ADVERTISEMENT

ಚರ್ಚೆ | ಜಾತಿ ಜನಗಣತಿ ಸಂವಿಧಾನಬದ್ಧ ಹಕ್ಕು: ಎಸ್.ಜಿ. ಸಿದ್ದರಾಮಯ್ಯ

ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಬೇಕೇ?

ಎಸ್.ಜಿ.ಸಿದ್ದರಾಮಯ್ಯ
Published 26 ಅಕ್ಟೋಬರ್ 2024, 0:30 IST
Last Updated 26 ಅಕ್ಟೋಬರ್ 2024, 0:30 IST
<div class="paragraphs"><p>ಎಸ್.ಜಿ. ಸಿದ್ದರಾಮಯ್ಯ</p></div>

ಎಸ್.ಜಿ. ಸಿದ್ದರಾಮಯ್ಯ

   

ಜಾತಿ ಗಣತಿಯು ಯಾವುದೋ ಖಾಸಗಿ ಸಂಸ್ಥೆ ಸಿದ್ಧಪಡಿಸಿದ ವರದಿಯಲ್ಲ. ಸಾಂವಿಧಾನಿಕವಾಗಿ ರಚನೆಯಾದ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ, ಸರ್ಕಾರಿ ಅಧಿಕಾರಿಗಳು, ನೌಕರರು ತಿಂಗಳುಗಟ್ಟಲೇ ಮನೆ ಮನೆ ಸುತ್ತಾಡಿ ಕಲೆಹಾಕಿದ ಮಾಹಿತಿಯನ್ನು ಆಧರಿಸಿದ ವರದಿ. ಇದಕ್ಕಾಗಿ ವ್ಯಯವಾದ ಕಾಲ, ಹಣ, ಶ್ರಮವನ್ನು ಅಗೌರವಿಸಿ, ಒಂದೇ ಬಾರಿಗೆ ಅದನ್ನು ಅವೈಜ್ಞಾನಿಕವೆಂದು ಘೋಷಿಸುವ ಧಾರ್ಷ್ಟ್ಯದ ಹಿಂದೆ ಇರುವ ಶಕ್ತಿ ಯಾವುದು?

ಭಾರತದ ಜಾತಿವ್ಯವಸ್ಥೆಯ ಅಸಮಾನತೆಯ ಅರಿವು ಇದ್ದಿದ್ದರಿಂದಲೇ 1931ರಲ್ಲಿ ಮೊಟ್ಟಮೊದಲ ಬಾರಿಗೆ ಬ್ರಿಟಿಷರು ಜಾತಿವಾರು ಸಮೀಕ್ಷೆ ನಡೆಸಿದರು. ಅದಾದ ನಂತರ ಜಾತಿಸಮೀಕ್ಷೆ ನಡೆದೇ ಇಲ್ಲವೆಂದರೆ, ಮೀಸಲಾತಿಯ ಅನುಷ್ಠಾನದ ಅವೈಜ್ಞಾನಿಕ ಅನ್ವಯದ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿಲ್ಲವೆಂದೇ ಅರ್ಥ. ಯಾವುದೇ ಸಮಾಜದಲ್ಲಿ ಕಾಲೋಚಿತವಾಗಿ ಬದಲಾವಣೆ–ಬೆಳವಣಿಗೆಗಳಾಗುವುದು ಸಹಜ. ಅದರಲ್ಲೂ ಧರ್ಮದ ಹೆಸರಿನಲ್ಲಿ ಜಾತಿಗಳನ್ನು ಉಸಿರಾಡುತ್ತಿರುವ ನಮ್ಮ ಸಾಮಾಜಿಕ ಜೀವನದಲ್ಲಿ ಜನಸಂಖ್ಯಾ ಪ್ರಮಾಣವೆಂಬುದು ಸ್ಥಿರರೂಪಿಯಲ್ಲ. 

ADVERTISEMENT

ಹೀಗಿರುವಾಗ ಯಾವುದೋ ಕಾಲದಲ್ಲಿ ನಡೆದ ಜಾತಿಗಣತಿಯನ್ನು ಇಂದಿಗೂ ಅನ್ವಯಿಸಿ, ರಾಜಕೀಯ ಅಧಿಕಾರ, ಮೀಸಲಾತಿಯ ಹಂಚಿಕೆಗಳನ್ನು ಪಡೆಯುವುದು ವಂಚಿತ ಸಮುದಾಯಗಳಿಗೆ ಮಾಡುವ ಘೋರ ಅನ್ಯಾಯ. ಸಹಸ್ರಾರು ವರ್ಷಗಳಿಂದ ಶಿಕ್ಷಣ, ಉತ್ಪನ್ನಮೂಲ, ಭೂಒಡೆತನ, ಸಾಮಾಜಿಕ ಸ್ಥಾನಮಾನಗಳಿಂದ ವಂಚಿತವಾಗಿದ್ದ ಸಮುದಾಯಗಳು ಈ ಘೋರ ಅನ್ಯಾಯದಲ್ಲಿ ಇಂದಿಗೂ ಹೆಚ್ಚು ವಂಚನೆಗೆ ಗುರಿಯಾಗುತ್ತಲೇ ಇವೆ. ಈ ಅನ್ಯಾಯವನ್ನು ತಪ್ಪಿಸಿ, ವೈಜ್ಞಾನಿಕವಾಗಿ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ಆಶಯದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ
ಯನ್ನು ತಳಮೂಲದಿಂದ ಅಧ್ಯಯನ ಮಾಡುವ ಉದ್ದೇಶದಿಂದ, ವಿಶಾಲಾರ್ಥದಲ್ಲಿ ‘ಜಾತಿ ಜನ ಗಣತಿ’ಯ ಕಲ್ಪನೆ ಮೊಳೆಯಿತು.

2004ರಲ್ಲಿ  ಎನ್.ಧರಂಸಿಂಗ್ ನೇತೃತ್ವದ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಇದಕ್ಕೆ ಅಡಿಪಾಯ ಹಾಕಿ, ಸ್ವತಂತ್ರ್ಯ ಭಾರತದಲ್ಲಿ ಮೊದಲ ಬಾರಿಗೆ ಜಾತಿ ಗಣತಿಯತ್ತ ಹೆಜ್ಜೆ ಇಟ್ಟರು.  ₹1 ಕೋಟಿ ಅನುದಾನ ಬಿಡುಗಡೆ ಮಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಆಗ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ
ಮನಮೋಹನಸಿಂಗ್ ಅವರು ₹21.5 ಕೋಟಿ ಬಿಡುಗಡೆಯನ್ನೂ ಮಾಡಿದರು. ಆದರೆ, ಬದಲಾದ ರಾಜಕೀಯ ವಿದ್ಯಮಾನದಲ್ಲಿ ಮೈತ್ರಿ ಸರ್ಕಾರ ಪತನಗೊಂಡು, ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆ ಸರ್ಕಾರ, ಜಾತಿಗಣತಿಗೆ ಆಸಕ್ತಿ ತೋರಲಿಲ್ಲ.

ಆದರೆ, ಇದೇ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಸಿ.ಎಸ್.ದ್ವಾರಕಾನಾಥ್ ಅವರು, ಜಾತಿಗಣತಿಗೆ ಪೂರ್ವತಯಾರಿಯನ್ನು ನಡೆಸಿದರು. ಸಮೀಕ್ಷೆಗೆ ಬೇಕಾದ ಪ್ರಶ್ನಾವಳಿ
ಯನ್ನೂ ಸಿದ್ಧಪಡಿಸಿದರು. 2008ರಲ್ಲಿ ಅಧಿಕಾರಕ್ಕೆ ಬಿಜೆಪಿ ಸರ್ಕಾರದ ಮೂವರು ಮುಖ್ಯಮಂತ್ರಿಗಳು ಇದಕ್ಕ ಒಲವು ತೋರಲಿಲ್ಲ.

ಈ ರೀತಿಯ ಸಮೀಕ್ಷೆ ನಡೆಸಲು ಸಾಮಾಜಿಕ ಕಳಕಳಿ, ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂಬ ಸಂಕಲ್ಪ ಹಾಗೂ ಧೈರ್ಯವೂ ಬೇಕು. ಅದು ಮತ್ತೆ ಕೈಗೂಡಬೇಕಾದರೆ, ಸಮಾಜವಾದಿ ಹಿನ್ನೆಲೆಯ ರಾಜಕಾರಣ ಮುನ್ನಡೆಸುವ ಸಿದ್ದರಾಮಯ್ಯನವರೇ ಮತ್ತೆ 2013ರಲ್ಲಿ ಅಧಿಕಾರಕ್ಕೆ ಬರಬೇಕಾಯಿತು. ಆಗ ರಚನೆಯಾದ ಕಾಂತರಾಜ ನೇತೃತ್ವದ ಆಯೋಗ ಕ್ಷೇತ್ರಾಧ್ಯಯನ ನಡೆಸಿ, ವರದಿ ಸಿದ್ಧಪಡಿಸಿತು. ಅಷ್ಟರಲ್ಲಿ 2018ರ ವಿಧಾನಸಭೆ ಚುನಾವಣೆ ಘೋಷಣೆಯಾಯಿತು. ಹಾಗಾಗಿ, ವರದಿಯನ್ನು ಒಪ್ಪಿಸಿದರೂ, ಅದರ ಪೂರ್ವಾಪರ ಗಮನಿಸುವವರೇ ಇರಲಿಲ್ಲ. ನಂತರ ಬಂದ ಸರ್ಕಾರಗಳು ಈ ಬಗ್ಗೆ ತಮ್ಮ ಅವಗಣನೆ ಮುಂದುವರಿಸಿದವು.

ವರದಿ ಒಪ್ಪಿಸಿದಂದಿನಿಂದಲೂ ಭಯಗ್ರಸ್ತ ಸ್ಥಿತಿಯಲ್ಲಿ ಪ್ರಬಲ ಜಾತಿಯ ಸಮುದಾಯಗಳಿಂದ ಪ್ರತಿರೋಧ ವ್ಯಕ್ತವಾಗುತ್ತಲೇ ಬಂದಿದೆ. ನೇರವಾಗಿ ಹೇಳುವುದಾದರೆ, ಕರ್ನಾಟಕದ ಪ್ರಬಲ ಜಾತಿಗಳಾದ ವೀರಶೈವ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಂದ ಈ ವರದಿಯ ಜಾರಿಗೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಹಿಂದುಳಿದ ಜಾತಿಗಳ ಕಡೆಯಿಂದ ವರದಿಯ ಅನುಷ್ಠಾನಕ್ಕಾಗಿ ಒತ್ತಾಯ, ಅದರಲ್ಲೂ ಹಕ್ಕೊತ್ತಾಯ ಹೆಚ್ಚಾಗು
ತ್ತಿದೆ. ಈ ಎರಡೂ ನೆಲೆಗಳಲ್ಲಿನ ಸತ್ಯಾಸತ್ಯತೆಯೆಂಬುದು; ಈಗಿರುವ ನಂಬಿಕೆಯ ಪ್ರಮಾಣ ಎಲ್ಲಿ ಕುಸಿದುಹೋಗಿ, ತಾವು ಈಗ ಅನುಭವಿಸುತ್ತಿರುವ ಎಲ್ಲ ಬಗೆಯ ಸವಲತ್ತುಗಳಿಂದ ದೂರವಾಗುತ್ತೇವೋ ಎಂಬುದು ಪ್ರಬಲ ಜಾತಿಗಳವರ ಭಯಕ್ಕೆ ಕಾರಣ. ತಮ್ಮ ಪಾಲಿನ ಹಕ್ಕು ತಮಗೆ ದಕ್ಕಲಿ ಎಂಬ ನ್ಯಾಯೋಚಿತ ಬೇಡಿಕೆ ವಂಚಿತ ಸಮುದಾಯಗಳದ್ದಾಗಿದೆ.

ಆದರೆ, ಯಾರೂ ಭಯಪಡುವ ಅಗತ್ಯವಿಲ್ಲ. ಏಕೆಂದರೆ, ವರದಿ ಇನ್ನೂ ಅಧಿಕೃತವಾಗಿ ಹೊರಬಂದಿಲ್ಲ. ಸರ್ಕಾರ ಅಧಿಕೃತವಾಗಿ ಅದನ್ನು ಚರ್ಚೆಗೆತ್ತಿಕೊಂಡು, ಸಂವಿಧಾನಾತ್ಮಕ ಪ್ರಕ್ರಿಯೆಗೊಳಪಡಿ
ಸುವ ಅಗತ್ಯವಿದೆ. ಅದಕ್ಕೆ ಅವಕಾಶವನ್ನೇ ನೀಡದೆ, ಬಲಿಷ್ಠರೆನಿಸಿಕೊಂಡಿರುವ ಸಮುದಾಯಗಳು ಅಧ್ಯಯನವನ್ನೇ ಅವೈಜ್ಞಾನಿಕವೆನ್ನುವುದು ಮತ್ತು ವರದಿಯನ್ನು ತಿರಸ್ಕರಿಸುವುದು ಪ್ರಜಾಸತ್ತಾತ್ಮಕ ನಡೆಯಲ್ಲ. ಅದರಲ್ಲೂ ಜಾತಿಕಾರಣಕ್ಕಾಗಿ, ರಾಜಕೀಯ ಮುತ್ಸದ್ದಿಗಳೆನ್ನಿಸಿಕೊಂಡವರು ಪಕ್ಷಾತೀತವಾಗಿ ಒಂದಾಗಿ ಪ್ರತಿಭಟಿಸುವುದು ಅವರ ಸೈದ್ಧಾಂತಿಕ ಧೋರಣೆಗೆ ಮಾಡಿದ ದ್ರೋಹವೇ ಆಗಿದೆ. ಜನಪ್ರತಿನಿಧಿಗಳು ಯಾವುದೋ ಒಂದು ಜಾತಿಯ ಮತಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಚುನಾವಣಾ ನೀತಿ ಸಂಹಿತೆಯನ್ನು ಧಿಕ್ಕರಿಸಿದ ರೀತಿಯಲ್ಲಿ ಒಂದು ಜಾತಿಯಪರ ಹೋರಾಟಕ್ಕಿಳಿಯುವುದು ಸಾಮಾಜಿಕ ನ್ಯಾಯವನ್ನು ಅಪಮಾನಿಸಿದ ನಡೆಯೇ ಆಗುತ್ತದೆ.

ಧರ್ಮಗುರುವೊಬ್ಬರು ಜಾತ್ಯತೀತ ರಾಷ್ಟ್ರದಲ್ಲಿ ಜಾತಿಗಣತಿಯ ಅಗತ್ಯವನ್ನೇ ಪ್ರಶ್ನಿಸಿದ್ದಾರೆ. ಅವರ ಆದರ್ಶಯುತ ಜ್ಞಾನಕ್ಕೆ ನೊಂದವರ ನೋವು ಅರಿವಿಗೆ ಬಂದಿಲ್ಲವೆಂಬ ಘೋರಸತ್ಯವನ್ನು ಮಾತ್ರ ನಿವೇದಿಸುತ್ತಾ, ದಯಮಾಡಿ ದೇಶದ ಸಾಮಾಜಿಕ ಚರಿತ್ರೆಯನ್ನು ಓದಿ ಎಂದು ವಿನಂತಿಸಿಕೊಳ್ಳುತ್ತೇನೆ. 

ಜಾತಿಗಣತಿಯ ವರದಿಗೆ ಕಾಲಬದ್ಧ ಅಧ್ಯಯನಶೀಲತೆಯ ಗುರಿ ಇತ್ತು. ಹಾಗೆಯೇ ಅಧ್ಯಯನಕ್ಕೆ ಅದರದೇ ಆದ ಕ್ರಮಾಗತಿಗಳಿದ್ದವು. ಎಲ್ಲ ಕ್ರಮಾಶೀಲ ಗತಿಗಳನ್ನು ಅನುಸರಿಸಿ ವರದಿ ತಯಾರಾಗಿದೆಯೇ ಅಥವಾ ಇಲ್ಲವೇ ಎಂಬುದು, ವರದಿಯನ್ನು ಅಧಿಕೃತವಾಗಿ ಸಾಮಾಜಿಕ ಚರ್ಚೆಗೆ ಬಿಟ್ಟಾಗ ಗೊತ್ತಾಗುತ್ತದೆ. ಈ ವರದಿ ತಯಾರಿಕೆಗೆ ಸರ್ಕಾರ ₹169 ಕೋಟಿ ವೆಚ್ಚ ಮಾಡಿದೆ. ಇದು ಯಾವುದೋ ಖಾಸಗಿ ಸಂಸ್ಥೆ ಸಿದ್ಧಪಡಿಸಿದ ವರದಿಯಲ್ಲ. ಸಾಂವಿಧಾನಿಕವಾಗಿ ರಚನೆಯಾದ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ, ಸರ್ಕಾರಿ ಅಧಿಕಾರಿಗಳು, ನೌಕರರು ತಿಂಗಳುಗಟ್ಟಲೇ ಮನೆ ಮನೆ ಸುತ್ತಾಡಿ ಕಲೆಹಾಕಿದ ಮಾಹಿತಿಯನ್ನು ಆಧರಿಸಿದ ವರದಿ. ಇದಕ್ಕಾಗಿ ವ್ಯಯವಾದ ಕಾಲ, ಹಣ, ಶ್ರಮವನ್ನು ಗೌರವಿಸದೇ, ಒಂದೇ ಬಾರಿಗೆ ಅದನ್ನು ಅವೈಜ್ಞಾನಿಕವೆಂದು ಘೋಷಿಸುವ ಧಾರ್ಷ್ಟ್ಯದ ಹಿಂದೆ ಇರುವ ಶಕ್ತಿ ಯಾವುದು?

ಈಗಲೂ ವಾಸಿಸಲು ಸೂರುಗಳಿಲ್ಲದೆ, ಹೇಳಿಕೊಳ್ಳುವುದಕ್ಕೆ ಊರುಗಳಿಲ್ಲದೆ ಅಲೆಮಾರಿಯಾಗಿ ಬದುಕುತ್ತಿರುವ ಐವತ್ತೆರಡಕ್ಕೂ ಹೆಚ್ಚು ವಿಳಾಸವಿಲ್ಲದ ಬಹುನಾಮಿ ಸಮುದಾಯಗಳು ಕರ್ನಾಟಕದ
ಲ್ಲಿವೆ. ತಮ್ಮ ಬಹುನಾಮಿ ಕಾರಣದಿಂದಾಗಿ ಎಲ್ಲ ಅರ್ಹತೆ ಹೊಂದಿದ್ದೂ ಜಾತಿ ಪ್ರಮಾಣಪತ್ರ ಲಭ್ಯವಾಗದ ಕಾರಣ ಸರ್ಕಾರಿ ಉದ್ಯೋಗ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಂಥವರ ನೋವು, ಬಲಿಷ್ಠ ಜಾತಿಗಳ ರಾಜಕಾರಣಿಗಳ ಕಿವಿಗೆ ಕೇಳುವುದಿಲ್ಲವೇ? ಧರ್ಮಗುರುಗಳ ಕಣ್ಣಿಗೆ ಕಾಣುವುದಿಲ್ಲವೇ? 

ಜಾತಿಗಣತಿ ಬಗ್ಗೆ ತಕರಾರು ತೆಗೆಯುತ್ತಿರುವ ಯಾವುದೇ ಜಗದ್ಗುರು ಜಾತಿಗೆ ಮಿತವಾದ ಜಗದ್ಗುರುವಾಗದಿರಲಿ; ಭಕ್ತರನ್ನು ಒಂದಾಗಿ– ಕನಿಷ್ಠ ಮನುಷ್ಯರಾಗಿ ಕಾಣದಿದ್ದರೆ ಅವರು ಮಠವನ್ನು ತೊರೆದು ನೇರ ರಾಜಕೀಯಕ್ಕೆ ಧುಮುಕುವುದೇ ಋಜುಮಾರ್ಗ. ಈ ಎಲ್ಲ ರಾಜಕಾರಣದ ಆಚೆಗೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆಲ್ಲರಿಗೂ ಸಮಾನ ಅವಕಾಶಗಳು ಸಿಗಲಿ ಎಂಬ ಆಶಯದ ಸಂವಿಧಾನವೇ ದೇಶದ ನಿಜವಾದ ಧರ್ಮಗ್ರಂಥವೆಂಬ ಸತ್ಯವನ್ನು ಎಲ್ಲರೂ ಒಪ್ಪಬೇಕು. ಸಮಾನತೆಯನ್ನು ಸಾರಿದ ಸಂವಿಧಾನ, ಅದನ್ನು ಜಾರಿಗೊಳಿಸುವ ಮಾರ್ಗವನ್ನೂ ಪ್ರತಿಪಾದಿಸಿದೆ. ಜಾತಿಜನಗಣತಿಯೂ ಅದರ ಒಂದು ಭಾಗ. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿ ನೀಡುವ ವಿಷಯದ ಬಗ್ಗೆ ತೀರ್ಪು ನೀಡಿದ ಸುಪ್ರೀಂಕೋರ್ಟ್ ಕೂಡ, ಜಾತಿವಾರು ಜನಸಂಖ್ಯೆ ಹಾಗೂ ಹಿಂದುಳಿದಿರುವಿಕೆಯ ನಿಖರ ಮಾಹಿತಿ ಇಲ್ಲದೇ ಮೀಸಲಾತಿ ನೀಡಲಾಗದು ಎಂದಿದೆ. ತನ್ಮೂಲಕ, ನ್ಯಾಯಾಂಗವೂ ಗಣತಿಯ ಪರವಾಗಿ ನಿಂತಂತಿದೆ.  ಹೀಗಾಗಿ, ಜಾತಿ ಜನಗಣತಿ ಎಂಬುದು ಸಂವಿಧಾನಬದ್ಧ ಹಕ್ಕು ಹೌದು. ಇದನ್ನು ಅರಿತು, ರಾಜಕಾರಣಿಗಳು, ಮಠಾಧೀಶರು, ಪ್ರಬಲ ಜಾತಿಯ ಸಂಘಟನೆಗಳು ಜಾತಿ ಜನಗಣತಿಯ ವರದಿಯನ್ನೇ ಅನುಮಾನಿಸುವುದು, ಬಿಡುಗಡೆಯಾಗುವ ಮೊದಲೇ ವಿರೋಧಿಸುವುದು ಸರಿಯಲ್ಲ. ಬಿಡುಗಡೆಯಾದ ಮೇಲೂ ಎಲ್ಲ ಜಾತಿ–ಧರ್ಮದವರು ಸದಸ್ಯರಾಗಿರುವ ಪ್ರಜಾಪ್ರಭುತ್ವದಲ್ಲಿ ಚರ್ಚೆಗೆ ಅತ್ಯುತ್ತಮ ವೇದಿಕೆಯಾದ ವಿಧಾನಮಂಡಲದಲ್ಲಿ ಇದನ್ನು ಮಂಡಿಸಬೇಕು. ಆಗ ಸಮರ್ಥನೆ ಹಾಗೂ ವಿರೋಧಕ್ಕೆ ಅವಕಾಶವಂತೂ ಇದ್ದೇ ಇದೆ. ಹಾಗಾಗಬೇಕಾದರೆ, ಮೊದಲು ವರದಿ ಬಿಡುಗಡೆಯಾಗಲೇಬೇಕು.

ಲೇಖಕ: ಕವಿ, ಸಾಂಸ್ಕೃತಿಕ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.