ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ ಪ್ರಾಂಶುಪಾಲರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಗೆ ಕೊನೆ ಹಂತದಲ್ಲಿ ತಾತ್ಕಾಲಿಕ ತಡೆ ಬಿದ್ದಿದೆ. ನೇರ ನೇಮಕಾತಿ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಲೇಜುಗಳ ಕೆಲವು ಪ್ರಾಧ್ಯಾಪಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಸಿ.ಎಂ ಅವರು ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾರೆ. ಕಾಲೇಜು ಉನ್ನತ ಶಿಕ್ಷಣ ಇಲಾಖೆಯು ಯುಜಿಸಿಯ 2018ರ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ಮಾಡುತ್ತಿದೆ ಎಂಬುದು ಕೆಲವು ಸೇವಾ ಹಿರಿತನ ಹೊಂದಿರುವ ಪ್ರಾಧ್ಯಾಪಕರ ವಾದ...
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಭರ್ತಿ ಮಾಡಲು ಕಾಲೇಜು ಶಿಕ್ಷಣ ಇಲಾಖೆ ಹೊರಟಿದೆ. ಇದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನೇಮಕಾತಿ ನಿಯಮದ ಸ್ಪಷ್ಟ ಉಲ್ಲಂಘನೆ. 2018ರ ಯುಜಿಸಿ ನಿಯಮಾವಳಿಯಲ್ಲಿ ಈ ರೀತಿಯ ನೇಮಕಾತಿ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ.
ಪ್ರಾಂಶುಪಾಲರಿಗೆ ಸಂಬಂಧಿಸಿದಂತೆ ಮಾತ್ರವಲ್ಲ; ಎಲ್ಲ ಹುದ್ದೆಗಳ ನೇಮಕಾತಿ ಮತ್ತು ಆಯ್ಕೆ ಸಂರ್ಭದಲ್ಲೂ ನೇರ ನೇಮಕಾತಿ ವಿಧಾನ ಅನುಸರಿಸಬೇಕು ಎಂದು ಯುಜಿಸಿ ನಿಯಮ ಹೇಳುತ್ತದೆ. ನಿಯಮ 4.0.5ರಲ್ಲಿ ಕಾಲೇಜು ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕ (ಪ್ರೊಫೆಸರ್) ಎರಡೂ ಹುದ್ದೆಗಳ ನೇಮಕದ ಬಗ್ಗೆ ಒಟ್ಟಿಗೆ ಪ್ರಸ್ತಾಪಿಸಲಾಗಿದೆ. ನಿರ್ದಿಷ್ಟ ಸಮಿತಿ ರಚಿಸಿ, ಅಧ್ಯಾಪಕರ ಕಾರ್ಯಕ್ಷಮತೆ ಪರಿಶೀಲಿಸಿ ಬಡ್ತಿ ಮೂಲಕ ಆಯ್ಕೆ ನಡೆಸಬೇಕೆಂದು ಅದು ಹೇಳುತ್ತದೆ. ನಿಯಮ 5.1.8 ಮತ್ತು 6.0ಗಳಲ್ಲಿ ಆಯ್ಕೆ ಕ್ರಮ ಮತ್ತು ಮಾನದಂಡಗಳನ್ನೂ ವಿವರಿಸಲಾಗಿದೆ. ಆದರೆ, ಪ್ರಾಂಶುಪಾಲರನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ, ಹೊರಗಿನವರಿಗೂ ಅವಕಾಶ ನೀಡಿ ನೇಮಿಸಬೇಕು ಎಂದು ಎಲ್ಲಿಯೂ ಹೇಳಿಲ್ಲ.
ಇದಷ್ಟೇ ಅಲ್ಲ; ಯುಜಿಸಿ ನಿಯಮಗಳಲ್ಲಿ ಪ್ರಾಂಶುಪಾಲರ ಹುದ್ದೆಗೆ ಎಲ್ಲಿಯೂ ಪ್ರತ್ಯೇಕ ಕೇಡರ್ ಇಲ್ಲವೇ ವೇತನ ಶ್ರೇಣಿಯ (ಪೇ ಸ್ಕೇಲ್) ಪ್ರಸ್ತಾಪವಿಲ್ಲ. ಪ್ರಾಧ್ಯಾಪಕ ಹುದ್ದೆಗೆ ಸರಿಸಮಾನವಾದ ಹುದ್ದೆಯಾಗಿ ಪ್ರಾಂಶುಪಾಲರ ಹುದ್ದೆಯನ್ನು ಕಲ್ಪಿಸಿಕೊಳ್ಳಲಾಗಿದ್ದು, ಸಹ ಪ್ರಾಧ್ಯಾಪಕರನ್ನೂ (ಅಸೋಸಿಯೇಟ್ ಪ್ರೊಫೆಸರ್) ಪ್ರಾಂಶುಪಾಲರ ಹುದ್ದೆಗೆ (ಪ್ರಾಧ್ಯಾಪಕರ ಸಮಾನ ಗ್ರೇಡ್ ನೀಡಿ) ಬಡ್ತಿ ಮೂಲಕ ನೇಮಿಸಬಹುದು ಎಂದು ಹೇಳಲಾಗಿದೆ.
ಆದಾಗ್ಯೂ, ಕಾಲೇಜು ಇಲಾಖೆಯು 2018ರ ಯುಜಿಸಿ ನಿಯಮಾವಳಿಯನ್ನು ಅಲಕ್ಷಿಸಿ 2008–09ರ ವೃಂದ ಮತ್ತು ನೇಮಕಾತಿ (ಸಿ ಅಂಡ್ ಆರ್) ನಿಯಮಗಳನ್ನೇ ಅನುಸರಿಸಿ ಪ್ರಾಂಶುಪಾಲರ ವಿಶೇಷ ನೇರ ನೇಮಕಾತಿ ನಿಯಮಗಳನ್ನು ರೂಪಿಸಿದೆ. ಅಲ್ಲದೆ, 2021ರ ಮಾರ್ಚ್ 15ರ ಕರ್ನಾಟಕ ನೇರ ನೇಮಕಾತಿ ನಿಯಮಗಳಲ್ಲಿ ಗ್ರೂಪ್ ‘ಎ’ ಮತ್ತು ‘ಬಿ’ ನೇಮಕಾತಿ ಬಗ್ಗೆ ವಿಶೇಷ ವಿಧಿ ವಿಧಾನಗಳನ್ನು ರೂಪಿಸಿದ್ದರೂ ಅವುಗಳನ್ನೆಲ್ಲ ಉಲ್ಲಂಘಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು (ಕೆಇಎ) ಪರೀಕ್ಷಾ ಪ್ರಾಧಿಕಾರವಾಗಿ ಆಯ್ಕೆ ಮಾಡಿ ಯುಜಿಸಿಯಲ್ಲಿ ಇಲ್ಲದ, ಪ್ರಾಧ್ಯಾಪಕ ಹುದ್ದೆಗಿಂತಲೂ ಹೆಚ್ಚಿನ ವೇತನ ಶ್ರೇಣಿಯನ್ನು ಪ್ರಾಂಶುಪಾಲರ ಹುದ್ದೆಗೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ. ಆ ನಂತರದಲ್ಲಿ ಕೆಇಎಯು ಪರೀಕ್ಷೆ ನಡೆಸುವಾಗ ಅಭ್ಯರ್ಥಿಗಳ ಅರ್ಹತೆಯನ್ನು ಪರಿಶೀಲಿಸದೆ ಪರೀಕ್ಷೆ ತೆಗೆದುಕೊಂಡವರಿಗೆಲ್ಲ ಅವಕಾಶ ನೀಡಿ ಫಲಿತಾಂಶ ಪ್ರಕಟಿಸಿದೆ. ಹೀಗೆ ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸಿ ಪ್ರಾಂಶುಪಾಲರ ನೇಮಕಾತಿಗೆ ಪ್ರಯತ್ನಿಸಲಾಗುತ್ತಿದೆ. ಇದರ ಹಿಂದೆ ಇರುವ ಮರ್ಮವಾದರೂ ಏನು?
ಸಂಘರ್ಷಕ್ಕೆ ಕಾರಣವಾಗಲಿದೆ: ನೇಮಕಾತಿ ಪರೀಕ್ಷೆ ಬರೆದಿರುವವರಲ್ಲಿ ಸುಮಾರು 65 ಮಂದಿ ಹೊರಗಿನವರು ಪ್ರಾಂಶುಪಾಲರಾಗಿ ಆಯ್ಕೆ ಆಗುವ ಸಂಭವ ಇದೆಯೆಂದು ತಿಳಿದುಬಂದಿದೆ. ಹೊರಗಿನವರನ್ನು ಒಳಗಿನವರು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ಇದರಿಂದ ಆಡಳಿತ ಸುಗಮವಾಗುವುದಕ್ಕಿಂತ ಸಂಘರ್ಷ ಆಗುವ ಸಾಧ್ಯತೆಯೇ ಹೆಚ್ಚು. ಕರ್ನಾಟಕದ ಬೇರೆ ಯಾವ ಇಲಾಖೆಗಳಲ್ಲೂ ಇಲ್ಲದಿರುವ ಈ ಪದ್ಧತಿ ಕಾಲೇಜು ಶಿಕ್ಷಣದಲ್ಲಿ ಮಾತ್ರ ಏಕೆ? ಇದರಿಂದ ಇಲ್ಲಿಯೇ 25–30 ವರ್ಷಗಳು ಸೇವೆ ಸಲ್ಲಿಸಿದ ಅನುಭವಿಗಳನ್ನು ಕಡೆಗಣಿಸಿದಂತೆ ಆಗುವುದಿಲ್ಲವೇ? ಪರೀಕ್ಷೆ ನಡೆಸಿಯೇ ಪ್ರಾಂಶುಪಾಲರ ಹುದ್ದೆ ತುಂಬಬೇಕು ಎಂದಿದ್ದಲ್ಲಿ ಇಲಾಖೆಯ ಒಳಗಿನವರಿಗೇ ನಡೆಸಬಹುದಲ್ಲವೇ?
ಈ ನೇಮಕಾತಿಯಿಂದ 265 ಹುದ್ದೆಗಳನ್ನು ಮಾತ್ರ ತುಂಬಲು ಸಾಧ್ಯವಾಗಲಿದ್ದು (ಮಾಜಿ ಸೈನಿಕ, ದೃಷ್ಟಿ ದೋಷ ಹೊಂದಿರುವವರು, ಲೈಂಗಿಕ ಅಲ್ಪಸಂಖ್ಯಾತರು ಮುಂತಾದ ವಿವಿಧ ಮೀಸಲಾತಿಗಳ ಅಡಿಯಲ್ಲಿ ಅರ್ಹರಾದ ಅಭ್ಯರ್ಥಿಗಳು ಇಲ್ಲವಾದ್ದರಿಂದ ಅವುಗಳನ್ನು ಸದ್ಯ ತುಂಬಲು ಸಾಧ್ಯವಿಲ್ಲ); ಉಳಿದ ಹುದ್ದೆಗಳಿಗೆ ಹಿರಿಯ ಪ್ರಾಧ್ಯಾಪಕರನ್ನೇ ಪ್ರಭಾರಿಗಳಾಗಿ ತುಂಬಬೇಕಾಗುತ್ತದೆ. ಆಗ ಒಂದೆಡೆ ಇಲಾಖೆಯಲ್ಲಿ ಜ್ಯೇಷ್ಠತಾ ಪಟ್ಟಿಯಲ್ಲಿರುವ ಹಿರಿಯರು ಕಿರಿಯರಾಗಿಯೂ, ಇನ್ನೊಂದೆಡೆ ಜ್ಯೇಷ್ಠತಾ ಪಟ್ಟಿಯಲ್ಲಿ ಕೆಳಗಿರುವ ಇಲಾಖಾ ಕಿರಿಯರು ಪ್ರಾಂಶುಪಾಲರಾಗಿಯೂ ಕೆಲಸ ಮಾಡುವಂತಾಗುತ್ತದೆ.
ಇದರ ನಡುವೆಯೇ, ನೆರೆ ರಾಜ್ಯಗಳಲ್ಲಿ ಈ ನೇಮಕಾತಿ ಸ್ವರೂಪ ಹೇಗಿದೆಯೆಂದು ಅಧ್ಯಯನ ಮಾಡಿ ವರದಿ ಸಲ್ಲಿಸಲು ಇಲಾಖೆಯು ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿದೆ. ಸಮಿತಿ ವರದಿಯನ್ನೂ ಸಲ್ಲಿಸಿದೆ. ಅದರ ಅನುಸಾರ, ಎಲ್ಲಿಯೂ ಈ ರೀತಿಯ ನೇಮಕಾತಿ ನಡೆದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಹರಿಯಾಣ, ಹಿಮಾಚಲ ಪ್ರದೇಶ... ಹೀಗೆ ದೇಶದ ಎಲ್ಲ ಕಡೆಗಳಲ್ಲೂ ಪ್ರಾಂಶುಪಾಲರ ಹುದ್ದೆಯನ್ನು ಬಡ್ತಿ ಮೂಲಕವೇ ತುಂಬಲಾಗಿದೆ. ದೇಶದಲ್ಲಿ ಎಲ್ಲೂ ಇಲ್ಲದ ನೇಮಕಾತಿ ನೀತಿ ನಮ್ಮಲ್ಲೇಕೆ ಬೇಕು?
ಈ ನೇಮಕಾತಿ ನಿಯಮದ ಪ್ರಕಾರ, ಐದು ವರ್ಷಗಳ ನಂತರ ಪ್ರಾಂಶುಪಾಲರು ತಮ್ಮ ಮಾತೃಸಂಸ್ಥೆಗೆ ಮರಳಿ ಹೋಗಬೇಕು. ಹಾಗಾದಾಗ, ಇಲಾಖಾ ಜಂಟಿ ನಿರ್ದೇಶಕ, ಹೆಚ್ಚುವರಿ ನಿರ್ದೇಶಕ ಮತ್ತು ನಿರ್ದೇಶಕರ ಹುದ್ದೆಗಳನ್ನು ತುಂಬಲು ಆಗುವುದೇ ಇಲ್ಲ. ಆಯಕಟ್ಟಿನ ಹುದ್ದೆಗಳು ಪ್ರಭಾರ ಇದ್ದಾಗ ಉತ್ತಮ ಆಡಳಿತವನ್ನು ನಿರೀಕ್ಷಿಸುವುದು ಕಷ್ಟ ಸಾಧ್ಯ.
ಹಳೆಯ ನಿಯಮಗಳಲ್ಲಿ ಪ್ರಾಂಶುಪಾಲರು ಆರು ಗಂಟೆ ಪಾಠ ಮಾಡಬೇಕು ಎಂದಿದೆ. ವಿದ್ಯಾರ್ಥಿಗಳ ಜೊತೆ ಅನ್ಯೋನ್ಯ ಸಂಬಂಧ ಇರಿಸಿಕೊಂಡು ಪಾಠ ಮಾಡುವ ಪ್ರಾಧ್ಯಾಪಕರೇ ಪ್ರಾಂಶುಪಾಲರಾದಾಗ ವಿದ್ಯಾರ್ಥಿಗಳಿಗೆ ಅವರ ಬಗ್ಗೆ ಗೌರವ ಇರುತ್ತದೆ. ಆದರೆ, ಯಾರೊ ಹೊರಗಿನಿಂದ ಬಂದವರು, ಪಾಠ ಮಾಡದಿರುವವರು ಪ್ರಾಂಶುಪಾಲರಾದಾಗ ಆಡಳಿತ ಶುಷ್ಕವಾಗುತ್ತದೆ. ಕೋರ್ಸ್ ವಿಶಿಷ್ಟ ಪಠ್ಯ, ಪಠ್ಯೇತರ, ಪೂರಕ ಪಠ್ಯ ಮತ್ತು ವಿಸ್ತರಣಾ ಚಟುವಟಿಕೆಗಳು ಹಾಗೂ ವಿಶಿಷ್ಟ ಚಟುವಟಿಕೆ ಆಧಾರಿತ ಸಹಭಾಗಿ ಕಲಿಕೆ, ಪ್ಲೇಸ್‌ಮೆಂಟ್ ಹಾಗೂ ಶಿಸ್ತುವಿಶಿಷ್ಟ ಮೆಂಟರ್‌ಶಿಪ್... ಈ ಎಲ್ಲದರ ಬಗ್ಗೆ ತಿಳಿವು ಇರುವವರು ಸಾಮಾನ್ಯ ಪದವಿಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುವುದಕ್ಕೂ ಎಂಜಿನಿಯರಿಂಗ್ ಶಿಕ್ಷಣದವರೋ, ಪಶುವೈದ್ಯಕೀಯ, ಕಾನೂನು ಶಿಕ್ಷಣದವರೋ ಸಾಮಾನ್ಯ ಪದವಿ ಕಾಲೇಜುಗಳಿಗೆ ಪ್ರಾಂಶುಪಾಲರಾಗುವುದಕ್ಕೂ ವ್ಯತ್ಯಾಸವಿದೆ. ಕಾಲೇಜುಗಳಲ್ಲಿ ಎಲ್ಲ ಬಗೆಯ ಗುಣಮಟ್ಟ ಹೆಚ್ಚುವುದು ಒಳ್ಳೆಯ ಅನುಭವಿ, ವಸ್ತುವಿಶಿಷ್ಟ ಮತ್ತು ಶಿಸ್ತು ವಿಶಿಷ್ಟ ಬೋಧಕರಿಂದ. ಹಾಗಾಗಿ, ಹೊರಗಿನವರನ್ನು ಸರ್ಕಾರದ ಸಾಮಾನ್ಯ ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ನೇಮಿಸುವುದು ಸರ್ವಥಾ ಸೂಕ್ತವಲ್ಲ.
2018ರ ಯುಜಿಸಿ ನಿಯಮಗಳಲ್ಲಿ ಮತ್ತು ಆನಂತರದ ತಿದ್ದುಪಡಿಗಳಲ್ಲಿ ಸಿಎಎಸ್ (ಕರಿಯರ್ ಅಡ್ವಾನ್ಸ್‌ಮೆಂಟ್ ಸ್ಕೀಮ್) ಮೂಲಕವೇ ಸಹಾಯಕ ಪ್ರಾಧ್ಯಾಪಕರಿಗೆ ಬಡ್ತಿ ನೀಡಿ ಸಹ ಪ್ರಾಧ್ಯಾಪಕರು ಮತ್ತು ಸಹ ಪ್ರಾಧ್ಯಾಪಕರಿಗೆ ಬಡ್ತಿ ನೀಡಿ ಪ್ರಾಧ್ಯಾಪಕರನ್ನು ಮತ್ತು ಅವರಿಗೆ ಸರಿ ಸಮಾನವಾಗಿ ಪ್ರಾಂಶುಪಾಲರನ್ನೂ ನೇಮಿಸುವ ಬಗ್ಗೆ ತಿಳಿಸಲಾಗಿದೆ. ಇವುಗಳನ್ನು ಅನುಸರಿಸಿ ಉನ್ನತ ಶಿಕ್ಷಣ ಇಲಾಖೆಯು 2021ರಲ್ಲಿ ಕರ್ನಾಟಕಕ್ಕೆ ಅನ್ವಯಿಸುವಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ, ಚೋದ್ಯವೆಂಬಂತೆ ಯುಜಿಸಿಯಲ್ಲಿ ಬಡ್ತಿ ಎಂದು ಹೇಳಿದ್ದರೂ ಅದನ್ನು ಮರೆಮಾಚಿ, ಎಲ್ಲೂ ಇಲ್ಲದ ಸ್ಥಾನೀಕರಣ –‘ಪ್ಲೇಸ್‌ಮೆಂಟ್’ ಎಂಬ ಪದವನ್ನು ಸೃಷ್ಟಿಸಿ, ಪ್ರಾಧ್ಯಾಪಕರ ಬಡ್ತಿಗಳನ್ನು ವಂಚಿಸಲಾಗಿದೆ.
ಇತ್ತೀಚೆಗೆ, ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯದ, ಆಯ್ಕೆಯ ಸಂಭವ ಇಲ್ಲದ ಕೆಲವರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ ಎಂಬ ಗಾಳಿಸುದ್ದಿಯನ್ನು ಹರಡಲಾಗುತ್ತಿದೆ. ಆದರೆ, ಯುಜಿಸಿ ನಿಯಮಗಳಿಗೆ ವಿರುದ್ಧವಾಗಿ ಇಲಾಖೆಯ ಹೊರಗಿನವರನ್ನು ಒಳಕ್ಕೆ ತಂದು ಆಡಳಿತದಲ್ಲಿ ಸ್ಥಾಪಿಸುವುದನ್ನು ಹಿರಿಯರು ವಿರೋಧಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಯುಜಿಸಿಯ ನಿಯಮಗಳು ಸ್ಥಳೀಯ ವೈಶಿಷ್ಟ್ಯವನ್ನು ನಿರಾಕರಿಸುವಂತೆ ಇದ್ದಲ್ಲಿ ಅವುಗಳನ್ನು ಮಾರ್ಪಡಿಸಿ ನಮ್ಮದೇ ನಿಯಮಗಳನ್ನು ಮಾಡಿಕೊಳ್ಳುವುದು ಸೂಕ್ತ. ಆದರೆ, ಅದೇ ಹೆಸರಿನಲ್ಲಿ ಶೈಕ್ಷಣಿಕ ಅನುಭವ ಮತ್ತು ಜ್ಞಾನಕ್ಕೆ ಮಾಡುವ ಅನ್ಯಾಯ ಹಾಗೂ ಅವಮಾನವನ್ನು ಸರ್ವಥಾ ಒಪ್ಪಲು ಸಾಧ್ಯವಿಲ್ಲ.
ಕೇಂದ್ರ ಸರ್ಕಾರವು ಹೊಸದಾಗಿ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನೇ (ಎನ್‌ಇಪಿ) ನಮ್ಮ ರಾಜ್ಯ ಸರ್ಕಾರ ಬದಲಿಸುತ್ತಿದೆ; ಹೀಗಿರುವಾದ ತಪ್ಪಾದ ನೇಮಕಾತಿ ನೀತಿಯನ್ನು ರದ್ದು ಮಾಡುವುದು ಸಾಧ್ಯವಿಲ್ಲವೇ? ಇದಕ್ಕೆ ಇಚ್ಛಾಶಕ್ತಿ ಬೇಕಷ್ಟೆ. ಈಗ ನಿಯಮಗಳನ್ನು ರದ್ದು ಮಾಡಿದರೆ ಕಾನೂನು ತೊಡಕು ಉಂಟಾಗಬಹುದು ಎಂಬ ಮಾತು ಕೇವಲ ಸಮರ್ಥನೆಯಷ್ಟೆ. ಸರ್ಕಾರವು ವಿದಾರ್ಥಿಗಳ ಮತ್ತು ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಈ ನೇಮಕಾತಿಯನ್ನು ಕೂಡಲೇ ರದ್ದುಗೊಳಿಸುವುದು ಸೂಕ್ತ. ಪ್ರಾಧ್ಯಾಪಕರ ಬಡ್ತಿ ಮೂಲಕ ಪ್ರಾಂಶುಪಾಲರ ಹುದ್ದೆಗಳನ್ನು ತುಂಬುವುದೇ ಸರಿಯಾದ ಮಾರ್ಗ. ಇದಕ್ಕೆ ಬೇಕಾದ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರುವುದು ಇಂದಿನ ತುರ್ತು.
ಜ್ಞಾನದ ಉತ್ಪಾದನೆಯ ಅನುಭವಿ ಮಾನವ ಸಂಪನ್ಮೂಲವನ್ನು ಆಡಳಿತದಲ್ಲಿ ತಿರಸ್ಕರಿಸುವುದು ಸರಿಯಾದ ಕ್ರಮವಲ್ಲ.
ಲೇಖಕ: ಕರ್ನಾಟಕ ಉನ್ನತ ಶಿಕ್ಷಣ ಚಿಂತನ ವೇದಿಕೆಯ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.