ADVERTISEMENT

ಪ್ರಜಾವಾಣಿ ಚರ್ಚೆ: ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅನಿವಾರ್ಯ

ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಅಥವಾ ತೀರ್ಪಿನಲ್ಲಿ ಧಾರ್ಮಿಕ ಗ್ರಂಥಗಳ ಉಲ್ಲೇಖ ಸರಿಯೇ?

ಪ್ರಜಾವಾಣಿ ವಿಶೇಷ
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
<div class="paragraphs"><p>ಅಶೋಕ ಹಾರನಹಳ್ಳಿ</p></div>

ಅಶೋಕ ಹಾರನಹಳ್ಳಿ

   

ನ್ಯಾಯಾಲಯಗಳು ಧಾರ್ಮಿಕ ವಿಷಯಕ್ಕೆ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಧರ್ಮದ ಹೆಸರಿನಲ್ಲಿ ಅನ್ಯಾಯವಾದ ಸಂದರ್ಭದಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡಲೇಬೇಕಾಗುತ್ತದೆ.

***

ADVERTISEMENT

ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬರುವ ಹಲವು ಪ್ರಕರಣಗಳು ಸಂಕೀರ್ಣತೆಯಿಂದ ಕೂಡಿರುತ್ತವೆ. ಈ ಪ್ರಕರಣಗಳ ವಿಚಾರಣೆಯು, ವಿಶ್ಲೇಷಣೆಯು ಅಷ್ಟೇ ಸಂಕೀರ್ಣವಾಗಿರುತ್ತವೆ. ಅನೇಕ ಬಾರಿ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತವೆ. ಕೆಲವೊಮ್ಮೆ, ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳು, ಇನ್ನೂ ಕೆಲವೊಮ್ಮೆ ಧಾರ್ಮಿಕ ವಿಚಾರಗಳಿಗೆ ಸಂಬಂಧಪಟ್ಟ ಪ್ರಕರಣಗಳೂ ಬರುತ್ತವೆ. ಇತಿಹಾಸ ತಿರುವಿ ಹಾಕಿದಾಗ, ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ವಿಚಾರಗಳು ನ್ಯಾಯಾಲಯಗಳ ಮುಂದೆ ಬಂದ ಹಲವು ಉದಾಹರಣೆಗಳಿವೆ. ಈ ಎಲ್ಲದರ ಮಧ್ಯೆಯೂ, ಧಾರ್ಮಿಕ ವಿಚಾರಗಳಲ್ಲಿ ತೀರ್ಮಾನ ನೀಡಲು ನ್ಯಾಯಾಲಯಗಳು ಎಷ್ಟರಮಟ್ಟಿಗೆ ಅಧಿಕಾರ ಹೊಂದಿವೆ ಎನ್ನುವ ಪ್ರಶ್ನೆಯೂ ಅನೇಕ ಬಾರಿ ಎದ್ದಿವೆ.

ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ, ಶಿರೂರು ಮಠದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಮಾನ ನೀಡಿತ್ತು. 1946ರಲ್ಲಿ ಮಠದಲ್ಲಿ ಆರ್ಥಿಕ ಸಂಕಷ್ಟ ಎದುರಾಯಿತು. ಇದಕ್ಕಾಗಿ ಆಡಳಿತ ಅಧಿಕಾರಿಯನ್ನು ನೇಮಿಸಲು ಸರ್ಕಾರವು ನಿರ್ದೇಶನ ನೀಡಿತು. ಈ ನಿರ್ದೇಶನವು ನಮ್ಮ ಧಾರ್ಮಿಕ ಆಚರಣೆಗೆ ಚ್ಯುತಿ ಬರುತ್ತದೆ ಎಂದು ಶಿರೂರು ಮಠದ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ನ್ಯಾಯಾಲಯವು ಸ್ವಾಮೀಜಿ ಆಕ್ಷೇಪವನ್ನು ಪರಿಗಣಿಸಲಿಲ್ಲ. ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸರ್ಕಾರವೊಂದಕ್ಕೆ ತೀರ್ಮಾನ ತೆಗೆದುಕೊಳ್ಳಲು ಅವಕಾಶ ಇಲ್ಲ. ಆದರೆ, ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ, ಧಾರ್ಮಿಕವಲ್ಲದ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳಲು ಸರ್ಕಾರಕ್ಕೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಹೀಗೆ, ಯಾವುದು ಮೂಲಭೂತ ಧಾರ್ಮಿಕ ಆಚರಣೆ ಹಾಗೂ ಯಾವುದು ಅಲ್ಲ ಎನ್ನುವ ವಿಷಯದ ಕುರಿತು ನ್ಯಾಯಾಲಯವೇ ತೀರ್ಮಾನಿಸಬೇಕಾಗುತ್ತದೆ.

ತಿರುಮಲ ತಿರುಪತಿ ದೇವಸ್ಥಾನದ ಆಡಳಿತವು ಕೆಲವು ಧರ್ಮಕರ್ತರ ಹಿಡಿತದಲ್ಲಿತ್ತು. 1987ರಲ್ಲಿ ಆಂಧ್ರ ಪ್ರದೇಶ ಸರ್ಕಾರವು ಕಾನೂನೊಂದನ್ನು ಜಾರಿಗೆ ತಂದಿತು. ಅರ್ಚಕರಿಗೆ ಸಂಬಂಧಿಸಿದ ಕೆಲವು ಹಕ್ಕುಗಳು ಮತ್ತು ಆನುವಂಶಿಕವಾದ ಕೆಲವು ಹಕ್ಕಗಳನ್ನು ಈ ಕಾನೂನು ಮೂಲಕ ತೆಗೆದು ಹಾಕಲಾಯಿತು. ಆ ಸಂದರ್ಭದಲ್ಲಿ ಎ.ಎಸ್. ನಾರಾಯಣ ದೀಕ್ಷಿತಲು ಪ್ರಕರಣವೊಂದನ್ನು ದಾಖಲಿಸಿದರು. ಹಿಂದೂ ಧಾರ್ಮಿಕ ಆಚರಣೆಯ ವಿಷಯದ ಕುರಿತು ಸುದೀರ್ಘವಾದ ಚರ್ಚೆ ನಡೆಯಿತು. ಬೃಹದಾರಣ್ಯಕ ಉಪನಿಷತ್ತು, ಪಂಚರಾತ್ರ ಆಗಮ, ಭೃಗು ಕ್ರಿಯಾಧಿಕಾರ ಮತ್ತು ಉಪನಿಷತ್ತುಗಳ ಕುರಿತು ತರ್ಕಗಳು ನಡೆದವು. ಎಲ್ಲ ತರ್ಕ ಹಾಗೂ ವಿಚಾರಣೆಗಳ ನಂತರ ಆಂಧ್ರಪ್ರದೇಶ ಸರ್ಕಾರ ರೂಪಿಸಿದ ಕಾನೂನನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು.

ಹಿಜಾಬ್‌ ಹಾಗೂ ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಪ್ರಕರಣಗಳಲ್ಲೂ ಸುಪ್ರೀಂ ಕೋರ್ಟ್‌ ಮುಸ್ಲಿಂ ವೈಯಕ್ತಿಕ ಕಾನೂನು, ಷರಿಯಾ ಕಾನೂನುಗಳ ವಿಚಾರ–ವಿಮರ್ಶೆ ನಡೆಸಿದೆ. ತ್ರಿವಳಿ ತಲಾಖ್‌ಗೆ ಕಾನೂನಿನಲ್ಲಿ ಅವಕಾಶವಿದೆಯೇ ಎನ್ನುವುದು ಶಾಬಾನು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಪರಿಶೀಲನೆ ನಡೆಸಿದೆ. 1937ರಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಜಾರಿ ಮಾಡಲಾಯಿತು. ವಿವಾಹ, ತಲಾಖ್‌ ಮತ್ತು ಇತರೆ ಆಚರಣೆಗಳಿಗೆ ಷರಿಯ ಕಾನೂನು ಅನ್ವಯವಾಗುತ್ತದೆ. ಆದ್ದರಿಂದ ತ್ರಿವಳಿ ತಲಾಖ್‌ ಆಚರಣೆಯು ಷರಿಯಾ ಕಾನೂನ ಪ್ರಕಾರವಾಗಿ ಒ‍ಪ್ಪಿಕೊಳ್ಳಬಹುದೇ ಅಥವಾ ಬೇಡವೇ ಎಂಬುದನ್ನು ಸು‍ಪ್ರೀಂ ಕೋರ್ಟ್‌ ಪರಿಶೀಲಿಸಿತು. ಇದಕ್ಕಾಗಿ ಕುರಾನ್‌, ಹದೀಸ್‌ ಮತ್ತು ಇತರೆ ಧಾರ್ಮಿಕ ಗ್ರಂಥಗಳನ್ನು ಪರಿಶೀಲಿಸಲಾಯಿತು. ಇದರ ಆಧಾರದಲ್ಲಿ ತ್ರಿವಳಿ ತಲಾಖ್‌ ಅನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿತು. ಮಹಿಳೆಯನ್ನು ಗಂಡಸರು ಗುಲಾಮರಂತೆ ನಡೆಸಿಕೊಳ್ಳುವುದು ಸರಿಯಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಶಬರಿಮಲೆ ಅಯ್ಯಪ್ಪ‌ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ವಿಷಯದಲ್ಲಿಯೂ ಧಾರ್ಮಿಕ ವಿಚಾರಗಳ ಬಗ್ಗೆ ಪರಿಶೀಲನೆ ನಡೆದಿದೆ. ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ 1955-56ರಲ್ಲಿ ದೇವಾಲಯ ಸಮಿತಿಯು ನಿಯಮ ರೂಪಿಸಿತ್ತು. 10 ವರ್ಷದ ಬಾಲಕಿಯರಿಂದ ಹಿಡಿದು 50ರ ವಯೋಮಾನದ ಮಹಿಳೆಯರು ದೇವಾಲಯ ಪ್ರವೇಶವನ್ನು ನಿಷೇಧಿಸಲಾಗಿತ್ತು. ಈ ನಿಯಮವನ್ನು ಕೇರಳ ನ್ಯಾಯಾಲಯವು 1951ರಲ್ಲಿ ಎತ್ತಿಹಿಡಿಯಿತು. ಆದರೆ, ಕೇರಳ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಳ್ಳಲಿಲ್ಲ. ಧರ್ಮ ಮತ್ತು ನೈತಿಕತೆ ಮಧ್ಯೆ ಸಂಘರ್ಷ ಉಂಟಾದಲ್ಲಿ ಸಾಂವಿಧಾನಿಕ ನೈತಿಕತೆಯನ್ನೇ ಎತ್ತಿಹಿಡಿಯಬೇಕು ಎಂದು 2019ರಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತು. ಯಾವ ಆಚರಣೆಯು ವ್ಯಕ್ತಿಯೊಬ್ಬರ ಆತ್ಮಗೌರವಕ್ಕೆ ಧಕ್ಕೆ ತರುವಂತಿದ್ದರೆ, ಅಂಥ ಆಚರಣೆಯು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾದುದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತು.

ಇದು 2016ರಲ್ಲಿ ನಡೆದ ಘಟನೆ. ಅಂಬಾಲಾ ನಗರದಲ್ಲಿ ದಿಲಾವರ್‌ ಸಿಂಗ್‌ ಎಂಬಾತ ವಿಚಾರಣೆಗೆ ಹಾಜರಾಗಬೇಕಿತ್ತು. ಆತ ಅಮೃತಧಾರಿ ಎನ್ನುವ ಸಿಖ್‌ ಪಂಥಕ್ಕೆ ಸೇರಿದ ವ್ಯಕ್ತಿ. ಈ ಪಂಥದ ಜನರು, ಭಗವಂತನ ಕೈಂಕರ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ಇವರ ಸೊಂಟದಲ್ಲಿ ಯಾವಾಗಲೂ ಕೃಪಾಣ್‌ (ಕತ್ತಿ) ಇದ್ದೇ ಇರುತ್ತದೆ. ಕೃಪಾಣ್‌ ಅನ್ನು ತೆಗೆಯುವಂತೆ ವಿಚಾರಣೆ ವೇಳೆ ನ್ಯಾಯಾಧೀಶರು ದಿಲಾವರ್‌ ಅವರಿಗೆ ಸೂಚಿಸಿದರು. ಇದಕ್ಕೆ ದಿಲಾವರ್‌ ಅವರು ನಿರಾಕರಿಸಿದರು. ಕೃಪಾಣ್‌ ತೆಗೆಯುವಂತೆ ಸೂಚಿಸಿದ್ದು, ತನ್ನ ಧಾರ್ಮಿಕ ಆಚರಣೆಗೆ ಚ್ಯುತಿ ತಂದಿದೆ ಎಂದು ದಿಲಾವರ್‌ ಅರ್ಜಿ ಸಲ್ಲಿಸಿದರು. ಈ ವಿಷಯಕ್ಕೆ ಸಂಬಂಧಿಸಿ, ನ್ಯಾಯಾಲಯವು ಎಲ್ಲ ಸಿಖ್‌ ಧಾರ್ಮಿಕ ಗ್ರಂಥಗಳನ್ನು ಪರಿಶೀಲಿಸಿತು. ಸಿಖ್‌ ಧರ್ಮದ 5 ಕರ್ಕಗಳು (ಕೇಶ, ಕಡ, ಖಂಗ (ಮರದ ಬಾಚಣಿಕೆ), ಕಚೇರ (ಒಳ ಉಡುಪು) ಮತ್ತು ಕೃಪಾಣ್‌) ಪ್ರತಿಯೊಬ್ಬ ಸಿಖ್‌ ವ್ಯಕ್ತಿಯೂ ಧರಿಸಲೇಬೇಕಾದ ವಸ್ತುಗಳು. ಈ ಕಾರಣಕ್ಕೆ ದಿಲಾವರ್‌ ಸಿಂಗ್‌ ಅವರು ಕೃಪಾಣ್‌ ಧರಿಸಿಯೇ ವಿಚಾರಣೆಯಲ್ಲಿ ಭಾಗಿಯಾಗಬಹುದು ಎಂದು ನ್ಯಾಯಾಲಯ ಹೇಳಿತು.

ಅನೇಕ ಧರ್ಮಗಳಲ್ಲಿರುವ ಒಳಪಂಗಡಗಳು ತಮ್ಮದು ಸ್ವತಂತ್ರ ಧರ್ಮ ಎಂದು ನ್ಯಾಯಾಲಯದಲ್ಲಿ ವಾದಿಸಿದ ಸನ್ನಿವೇಶಗಳೂ ನಡೆದಿವೆ. 1955ರಲ್ಲಿ ಆನಂದ ಮಾರ್ಗ ಎನ್ನುವ ಪಂಥವನ್ನು ಹುಟ್ಟುಹಾಕಲಾಯಿತು. ಈ ಪಂಥದವರು ನಿತ್ಯವೂ ಮನುಷ್ಯನ ತಲೆಬುರುಡೆಯನ್ನು ಹಿಡಿದು ತಾಂಡವ ನೃತ್ಯ ಮಾಡುತ್ತಾರೆ. ಈ ಪಂಥವು ಸ್ವತಂತ್ರ ಧರ್ಮವಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತು. ಜೊತೆಗೆ, ಸಾರ್ವಜನಿಕ ರಸ್ತೆಗಳಲ್ಲಿ ತಾಂಡವ ನೃತ್ಯ ಮಾಡುವುದು ಈ ಪಂಥದ ಮೂಲಭೂತ ಆಚರಣೆಯೂ ಅಲ್ಲ ಎಂದೂ ನ್ಯಾಯಾಲಯ ಹೇಳಿತು.

ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗಿವೆ. ಅಂತೆಯೇ, ಮಸೀದಿ–ಮಂದಿರಗಳಿಗೆ ಪ್ರವೇಶದ ಕುರಿತ ವಿವಾದಗಳ ವಿಚಾರಣೆಯೂ ನ್ಯಾಯಾಲಯದಲ್ಲಿ ನಡೆದಿವೆ. ಮಂದಿರದಲ್ಲಿ ಪೂಜೆ ಮಾಡುವ ಹಕ್ಕಿನ ಕುರಿತೂ ಭಕ್ತರು ನ್ಯಾಯಾಲಯದ ಕದ ತಟ್ಟಬಹುದು. ಧರ್ಮ ಮತ್ತು ಕಾನೂನಿನ ಸಂಘರ್ಷ ಹೀಗೆ ಅನೇಕ ಸಂದರ್ಭಗಳಲ್ಲಿ ನಡೆದಿವೆ. ಗುರುತಿನ ಚೀಟಿಗಾಗಿ ಮುಸ್ಲಿಂ ಮಹಿಳೆಯರ ಭಾವಚಿತ್ರ ತೆಗೆಯುವುದು ಇಸ್ಲಾಂನ ಧಾರ್ಮಿಕ ಆಚರಣೆಗೆ ತಕ್ಕುದ್ದಲ್ಲ ಎಂದು ಹಿಂದೊಮ್ಮೆ ಮುಸ್ಲಿಂ ಅನುಯಾಯಿಗಳು ಆಕ್ಷೇಪ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಈ ವಾದವನ್ನು ಒಪ್ಪಲಿಲ್ಲ.

ಸೂಕ್ತ ಸಮಯದಲ್ಲಿ ನ್ಯಾಯಾಲಯವು ಮಧ್ಯಪ್ರವೇಶ ಮಾಡದೇ ಹೋದಲ್ಲಿ ಧಾರ್ಮಿಕ ಸಂಘರ್ಷಗಳು ಉಂಟಾಗುವ ಸಂಭವಗಳು ಇರುತ್ತವೆ. ಆದಕಾರಣ ನ್ಯಾಯಾಲಯಗಳು ಧಾರ್ಮಿಕ ವಿಷಯಕ್ಕೆ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಧರ್ಮದ ಹೆಸರಿನಲ್ಲಿ ಅನ್ಯಾಯವಾದ ಸಂದರ್ಭದಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡಲೇಬೇಕಾಗುತ್ತದೆ.

ಲೇಖಕ: ಹಿರಿಯ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.