ವಿದ್ವೇಷದ ಸಂದರ್ಭದಲ್ಲಿ ಅದಕ್ಕೆ ಭಿನ್ನವಾಗಿ ವಿರೋಧಿಯನ್ನು ದ್ವೇಷವಿಲ್ಲದೆ, ಕರ್ತವ್ಯದ ನೆಲೆಯಲ್ಲಿ ನಿರ್ವಹಿಸುವ ಶಾಸ್ತ್ರವೊಂದು ದ್ವೇಷಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅವಶ್ಯ ಬೇಕು. ಗೀತೆ ಅಂಥ ಒಂದು ಅವಶ್ಯ ಆಕರ.
**
ಮಹಾಭಾರತದ ಭೀಷ್ಮಪರ್ವದಲ್ಲಿ ಬರುವ ಭಗವದ್ಗೀತೆ ಅದರ ಒಂದು ಅವಿಭಾಜ್ಯ ಅಂಗವೇ ಆಗಿದೆ. ಮಹಾಭಾರತವನ್ನು ಬಿಟ್ಟು ಭಗವದ್ಗೀತೆಯನ್ನು ಚಿಂತಿಸಲಾಗದು. ಭಗವದ್ಗೀತೆಯನ್ನು ಹೊರತಾಗಿಸಿ ಮಹಾಭಾರತವನ್ನೂ ನೋಡಲಾಗದು. ಅಂಥ ಅವಿನಾಭಾವ ಸಂಬಂಧ ಅವೆರಡರೊಳಗಿನದು.
ಗೀತೆ, ಭೀಷ್ಮಪರ್ವದಲ್ಲಿ ಬರುತ್ತದೆ ಎಂಬುದೇ ವಿಶೇಷ. ಗೀತೆಯು ಕೃಷ್ಣ ಮತ್ತು ಅರ್ಜುನರ ಸಂವಾದವಾಗಿದೆ. ಅದರೆ, ಇವರ ಸಂವಾದದ ಮಧ್ಯೆಯೇ ಒಮ್ಮೆ ಧೃತರಾಷ್ಟ್ರ ಮತ್ತು ಪದೇಪದೇ ಸಂಜಯ ಬಂದುಹೋಗುತ್ತಾರೆ. ಇಲ್ಲಿ ಪಾಂಡವರು ಮತ್ತು ಕೌರವರು ಎರಡು ಪಕ್ಷಗಳಾಗಿ ಯುದ್ಧಕ್ಕೆ ನಿಂತಿದ್ದಾರೆ. ಪಾಂಡವರಿಗೆ ಬೆಂಬಲವಾಗಿ ಕೃಷ್ಣ ನಿಂತಿದ್ದಾನೆ. ಹೀಗೆ ಕೃಷ್ಣಾರ್ಜುನರು ಒಂದು ಪಕ್ಷ. ಅವರ ವಿರುದ್ಧ ಇರುವ ಕೌರವನ ಬೆಂಬಲಕ್ಕೆ ಬಂದ ಭೀಷ್ಮ ಇನ್ನೊಂದು ಪಕ್ಷ. ಆದರೆ ಗೀತೆಯು ಪ್ರತ್ಯೇಕ ಪರ್ವವಾಗದೆ, ಕೃಷ್ಣಾರ್ಜುನರ ಎದುರಾಳಿ ಪಕ್ಷದವನಾದ ಭೀಷ್ಮಪರ್ವದಲ್ಲಿ ಬರುತ್ತದೆ. ಇದು ಗೀತೆಯಒಳಗೊಳ್ಳುವಿಕೆಯ ಗುಣವನ್ನು ಸೂಚಿಸುವಂತಿದೆ.ಎಲ್ಲರನ್ನೂ ಒಳಗೊಳ್ಳುವ ಸಂಗತಿಯಲ್ಲವೇ ತತ್ತ್ವವೆಂದೆನಿಸಿಕೊಳ್ಳುವುದು? ಮತ್ತು ಅಂಥ ತತ್ತ್ವ ವಿಚಾರವಲ್ಲವೇ ಪೀಳಿಗೆಯನ್ನು ತಯಾರುಮಾಡುವ ಶಿಕ್ಷಣದ ಅಂಗವಾಗಬೇಕಾದುದು?
ನಮ್ಮ ತತ್ತ್ವಪರಂಪರೆಯಲ್ಲಿ ವಿರೋಧಭಕ್ತಿಗೂ ಸ್ಥಾನವಿದೆ. ಇನ್ನಾವುದೇ ಪರಂಪರೆಯಲ್ಲಿ ಲಭ್ಯವಾಗದ ಸ್ಥಾನವಿದು. ಶ್ರೀಹರಿಯ ದ್ವಾರಪಾಲಕರಾದ ಶಪ್ತ ಜಯವಿಜಯರು ತಮ್ಮ ಆರಾಧ್ಯವಸ್ತುವನ್ನು ಶೀಘ್ರ ಹೊಂದಲು ಆಯ್ದುಕೊಂಡದ್ದು, ಅದೇ ಆರಾಧ್ಯವಸ್ತುವನ್ನು ದ್ವೇಷಿಸುವ ಜನ್ಮಗಳನ್ನು.
ಮಹಾಭಾರತವು ಇನ್ನೊಂದು ಬಗೆಯ ವಿರೋಧಭಕ್ತಿಯನ್ನು ಕಟ್ಟಿಕೊಟ್ಟಿದೆ. ಇಲ್ಲಿ ಭೀಷ್ಮ ಕೃಷ್ಣಭಕ್ತ. ಅವನಿಗೆ ತನ್ನ ಮೊಮ್ಮಕ್ಕಳಾದ ಪಾಂಡವರ ಮೇಲೂ ಪ್ರೀತಿ ಇದೆ. ಆದರೆ ಕೌರವಪಾಳಯವನ್ನು ಬಿಡಲಾಗದ ಅನಿವಾರ್ಯತೆಯಿದೆ. ಯುದ್ಧಭೂಮಿಯಲ್ಲಿ ತನ್ನ ಗುರುಹಿರಿಯರನ್ನು, ಮುಖ್ಯವಾಗಿ ಭೀಷ್ಮನನ್ನು ನೋಡಿ ಅರ್ಜುನ ಮೈಬಸವಳಿದುಹೋದವನಂತಾದ. ಯುದ್ಧವಿಮುಖನಾದ. ಅಂಥ ಅರ್ಜುನನ್ನು ಯುದ್ಧೋನ್ಮುಖನನ್ನಾಗಿಸಿ ತನ್ನ ಭಕ್ತನೆನಿಸಿದ ಭೀಷ್ಮನನ್ನು ಒರಗಿಸುತ್ತಾನೆ ಕೃಷ್ಣ. ತನ್ನ ಆರಾಧ್ಯವಸ್ತುವನ್ನು ಯುದ್ಧಾಂಗಣದಲ್ಲಿ ವಿರೋಧಿಸಿಯೂ ಭಕ್ತಿಯನ್ನು ಕಾಪಿಟ್ಟುಕೊಳ್ಳಬಲ್ಲ ಭೀಷ್ಮನೊಂದು ಕಡೆ. ಭಕ್ತನೇ ಆದರೂ, ಧರ್ಮಿಯೇ ಆದರೂ ಅಧರ್ಮದ ಪಕ್ಷದಲ್ಲಿದ್ದರೆ ಒರಗಿಸುವ ಕೃಷ್ಣ ಇನ್ನೊಂದು ಕಡೆ. ಬದುಕಿನಲ್ಲಿ ಒದಗಬಹುದಾದ ಧರ್ಮಜಿಜ್ಞಾಸೆಗೆ, ಧರ್ಮಸೂಕ್ಷ್ಮತೆಗೆ ಇಲ್ಲೊಂದು ಪರಿಹಾರದ ದಿಕ್ಸೂಚಿ ಇದೆಯೆಂದೆನಿಸುವುದಿಲ್ಲವೇ? ಇಂಥ ದಿಕ್ಸೂಚಿಯನ್ನು ನೀಡಬೇಕಾದುದು ಶಿಕ್ಷಣದ ಕರ್ತವ್ಯವೂ ಹೌದು.
ಗೀತೆಯನ್ನು ಯುದ್ಧಪ್ರಚೋದಕವೆಂದು ಕೆಲವರು ಆಕ್ಷೇಪಿಸುವುದಿದೆ. ಆ ಉದ್ದೇಶವಿದ್ದಂತೆ ತೋರುವುದಿಲ್ಲ. ಅದೇ ಅದರ ಉದ್ದೇಶವಾಗಿದ್ದರೆ ಅರ್ಜುನನನ್ನು ಪ್ರಚೋದಿಸಲು ಕೃಷ್ಣನ ಬಳಿ ಅದೆಷ್ಟು ಸರಕುಗಳಿರಲಿಲ್ಲ! ವಿಷತಿನ್ನಿಸಿದ್ದು, ಅರಗಿನಮನೆಯನ್ನು ಸುಟ್ಟು ಕೊಲ್ಲಹೊರಟಿದ್ದು, ಮೋಸದ ಜೂಜಾಡಿ ರಾಜ್ಯವನ್ನೇ ಅಪಹರಿಸಿದ್ದು, ಪತ್ನಿಯ ಮಾನಭಂಗಗೈದಿದ್ದು... ಒಂದೇ ಎರಡೇ! ಇವುಗಳಲ್ಲಿ ಯಾವುದೇ ಒಂದನ್ನು ನೆನಪಿಸಿದರೂ ಸಾಕು, ಮತ್ತೆ ಯುದ್ಧಪ್ರಚೋದನೆಯ ಬೇರೆ ವಾಕ್ಯಗಳು ಬೇಕಾಗಿ ಬರವು. ಆದರೆ ಕೃಷ್ಣ ಇವುಗಳ ಉಸಾಬರಿಗೇ ಹೋಗದೆ, ಯುದ್ಧವಿಮುಖನಾಗಿ ನಿರ್ವೀರ್ಯನಂತೆ ಕುಸಿದಿದ್ದ ಅರ್ಜುನನಿಗೆ ಆತ್ಮತತ್ತ್ವವನ್ನು ಬೋಧಿಸುತ್ತ ಅದರ ಆಧಾರದಲ್ಲಿ ಇಹದ ಕರ್ತವ್ಯವನ್ನು ನೆನಪಿಸಿದ.
ಸುಮ್ಮನೆ ಇದ್ದವರ ಮೇಲೆ ಯುದ್ಧಸಾರಲು ಪ್ರಚೋದಿಸಿದರೆ ಅದು ಯುದ್ಧಪ್ರಚೋದಕವಾದೀತು. ತನ್ನ ಮೇಲೆ ಯುದ್ಧಘೋಷಣೆಯಾದಾಗ ಅದಕ್ಕೆ ವಿಮುಖನಾದವನನ್ನು ಯುದ್ಧಮಾಡುವಂತೆ ಪ್ರಚೋದಿಸಿದರೆ ಅದು ಯುದ್ಧಪ್ರಚೋದಕವಲ್ಲ, ಕರ್ತವ್ಯಪ್ರಚೋದಕವಾಗುತ್ತದೆ. ಪಾಂಡವರ ಮೇಲೆ ಯುದ್ಧವು ಹೇರಲ್ಪಟ್ಟಿತೇ ವಿನಾ ಅವರೇ ಯುದ್ಧವನ್ನು ಹೇರಿದವರಲ್ಲವಲ್ಲ! ಯುದ್ಧದಂಥ ಸಂದರ್ಭದಲ್ಲಿ ದ್ವೇಷಭಾವದಿಂದ ಕರ್ತವ್ಯವನ್ನು ಪ್ರಚೋದಿಸಬಹುದು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಕೃಷ್ಣ ತೊಡಗಿದ್ದರಿಂದ ಕೃಷ್ಣಾರ್ಜುನಸಂವಾದವು ಬರಿಯ ಸಂವಾದವಾಗದೆ ಭಗವದ್ಗೀತೆಯಾಯಿತು.
ಇಂದಿನ ಉದ್ಯೋಗಮುಖೀ ಶಿಕ್ಷಣವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಾರ್ಥಿಗಿಂತ ಹೆಚ್ಚಾಗಿ ಉದ್ಯೋಗಾರ್ಥಿಯೆನಿಸಿಕೊಂಡಿದ್ದಾನೆ. ಪ್ರತಿಯೊಬ್ಬನಿಗೂ ಪ್ರತಿಯೊಬ್ಬನೂ ಪ್ರತಿಸ್ಪರ್ಧಿಯೆಂದೇ ತೋರುತ್ತಾನೆ. ಶಾಲೆಗೆ ಪ್ರವೇಶಪಡೆಯುವಲ್ಲಿಂದ ಹಿಡಿದು ಉದ್ಯೋಗದಲ್ಲಿ ಬಡ್ತಿ ಪಡೆಯುವವರೆಗೆ ಎಲ್ಲರಿಗೆ ಜತೆಗಿರುವ ಉಳಿದೆಲ್ಲರೂ ಪ್ರತಿಸ್ಪರ್ಧಿಗಳೇ. ಇಂಥ ಪೈಪೋಟಿಯ ವ್ಯವಸ್ಥೆಯೇ ದೋಷದಿಂದ ಕೂಡಿದ್ದು. ಅಂಥಲ್ಲಿ ಸ್ಪರ್ಧೆ ಹುಟ್ಟುಹಾಕಬಲ್ಲ ದ್ವೇಷವನ್ನು ಇಲ್ಲವಾಗಿಸಲು ಗೀತೆಯಷ್ಟು ಸಹಾಯಕ ಇನ್ನಾವುದಿದ್ದೀತು? ವಿದ್ವೇಷದ ಸಂದರ್ಭದಲ್ಲಿ ಅದಕ್ಕೆ ಭಿನ್ನವಾಗಿ ವಿರೋಧಿಯನ್ನು ದ್ವೇಷವಿಲ್ಲದೆ, ಕರ್ತವ್ಯದ ನೆಲೆಯಲ್ಲಿ ನಿರ್ವಹಿಸುವ ಶಾಸ್ತ್ರವೊಂದು ದ್ವೇಷಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅವಶ್ಯ ಬೇಕು. ಗೀತೆ ಅಂಥ ಒಂದು ಅವಶ್ಯ ಆಕರ.
ಇಂದು ನಾವು ಯಾವುದೇ ಕೆಲಸಮಾಡಹೊರಟರೂ ಏನು ಲಾಭ ಎಂದೇ ಲೆಕ್ಕಾಚಾರದಲ್ಲಿ ಮುಳುಗುತ್ತೇವೆ. ಶಿಕ್ಷಣ ಪಡೆಯುವುದೇ ಹೆಚ್ಚು ಸಂಬಳದ ಉದ್ಯೋಗಕ್ಕಾಗಿ ಎಂಬ ಲೆಕ್ಕಾಚಾರವಿದೆ. ಇಂಥಲ್ಲಿ ಲಾಭನಷ್ಟದ ಲೆಕ್ಕಾಚಾರಕ್ಕಿಂತ ಆಚೆನಿಂತು ಯೋಚಿಸಬಲ್ಲ ವ್ಯಕ್ತಿಗಳ ನಿರ್ಮಾಣ ಮಾಡಬೇಕಾದ ಆವಶ್ಯಕತೆಯಿದೆ. ಅದನ್ನು ಪೂರೈಸಬಲ್ಲುದು ಗೀತೆ.
ಪಠ್ಯಕ್ರಮದಲ್ಲಿ ಆಯಾ ದೇಶಗಳ ಪರಂಪರೆ, ಮತ ಇತ್ಯಾದಿಗಳಿಗೆ ಸಂಬಂಧಿಸಿದ ಅಂಶಗಳೂ ಇರಬೇಕೆಂಬುದು ಬಹುತೇಕ ಎಲ್ಲ ದೇಶಗಳಲ್ಲಿ ಪಾಲಿಸಿಕೊಂಡು ಬರಲಾಗುತ್ತಿರುವ ನಿಯಮ. ಶ್ರೀಲಂಕಾದ ವಿದ್ಯಾರ್ಥಿಗಳು ಬೌದ್ಧಮತದ ವಿಚಾರಗಳನ್ನು ಅರಿತುಕೊಳ್ಳದೆ ಶಿಕ್ಷಣ ಪೂರ್ತಿಯಾಗುವುದಿಲ್ಲ. ತೀರಾ ಸೆಕ್ಯುಲರ್ ಎಂದುಕೊಳ್ಳುವ ಅಮೆರಿಕ, ಇಂಗ್ಲೆಂಡ್ ಮತ್ತಿತರ ಐರೋಪ್ಯ ದೇಶಗಳಲ್ಲಿ ಕೂಡಾ ಬೈಬಲ್‌ನ ವಿಷಯವಿಲ್ಲದೆ ಶಾಲಾಶಿಕ್ಷಣ ಪೂರೈಸಲ್ಪಡುವುದಿಲ್ಲ. ಆದರೆ ಅಲ್ಲಿಂದಲೇ ತಪ್ಪಾಗಿ ಇಲ್ಲಿಗೆ ಬಂದ ಸೆಕ್ಯುಲರ್‌ನ ಹೆಸರಿನಲ್ಲಿ ಭಾರತೀಯವಾದುದನ್ನೆಲ್ಲ ತಿರಸ್ಕರಿಸುವ, ತುಚ್ಛೀಕರಿಸುವ ಜಾಯಮಾನ ಬೆಳೆದಿದೆ.
ಸೆಕ್ಯುಲರ್ ಹೆಸರಿನಲ್ಲಿ ಮತ್ತೊಂದು ವಾದವೂ ಕೆಲಸ ಮಾಡುತ್ತಿದೆ. ಅದೆಂದರೆ; ಗೀತೆ ಇರಲಿ, ಜತೆಗೆ ಬೈಬಲ್ ಮತ್ತು ಕುರಾನ್ ಕೂಡಾ ಇರಲಿ. ಅಚ್ಚರಿ ಎಂದರೆ ಈ ವಾದವು ಸಿಖ್ಖರನ್ನೂ, ಬೌದ್ಧರನ್ನೂ, ಜೈನರನ್ನೂ ಹಿಂದುಗಳಲ್ಲವೆಂದು ಸಮರ್ಥಿಸುತ್ತಲೇ ಅವರಾರ ಮತಗ್ರಂಥಗಳನ್ನೂ ಪಠ್ಯಕ್ರಮದಲ್ಲಿ ಅಳವಡಿಸುವ ಆಗ್ರಹವನ್ನು ತೋರುವುದಿಲ್ಲ. ಅವರೆಲ್ಲರ ಆಗ್ರಹ ಎರಡು ಸೆಮೆಟಿಕ್ ರಿಲಿಜನ್ನಿಗೆ ಮುಗಿದುಹೋಗುತ್ತದೆ.
ನಿಜಕ್ಕಾದರೆ ಗೀತೆಯನ್ನು ಈ ವಾದದ ಅಡಿಯಲ್ಲಿ ನೋಡಲೇಬಾರದು. ಕ್ರೈಸ್ತ ರಿಲಿಜನ್ ಬಗ್ಗೆ ಬೈಬಲ್ ಅತ್ಯಂತ ಸ್ಪಷ್ಟವಾಗಿ ಆಗ್ರಹಿಸುತ್ತದೆ. ಹಾಗೆಯೇ ಇಸ್ಲಾಮಿನ ಶ್ರೇಷ್ಠತೆಯನ್ನು ಕುರಾನ್ ಯಾವುದೇ ಗೊಂದಲವಿಲ್ಲದೆ ಸಾರುತ್ತದೆ. ಆದರೆ ಇಡಿಯ ಗೀತೆಯಲ್ಲಿ ಎಲ್ಲಿಯೂ ಹಿಂದೂ ಎಂಬ ಪದವಾಗಲೀ, ದೇಶವಾಚಕವಾಗಿ ಭಾರತದ ಉಲ್ಲೇಖವಾಗಲೀ ಇಲ್ಲ. ಅದು ಯಾವುದೇ ವಾದವನ್ನಾಗಲೀ ಸಿದ್ಧಾಂತವನ್ನಾಗಲೀ ಹೇಳುತ್ತಿಲ್ಲ. ಯಾವುದೇ ಪಂಥವನ್ನಾಗಲೀ ಮತವನ್ನಾಗಲೀ ಸ್ಥಾಪಿಸುತ್ತಿಲ್ಲ. ಅದು ಅದ್ವೈತವನ್ನಾಗಲೀ ವಿಶಿಷ್ಟಾದ್ವೈತವನ್ನಾಗಲೀ ದ್ವೈತವನ್ನಾಗಲೀ ಸಮರ್ಥಿಸುತ್ತಿಲ್ಲ. ಆದರೆ ಅದರಿಂದ ಅದ್ವೈತಾದಿ ಎಲ್ಲ ದರ್ಶನಗಳನ್ನೂ ಕಂಡುಕೊಳ್ಳಲು ಸಾಧ್ಯ. ಮನಃಶಾಸ್ತ್ರವನ್ನು ರೂಪಿಸಿಕೊಳ್ಳಲು ಸಾಧ್ಯ. ಬದುಕಿನ ಕಲೆಯನ್ನು ಕಲಿತುಕೊಳ್ಳಲು ಸಾಧ್ಯ. ಹೀಗೆ ಯಾವುದೇ ಒಂದು ನಿರ್ದಿಷ್ಟ ವಿಷಯಕ್ಕೆ ಅಂಟಿಕೊಳ್ಳದೆ, ಎಲ್ಲವನ್ನೂ ಸರ್ಜಿಸಬಲ್ಲ, ಎಲ್ಲವನ್ನೂ ಒಳಗೊಳ್ಳಬಲ್ಲ ಗೀತೆಯು ಪ್ರಪಂಚದೆಲ್ಲೆಡೆಯ ಪಠ್ಯಕ್ರಮದ ಭಾಗವಾಗಲು ಯೋಗ್ಯತೆ ಇರುವಂಥದ್ದು. ಅಂಥ ಗೀತೆಗೆ ಅದರ ಹುಟ್ಟೂರಲ್ಲಿಯೇ ಬೌದ್ಧಿಕವಲಯದ ವಿರೋಧವಿರುವುದು ನಿಜಕ್ಕೂ ವಿರೋಧಾಭಾಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.