ADVERTISEMENT

ಚರ್ಚೆ | ದೇಸಿತನದ ಮರುಶೋಧನೆಗೆ ಇಂಬು ಲಭಿಸಲಿ

ಅಖಿಲ ಭಾರತ ಕನ್ನಡ ಸಾಹಿತ್ಯ ಉತ್ಸವದಲ್ಲಿ ದೇಸಿ ಸಾಹಿತ್ಯದ ಬಹುರೂಪಗಳು ಇಡಿಯಾಗಿ ತೆರೆದುಕೊಳ್ಳುವ ಅನಿವಾರ್ಯವಿದೆ

ಯೋಗಾನಂದ
Published 26 ಅಕ್ಟೋಬರ್ 2024, 0:09 IST
Last Updated 26 ಅಕ್ಟೋಬರ್ 2024, 0:09 IST
   

ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕುರಿತು ಹಿಂದೆ ನೆರವೇರಿದ ಯಾವ ಸಮ್ಮೇಳನದ ಸಂದರ್ಭದಲ್ಲೂ ಇಲ್ಲದಷ್ಟು ಚರ್ಚೆಗಳು ಗರಿಗೆದರಿವೆ. ಆ ಸ್ಥಾನ ಸಾಹಿತಿಗೊ, ಸಾಹಿತ್ಯೇತರರಿಗೊ ಎನ್ನುವುದು ಜಿಜ್ಞಾಸೆಯೇ ಆಗಿದೆ. 

ಅದಿರಲಿ, ವ್ಯಾಕರಣಕ್ಕೂ ಮೀರಿ ಭಾಷೆ ಜೀವಂತವಿರುವುದು ಬಾಯಿಂದ ಬಾಯಿಗೆ ಅದು ಪ್ರವಹಿಸುವ ಅಚ್ಚರಿಯ ವಿದ್ಯಮಾನದಿಂದ. ಹಾಗೆ ನೋಡಿದರೆ, ಅಕ್ಷರದ ಹಂಗಿಲ್ಲದೆ ಬೆಳೆದುಬಂದ ಸಾಹಿತ್ಯವೇ ಅಧಿಕ. ಗಾದೆ, ವಾಕ್‌ಸರಣಿ, ಶಬ್ದ ಪ್ರಯೋಗಗಳಿಂದ ಒಂದು ಭಾಷೆ ಜೀವಂತವಿರುತ್ತದೆ. ಲಿಖಿತವೇ ಸಂಪೂರ್ಣವಲ್ಲ, ಏಕೆಂದರೆ ಬರೆದಿದ್ದನ್ನು ಮೆಲುಧ್ವನಿಯಲ್ಲಾದರೂ ಓದಲೇಬೇಕಲ್ಲ!

ಹಿರಿಯರು ಮಕ್ಕಳಿಗೆ ಕಥೆ ಹೇಳುವ, ಹಾಡು ಕಲಿಸುವ, ಒಗಟು ಬಿಡಿಸಲು ಸವಾಲೊಡ್ಡುವ ರೂಢಿ ಈಗ ಮರೆತೇಹೋಗಿದೆ. ತ್ವರಿತವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಕಥೆ ಹೇಳುವ ಪರಿಪಾಟವನ್ನು ಮರುಸ್ಥಾಪಿಸಬೇಕಿದೆ. ಕಥೆಗಳು ಸಮುದಾಯ ಸಂಬಂಧಗಳನ್ನು ಗರಿಗಟ್ಟಿಸುತ್ತವೆ. ನಿರಂತರತೆಯ ಪ್ರಜ್ಞೆ ಹಾಗೂ ನಮ್ಮ ಸಂಸ್ಕೃತಿಯ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳಲು ಅವು ಪೂರಕ. ವೃತ್ತಾಂತ, ಅರಿವು, ವಿವೇಕ, ಸಮಷ್ಟಿ ನೆನಪುಗಳನ್ನು ಕಟ್ಟಿಕೊಡುತ್ತವೆ. ಗಾದೆ, ಒಗಟುಗಳು ಭಾಷೆಯ ಆಳವಾದ ಗ್ರಹಿಕೆಗೆ ಪೋಷಕಗಳು. ಕಥೆ ಹೇಳಿಕೆ ಬೋಧನೆಯ ಒಂದು ವಿಧಾನ.

ADVERTISEMENT

ಮೌಖಿಕ ಪರಂಪರೆಯು ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಬೆಸೆಯುತ್ತದೆ. ಒಂದು ಕಾಲದಲ್ಲಿ ದಿನಗಟ್ಟಲೆ ಸಾದರವಾಗುತ್ತಿದ್ದ ಮಹಾಕಾವ್ಯಗಳ ಪದ್ಯಗಳು ಇಂದು ಸಿ.ಡಿ. ಮೂಲಕ ಕೆಲವೇ ತಾಸುಗಳಲ್ಲಿ ಮುಗಿದಿರುತ್ತವೆ. ಎದುರಿಗೆ ಗಾಯಕರು ಹಾಡಿ, ನಟರು ಅಭಿನಯಿಸಿ ಪುಳಕಗೊಳಿಸುವುದೇ ಬೇರೆ, ಮುದ್ರಿತ ಆಡಿಯೊ ಅಥವಾ ವಿಡಿಯೊಗಳು ರವಾನಿಸುವ ರಂಜನೆಯೇ ಬೇರೆ. ಕಣ್ಣಲ್ಲಿ ಕಣ್ಣಿಟ್ಟು ನಡೆಸುವ ಸಂಭಾಷಣೆಯ ಆತ್ಮೀಯತೆಯನ್ನು ಮೊಬೈಲ್‌, ಸ್ಕೈಪ್ ಅಥವಾ ವಾಟ್ಸ್‌ಆ್ಯಪ್‌ ತುಂಬುತ್ತವೆಯೇ? ಶಹರದಲ್ಲಿ ಸಂಚರಿಸುವಾಗ, ಅಂಚೆ ಕಚೇರಿ ಎಲ್ಲಿ, ದವಾಖಾನೆ ಎಷ್ಟು ದೂರ, ರೈಲು ಎಷ್ಟು ಹೊತ್ತಿಗೆ ಎಂದೆಲ್ಲ ನೇರವಾಗಿ ವಿಚಾರಿಸುತ್ತಾರೆಯೇ ವಿನಾ ಚೀಟಿಯಲ್ಲಿ ಬರೆದು ಪ್ರಶ್ನಿಸುವುದಿಲ್ಲ. ಪ್ರಶ್ನೆಗೆ ಪ್ರತಿಕ್ರಿಯೆಯನ್ನು ಬಾಯಿಮಾತಿನಿಂದಲೇ ಬಯಸುತ್ತಾರೆ. ಇದು ಶಾಬ್ದಿಕ ಸಂಪ್ರದಾಯದ ಸಾಮರ್ಥ್ಯ. ಈ ಕಾರಣಗಳಿಂದ‌, ಅರಿವಿನ ಭಂಡಾರವಾದ ಮೌಖಿಕ ಪರಂಪರೆ ಮತ್ತು ಅಭಿವ್ಯಕ್ತಿಗಳನ್ನು ಸಂರಕ್ಷಿಸಿ ಪ್ರಸ್ತುತಗೊಳಿಸುವ ಅಗತ್ಯವಿದೆ.

ನಮ್ಮ ನಿತ್ಯದ ದಿನಮಾನಗಳಲ್ಲಿ ನಮಗರಿವಿಲ್ಲದಂತೆ ಅವು ಹೇಗೆ ಪ್ರಭಾವಿಸುತ್ತಲೇ ಇವೆ ಎನ್ನುವುದನ್ನು ವಿಶೇಷವಾಗಿ ಯುವಕರಿಗೆ ತಲುಪಿಸಬೇಕು. ಹಬ್ಬ ಮತ್ತು ಸಾಂಪ್ರದಾಯಿಕ ಆಚರಣೆಗಳಿಗೆ ಮೌಖಿಕ ಪರಂಪರೆಯೇ ಪ್ರಮುಖ ಆಕರ. ಪಾರಂಪರಿಕ ಪ್ರತಿಭೆಯನ್ನು ಪುನರ್‌ ರೂಪಿಸುವ ಸಲುವಾಗಿ ಸುಧಾರಿತ ಆಡಿಯೊ, ವಿಡಿಯೊಗಳ ಮೇಲಿನ ಅವಲಂಬನೆ ಸರಿಯೆ. ಆದರೆ ಅವು ಅತಿಕ್ರಮಿಸದಂತೆ ಎಚ್ಚರ ವಹಿಸಬೇಕು ಅಷ್ಟೆ. ಅಂದಹಾಗೆ ಇದು ಕೃತಕ ಬುದ್ಧಿಮತ್ತೆಯ ಕಾಲ. ಹಳೇ ಬೇರು, ಹೊಸ ಚಿಗುರು ಎನ್ನುವಂತೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಮೌಖಿಕ ಸಂಪ್ರದಾಯಗಳನ್ನು ದಾಖಲಿಸಬಹುದು. ಯುವಪೀಳಿಗೆಗಳನ್ನು ಅವುಗಳ ಬೇರುಗಳೊಂದಿಗೆ ಸಂಪರ್ಕಿಸಿ ಆಯಾ ಸ್ಥಳೀಯ ಭಾಷೆಗಳನ್ನು ಸಂರಕ್ಷಿಸಬಹುದು. ಹಾಗಾಗಿ, ಬಹು ಬಗೆಗಳಲ್ಲಿರುವ ಕಥನ, ಕಥಾನಕಗಳನ್ನು ಸಜೀವವಾಗಿ ಇರಿಸಿಕೊಳ್ಳಬೇಕು. ಹೇಗೂ ಮೌಖಿಕ ಜ್ಞಾನದ್ರವ್ಯವಾದ ಕಾರಣದಿಂದ ಸಂದರ್ಭ ಭಿನ್ನವಾಗಿ ಇರುವುದು, ಪುನರುತ್ಪಾದನೆ, ಸುಧಾರಣೆ, ಸೇರ್ಪಡೆ ಸಂಭವನೀಯ.

ವಿಕಾಸ ಮತ್ತು ಪರಿಷ್ಕರಣೆಯೇ ಆದ ಈ ಪಲ್ಲಟವನ್ನು ‘ಮಾರುವೇಷದ ಹಾರೈಕೆ’ ಎನ್ನೋಣ. ಮಗುವು ಚೆನ್ನಾಗಿ ‘ಮನೆ ಭಾಷೆ’ ಕಲಿತ ಮೇಲೆಯೇ ಅದನ್ನು ಶಾಲೆಗೆ ಸೇರಿಸುವುದು ಉತ್ತಮ. ಬ್ರಿಟನ್ನಿನ ಯುವ ಬರಹಗಾರ ಟಾಮ್‌ ಚಾಟ್‌ಫೀಲ್ಡ್ ನವೀನ ಗಾದೆಯೊಂದನ್ನೇ ಹರಿಯಬಿಟ್ಟಿದ್ದಾರೆ: ‘ಗುಲಾಬಿ ಜೊತೆಗೆ ಮುಳ್ಳು, ಕೃತಕ ಬುದ್ಧಿಮತ್ತೆ ಜೊತೆಗೆ ಕೃತಕ ಮೂರ್ಖತನ!’

ಮಾತೂ ಸೇರಿದಂತೆ ಮನುಷ್ಯನ ಸಂವಹನ ಮಾರ್ಗಗಳು ವೈವಿಧ್ಯಮಯ. ಸದ್ಯ ಜಗತ್ತಿನಲ್ಲಿ ಸುಮಾರು 7,000 ಭಾಷೆಗಳು ಅಸ್ತಿತ್ವದಲ್ಲಿವೆ. ಆ ಪೈಕಿ ಶೇಕಡ ಅರ್ಧಕ್ಕೂ ಹೆಚ್ಚಿನವಕ್ಕೆ ಲಿಪಿಗಳಿಲ್ಲ. ಒಂದೇ ದಿನದಲ್ಲಿ, ಅದರಲ್ಲೂ ಲಿಪಿ ಸಮೇತ ಜನಿಸಿದ ಯಾವ ಭಾಷೆಯೂ ಪ್ರಪಂಚದಲ್ಲಿ ಇಲ್ಲ. ಬಹು ಪ್ರಾಚೀನ ಕಾಲದಲ್ಲಿ ಗುರುತುಗಳು, ಉಬ್ಬು ಚಿತ್ರಗಳೇ ಸಂವಹನ ಮಾಧ್ಯಮಗಳಾಗಿದ್ದವೇ ವಿನಾ ನುಡಿ, ಲಿಪಿಗಳಲ್ಲ.

ಭಾಷೆಗಳು ಆಡದೇ ನಶಿಸುತ್ತವೆ. ಇಲ್ಲೊಂದು ವಿಪರ್ಯಾಸವಿದೆ. ಒಂದು ಭಾಷಿಕರು ಇತರರೊಂದಿಗೆ ತಮ್ಮ ಭಾಷೆ ಬಿಟ್ಟು ಅವರ ಭಾಷೆಯಲ್ಲಿ ಮಾತಾಡುವುದು! ಕನ್ನಡ ಜಾನಪದ ಸಾಹಿತ್ಯ ಸಮ್ಮೇಳನಗಳು ಅಲ್ಲಲ್ಲಿ ಆಗಾಗ ವ್ಯವಸ್ಥೆಗೊಳ್ಳುತ್ತವೆ ಸರಿಯೆ. ಆದರೆ ಅಖಿಲ ಭಾರತ ಕನ್ನಡ ಸಾಹಿತ್ಯ ಉತ್ಸವದಲ್ಲಿ ದೇಸಿ ಸಾಹಿತ್ಯದ ಬಹು ರೂಪಗಳು ಇಡಿಯಾಗಿ ತೆರೆದುಕೊಳ್ಳುವ ಅನಿವಾರ್ಯ ಇದೆ. ಜಾಗತೀಕರಣ, ಹವಾಮಾನ ಬದಲಾವಣೆಯಂತಹ ನ್ಯೂನತೆಗಳಿಂದ ಬುಡಕಟ್ಟಿನ ಮತ್ತು ಕೌಟುಂಬಿಕ ನಂಟುಗಳು ದುರ್ಬಲವಾಗುತ್ತಿವೆ. ಇವೆಲ್ಲದರ ದೃಷ್ಟಿಯಿಂದ ಈ ಬಾರಿ ಮೌಖಿಕ ಪರಂಪರೆಯ ಸಾಂಸ್ಕೃತಿಕ ಸಾಧಕರೊಬ್ಬರು ಸಮ್ಮೇಳನದ ಸಾರಥ್ಯ ವಹಿಸಲಿ. ಆಧ್ಯಕ್ಷ ಭಾಷಣ ಓದಲ್ಪಡುವ ಬದಲು ಆಡಲ್ಪಡಲಿ. ನುಡಿ ಪರಿಷೆಯಿಂದ ದೇಸಿತನದ ಅಂತರಾಳದ ಮರುಶೋಧನೆಗೆ ಇಂಬು ಲಭಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.