ADVERTISEMENT

ಪ್ರಜಾವಾಣಿ ಚರ್ಚೆ: ಹುದ್ದೆ ಸಿಗದವರ ಆಕ್ಷೇಪಣೆ

ಡಾ.ಪದ್ಮಿನಿ ನಾಗರಾಜು
Published 12 ಜುಲೈ 2024, 23:59 IST
Last Updated 12 ಜುಲೈ 2024, 23:59 IST
ಪದ್ಮಿನಿ ನಾಗರಾಜು
ಪದ್ಮಿನಿ ನಾಗರಾಜು   
ಕಾಯಂ ಪ್ರಾಂಶುಪಾಲರು ಇಲ್ಲದೆ ತೊಂದರೆಗೆ ಸಿಲುಕಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರಾಂಶುಪಾಲರನ್ನು ನೇಮಕ ಮಾಡಲು ಸರ್ಕಾರ ಮನಸ್ಸು ಮಾಡಿದೆ. ಯುಜಿಸಿ ನಿಯಮ ಪ್ರಕಾರವಾಗಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಪ್ರತಿ ಹಂತದಲ್ಲೂ ಆಕ್ಷೇಪಣೆ ಸಲ್ಲಿಕೆಗೆ ಸರ್ಕಾರ ಅವಕಾಶ ನೀಡಿದೆ. ಆಗ ಸುಮ್ಮನಿದ್ದವರು, ನೇಮಕಾತಿ ಕೊನೆ ಹಂತಕ್ಕೆ ಬರುವಾಗ ಆಕ್ಷೇಪಿಸುತ್ತಿದ್ದಾರೆ. ರ‍್ಯಾಂಕ್‌ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಈ ರೀತಿ ಮಾಡುತ್ತದ್ದಾರೆ ಎಂಬುದು ನಾಮಕಾತಿ ಪರವಾಗಿರುವವರ ವಾದ...

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಗ್ರೇಡ್-1 ಪ್ರಾಂಶುಪಾಲರ 310  ಹುದ್ದೆಗಳಿಗೆ ನೇರ ನೇಮಕಾತಿ ಮಾಡುತ್ತಿರುವುದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳ ಪ್ರಕಾರವೇ ಇದೆ. ಕೆಲ ಪ್ರಾಧ್ಯಾಪಕರು ಅಸಮಾಧಾನ ವ್ಯಕ್ತಪಡಿಸಿದ ಮಾತ್ರಕ್ಕೆ ನಿಯಮ ಬಾಹಿರವಾಗಿದೆ ಎಂದಲ್ಲ. ಐದು ವರ್ಷಗಳಿಗೆ ಗುತ್ತಿಗೆ ಎನ್ನುವುದಾದರೆ, ನಾಲ್ಕು ವರ್ಷಗಳಿಗೆ ನೇಮಕವಾಗುವ ಕುಲಪತಿ ಸೇರಿದಂತೆ ಸೀಮಿತ ಅವಧಿಯ ಎಲ್ಲ ಹುದ್ದೆಗಳನ್ನೂ ‘ಗುತ್ತಿಗೆ’ ಎನ್ನಬೇಕಾಗುತ್ತದೆ.

ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಸ್ತುತ ಕಾಯಂ ಪ್ರಾಂಶುಪಾಲರೇ ಇಲ್ಲ. ಪ್ರಭಾರ ಪ್ರಾಂಶುಪಾಲರೇ ಇರುವುದರಿಂದ ವಿದ್ಯಾರ್ಥಿಗಳ ಹಾಗೂ ಕಾಲೇಜುಗಳ ಹಿತದೃಷ್ಟಿಯಿಂದ ಪ್ರಾಂಶುಪಾಲರ ನೇಮಕದ ಅಗತ್ಯ ಇರುವುದನ್ನು ಮನಗಂಡು ಹೊಸ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದೆ.

ಈಗಾಗಲೇ ಪರೀಕ್ಷೆ ನಡೆದು ಫಲಿತಾಂಶ ಪ್ರಕಟಿಸಲಾಗಿದೆ. ಹಿಂದಿನ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿತ್ತು (ಸಂಖ್ಯೆ ಇಡಿ 121 ಡಿಸಿಇ 2018 ದಿನಾಂಕ 09.02.2020). ನಂತರ ಪರೀಕ್ಷೆ ಮುಂದೂಡಿ, ಪರೀಕ್ಷೆ ನಡೆಸಲಾಯಿತು. ಸರ್ಕಾರವು ಅಧಿಸೂಚನೆ ಹೊರಡಿಸುವ ಪೂರ್ವದಲ್ಲೇ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರಾಧ್ಯಾಪಕರ ಕೋರಿಕೆಯಂತೆ ಮಾರ್ಪಾಡುಗಳನ್ನೂ ಮಾಡಲಾಗಿತ್ತು. ಅಧಿಸೂಚನೆಯಲ್ಲಿ ಎಲ್ಲಿಯೂ ಸರ್ಕಾರಿ ಅಥವಾ ಖಾಸಗಿ ಅಭ್ಯರ್ಥಿಗಳಿಗೆ ಎಂದು ಇರಲಿಲ್ಲ. ನೇಮಕಾತಿಗೆ 55 ವರ್ಷದ ಮೇಲ್ಪಟ್ಟವರನ್ನೂ ಪರಿಗಣಿಸಲಾಗಿದೆ. ವಯಸ್ಸಾದವರು ನಿವೃತ್ತಿ ಹೊಂದಿದ ನಂತರ ಮತ್ತೆ ಭರ್ತಿ ಮಾಡಲು, ಈಗ ನೇಮಕವಾದವರ ಅವಧಿ ಮುಗಿದ ನಂತರ ತಮ್ಮ ಮೂಲ ಹುದ್ದೆಯಲ್ಲಿ ಬೋಧಕರಾಗಿ ಮುಂದುವರಿಯಲು ನೇಮಕಾತಿ ನಿಯಮದಲ್ಲೇ ಅವಕಾಶ ಕಲ್ಪಿಸಲಾಗಿದೆ.  

ADVERTISEMENT

ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮದ ಪ್ರಕಾರ, ಸಹಾಯಕ ಪ್ರಾಧ್ಯಾಪಕ ಬಡ್ತಿ ಪಡೆದು, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಆಗಬಹುದೇ ವಿನಾ, ಬಡ್ತಿ ಮೂಲಕ ಪ್ರಾಂಶುಪಾಲರ ಹುದ್ದೆಗೆ ಬರಲು ಸಾಧ್ಯವಿಲ್ಲ. ನೇರ ನೇಮಕಾತಿ ಮೂಲಕವೇ ಪ್ರಾಂಶುಪಾಲರ ಹುದ್ದೆಯನ್ನು ಪಾರದರ್ಶಕವಾಗಿ ನೇಮಕ ಮಾಡಬೇಕು ಎನ್ನುವುದು ಯುಜಿಸಿ ನಿಯಮ. ಆ ಮೂಲಕ, ದಕ್ಷ, ಬುದ್ಧಿವಂತ ಅಭ್ಯರ್ಥಿಗಳು ಪರೀಕ್ಷೆ ಮೂಲಕ ನೇಮಕವಾಗುತ್ತಾರೆ. ನೇಮಕಾತಿ ಅಧಿಸೂಚನೆ ಸಮಯದಲ್ಲಿ ಇಲ್ಲದ ಆಕ್ಷೇಪಣೆಗಳು ಈಗ ಏಕೆ? ಸರ್ಕಾರಿ ಹಾಗೂ ಖಾಸಗಿ ಎನ್ನುವ ಹೆಸರಿನಲ್ಲಿ ಸರ್ಕಾರವನ್ನು ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ. ಯುಜಿಸಿ ನಿಯಮದ ಪ್ರಕಾರ ಸಂಬಳ ಪಡೆಯುವವರು ಅದೇ ನಿಯಮದ ಪ್ರಕಾರ ನೇಮಕಾತಿಯನ್ನು ಮಾಡಲು ಹೊರಟರೆ ಆಕ್ಷೇಪಿಸುತ್ತಿರುವುದೇಕೆ?

ಎಲ್ಲ ಕಡೆಗಳಲ್ಲೂ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ತೀವ್ರ ಸ್ಪರ್ಧೆ ಇದೆ. ಹೀಗಿರುವಾಗ ಖಾಸಗಿಯವರನ್ನು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಿಸಿದರೆ ಸರ್ಕಾರಿ ಪದವಿ ಕಾಲೇಜುಗಳ ಗತಿ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮೇಲೆ ದುಷ್ಪರಿಣಾಮವಾಗುತ್ತದೆ ಎಂದು ಆಕ್ಷೇಪಿಸುತ್ತಿದ್ದಾರೆ. ಖಾಸಗಿ ಕಾಲೇಜಿನ ಪ್ರಾಂಶುಪಾಲರ ಸಂಬಳಕ್ಕೂ, ಯುಜಿಸಿ ನಿಯಮದಂತೆ ಇವರು ಪಡೆಯುತ್ತಿರುವ ಸಂಬಳಕ್ಕೂ ಅಜಗಜಾಂತರ ಇರುವುದು ಇವರ ಗಮನಕ್ಕೆ ಬಂದಿಲ್ಲವೇ? ಇಲ್ಲಿ ತಿಕ್ಕಾಟದ ಪ್ರಶ್ನೆಯೇ ಇಲ್ಲ. ಸೌಲಭ್ಯದ ಪ್ರಶ್ನೆಯಿದೆ. ಯಾವುದೇ ಕಾಲೇಜು ಎಂತಹ ಸೌಲಭ್ಯ ನೀಡುತ್ತದೆ, ಅಲ್ಲಿ ಪ್ರತಿಭಾವಂತ ಪ್ರಾಧ್ಯಾಪಕರು ಯಾರಿದ್ದಾರೆ ಎನ್ನುವುದನ್ನು ಆಧರಿಸಿ ವಿದ್ಯಾರ್ಥಿ ಕಾಲೇಜಿಗೆ ಪ್ರವೇಶಾತಿಯನ್ನು ಪಡೆಯುತ್ತಾನೆಯೇ ವಿನಾ ಪ್ರಾಂಶುಪಾಲರು ಯಾರಿದ್ದಾರೆ ಎಂದಲ್ಲ.

ವಿಶ್ವವಿದ್ಯಾಲಯಗಳಲ್ಲಿರುವ ಬೋಧಕರ ಹುದ್ದೆಗಳ ಮಾದರಿಯಲ್ಲಿ ಸ್ನಾತಕ ಪದವಿ (ಯುಜಿ) ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರು ಎಂದು ಸಿಎಎಸ್‌ (ಕರಿಯರ್‌ ಅಡ್ವಾನ್ಸ್‌ ಮೆಂಟ್‌ ಸ್ಕೀಮ್‌) ನಿಯಮಗಳ ಮೂಲಕ ಬೋಧನಾ ವಿಷಯಗಳಲ್ಲಿ ಪರಿಣತಿ ಪಡೆದು, ಬಡ್ತಿಯನ್ನು ಹೊಂದಲು ಅವಕಾಶವನ್ನು ಎಲ್ಲ ಬೋಧಕರಿಗೂ ಕಲ್ಪಿಸಿದೆ. ಪ್ರಾಧ್ಯಾಪಕ ಪದವಿಯು ಶಿಕ್ಷಣ ಮಹಾವಿದ್ಯಾಲಯಗಳಲ್ಲಿ‌ ಅತ್ಯಂತ ಉನ್ನತ ಗೌರವಾನ್ವಿತ ಪದವಿ. ವಿಶ್ವವಿದ್ಯಾಲಯದ ಮಾದರಿಯಲ್ಲಿ ಸಮಾನ ವೇತನ ಶ್ರೇಣಿಗಳನ್ನು ಸೃಷ್ಟಿಸಲಾಗಿದೆ. ಪ್ರಾಧ್ಯಾಪಕ ಹುದ್ದೆಯು ಶೈಕ್ಷಣಿಕ ಶ್ರೇಷ್ಠತೆ ಹೊಂದಿದ್ದರೆ, ಪ್ರಾಂಶುಪಾಲರ ಹುದ್ದೆ ಆಡಳಿತಾತ್ಮಕವಾಗಿದೆ.

ಸರ್ಕಾರಿ ಪ್ರಾಧ್ಯಾಪಕರು ಯುಜಿಸಿ ನಿಯಮವನ್ನು ತಮಗೆ ಬೇಕಾದಂತೆ ಅನ್ವಯ ಮಾಡಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ತಮ್ಮ ವೇತನ ‘ಯುಜಿಸಿ ಸ್ಕೇಲ್‌’ನಂತೆ ಇರಬೇಕು ಎಂದು ಬಯಸುವ ಸರ್ಕಾರಿ ಕಾಲೇಜಿನ ಅಧ್ಯಾಪಕರು, ರಜೆ ಇನ್ನಿತರ ಸೌಲಭ್ಯಗಳನ್ನು ಹಾಗೆಯೇ ಬಳಸಿಕೊಳ್ಳುವುದಿಲ್ಲವೇ? ಖಾಸಗಿ ಕಾಲೇಜುಗಳಲ್ಲಿ ವೇತನವೂ ಕಡಿಮೆ, ಕೆಲಸವೂ ಹೆಚ್ಚು, ರಜೆಯ ಸೌಲಭ್ಯಗಳೂ ಸರಿಯಾಗಿ ಇರುವುದಿಲ್ಲ. ಕಾಲೇಜಿನ ಆಡಳಿತ ಮಂಡಳಿಯ ಮರ್ಜಿಯಂತೆ ಕೆಲಸದ ಒತ್ತಡಕ್ಕೆ ಒಳಗಾಗುವ ಖಾಸಗಿ ಅಧ್ಯಾಪಕರ ಕಷ್ಟದ ಅರಿವು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರಿಗಿಲ್ಲ. ಖಾಸಗಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೇ 20-25 ವರ್ಷ ಕಾರ್ಯ ನಿರ್ವಹಿಸಿದ ಪ್ರತಿಭಾವಂತರಿಗೆ, ಪ್ರಾಂಶುಪಾಲರಾಗಲು ಇದೊಂದು ಅವಕಾಶ. ವಯೋಮಿತಿಯ ಅಡ್ಡಿಯೂ ಇಲ್ಲದಿರುವುದರಿಂದ ಅನೇಕ ಪ್ರತಿಭಾವಂತರು ತಮ್ಮ ಕನಸು ನನಸಾಗುವುದನ್ನು ಕಾಯುತ್ತಿದ್ದಾರೆ.

ಇಲ್ಲಿ ಸರ್ಕಾರಿ, ಖಾಸಗಿ ಪ್ರಶ್ನೆಯೇ ಬರುವುದಿಲ್ಲ. ಅರ್ಹತೆಯುಳ್ಳ ಅಭ್ಯರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್‌ ಪಡೆದು ಪ್ರಾಂಶುಪಾಲರಾಗುತ್ತಾರೆ. ಪ್ರತಿಭೆಗೆ ಖಾಸಗಿ, ಸರ್ಕಾರಿ ಎನ್ನುವ ಅಳತೆಗೋಲೇ ಸರಿಯಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಷ್ಟೇ ಮುಖ್ಯವಾಗಬೇಕು. ಇದು ಸರ್ಕಾರಿ ಕಾಲೇಜುಗಳಿಗೆ ಸೇರುತ್ತಿರುವ ಬಡ, ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಸೇತುವಾಗಬೇಕು. ಸರ್ಕಾರ ಈ ದಿಸೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವುದನ್ನು ಪ್ರತಿಭಟಿಸಿ ಅಡ್ಡಗಾಲು ಹಾಕುವುದನ್ನು ತಕ್ಷಣ ನಿಲ್ಲಿಸಬೇಕು. ಶಬರಿಯಂತೆ ಕಾಯುತ್ತಿರುವ ಅರ್ಹರಿಗೆ ಈ ಹುದ್ದೆಗಳು ದಕ್ಕುವಂತಾಗಿ ಸರ್ಕಾರಿ ಕಾಲೇಜುಗಳು ಸರ್ಕಾರಕ್ಕೆ ಕೀರ್ತಿ ತರುವಂತಾಗಬೇಕು.

ಈಗ ವಿಶ್ವವಿದ್ಯಾಲಯಕ್ಕೆ ನೇಮಕಗೊಳ್ಳುವ ಕುಲಪತಿಗಳು ತಮ್ಮ ನಾಲ್ಕು ವರ್ಷದ ಅವಧಿಯನ್ನು ಮುಗಿಸಿ ಹೊರ ಹೋಗುವುದಿಲ್ಲವೇ? ಹಾಗೇ ಯುಜಿಸಿ ನಿಯಮ ನಿಗದಿಗೊಳಿಸಿರುವ ಐದು ವರ್ಷಗಳ ಅವಧಿಗೆ ನೇಮಕವಾಗುವ ಪ್ರಾಂಶುಪಾಲರು ತಮ್ಮ ದಕ್ಷತೆ ತೋರಿದಲ್ಲಿ ಅವಧಿ ವಿಸ್ತರಿಸಲು ನಿಯಮಗಳಲ್ಲೇ ಅವಕಾಶವಿರುವುದನ್ನು ಉನ್ನತ ಶಿಕ್ಷಣ ಸಚಿವರೂ ಖಚಿತಪಡಿಸಿದ್ದಾರೆ.

ಈಗಾಗಲೇ ಅನೇಕ ದಿವ್ಯಗಳನ್ನು ದಾಟಿ ಪರೀಕ್ಷೆ ನಡೆದು, ರ‍್ಯಾಂಕಿಗ್‌ ಪಟ್ಟಿ ಬಿಡುಗಡೆಯಾಗಿದೆ. ಯಾರು ಅರ್ಹತೆಯ ಪಟ್ಟಿಯಲ್ಲಿ ಆಯ್ಕೆಯಾಗಿಲ್ಲವೋ ಅವರು ಈ ನೇಮಕಾತಿ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಆಕ್ಷೇಪಣೆ ಎತ್ತಿದ್ದಾರೆ. ಕೆಲವರು ಯೋಗ್ಯವಲ್ಲದವರು ಅರ್ಹತೆ ಗಳಿಸಿದ್ದಾರೆ ಎಂದು ಕೂಗುತ್ತಿದ್ದಾರೆ. ಅರ್ಹತೆಯ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ಸೇವಾ ದಾಖಲೆಗಳನ್ನೇ ಪರಿಶೀಲಿಸದೆ ಅವರು ಅರ್ಹರಲ್ಲ ಎಂದು ವಿರೋಧಿಸುವುದು ಸರಿಯಲ್ಲ. ಯುಜಿಸಿಯ ಮಾನದಂಡಕ್ಕೆ ಅನುಗುಣವಾಗಿಯೇ ಸರ್ಕಾರ ಪರೀಕ್ಷೆ ನಡೆಸಿದೆ. ಆಯ್ಕೆಯಾದ ಅಭ್ಯರ್ಥಿಯ ದಾಖಲೆ ಪರಿಶೀಲಿಸಿದ ಮೇಲೆ ಅವರನ್ನು ಅರ್ಹರೋ ಅನರ್ಹರೋ ಎಂದು ಹೇಳಬೇಕಲ್ಲವೇ? ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿರುವ ಈ ಸಂದರ್ಭದಲ್ಲಿ ಹುದ್ದೆ ಸಿಗುವುದಿಲ್ಲ ಎಂದು ಮನಗಂಡ ಕೆಲವರು ಮಾಡುತ್ತಿರುವ ಆಕ್ಷೇಪಗಳಿವು. ಬಹುತೇಕ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರು ಈ ನೇಮಕಾತಿ ಪ್ರಕ್ರಿಯೆಯ ಪರವಾಗಿದ್ದಾರೆ. ರ‍್ಯಾಂಕಿನ ಪಟ್ಟಿಯಲ್ಲಿಲ್ಲದ ಕೆಲವರು ಮಾತ್ರ ಈ ಹಂತದಲ್ಲಿ ಆಕ್ಷೇಪಿಸುತ್ತಿದ್ದಾರೆ ಎಂಬುದು ಸ್ವಷ್ಟವಾಗಿ ಗೋಚರಿಸುತ್ತಿದೆ.

ಇಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ನೇರ ನೇಮಕಾತಿ ಹುದ್ದೆಗೆ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆದಿದ್ದು, ಅದಕ್ಕಾಗಿ ಅರ್ಹ ಅಭ್ಯರ್ಥಿಗಳು ₹5,000 ಶುಲ್ಕವನ್ನು ಭರಿಸಿದ್ದಾರೆ. ಜೊತೆಗೆ ಪರೀಕ್ಷೆಗಾಗಿ ಕಷ್ಟಪಟ್ಟು ತಯಾರಿ ನಡೆಸಿದ್ದಾರೆ. ಪರೀಕ್ಷೆ ಮುಂದೂಡಿದಾಗಲೂ ತಾಳ್ಮೆ ವಹಿಸಿ ಕಾದಿದ್ದಾರೆ. ಅನೇಕ ಆಕ್ಷೇಪಣೆಗಳಿಗೆ ಅವಕಾಶ ನೀಡಿರುವ ಸರ್ಕಾರ ಯುಜಿಸಿ ನಿಯಮದ ಪ್ರಕಾರವೇ ಪರೀಕ್ಷೆ ನಡೆಸಿದೆ. ಅಂತೂ ಫಲಿತಾಂಶ ಪ್ರಕಟಿಸಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ರ‍್ಯಾಂಕ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಉನ್ನತ ಶಿಕ್ಷಣದಲ್ಲಿ ಬದಲಾವಣೆಗಳನ್ನು ತಂದು ಕಾಲೇಜು ಶಿಕ್ಷಣದ ಆಡಳಿತದಲ್ಲಿ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ತಮ ಆಡಳಿತ ನಿರ್ವಹಿಸಲು ಸಮರ್ಥರನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನೇರ ನೇಮಕಾತಿ ಮೂಲಕ ಅರ್ಹರನ್ನು ಮಾಡಲು ತೀರ್ಮಾನಿಸಿರುವುದು ಸರಿಯಾಗಿದೆ. ಹಾಗಾಗಿ, ನೇಮಕಾತಿ ಪ್ರಕ್ರಿಯೆ ತಡೆಹಿಡಿಯದೆ ಶೀಘ್ರ ಕಾನೂನು ಸಲಹೆ ಪಡೆದು, ಅರ್ಹ ಅಭ್ಯರ್ಥಿಗಳಿಗೆ ತ್ವರಿತವಾಗಿ ನೇಮಕಾತಿ ಆದೇಶ ನೀಡಲಿ.

ಲೇಖಕಿ: ಬೆಂಗಳೂರಿನ ರಾಣಿ ಸರಳಾದೇವಿ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.