ADVERTISEMENT

ಚರ್ಚೆ | ಜಾತಿ ಜನಗಣತಿ; ಅವೈಜ್ಞಾನಿಕ ಸಮೀಕ್ಷೆ ಮೂಲಕ ಸಂಚು: ನಾಗರಾಜ್ ಯಲಚವಾಡಿ

ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಬೇಕೇ?

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:30 IST
Last Updated 26 ಅಕ್ಟೋಬರ್ 2024, 0:30 IST
<div class="paragraphs"><p>ಆಡಿಟರ್ ನಾಗರಾಜ್ ಯಲಚವಾಡಿ</p></div>

ಆಡಿಟರ್ ನಾಗರಾಜ್ ಯಲಚವಾಡಿ

   

2015ರಲ್ಲಿ ಕೈಗೊಂಡ ಸಮೀಕ್ಷೆಯ ವೇಳೆ ಹಿಂದುಳಿದ ವರ್ಗಗಳ ಆಯೋಗದಲ್ಲಿ ಕೆಲವು ಸಣ್ಣಪುಟ್ಟ ಜಾತಿಗಳಿಗೆ ಸೇರಿದವರನ್ನು ಮಾತ್ರ ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಪ್ರಮುಖ ಜಾತಿಗಳಾದ ಒಕ್ಕಲಿಗ, ಲಿಂಗಾಯತ ಮತ್ತು ಮುಸ್ಲಿಮರನ್ನು ಕೈಬಿಟ್ಟು ಸಂಚು ರೂಪಿಸಲಾಗಿತ್ತು.

ಜಾತಿ ಜನಗಣತಿಯ ವರದಿಯು ಅವೈಜ್ಞಾನಿಕ ಮತ್ತು ಅದರ ಆಧಾರದಲ್ಲಿ ಮೀಸಲಾತಿಯನ್ನು ಪರಿಷ್ಕರಿಸಲು ಸಾಧ್ಯವಿಲ್ಲ ಎಂಬುದಕ್ಕೆ, ಈಗಾಗಲೇ ಸೋರಿಕೆಯಾಗಿದೆ ಎನ್ನಲಾದ ವರದಿಯಲ್ಲಿನ ಮಾಹಿತಿಗಳೇ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ. ಸಮೀಕ್ಷೆ ಸರಿಯಾಗಿ ನಡೆಯದೇ ಇರುವುದು, ಅದರಲ್ಲಿರುವ ವಿವರಗಳು ಒಂಬತ್ತು ವರ್ಷ ಹಿಂದಿನದಾಗಿರುವುದು ಕೂಡ ಅದನ್ನು ನಾವು ಒಪ್ಪದೇ ಇರುವುದಕ್ಕೆ ಸಕಾರಣಗಳಾಗಿವೆ.

ADVERTISEMENT

ಸಮೀಕ್ಷೆಯನ್ನು ಸರ್ಕಾರ ನಡೆಸಿದಾಗ ರಾಜ್ಯದ ಜನಸಂಖ್ಯೆ 5.8 ಕೋಟಿ ಇತ್ತು ಎಂದೂ ಹೇಳಲಾಗಿದೆ. ಈಗ ಅದು ಹೆಚ್ಚಾಗಿರುತ್ತದೆ. ಈ ದೀರ್ಘಾವಧಿಯಲ್ಲಿ ಯಾವ ಜಾತಿಗಳ ಜನರ ಸಂಖ್ಯೆ ಎಷ್ಟಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಪ್ರತಿ 10 ವರ್ಷಕ್ಕೊಮ್ಮೆ ಕೇಂದ್ರ ಸರ್ಕಾರವು ಜನಗಣತಿ ನಡೆಸುತ್ತದೆ. ಅದರ ಜತೆಯಲ್ಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಗಣತಿಯೂ ನಡೆಯುತ್ತದೆ. ಸದ್ಯದಲ್ಲೇ, ಜನಗಣತಿ ನಡೆಸಲು ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ. ಸರ್ಕಾರಕ್ಕೆ ನಿಜವಾಗಿಯೂ ಜನಾಶಯದ ಕಾಳಜಿಯಿದ್ದರೆ, ಈ ಗಣತಿ ವೇಳೆಯೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಯ ಮಾಹಿತಿ ಸಂಗ್ರಹಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಿ. ಅದನ್ನು ಬಿಟ್ಟು, ಒಂಬತ್ತು ವರ್ಷದ ಹಿಂದೆ ಸಿದ್ಧಪಡಿಸಿದ ವರದಿಯನ್ನು ಈಗ ಮಂಡಿಸಿ, ಅದರ ಆಧಾರದ ಮೇಲೆ ರಾಜಕೀಯ ಮಾಡಲು ಹೊರಟಿರುವುದನ್ನು ಒಪ್ಪಲು ಸಾಧ್ಯವೇ ಇಲ್ಲ.

2015ರ ಸಮೀಕ್ಷೆಯ ವೇಳೆ ಹಿಂದುಳಿದ ವರ್ಗಗಳ ಆಯೋಗದಲ್ಲಿ ಕೆಲವು ಸಣ್ಣಪುಟ್ಟ ಜಾತಿಗಳಿಗೆ ಸೇರಿದವರನ್ನು ಮಾತ್ರ ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಈ ಆಯೋಗದಲ್ಲಿ ಪ್ರಮುಖ ಜಾತಿಗಳಾದ ಒಕ್ಕಲಿಗ, ಲಿಂಗಾಯತ ಮತ್ತು ಮುಸ್ಲಿಮರನ್ನು ಕೈಬಿಟ್ಟದ್ದು‌ ಅವೈಜ್ಞಾನಿಕ ಮತ್ತು ಈ ಸಮುದಾಯಗಳ ವಿರುದ್ಧದ ಸಂಚಿನ ಭಾಗ.

ಕರ್ನಾಟಕ ರಾಜ್ಯದಲ್ಲಿ ಒಟ್ಟು ಶೇ 65ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಅದರಲ್ಲಿ ಒಕ್ಕಲಿಗರಿಗೆ ಶೇ 4ರಷ್ಟು ಮಾತ್ರ ನಿಗದಿಪಡಿಸಲಾಗಿದೆ. ಇದರಿಂದ ಶೈಕ್ಷಣಿಕ ಸೀಟುಗಳ ಹಂಚಿಕೆಯಲ್ಲಿ ಮತ್ತು ಸರ್ಕಾರಿ
ನೇಮಕಾತಿಗಳಲ್ಲಿ ಈ ಸಮುದಾಯಕ್ಕೆ ಭಾರಿ ಅನ್ಯಾಯವಾಗುತ್ತಿದೆ. ಸರ್ಕಾರಿ ವಲಯದಲ್ಲಿ ಈ ಸಮುದಾಯದ ಪ್ರಾತಿನಿಧ್ಯ ಕ್ಷೀಣಿಸುತ್ತಿದೆ. ಈ ಅನ್ಯಾಯ ನಡೆಯುತ್ತಿರುವಾಗಲೇ, ಜಾತಿಜನಗಣತಿಯನ್ನು ಮುಂದು ಬಿಟ್ಟು ರಾಜಕಾರಣ ಮಾಡಲು ಹೊರಟಿರುವುದು ಸರಿಯಲ್ಲ. ಅದನ್ನು ಸಮುದಾಯ ಒಪ್ಪುವುದೂ ಇಲ್ಲ. 

ಸಮೀಕ್ಷೆ ನಡೆಸುವಾಗ, ಎಲ್ಲರ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಕೆಲಸವನ್ನು ಮಾಡಲು ಅವಕಾಶವಿತ್ತು. ಆದರೆ ಆ ಕೆಲಸ ಆಗಿಲ್ಲ. ವಿವಿಧ ಸಮುದಾಯಗಳ ನಿಖರ ಅಂಕಿಸಂಖ್ಯೆ ಬೇಕು ಎನ್ನುವುದಾದರೆ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಆಧಾರ್ ಜತೆಗೆ ಜೋಡಣೆ ಮಾಡಿ ವೈಜ್ಞಾನಿಕವಾಗಿ ಎಲ್ಲರೂ ಒಪ್ಪುವ ರೀತಿಯಲ್ಲಿ ಕೈಗೊಳ್ಳಬೇಕು. ಈ ಸಮೀಕ್ಷೆಯ ವರದಿಯಲ್ಲಿ ಇಷ್ಟೆಲ್ಲಾ ಸಮಸ್ಯೆ ಮತ್ತು ಕೊರತೆಗಳು ಇದ್ದರೂ ಕೆಲ ಸಮುದಾಯದ ನಾಯಕನ್ನು ಎತ್ತಿಕಟ್ಟಿ, ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿರುವುದು ದುರುದ್ದೇಶಪೂರ್ವಕ ಕ್ರಮವಾಗಿದೆ.

ಲೇಖಕ: ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.