ADVERTISEMENT

ಚರ್ಚೆ | ಕಲ್ಲಿದ್ದಲು ಕೊರತೆ: ಅಭಾವಕ್ಕೆ ಕೇಂದ್ರದ ಅದಕ್ಷತೆಯೇ ಕಾರಣ

ಕಲ್ಲಿದ್ದಲು ಕೊರತೆ ನಿಭಾಯಿಸುವಲ್ಲಿಕೇಂದ್ರ ಸರ್ಕಾರ ಎಡವಿದೆಯೇ?

ಪ್ರೊ.ಎಂ.ವಿ.ರಾಜೀವ್‌ ಗೌಡ
Published 6 ಮೇ 2022, 19:53 IST
Last Updated 6 ಮೇ 2022, 19:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಎರಡನೇ ದೇಶ ಮತ್ತು ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ನಾಲ್ಕನೇ ದೇಶ. ಹೀಗಿದ್ದರೂ ಹಿಂದೆಂದೂ ಕಂಡರಿಯದಂತಹ ಕಲ್ಲಿದ್ದಲು ಬಿಕ್ಕಟ್ಟು ಸೃಷ್ಟಿಯಾಗಿದೆ. ಮಾರಕವಾಗಬಹುದಾದ ಬಿಸಿಗಾಳಿಯು ಉಂಟಾಗಿರುವ ಸಂದರ್ಭದಲ್ಲಿಯೇ ಕಲ್ಲಿದ್ದಲು ಬಿಕ್ಕಟ್ಟು ಕೂಡ ಎದುರಾಗಿದೆ ಮತ್ತು ಉಷ್ಣಾಂಶ ತಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಂತಹ ನಿರ್ಣಾಯಕ ಸಂದರ್ಭದಲ್ಲಿ, ವಿದ್ಯುತ್‌ನ ಲಭ್ಯತೆ ಜೀವನ್ಮರಣದ ಪ್ರಶ್ನೆಯಾಗಿದೆ. ಆದರೆ, ಕೇಂದ್ರ ಸರ್ಕಾರವು ಕಲ್ಲಿದ್ದಲು ಪೂರೈಕೆಯನ್ನು ದಕ್ಷವಾಗಿ ನಿಭಾಯಿಸುವಲ್ಲಿ ಅಸಮರ್ಥವಾಗಿದೆ. ಕೇಂದ್ರದ ದುಸ್ಸಾಹಸಗಳು ಮತ್ತು ಕಳಪೆ ನೀತಿಯಿಂದಾಗಿ ಕಲ್ಲಿದ್ದಲು ಬಿಕ್ಕಟ್ಟು ಸೃಷ್ಟಿಯಾಗಿದೆ.

ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲನ್ನು ತುರ್ತಾಗಿ ಸಾಗಿಸುವುದಕ್ಕಾಗಿ ಕಳೆದ ಮೂರು ವಾರಗಳಲ್ಲಿ 700ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ ಮತ್ತು ಜನರ ಪ್ರಯಾಣದ ಯೋಜನೆಗಳು ಏರುಪೇರಾಗಿವೆ. ಜಾರ್ಖಂಡ್‌, ರಾಜಸ್ಥಾನ, ಪಂಜಾಬ್‌, ಹರಿಯಾಣ, ದೆಹಲಿ, ಮಹಾರಾಷ್ಟ್ರ, ಗುಜರಾತ್‌ನಂತಹ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕಲ್ಲಿದ್ದಲಷ್ಟೇ ಉಳಿದಿದೆ. ಈ ಎಲ್ಲ ರಾಜ್ಯಗಳ ಸರ್ಕಾರಗಳು ಕೇಂದ್ರದ ನೆರವಿನ ಮೇಲೆ ಅವಲಂಬಿತವಾಗಿವೆ. ಭಾರತಕ್ಕೆ ಕಲ್ಲಿದ್ದಲು ಕೊರತೆ ಕಾಡುವುದು ಇದೇ ಮೊದಲೇನೂ ಅಲ್ಲ. ದೊಡ್ಡ ಕಲ್ಲಿದ್ದಲು ಬಿಕ್ಕಟ್ಟು ಹತ್ತಿರದಲ್ಲಿಯೇ ಇದೆ ಎಂದು ಪರಿಣತರು 2021ರ ಅಕ್ಟೋಬರ್‌ನಲ್ಲಿ ಎಚ್ಚರಿಕೆ ನೀಡಿದ್ದರು. ಭಾರತಕ್ಕೆ ಸುಮಾರು 120 ಕೋಟಿ ಯೂನಿಟ್‌ ವಿದ್ಯುತ್‌ ಕೊರತೆಯಾಗಿದೆ. ಆದರೆ, ಕೇಂದ್ರ ಸರ್ಕಾರವು ಈ ಅನುಭವದಿಂದ ಪಾಠ ಕಲಿತಂತೆ ಕಾಣಿಸುತ್ತಿಲ್ಲ.

ಈಗಿನ ಬಿಕ್ಕಟ್ಟು ಹಿಂದಿನದಕ್ಕಿಂತಲೂ ತೀವ್ರವಾಗಿದೆ. ಪ್ರಸ್ತುತ, 173 ಉಷ್ಣ ವಿದ್ಯುತ್‌ ಸ್ಥಾವರಗಳ ಪೈಕಿ 108ರಲ್ಲಿ ಕಲ್ಲಿದ್ದಲು ಸಂಗ್ರಹವು ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಭಾರತದ ಕೇಂದ್ರ ವಿದ್ಯುತ್ ಪ್ರಾಧಿಕಾರದ ಪ್ರಕಾರ, ಇರಬೇಕಾದ ಕನಿಷ್ಠ ಸಂಗ್ರಹದ ಶೇ 32ರಷ್ಟು ಕಲ್ಲಿದ್ದಲು ಮಾತ್ರ ಇದೆ. 6.63 ಕೋಟಿ ಟನ್‌ ಸಂಗ್ರಹ ಇರಲೇಬೇಕು ಎಂಬುದು ನಿಯಮ. ದೇಶೀಯ ಕಲ್ಲಿದ್ದಲು ಬಳಸುವ 150 ವಿದ್ಯುತ್ ಸ್ಥಾವರಗಳ ಪೈಕಿ 85ರಲ್ಲಿನ ಕಲ್ಲಿದ್ದಲು ಸಂಗ್ರಹವು ಶೋಚನೀಯ ಮಟ್ಟಕ್ಕೆ ಕುಸಿದು ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವಂತೆ ಮಾಡಿದೆ. ಈ ಸ್ಥಾವರಗಳಲ್ಲಿ ಅಗತ್ಯ ಸಂಗ್ರಹದ ಶೇ 25ರಷ್ಟಕ್ಕಿಂತಲೂ ಕಡಿಮೆ ಕಲ್ಲಿದ್ದಲು ಇದೆ.

ADVERTISEMENT

ನಿರಾಕರಣೆಯು ಕೇಂದ್ರ ಸರ್ಕಾರದ ನೆಚ್ಚಿನ ಕಾರ್ಯತಂತ್ರವಾಗಿದೆ. ಇದೇ ಧಾಟಿಯಲ್ಲಿಯೇ, ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವರು ಪ‍್ರಶ್ನೆ ಕೇಳಿದಾಗಲೆಲ್ಲ ಕೊರತೆಯೇ ಇಲ್ಲ ಎಂದು ಉತ್ತರಿಸಿದ್ದಾರೆ. ಆದರೆ, ರಾಜ್ಯ ಸರ್ಕಾರಗಳು ಮತ್ತು ವಿದ್ಯುತ್ ಸ್ಥಾವರಗಳ ಹೇಳಿಕೆಗೆ ಸಚಿವರ ಹೇಳಿಕೆಯು ವಿರೋಧಾಭಾಸಕರವಾಗಿದೆ. ಅತಿಯಾದ ಕೊರತೆಯನ್ನು ನೀಗಿಸುವುದಕ್ಕಾಗಿ ಸರ್ಕಾರವು ಖಾಸಗಿ ಸಂಸ್ಥೆಗಳು ಮತ್ತು ವಿದೇಶದಿಂದ ತುರ್ತಾಗಿ ಕಲ್ಲಿದ್ದಲು ಖರೀದಿಸಬೇಕಾಯಿತು. ಹಾಗಾಗಿಯೇ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಸರ್ಕಾರದ ಅಚ್ಚುಮೆಚ್ಚಿನ ಉದ್ಯಮಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಬಿಕ್ಕಟ್ಟು ಸೃಷ್ಟಿಸಲಾಗಿದೆಯೇ ಎಂಬುದು ಅಂತಹ ಒಂದು ಪ್ರಶ್ನೆ. ಅಚ್ಚುಮೆಚ್ಚಿನ ಉದ್ಯಮಗಳಲ್ಲಿ ಒಂದು ಕಲ್ಲಿದ್ದಲು ಆಮದು ಕಂಪನಿಯಾಗಿದೆ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಅಪಾರ ಲಾಭ ಮಾಡಿಕೊಂಡಿರಬಹುದು.

ಸರ್ಕಾರದ ಅದಕ್ಷತೆಯೇ ಈಗಿನ ಬಿಕ್ಕಟ್ಟಿಗೆ ಕಾರಣ ಎಂಬುದು ಹೆಚ್ಚು ಸಮಂಜಸವಾದ ಉತ್ತರ. ಕೇಂದ್ರ ವಿದ್ಯುತ್‌ ಪ್ರಾಧಿಕಾರ ಬಿಡುಗಡೆ ಮಾಡಿದ ಅಂಕಿಸಂಖ್ಯೆ ಪ್ರಕಾರ, ವಿದ್ಯುತ್‌ ಬೇಡಿಕೆಯಲ್ಲಿನ ಹೆಚ್ಚಳವನ್ನು ಗಣನೆಗೆ ತೆಗೆದುಕೊಂಡು ಅಗತ್ಯ ವ್ಯವಸ್ಥೆ ಮಾಡಿಕೊಳ್ಳದೇ ಇದ್ದುದೇ ಬಿಕ್ಕಟ್ಟಿಗೆ ಕಾರಣ. ಕೋವಿಡ್‌–19 ಸಾಂಕ್ರಾಮಿಕದ ಎರಡನೇ ಅಲೆ ಸಂದರ್ಭದಲ್ಲಿ ಉಂಟಾದ ಆಮ್ಲಜನಕ ಬಿಕ್ಕಟ್ಟಿಗೆ ಈಗಿನ ಕಲ್ಲಿದ್ದಲು ಕೊರತೆಯನ್ನು ಹೋಲಿಸಬಹುದು. ಆಗಲೂ ಸರ್ಕಾರವು ನಿದ್ದೆ ಹೊಡೆಯುತ್ತಿತ್ತು ಮತ್ತು ಸರ್ಕಾರದ ಅಸಮರ್ಪಕ ನಿರ್ವಹಣೆಯ ಹೊಡೆತವು ಜನರ ಮೇಲೆ ಬಿತ್ತು.

ನಿರಾಕರಣೆಯ ಜೊತೆಗೆ, ಲೋಪವನ್ನು ರಾಜ್ಯಗಳ ಮೇಲೆ ಹೊರಿಸುವುದು ಸರ್ಕಾರದ ಟೂಲ್‌ಕಿಟ್‌ನಲ್ಲಿರುವ ಎರಡನೇ ಮೆಚ್ಚಿನ ಕಾರ್ಯತಂತ್ರ. ಅಥವಾ ಇತರ ಸಚಿವಾಲಯಗಳ ಮೇಲೆ ಲೋಪ ಹೊರಿಸುವುದೂ ಇದೆ. ಕಲ್ಲಿದ್ದಲು ಸಾಗಿಸುವುದಕ್ಕೆ ರೈಲು ಗಾಡಿಗಳ ಲಭ್ಯತೆ ಇಲ್ಲದಿದ್ದುದೇ ಕೊರತೆಗೆ ಕಾರಣ ಎಂದು ಕೆಲವು ಅಧಿಕಾರಿಗಳು ಹೇಳಿದ್ದರು. ರೈಲ್ವೆಯು ಕೂಡ ಕೇಂದ್ರ ಸರ್ಕಾರದ ಅಧೀನದಲ್ಲಿಯೇ ಇರುವುದರಿಂದ ಇಂತಹ ನೆ‍ಪಗಳು ಸರ್ಕಾರದ ನೆರವಿಗೆ ಬರುವುದಿಲ್ಲ. ಕಲ್ಲಿದ್ದಲು ಕೊರತೆಯ ಸ್ಥಿತಿಗೆ ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಹೊಣೆ.

ಕೋಲ್‌ ಇಂಡಿಯಾ ಲಿ.ನ ಅಸರ್ಮಪಕ ನಿರ್ವಹಣೆಯಲ್ಲಿ ಕೇಂದ್ರದ ಪಾತ್ರದ ಬಗ್ಗೆಯೂ ತನಿಖೆ ನಡೆಯಬೇಕಿದೆ. ಕೋಲ್‌ ಇಂಡಿಯಾದ ನಿಧಿಯನ್ನು ಸರ್ಕಾರದ ಹಣಕಾಸು ಕೊರತೆಯನ್ನು ನೀಗಿಸುವುದಕ್ಕಾಗಿ ವರ್ಗಾಯಿಸಲಾಗಿದೆ ಎಂದು ಕಲ್ಲಿದ್ದಲು ಇಲಾಖೆಯ ಕಾರ್ಯದರ್ಶಿಯಾಗಿದ್ದ ಅನಿಲ್‌ ಸ್ವರೂಪ್‌ ಅವರು ಎರಡು ವರ್ಷಗಳ ಹಿಂದೆ ಹೇಳಿದ್ದರು. ಹೆಚ್ಚು ಹೂಡಿಕೆ ಮಾಡುವ ಕಂಪನಿಯ ಪ್ರಯತ್ನಗಳ ಮೇಲೆ ಇದು ನೇರವಾದ ಪರಿಣಾಮ ಬೀರಿತು. ಬಳಕೆಯಾಗುವ ಒಟ್ಟು ಕಲ್ಲಿದ್ದಲಿನಲ್ಲಿ ಶೇ 50ರಷ್ಟನ್ನು ಕೇಂದ್ರ ಸರ್ಕಾರವೇ ಪೂರೈಸುತ್ತಿದೆ. ಕೋಲ್‌ ಇಂಡಿಯಾದ ಸಂಪನ್ಮೂಲವನ್ನು ಬತ್ತಿಸಿದ್ದರ ಪರಿಣಾಮವು ಇಡೀ ವಲಯದ ಮೇಲೆ ಪರೋಕ್ಷ ಪರಿಣಾಮ ಬೀರಿದೆ.

ಬಿಕ್ಕಟ್ಟಿನಿಂದಾಗಿ ಪೌರರು ಮತ್ತು ಉದ್ಯಮಗಳ ಮೇಲೆ ಆದ ಪರಿಣಾಮವು ವ್ಯಾಪಕವಾದ ಚರ್ಚೆಯ ವಿಷಯ. ರಾಜ್ಯಗಳ ಹಣಕಾಸಿನ ಮೇಲೆ ಕಲ್ಲಿದ್ದಲು ಕೊರತೆಯು ಬೀರಿದ ಪರಿಣಾಮದ ಬಗ್ಗೆ ಯಾರೂ ಮಾತೇ ಆಡಿಲ್ಲ. ಬೇಡಿಕೆ ಹೆಚ್ಚಳದಿಂದಾಗಿ ವಿದ್ಯುತ್ ದರದಲ್ಲಿನ ಏರಿಕೆಯು ರಾಜ್ಯಗಳ ಹಣಕಾಸು ಸ್ಥಿತಿಯ ಮೇಲೆ ತೀವ್ರವಾದ ಒತ್ತಡ ಸೃಷ್ಟಿಸುತ್ತದೆ. ದೇಶೀಯವಾದ ಕಲ್ಲಿದ್ದಲು ಪೂರೈಕೆಯು ದೊಡ್ಡ ಪ್ರಮಾಣದಲ್ಲಿ ಸಹಾಯಧನವನ್ನು ಹೊಂದಿದೆ. ಈಗ, ರಾಜ್ಯ ಸರ್ಕಾರಗಳು ತಮ್ಮ ಮೇಲಿನ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲೇಬೇಕಾಗುತ್ತದೆ.

ದೇಶದಾದ್ಯಂತ ಕಾಣಿಸಿಕೊಂಡ ಬಿಸಿಗಾಳಿಯು ಹವಾಮಾನ ಬದಲಾವಣೆಯ ಸೂಚನೆ. ಬಿಸಿಗಾಳಿಯಿಂದ ಉಂಟಾಗುವ ಸಾವಿನ ಬವಣೆಯು, ಸುಡುವ ಉಷ್ಣತೆಯಿಂದ ರಕ್ಷಿಸಿಕೊಳ್ಳಲು ವಿದ್ಯುತ್‌ ಬಳಸಲು ಅಸಮರ್ಥರಾದ ಬಡ ಜನರು ಮತ್ತು ದುರ್ಬಲ ವರ್ಗಗಳ ಜನರಿಗೆ ತಟ್ಟುತ್ತದೆ. ವಿದ್ಯುತ್ ಉತ್ಪಾದನೆಗೆ ದೇಶವು ಮುಖ್ಯವಾಗಿ ಕಲ್ಲಿದ್ದಲಿನ ಮೇಲೆಯೇ ಅವಲಂಬಿತವಾಗಿರುವುದರಿಂದ, ಹವಾಮಾನ ಬದಲಾವಣೆ ತಡೆಯ ಜಾಗತಿಕ ಬದ್ಧತೆಗಳನ್ನು ಸಾಧಿಸಲು ಭಾರತಕ್ಕೆ ಹೆಚ್ಚಿನ ಸಮಯ ಬೇಕು ಎಂಬ ಎಚ್ಚರಿಕೆಯನ್ನೂ ಬಿಕ್ಕಟ್ಟು ನೀಡಿದೆ.

ಪ್ರೊ.ಎಂ.ವಿ.ರಾಜೀವ್‌ ಗೌಡ

ಬಿಕ್ಕಟ್ಟು ಇದೆ ಎಂಬುದನ್ನು ಕೇಂದ್ರ ಸರ್ಕಾರವು ಒಪ್ಪಿಕೊಳ್ಳಬೇಕು ಮತ್ತು ಸಂಬಂಧಪಟ್ಟವರು ನೀಡುವ ಸಲಹೆಗಳನ್ನು ಅನುಸರಿಸಿ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕು. ಇಂತಹ ಬಿಕ್ಕಟ್ಟು ಮತ್ತೊಮ್ಮೆ ಕಾಡದಂತೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ. ವಿಪತ್ತು ಮತ್ತು ತುರ್ತು ಸ್ಥಿತಿ ನಿಗಾ ಹಾಗೂ ಪ್ರತಿಸ್ಪಂದನೆ ಜಾಲಗಳನ್ನು ಸಕ್ರಿಯಗೊಳಿಸಬೇಕು. ಬಿಸಿಗಾಳಿಯು ನಿಧಾನಕ್ಕೆ ಜನರನ್ನು ಕೊಲ್ಲುತ್ತದೆ. ತಡೆಗಟ್ಟಬಹುದಾಗಿದ್ದ ಕಲ್ಲಿದ್ದಲು ಬಿಕ್ಕಟ್ಟಿನಿಂದ ಜನರು ಅನಗತ್ಯವಾಗಿ ಜೀವ ಕಳೆದುಕೊಳ್ಳುವುದನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಗಳನ್ನು ಕೈಗೊಳ್ಳಬೇಕು.

ಲೇಖಕ: ರಾಜ್ಯಸಭೆಯ ಮಾಜಿ ಸದಸ್ಯ, ಕಾಂಗ್ರೆಸ್‌ ಪಕ್ಷದ ಸಂಶೋಧನಾ ವಿಭಾಗದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.