ಎಂಬ ನೀತಿಯನ್ನು ಪ್ರಧಾನಿ ಮೋದಿ ಅವರು ಪಟ್ಟುಹಿಡಿದು ಪಾಲಿಸುತ್ತಿದ್ದಾರೆ. ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು, ತಾವು ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದವು. ಆದರೆ ಮೋದಿ ಅಂತಹ ಘೋಷಣೆ ಮಾಡಲಿಲ್ಲ. ಬದಲಿಗೆ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದರು. ‘ನಾನು ಉಚಿತ ವಿದ್ಯುತ್ ನೀಡುವುದಿಲ್ಲ. ಬದಲಿಗೆ ದಿನದ 24 ಗಂಟೆಯೂ ಕೈಗೆಟಕುವ ದರದಲ್ಲಿ ವಿದ್ಯುತ್ ನೀಡುತ್ತೇನೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ನಾನು ಅದಕ್ಕೆ ಉತ್ತರದಾಯಿ’ ಎಂದರು. 2012ರ ಚುನಾವಣೆಯಲ್ಲಿ ಅವರು ಮತ್ತೆ ಮುಖ್ಯಮಂತ್ರಿಯಾದರು. ಮೋದಿ ಅವರು ಈ ಸಬಲೀಕರಣದ ನೀತಿಯ ಮೂಲಕ, ಉತ್ತರದಾಯಿ ರಾಜಕಾರಣದ ಸಂಸ್ಕೃತಿಯನ್ನು ರೂಪಿಸುತ್ತಿದ್ದಾರೆ. ಉಚಿತ ಕೊಡುಗೆಗಳು ಊಳಿಗಮಾನ್ಯ ಮನಸ್ಥಿತಿಯನ್ನು ಉತ್ತೇಜಿಸುತ್ತವೆ.
ಬೇರೊಬ್ಬರ ವೆಚ್ಚದಲ್ಲಿ ಉಚಿತ ಕೊಡುಗೆಗಳನ್ನು ನೀಡುವ ವ್ಯವಸ್ಥೆಯ ಬದಲಿಗೆ, ಸಮಾನ ಅವಕಾಶ ನೀಡುವ ವ್ಯವಸ್ಥೆಯನ್ನು ಭಾರತೀಯ ನಾಗರಿಕರು ಬಯಸುತ್ತಾರೆ. ಇದು ಅವಲಂಬಿತರ ಭಾರತವಲ್ಲ, ಬದಲಿಗೆ ಅಭಿವೃದ್ಧಿ ಮತ್ತು ಸಮರ್ಥರಿಗಾಗಿ ಮತ ನೀಡುವ ನವ ಭಾರತವಾಗಿದೆ.
ಲೇಖಕ: ಕರ್ನಾಟಕ ಬಿಜೆಪಿ ಆರ್ಥಿಕ ಘಟಕದ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.